ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಹೊಣೆ ನಗರದ ಆರು ಸಚಿವರ ಹೆಗಲಿಗೆ
ಜಿಬಿಎ ಚುನಾವಣೆ ಘೋಷಣೆಗೂ ಮೊದಲೇ ಆರು ಸಚಿವರಿಗೆ ಜವಾಬ್ದಾರಿ ಹಂಚುವ ಮೂಲಕ ಗೆಲುವಿನ ಟಾಸ್ಕ್ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗಿಲ್ಲ ಹೊಣೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿ ರಾಜ್ಯ ಸರ್ಕಾರವು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಜಿಬಿಎ ಆಡಳಿತ ಪರ್ವ ಪ್ರಾರಂಭವಾಗಿದೆ. ಈ ಮೂಲಕ 18 ವರ್ಷಗಳ ಬಳಿಕ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯುಗಾಂತ್ಯಗೊಂಡಿದೆ. ಬಿಬಿಎಂಪಿ ತೆರೆಮರೆಗೆ ಸರಿದು ಜಿಬಿಎ ಅಸ್ತಿತ್ವಕ್ಕೆ ಬಂದ ಬಳಿಕ ಅದಕ್ಕೆ ಚುನಾವಣೆ ನಡೆಸಲು ಸರ್ಕಾರ ಸಜ್ಜಾಗುತ್ತಿದೆ. ಐದು ಪಾಲಿಕೆಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲು ಆರು ಸಚಿವರ ಹೆಗಲಿಗೆ ಹಾಕಿದೆ. ಚುನಾವಣೆ ಘೋಷಣೆಗೂ ಮೊದಲೇ ಸಚಿವರಿಗೆ ಜವಾಬ್ದಾರಿ ಹಂಚುವ ಮೂಲಕ ಗೆಲುವಿನ ಟಾಸ್ಕ್ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು ಉಸ್ತುವಾರಿಯಾಗಿದ್ದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜಿಬಿಎ ಚುನಾವಣೆಯ ಹೊಣೆ ನೀಡದೆ ಬೆಂಗಳೂರಿನ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯ ಹೊಣೆಯನ್ನು ನೀಡಲಾಗಿದೆ. ಐದು ಪಾಲಿಕೆಗಳನ್ನು ಆರು ಸಚಿವರಿಗೆ ಹಂಚಲಾಗಿದೆ.
ಐದು ನಗರ ಪಾಲಿಕೆಗಳಲ್ಲಿ ಒಟ್ಟು 368 ವಾರ್ಡ್‌ಗಳನ್ನು ವಿಂಗಡಣೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 63 ವಾರ್ಡ್‌ಗಳು, ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ 72 ವಾರ್ಡ್‌ಗಳು, ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ 50 ವಾರ್ಡ್‌ಗಳು, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ 111 ವಾರ್ಡ್‌ಗಳು ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ 72 ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಲಾಗಿದೆ. ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ಪೂರ್ವ, ಬೈರತಿ ಸುರೇಶ್ ಅವರಿಗೆ ಬೆಂಗಳೂರು ಪಶ್ಚಿಮ, ಕೆ.ಜೆ.ಜಾರ್ಜ್ ಅವರಿಗೆ ಬೆಂಗಳೂರು ಉತ್ತರ, ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ, ದಿನೇಶ್ ಗುಂಡೂರಾವ್ ಮತ್ತು ಜಮೀರ್ ಅಹ್ಮದ್ ಅವರಿಗೆ ಬೆಂಗಳೂರು ಕೇಂದ್ರ ಭಾಗದ ಉಸ್ತುವಾರಿ ನೀಡಲಾಗಿದೆ. ಉಸ್ತುವಾರಿ ನೀಡಿರುವ ಪಾಲಿಕೆಯಲ್ಲಿ ಅತಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬರುವ ಸವಾಲು ಸಚಿವರ ಮುಂದಿದೆ.
ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಿಷ್ಠವಾಗಿದ್ದು, ಪ್ರತಿ ಪಾಲಿಕೆಯಲ್ಲಿ ಚುನಾವಣೆ ತಯಾರಿ ಚುರುಕುಗೊಳಿಸಲು ಈ ಉಸ್ತುವಾರಿ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಯು ರಾಜ್ಯದ ರಾಜಕೀಯವಾಗಿ ಪ್ರಮುಖವಾಗಿದ್ದು, ನಗರಾಭಿವೃದ್ಧಿ, ಮೂಲಸೌಕರ್ಯ ಹಾಗೂ ನಾಗರಿಕ ಸೌಲಭ್ಯಗಳ ಜತೆಗೆ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸುವ ಅಭಿಯಾನಕ್ಕೂ ಈ ಉಸ್ತುವಾರಿ ಸಹಕಾರಿ ಆಗಲಿದೆ ಎಂಬುದು ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.
ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಇರಬಾರದೆಂಬ ಸಚಿವರ ಮನವಿ:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾರೆ. ಅವರಿಗೆ ಜಿಬಿಎ ವ್ಯಾಪ್ತಿಯ ಯಾವುದೇ ಪಾಲಿಕೆಯ ಉಸ್ತುವಾರಿ ನೀಡಿಲ್ಲ. ಆದರೂ, ಡಿ.ಕೆ.ಶಿವಕುಮಾರ್ ಹಿಡಿತದಲ್ಲಿಯೇ ಜಿಬಿಎ ಚುನಾವಣೆ ನಡೆಸಲಾಗುತ್ತದೆ. ಹೀಗಾಗಿ ಬೆಂಗಳೂರಿನ ಸಚಿವರು ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಇರಬಾರದು ಎಂಬ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರು ಮಾಡಿದ್ದಾರೆ. ಪಾಲಿಕೆಯ ಹೊಣೆಯನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಪಾಲಿಕೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಬೇಕಾದರೆ ಸ್ವತಂತ್ರವಾಗಿ ಕೆಲಸ ಮಾಡಿದರೆ ಮಾತ್ರ ಸಾಧ್ಯವಾಗಲಿದೆ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಉಸ್ತುವಾರಿ ನೀಡಿರುವ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಸ್ಥಳೀಯ ಮಟ್ಟದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಯಾವುದೋ ಒಂದು ಬಣದ ಆಧಾರದ ಮೇಲೆ ಕೆಲಸ ಮಾಡಿದರೆ ಗೆಲುವು ಸಾಧ್ಯವಿಲ್ಲ. ಜಿಬಿಎ ಕಾಂಗ್ರೆಸ್ ತೆಕ್ಕೆಗೆ ಬರಬೇಕಾದರೆ ಸ್ಥಳೀಯ ನಾಯಕರ ಅಭಿಪ್ರಾಯ ಅಗತ್ಯವಾಗಿರುವುದರ ಜತೆಗೆ ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕಾಗುತ್ತದೆ. ಅಲ್ಲದೇ, ಸಚಿವರು ತಮ್ಮದೇ ಆದ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇಂತಹ ಸಮಯದಲ್ಲಿ ಯಾರೂ ಸಹ ಹಸ್ತಕ್ಷೇಪ ಮಾಡಬಾರದು. ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಕಾರಣ ಮೇಲ್ವಿಚಾರಣೆ ಮಾಡಲು ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಇದೆ. ಆದರೆ, ಉಸ್ತುವಾರಿ ಸಚಿವರ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಒಂದು ವೇಳೆ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡಿದರೆ ಪಕ್ಷವು ಅತಿ ಹೆಚ್ಚಿನ ಸ್ಥಾನಗಳನ್ನು ಗೆಲುವು ಸಾಧಿಸುವುದು ಕಷ್ಟಕರವಾಗಲಿದೆ ಎಂದು ದ ಫೆಡರಲ್ ಕರ್ನಾಟಕಕ್ಕೆ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಚುನಾವಣೆ ಘೋಷಣೆಯಾಗದಿದ್ದರೂ ಸಿದ್ಧತೆ:
ಜಿಬಿಎ ಚುನಾವಣೆ ಅಧಿಕೃತ ಘೋಷಣೆಯಾಗಿಲ್ಲ. ಆದರೂ ಆಡಳಿತರೂಢ ಕಾಂಗ್ರೆಸ್ ಪಕ್ಷವು ತಳಮಟ್ಟದಲ್ಲಿ ಸಿದ್ಧತೆಯನ್ನು ಪ್ರಾರಂಭಿಸಿದೆ. ಹೀಗಾಗಿ ಚುನಾವಣೆಯಲ್ಲಿ ಐದು ಪಾಲಿಕೆಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಸಚಿವರಿಗೆ ನೀಡಲಾಗಿದೆ. ಈಗಿನಿಂದಲೇ ಕಾರ್ಯಾರಂಭ ಮಾಡಿದರೆ ಪ್ರತಿ ಮನೆಯನ್ನು ತಲುಪಬಹುದು. ಇಲ್ಲದಿದ್ದರೆ ಕಷ್ಟಕರವಾಗಲಿದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗದಿದ್ದರೂ ಸಚಿವರಿಗೆ ಉಸ್ತುವಾರಿ ನೀಡಲಾಗಿದೆ.
ಜಿಬಿಎ ಚುನಾವಣೆಗೆ ಅಗತ್ಯ ಸಿದ್ದತೆಗಳನ್ನು ಸರ್ಕಾರ ನಡೆಸುತ್ತಿದೆ. ಈಗಾಗಲೇ ಪ್ರತಿ ಪಾಲಿಕೆಗೂ ಆಯುಕ್ತರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ, ಜಿಬಿಎನಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಬೇಕಾದ ಅಗತ್ಯ ಕಾರ್ಯತಂತ್ರಗಳನ್ನು ಸಹ ರೂಪಿಸಲಾಗುತ್ತಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಅನ್ನು ಮಣಿಸಲು ಬೇಕಾದ ರಾಜಕೀಯ ತಂತ್ರಗಾರಿಕೆಯನ್ನು ಸದ್ದಿಲ್ಲದೇ ರೂಪಿಸುತ್ತಿದ್ದು, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅದನ್ನು ಅನುಷ್ಠಾನಗೊಳಿಸುವ ಯೋಚನೆ ಕಾಂಗ್ರೆಸ್‌ಗೆ ಇದೆ.
ಪ್ರತಿಪಕ್ಷಗಳಿಂದಲೂ ಜಿಬಿಎ ಚುನಾವಣೆಗೆ ತಯಾರಿ:
ಲೋಕಸಭೆಯಲ್ಲಿ ಮೈತ್ರಿಯಾಗಿ ಕಣಕ್ಕಿಳಿದಿರುವ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಪಕ್ಷವು ಜಿಬಿಎ ಚುನಾವಣೆಯಲ್ಲಿಯೂ ಮೈತ್ರಿಯಾಗಿ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದೆ. ಮೈತ್ರಿಯಾಗಿ ಚುನಾವಣಾ ಅಖಾಡಕ್ಕಿಳಿಯಲು ಈಗಾಗಲೇ ಉನ್ನತಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಆದರೆ, ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಕೇಂದ್ರದ ಸಚಿವರಾದ ಅಮಿತ್ ಶಾ ಮತ್ತು ಎಚ್.ಡಿ.ಕುಮಾರಸ್ವಾಮಿ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಇಬ್ಬರ ಮುಖಂಡರ ಸೂಚನೆ ಮೇರೆಗೆ ರಾಜ್ಯ ನಾಯಕರು ಕಾರ್ಯನಿರ್ವಹಿಸಲಿದ್ದಾರೆ. ಜಿಬಿಎ ಚುನಾವಣೆಗೆ ಸೀಟು ಹಂಚಿಕೊಂಡು ಅಖಾಡಕ್ಕಿಳಿಯುವ ಸಾಧ್ಯತೆ ಇದೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.
ಪ್ರತಿಪಕ್ಷದಲ್ಲಿ ಸಮನ್ವಯತೆ ಮೂಡದಿದ್ದರೆ ಕಾಂಗ್ರೆಸ್‌ಗೆ ಅನುಕೂಲ
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೂ ಈವರೆವಿಗೂ ಬಿಜೆಪಿ-ಜೆಡಿಎಸ್‌ನಲ್ಲಿ ಸಮನ್ವಯತೆ ಕೊರತೆ ಇದ್ದೇ ಇದೆ. ಯಾವುದೇ ಹೋರಾಟಗಳಾಗಲಿ, ಪ್ರತಿಭಟನೆಗಳಾಗಲಿ ಸಮನ್ವಯದಿಂದ ಸಾಗುತ್ತಿಲ್ಲ. ಅಧಿವೇಶನದಲ್ಲಿಯೂ ಉಭಯ ಪಕ್ಷಗಳ ನಾಯಕರಲ್ಲಿ ಒಮ್ಮತ ಅಭಿಪ್ರಾಯಗಳಿಲ್ಲ. ಇದು ಜಿಬಿಎ ಚುನಾವಣೆಯಲ್ಲಿ ಮುಂದುವರಿದರೆ ಕಾಂಗ್ರೆಸ್‌ಗೆ ವರದಾನವಾಗಲಿದೆ. ಬಿಜೆಪಿ ನಾಯಕರು ಯಾವುದಕ್ಕೂ ಜೆಡಿಎಸ್ ನಾಯಕರಿಗೆ ಮನ್ನಣೆ ನೀಡುತ್ತಿಲ್ಲ ಎಂಬುದು ಜೆಡಿಎಸ್ ನಾಯಕರ ಪ್ರಮುಖ ಆರೋಪವಾಗಿದೆ. ರಾಷ್ಟ್ರೀಯ ನಾಯಕರು ಮೈತ್ರಿಯೊಂದಿಗೆ ಆಡಳಿತರೂಢ ಕಾಂಗ್ರೆಸ್ ಸರ್ಕಾರ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರೂ, ರಾಜ್ಯ ನಾಯಕರಲ್ಲಿ ಮಾತ್ರ ಕಾಣಿಸುತ್ತಿಲ್ಲ. ಹೀಗಾಗಿ ಜಿಬಿಎ ಚುನಾವಣೆಯಲ್ಲಿ ಯಾವ ರೀತಿಯಾಗಿ ಮೈತ್ರಿ ಪಕ್ಷವು ಅಖಾಡಕ್ಕೆ ಇಳಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಅಂತಿಮ ಅಧಿಸೂಚನೆ ಬಳಿಕ ಚುನಾವಣೆ
2007ರಲ್ಲಿ 7 ನಗರಸಭೆ, ಒಂದು ಪುರಸಭೆ ಹಾಗೂ 110 ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿ ರಚಿಸಲಾಯಿತು. 2010ರಲ್ಲಿ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಲಾಯಿತು. 2020ರ ಸೆಪ್ಟೆಂಬರ್ 10ಕ್ಕೆ ಚುನಾಯಿತ ಕೌನ್ಸಿಲ್ ಸದಸ್ಯರ ಅವಧಿ ಅಂತ್ಯಗೊಂಡಿತು. ಅಂದಿನಿಂದ ಈವರೆಗೆ ಚುನಾವಣೆ ನಡೆದಿಲ್ಲ. ಈ ಮಧ್ಯೆ ಮೇ 15ರಂದು ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆಯನ್ನು ಜಾರಿಗೊಳಿಸಿತು. ಆ ಮೂಲಕ ಬಿಬಿಎಂಪಿ ಆಡಳಿತವನ್ನು ಅಂತ್ಯಗೊಳಿಸಲಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ - 2024 ಅನ್ನು 2025ರ ಮೇ 15ರಂದು ಜಾರಿಗೊಳಿಸಿ, ಬಿಬಿಎಂಪಿ ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶವೆಂದು ಹೆಸರಿಸಲಾಯಿತು. ಇದರ ವ್ಯಾಪ್ತಿಯಲ್ಲಿಯೇ ಐದು ನಗರ ಪಾಲಿಕೆಗಳನ್ನು ರಚಿಸಿ, ಜು.19ರಂದು ಕರಡು ಅಧಿಸೂಚನೆ ಹೊರಡಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್‌ಗಳ ಪುನರ್‌ವಿಂಗಡಣಾ ಆಯೋಗ ರಚಿಸಲಾಗಿತ್ತು. ರಾಜ್ಯ ಸರ್ಕಾರ ಸೆ.2 ರಂದು ಮಾರ್ಗಸೂಚಿಗಳನ್ನು ಹೊರಡಿಸಿತು. ಈ ಮಾರ್ಗಸೂಚಿಗಳ ಆಧಾರದ ಮೇಲೆ ಆಯೋಗವು ಸೆ. 30 ರಂದು ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರವು ಆ ವರದಿಯನ್ನು ಅಂಗೀಕರಿಸಿ, 2011ರ ಜನಗಣತಿಯ ಮಾಹಿತಿ ಆಧಾರದ ಮೇಲೆ ವಾರ್ಡ್ ಮರುವಿಂಗಡಣೆ ಕರಡು ಅಧಿಸೂಚನೆ ಪ್ರಕಟಿಸಿದೆ. ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಅಥವಾ ಸಲಹೆ ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಅ. 15ರೊಳಗೆ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ. ಸರ್ಕಾರವು ಸಾರ್ವಜನಿಕರಿಂದ ಬಂದ ಸಲಹೆ-ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಅಧಿಸೂಚನೆ ಪ್ರಕಟಿಸಲಿದೆ. ಅದರ ಆಧಾರದ ಮೇಲೆ ಮುಂದಿನ ನಗರ ಪಾಲಿಕೆ ಚುನಾವಣೆಗಳು ನಡೆಯಲಿವೆ.