
ಡಿಜಿಟಲ್ ಕೂಪದಲ್ಲಿ ಕರುನಾಡ ಮಕ್ಕಳು: ಆನ್‌ಲೈನ್ ಲೈಂಗಿಕ ದೌರ್ಜನ್ಯದ ಆಘಾತಕಾರಿ ವರದಿ ಬಯಲು
ಸಾಮಾಜಿಕ ಜಾಲತಾಣಗಳು, ಗೇಮಿಂಗ್ ಆ್ಯಪ್‌ಗಳ ಮೂಲಕ ಅಪರಿಚಿತರು ಮಕ್ಕಳೊಂದಿಗೆ ಸಂಪರ್ಕ ಬೆಳೆಸಿ, ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಇಂಟರ್‌ನೆಟ್ ಮತ್ತು ಡಿಜಿಟಲ್ ಸಾಧನಗಳ ಬಳಕೆ ಹೆಚ್ಚುತ್ತಿದ್ದಂತೆ, ನಮ್ಮ ಮಕ್ಕಳು ಅದೃಶ್ಯ ಶತ್ರುಗಳ ಬಲೆಗೆ ಬೀಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು, ಗೇಮಿಂಗ್ ಆ್ಯಪ್‌ಗಳು ಮತ್ತು ಮೆಸೇಜಿಂಗ್ ವೇದಿಕೆಗಳ ಮೂಲಕ ಅಪರಿಚಿತರು ಮಕ್ಕಳೊಂದಿಗೆ ಸಂಪರ್ಕ ಬೆಳೆಸಿ, ಅವರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗಿವೆ. ಡಿಜಿಟಲ್ ಕ್ರಾಂತಿಯ ಈ ಕರಾಳ ಮುಖಕ್ಕೆ ಅಪ್ರಾಪ್ತ ವಯಸ್ಸಿನ ಮಕ್ಕಳು ಬಲಿಯಾಗುತ್ತಿದ್ದು, ಇದನ್ನು ತಡೆಯುವಲ್ಲಿ ಪೋಷಕರು, ಶಿಕ್ಷಕರು ಮತ್ತು ಸರ್ಕಾರ ವಿಫಲವಾಗಿರುವುದಾಗಿ ಆಘಾತಕಾರಿ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಮತ್ತು 'ಚೈಲ್ಡ್‌ಫಂಡ್ ಇಂಡಿಯಾ' ಸಹಭಾಗಿತ್ವದಲ್ಲಿ 'ಆನ್‌ಲೈನ್ ಲೈಂಗಿಕ ಶೋಷಣೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ' ಕುರಿತು ಬೆಂಗಳೂರು, ಚಾಮರಾಜನಗರ, ರಾಯಚೂರು, ಚಿಕ್ಕಮಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಈ ಸಮೀಕ್ಷೆಯು, ಮಕ್ಕಳನ್ನು ಆನ್‌ಲೈನ್ ಅಪಾಯಗಳಿಂದ ರಕ್ಷಿಸುವಲ್ಲಿ ಪೋಷಕರು, ಶಿಕ್ಷಕರು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಕಟು ಸತ್ಯವನ್ನು ಎತ್ತಿ ತೋರಿಸಿದೆ. ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ನಂತರ ಮಕ್ಕಳ 'ಮೊಬೈಲ್ ಸ್ಕ್ರೀನ್' ಬಳಕೆ ಗಣನೀಯವಾಗಿ ಹೆಚ್ಚಿರುವುದು ಈ ಅಪಾಯಕ್ಕೆ ಮತ್ತಷ್ಟು ಇಂಬು ನೀಡಿದೆ.
ಈ ಅಧ್ಯಯನಕ್ಕಾಗಿ ಐದು ಜಿಲ್ಲೆಗಳ 8 ರಿಂದ 18 ವರ್ಷ ವಯಸ್ಸಿನ 903 ಶಾಲಾ ಮಕ್ಕಳನ್ನು ಸಂದರ್ಶಿಸಲಾಗಿದೆ. ವರದಿಯ ಪ್ರಕಾರ, 8 ರಿಂದ 11 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ.87ರಷ್ಟು ಮಂದಿ ಮೊಬೈಲ್-ಆನ್‌ಲೈನ್ ಬಳಸುತ್ತಿದ್ದರೆ, 15ರಿಂದ 18 ವರ್ಷ ವಯಸ್ಸಿನವರಲ್ಲಿ ಶೇ.99ರಷ್ಟು ಬಾಲಕರು ಮತ್ತು ಶೇ.100ರಷ್ಟು ಬಾಲಕಿಯರು ಮೊಬೈಲ್ ಗೀಳಿಗೆ ದಾಸರಾಗಿದ್ದಾರೆ. ಇವರಲ್ಲಿ ಸುಮಾರು ಶೇ.5ರಷ್ಟು ಮಕ್ಕಳು ಆನ್‌ಲೈನ್‌ನಲ್ಲಿ ಕೆಟ್ಟ ಮತ್ತು ಮುಜುಗರದ ಅನುಭವಗಳನ್ನು ಎದುರಿಸಿರುವುದಾಗಿ ವರದಿ ತಿಳಿಸಿದೆ.
ಕಾಯಿಲೆಗಳ ಕೂಪಕ್ಕೆ ಬೀಳುತ್ತಿರುವ ಮಕ್ಕಳು
ಈ ಅಧ್ಯಯನವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಆಗುತ್ತಿರುವ ಗಂಭೀರ ಪರಿಣಾಮಗಳನ್ನು ಬಯಲು ಮಾಡಿದೆ. ಆನ್‌ಲೈನ್ ಶೋಷಣೆಗೆ ಒಳಗಾದ ಮಕ್ಕಳು ಖಿನ್ನತೆ, ಆತ್ಮವಿಶ್ವಾಸದ ಕೊರತೆ ಮತ್ತು ಇತರರೊಂದಿಗೆ ಬೆರೆಯಲು ಕಷ್ಟಪಡುವಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ, ಮುಂದಿನ 15 ವರ್ಷಗಳಲ್ಲಿ ಮಕ್ಕಳು ಕಾಯಿಲೆಗಳಿಂದಲೇ ಬದುಕಬೇಕಾದ ಆಘಾತಕಾರಿ ಸ್ಥಿತಿ ನಿರ್ಮಾಣವಾಗಬಹುದು ಎಂದು ವರದಿ ಎಚ್ಚರಿಸಿದೆ. ಮಕ್ಕಳಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳಲು ಆನ್‌ಲೈನ್ ಲೈಂಗಿಕ ದೌರ್ಜನ್ಯವೇ ಪ್ರಮುಖ ಕಾರಣವಾಗಿದ್ದು, ಈ ಬಗ್ಗೆ ಶಿಕ್ಷಕರು ಮತ್ತು ಪೋಷಕರಲ್ಲಿ ಅರಿವಿನ ಕೊರತೆ ಇರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.
ಅಪರಿಚಿತರೊಂದಿಗೆ ಸ್ನೇಹ: ಅಪಾಯಕ್ಕೆ ಆಹ್ವಾನ
ಡಿಜಿಟಲ್ ಜಗತ್ತಿನಲ್ಲಿ ಜನಪ್ರಿಯತೆ ಗಳಿಸುವ ಆಕರ್ಷಣೆಗೆ ಬಿದ್ದ ರಾಜ್ಯದ ಪ್ರತಿ ಆರು ಹದಿಹರೆಯದವರಲ್ಲಿ ಒಬ್ಬರು ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. 15ರಿಂದ 18 ವರ್ಷ ವಯಸ್ಸಿನ ಮಕ್ಕಳ ಪೈಕಿ ಶೇ.16ರಷ್ಟು ಮಕ್ಕಳು ಅಪರಿಚಿತರೊಂದಿಗೆ ಸ್ನೇಹ ಬೆಳೆಸಲು ಮೊಬೈಲ್ ಬಳಸುತ್ತಿದ್ದಾರೆ. ಆತಂಕಕಾರಿ ವಿಷಯವೆಂದರೆ, ಅವರಲ್ಲಿ ಶೇ.10ರಷ್ಟು ಮಕ್ಕಳು ಆನ್‌ಲೈನ್‌ನಲ್ಲಿ ಪರಿಚಯವಾದ ಅಪರಿಚಿತರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ. ಈ ವೇಳೆ ಶೇ.7ರಷ್ಟು ಮಕ್ಕಳು ತಮ್ಮ ವೈಯಕ್ತಿಕ ಮಾಹಿತಿ, ಶೇ.2ರಷ್ಟು ಮಕ್ಕಳು ವೈಯಕ್ತಿಕ ವಿಡಿಯೋ ಹಾಗೂ ಶೇ.8ರಷ್ಟು ಮಕ್ಕಳು ವೈಯಕ್ತಿಕ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಗ್ರಾಮೀಣ ಮಕ್ಕಳೇ ಹೆಚ್ಚು ಮೊಬೈಲ್ ಬಳಕೆದಾರರು!
ಅಚ್ಚರಿಯ ವಿಷಯವೆಂದರೆ, ನಗರ ಪ್ರದೇಶದ ಮಕ್ಕಳಿಗಿಂತ (ಶೇ.93) ಗ್ರಾಮೀಣ ಭಾಗದ ಮಕ್ಕಳೇ (ಶೇ.97) ಹೆಚ್ಚು ಮೊಬೈಲ್, ಲ್ಯಾಪ್‌ಟಾಪ್ ಬಳಸುತ್ತಿದ್ದಾರೆ. ಒಟ್ಟಾರೆಯಾಗಿ 8ರಿಂದ 11 ವರ್ಷ ವಯಸ್ಸಿನವರಲ್ಲಿ ಶೇ.96ರಷ್ಟು ಮಕ್ಕಳು ಮೊಬೈಲ್ ಬಳಸುತ್ತಿದ್ದರೆ, ಕೇವಲ ಶೇ.43ರಷ್ಟು ಪೋಷಕರು ಮಾತ್ರ ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಾರೆ. 12-14 ವರ್ಷ ವಯಸ್ಸಿನ ಶೇ.78ರಷ್ಟು ಮತ್ತು 15-18 ವರ್ಷ ವಯಸ್ಸಿನ ಶೇ.75ರಷ್ಟು ಮಕ್ಕಳಿಗೆ, ತಮ್ಮ ಸ್ನೇಹಿತರು ಆನ್‌ಲೈನ್ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ತಿಳಿದಿತ್ತು. ಆದರೆ, ಬಹುತೇಕ ಪೋಷಕರಿಗೆ ತಮ್ಮ ಮಕ್ಕಳ ಆನ್‌ಲೈನ್ ಸಂವಹನಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಶೇ.42ರಷ್ಟು ಮಕ್ಕಳು ಆನ್‌ಲೈನ್ ಲೈಂಗಿಕ ದೌರ್ಜನ್ಯಕ್ಕೆ ಬಲಿ
ಅಧ್ಯಯನಕ್ಕೊಳಪಟ್ಟ ಪೋಷಕರ ಪೈಕಿ, ಶೇ.42ರಷ್ಟು ಮಂದಿ ತಮ್ಮ ಮಗು ಆನ್‌ಲೈನ್ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಶೇ.43% ಮಕ್ಕಳು ಆನ್‌ಲೈನ್ ಬೆದರಿಕೆ (Cyberbullying), ಶೇ.32% ಲೈಂಗಿಕ ಗ್ರೂಮಿಂಗ್, ಮತ್ತು ಶೇ.30% ಮಕ್ಕಳು ಲೈಂಗಿಕವಾಗಿ ವಸ್ತುಗಳ ವಿನಿಮಯದಂತಹ (Sextortion) ಪ್ರಕರಣಗಳಿಗೆ ಬಲಿಯಾಗಿದ್ದಾರೆ. ಶೇ.46ರಷ್ಟು ಪ್ರಕರಣಗಳಲ್ಲಿ ಮಕ್ಕಳೇ ಧೈರ್ಯ ಮಾಡಿ ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದರೆ, ಶೇ.27ರಷ್ಟು ಪ್ರಕರಣಗಳು ಪೋಷಕರ ನಿಗಾದಿಂದ, ಶೇ.18ರಷ್ಟು ಮಕ್ಕಳ ಅಸ್ವಾಭಾವಿಕ ನಡವಳಿಕೆಯಿಂದ ಮತ್ತು ಶೇ.9ರಷ್ಟು ಪ್ರಕರಣಗಳು ಇತರರ ಮೂಲಕ ಪೋಷಕರ ಗಮನಕ್ಕೆ ಬಂದಿವೆ.
ಪೋಷಕರ ಪ್ರತಿಕ್ರಿಯೆ ಏನು?
ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂದು ತಿಳಿದ ನಂತರ, ಶೇ.50ರಷ್ಟು ಪೋಷಕರು ತಮ್ಮ ಮಕ್ಕಳ ಸಾಮಾಜಿಕ ಜಾಲತಾಣದ ಖಾತೆಗಳನ್ನು ರದ್ದುಗೊಳಿಸಿದ್ದಾರೆ. ಶೇ.46ರಷ್ಟು ಪೋಷಕರು ದೌರ್ಜನ್ಯ ಎಸಗಿದವರ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ಇನ್ನುಳಿದ ಪೋಷಕರು ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಿ, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
12ರಿಂದ 14 ವರ್ಷ ವಯಸ್ಸಿನ ಶೇ.97ರಷ್ಟು ಮಕ್ಕಳು ಯೂಟ್ಯೂಬ್, ಶೇ.92ರಷ್ಟು ಮಕ್ಕಳು ವಾಟ್ಸ್ಆ್ಯಪ್ ಮತ್ತು ಶೇ.73ರಷ್ಟು ಮಕ್ಕಳು ಸರ್ಚ್ ಇಂಜಿನ್ ಬಳಸುತ್ತಿದ್ದಾರೆ. 15ರಿಂದ 18 ವಯೋಮಾನದ ಶೇ.25ರಷ್ಟು ಮಕ್ಕಳು ದಿನಕ್ಕೆ ಒಂದು ಗಂಟೆಗಿಂತ ಹೆಚ್ಚು ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ.
ಕೋವಿಡ್ ನಂತರ ಹೆಚ್ಚಾದ ಅಪಾಯ
ಚೈಲ್ಡ್‌ಫಂಡ್ ಇಂಡಿಯಾ ವರದಿ ಪ್ರಕಾರ, ಕೋವಿಡ್ ನಂತರ ಮಕ್ಕಳಲ್ಲಿ, ವಿಶೇಷವಾಗಿ 15-18 ವರ್ಷ ವಯಸ್ಸಿನವರಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಸ್ಫೋಟಕವಾಗಿ ಹೆಚ್ಚಾಗಿದೆ. ಈ ವಯಸ್ಸಿನ ಶೇ.5ರಷ್ಟು ಮಕ್ಕಳು ಆನ್‌ಲೈನ್‌ನಲ್ಲಿ ಅಸುರಕ್ಷಿತ ಅಥವಾ ಮುಜುಗರದ ಅನುಭವಗಳನ್ನು ಎದುರಿಸಿದ್ದಾರೆ. ಶೇ.77ರಷ್ಟು ಮಕ್ಕಳು ಇನ್‌ಸ್ಟಾಗ್ರಾಮ್ ಬಳಸುತ್ತಿದ್ದು, ದೌರ್ಜನ್ಯ ಎಸಗಿದವರಲ್ಲಿ ಶೇ.53ರಷ್ಟು ಅಪರಿಚಿತರು, ಶೇ.35ರಷ್ಟು ಪರಿಚಿತ ವ್ಯಕ್ತಿಗಳು ಮತ್ತು ಶೇ.12ರಷ್ಟು ಪ್ರಕರಣಗಳಲ್ಲಿ ಇಬ್ಬರೂ ಸೇರಿದ್ದಾರೆ. ಆನ್‌ಲೈನ್‌ನಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸಿದವರಲ್ಲಿ ಶೇ.15ರಷ್ಟು ಮಕ್ಕಳು ತಕ್ಷಣದ ಅನಾಹುತಗಳನ್ನು ಅನುಭವಿಸಿದ್ದಾರೆ.
ತಜ್ಞರ ಎಚ್ಚರಿಕೆ
ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಸಿ. ಮಂಜು, "ರಾಜ್ಯದ ಐದು ಜಿಲ್ಲೆಗಳಲ್ಲಿ ನಡೆಸಿದ ಪ್ರಾಯೋಗಿಕ ಅಧ್ಯಯನದಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಆನ್‌ಲೈನ್ ದೌರ್ಜನ್ಯಕ್ಕೊಳಗಾದ ಮಕ್ಕಳು ಖಿನ್ನತೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್ ನಂತರ ಇಂತಹ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವ ತುರ್ತು ಅವಶ್ಯಕತೆ ಇದೆ. ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ಮಕ್ಕಳ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಬೇಕು" ಎಂದು ಹೇಳಿದರು.