ಪತನದ ಅಂಚಿನಲ್ಲಿ ಇಂಡಿಯಾ ಮೈತ್ರಿ ; ಕಾಂಗ್ರೆಸ್‌ಗೆ ತೇಜಸ್ವಿ ಎಚ್ಚರಿಕೆ, ಸಹಾನಿ ನಿರ್ಗಮನ ಸಾಧ್ಯತೆ
ಆರ್‌ಜೆಡಿ ಮತ್ತು ಕಾಂಗ್ರೆಸ್ ಗರಿಷ್ಠ 18 ಸ್ಥಾನಗಳನ್ನು ನೀಡಲು ಸಿದ್ಧವಿದ್ದರೂ, ಸಹಾನಿ ಪಟ್ಟು ಸಡಿಲಿಸಿಲ್ಲ. ಇದು ಸಹಾನಿ ಅವರು ಮೈತ್ರಿಕೂಟದಿಂದ ಹೊರನಡೆಯಲು ಯೋಜಿಸುತ್ತಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ.
ಬಿಹಾರ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ, ವಿಪಕ್ಷಗಳ ' ಇಂಡಿಯಾಮೈತ್ರಿಕೂಟ' ಪತನದ ಅಂಚಿನಲ್ಲಿ ನಿಂತಿದೆ. ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಮೈತ್ರಿಕೂಟದ ಹಿರಿಯ ನಾಯಕರ ನಡುವಿನ ಮಾತುಕತೆಗಳು ಸೋಮವಾರ (ಅಕ್ಟೋಬರ್ 13) ಮೊಟಕುಗೊಂಡಿದೆ. ಇದರಿಂದ ಅಸಮಾಧಾನಗೊಂಡ ಆರ್‌ಜೆಡಿ ನಾಯಕ ಮತ್ತು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗದೆ ದೆಹಲಿಯಿಂದ ಪಾಟ್ನಾಗೆ ಮರಳಿದ್ದಾರೆ.
ಸೋಮವಾರದ ಸೀಟು ಹಂಚಿಕೆ ಮಾತುಕತೆಯ ಆಂತರಿಕ ಮೂಲಗಳು 'ದ ಫೆಡರಲ್'ಗೆ ತಿಳಿಸಿರುವಂತೆ, ಚರ್ಚೆಯ ಸಮಯದಲ್ಲಿ ಎರಡು ಪ್ರಮುಖ ಅಡೆತಡೆಗಳು ಎದುರಾಗಿ, ಮೈತ್ರಿಕೂಟವನ್ನು ಮುರಿಯುವ ಹಂತಕ್ಕೆ ತಳ್ಳಿವೆ. ಮೊದಲನೆಯದಾಗಿ, ವಿಕಾಸಶೀಲ ಇನ್ಸಾನ್ ಪಾರ್ಟಿ (VIP) ಮುಖ್ಯಸ್ಥ ಮುಕೇಶ್ ಸಹಾನಿ ಅವರು ತಮ್ಮ 30 ಸ್ಥಾನಗಳ ಬೇಡಿಕೆಯನ್ನು ಕಡಿಮೆ ಮಾಡಲು ನಿರಾಕರಿಸಿದ್ದಾರೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಗರಿಷ್ಠ 18 ಸ್ಥಾನಗಳನ್ನು ನೀಡಲು ಸಿದ್ಧವಿದ್ದರೂ, ಸಹಾನಿ ಪಟ್ಟು ಸಡಿಲಿಸಿಲ್ಲ. ಇದು ಸಹಾನಿ ಅವರು ಮೈತ್ರಿಕೂಟದಿಂದ ಹೊರನಡೆಯಲು ಯೋಜಿಸುತ್ತಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ. ಸೀಟು ಹಂಚಿಕೆ ಒಪ್ಪಂದ ಅಧಿಕೃತವಾಗುವ ಮೊದಲೇ ಸಹಾನಿ ಅವರು ತಮ್ಮ ಅಭ್ಯರ್ಥಿಗಳಿಗೆ "ಚಿಹ್ನೆಗಳನ್ನು ಹಂಚಲು" ಪ್ರಾರಂಭಿಸಿರುವುದು ಎಲ್ಲಾ ಮಿತ್ರಪಕ್ಷಗಳನ್ನು ಕೆರಳಿಸಿದೆ.
ಕಾಂಗ್ರೆಸ್ ನಿಲುವು ಮೈತ್ರಿಕೂಟಕ್ಕೆ ಆಘಾತ
ಮೈತ್ರಿಕೂಟದ ಸ್ಥಿರತೆಗೆ "ಅನಿರೀಕ್ಷಿತ" ಆಘಾತ ನೀಡಿದ್ದು ಸಹಾನಿಯವರ ಚೌಕಾಸಿಯಲ್ಲ. ಅದನ್ನು ಸೋಮವಾರದ ಸಭೆಗೆ ಮೊದಲೇ ಬಹಿರಂಗಗೊಂಡಿತ್ತು ಎಂದು ಮೈತ್ರಿ ನಾಯಕರು ಹೇಳುತ್ತಾರೆ. ಆದರೆ, ಕಾಂಗ್ರೆಸ್‌ನ ಹಠಾತ್ ನಿಲುವು ಬದಲಾವಣೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹಲವು ತಿಂಗಳುಗಳಿಂದ ಸಾರ್ವಜನಿಕವಾಗಿ, ನಾವು ಸ್ಥಾನಗಳ ಸಂಖ್ಯೆಯತ್ತ ಗಮನ ಹರಿಸುತ್ತಿಲ್ಲ, ಬದಲಿಗೆ ಕ್ಷೇತ್ರಗಳ ಗುಣಮಟ್ಟವನ್ನು ನೋಡುತ್ತಿದ್ದೇವೆ ಎಂದು ಹೇಳುತ್ತಿದ್ದ ಕಾಂಗ್ರೆಸ್, ಸೋಮವಾರ ಮತ್ತೆ 70 ಸ್ಥಾನಗಳ ಬೇಡಿಕೆ ಮುಂದಿಟ್ಟಿದೆ. "2020ರ ಫಾರ್ಮುಲಾ"ವನ್ನು ಮತ್ತೆ ಮಾತುಕತೆಗೆ ತರಬೇಕೆಂದು ಕಾಂಗ್ರೆಸ್ ಬಯಸಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಬಿಹಾರ ಉಸ್ತುವಾರಿ ಕೃಷ್ಣ ಅಲ್ಲಾವರು ಮತ್ತು ರಾಜ್ಯ ಘಟಕದ ಮುಖ್ಯಸ್ಥ ರಾಜೇಶ್ ರಾಮ್ ಈ ಸಲಹೆಯನ್ನು ಮುಂದಿಟ್ಟ ತಕ್ಷಣವೇ, ತೇಜಸ್ವಿ ಮತ್ತು ಆರ್‌ಜೆಡಿ ನಾಯಕರಾದ ಸಂಜಯ್ ಯಾದವ್ ಮತ್ತು ಮನೋಜ್ ಝಾ ಅದನ್ನು ತಿರಸ್ಕರಿಸಿದರು. ಚರ್ಚೆಯ ಒಂದು ಹಂತದಲ್ಲಿ, ಕಾಂಗ್ರೆಸ್ 70 ಸ್ಥಾನಗಳಿಗೆ ಪಟ್ಟು ಹಿಡಿಯುವುದು ಅದರ ಕ್ಷೇತ್ರಮಟ್ಟದ ಶಕ್ತಿಗಿಂತ ಮೀರಿದ್ದಾಗಿದೆ ಎಂದು ಆರ್‌ಜೆಡಿ, ಅಲ್ಲಾವರು ಅವರಿಗೆ ಸ್ಪಷ್ಟವಾಗಿ ಹೇಳಿದೆ. 2020ರಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಗೆದ್ದು, "ಏಕಾಂಗಿಯಾಗಿ ಮಹಾಮೈತ್ರಿ ಸರ್ಕಾರ ರಚನೆಗೆ ಅಡ್ಡಿಯಾಗಿತ್ತು" ಎಂಬುದನ್ನು ಉಲ್ಲೇಖಿಸಿದ ಆರ್‌ಜೆಡಿ, "ಅದೇ ತಪ್ಪನ್ನು ಪುನರಾವರ್ತಿಸಲು ನಾವು ಸಿದ್ಧರಿಲ್ಲ" ಎಂದು ಕಾಂಗ್ರೆಸ್ ನಾಯಕರಿಗೆ ತಿಳಿಸಿದೆ.
ಆರ್‌ಜೆಡಿ, ಕಾಂಗ್ರೆಸ್‌ಗೆ "58 ರಿಂದ 60 ಸ್ಥಾನಗಳಿಗಿಂತ ಹೆಚ್ಚು" ಬಿಟ್ಟುಕೊಡಲು ಸಿದ್ಧವಿಲ್ಲ. 10-12 ಸ್ಥಾನಗಳಿಗಾಗಿ ಕಾಂಗ್ರೆಸ್‌ನ ದುರಹಂಕಾರದ ಧೋರಣೆ ತೋರಿ ಮೈತ್ರಿ ಮುರಿಯುವ ಹಂತಕ್ಕೆ ಹೋಗುತ್ತಿದೆ ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ. ಇದೇ ವಾದವನ್ನು ಆರ್‌ಜೆಡಿಗೂ ಅನ್ವಯಿಸಬಹುದಲ್ಲವೇ, ಮೈತ್ರಿ ಹಿತಾಸಕ್ತಿಗಾಗಿ ಆ ಹನ್ನೆರಡು ಸ್ಥಾನಗಳನ್ನು ಬಿಟ್ಟುಕೊಡಬಹುದಲ್ಲವೇ ಎಂಬ ವಾದವನ್ನು ತಳ್ಳಿಹಾಕಿದ ಆರ್‌ಜೆಡಿ ನಾಯಕರೊಬ್ಬರು, ಕಾಂಗ್ರೆಸ್‌ಗೆ ಹೆಚ್ಚುವರಿ ಸ್ಥಾನಗಳನ್ನು ನೀಡುವುದು ಎಂದರೆ ಆ ಕ್ಷೇತ್ರಗಳಲ್ಲಿ ಎನ್‌ಡಿಎಗೆ 'ವಾಕೋವರ್' ನೀಡಿದಂತೆ ಎಂದು ಹೋಲಿಸಿದ್ದಾರೆ. 2020ರಲ್ಲಿ ಎನ್‌ಡಿಎ ಕೇವಲ 15 ಸ್ಥಾನಗಳನ್ನು ಹೆಚ್ಚು ಗೆದ್ದು ಅಧಿಕಾರ ಉಳಿಸಿಕೊಂಡಿತ್ತು. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲುವ ಆತಂಕದ ನಡುವೆಯೂ ಹನ್ನೆರಡು ಹೆಚ್ಚುವರಿ ಸ್ಥಾನಗಳನ್ನು ನೀಡುವುದರಿಂದ 2020ರ ಚುನಾವಣಾ ಫಲಿತಾಂಶ ಪುನರಾವರ್ತನೆಯಾಗಬಹುದು ಎಂದು ಆರ್‌ಜೆಡಿ ನಂಬಿದೆ.
ಕಾಂಗ್ರೆಸ್ ಒತ್ತಡಕ್ಕೆ ಮಣಿಯದ ಆರ್‌ಜೆಡಿ
ಮತ್ತೊಂದೆಡೆ, ಬಿಹಾರದ ಪ್ರಸ್ತುತ ಚುನಾವಣಾ ಪರಿಸ್ಥಿತಿಯನ್ನು "2020ಕ್ಕೆ ಹೋಲಿಸಲಾಗದು" ಎಂದು ವಾದಿಸಿದ ಕಾಂಗ್ರೆಸ್, ರಾಹುಲ್ ಗಾಂಧಿಯವರ 'ಮತದಾರ ಅಧಿಕಾರ ಯಾತ್ರೆ' ಮತ್ತು ಪಕ್ಷದಿಂದ "ಅತ್ಯಂತ ಹಿಂದುಳಿದ ಜಾತಿಗಳು, ಮುಸ್ಲಿಮರು ಮತ್ತು ದಲಿತರ" ಸಂಘಟನೆಯಿಂದಾಗಿ ಪಕ್ಷದ ಚುನಾವಣಾ ಭವಿಷ್ಯ ಗಣನೀಯವಾಗಿ ಸುಧಾರಿಸಿದೆ ಎಂದು ಒತ್ತಾಯಿಸಿದೆ. ಸೋಮವಾರದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗದಿದ್ದರೂ, ನಿರೀಕ್ಷೆಯಂತೆ ಸಹಾನಿ ಮೈತ್ರಿಕೂಟದಿಂದ ಹೊರನಡೆದರೆ, ವಿಐಪಿಗೆ ಮೀಸಲಿಟ್ಟ ಸ್ಥಾನಗಳನ್ನು ಇತರ ಮಿತ್ರಪಕ್ಷಗಳ ನಡುವೆ "ಸಮಾನವಾಗಿ ಹಂಚಬೇಕು" ಎಂದು ಕಾಂಗ್ರೆಸ್ ನಂಬುತ್ತದೆ ಎಂದು ಕಾಂಗ್ರೆಸ್ ಮೂಲಗಳು 'ದ ಫೆಡರಲ್'ಗೆ ತಿಳಿಸಿವೆ.
ಆರ್‌ಜೆಡಿ, ಕಾಂಗ್ರೆಸ್ ವಾದವನ್ನು ಒಪ್ಪುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ಕಳೆದ ಕೆಲವು ದಿನಗಳಿಂದ ಸಹಾನಿಯವರ ನಿರ್ಗಮನವನ್ನು ನಿರೀಕ್ಷಿಸಿ, ಆರ್‌ಜೆಡಿ ರಾಜ್ಯದ ವಿವಿಧ ಜಾತಿ ಗುಂಪುಗಳ ಮೇಲೆ ಪ್ರಭಾವ ಹೊಂದಿರುವ ಇತರ ಪಕ್ಷಗಳು ಮತ್ತು ನಾಯಕರ ಬೆಂಬಲವನ್ನು ಗಳಿಸುವ ಮೂಲಕ ಮೈತ್ರಿಕೂಟದ ಬೆಂಬಲವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಅಕ್ಟೋಬರ್ 11 ರಂದು 'ದ ಫೆಡರಲ್' ವರದಿ ಮಾಡಿದಂತೆ, ಆರ್‌ಜೆಡಿ ಕಳೆದ ಕೆಲವು ದಿನಗಳಿಂದ ಪ್ರತಿಸ್ಪರ್ಧಿ ಎನ್‌ಡಿಎ ಬಣದಿಂದ ಭೂಮಿಹಾರ್ ಮತ್ತು ಕುಶ್ವಾಹ ನಾಯಕರನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ, ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಭೂಮಿಹಾರ್ ಮತ್ತು ಕುಶ್ವಾಹರು ಒಟ್ಟಾಗಿ ಬಿಹಾರದ ಜನಸಂಖ್ಯೆಯ ಸುಮಾರು ಶೇಕಡಾ ಒಂಬತ್ತರಷ್ಟು ಮತದಾರರನ್ನು ಹೊಂದಿದ್ದಾರೆ.
ಒಪ್ಪಂದಕ್ಕೂ ಮುನ್ನ ಉದ್ವಿಗ್ನತೆ ತಾರಕಕ್ಕೆ
ಪಾಟ್ನಾಗೆ ಹಿಂದಿರುಗುವ ಮುನ್ನ, ತೇಜಸ್ವಿ ಅವರು ಕಾಂಗ್ರೆಸ್‌ಗೆ ಕಠಿಣವಾಗಿ ಎಚ್ಚರಿಕೆ ನೀಡಿದ್ದಾರೆ. "ನಾಳೆ (ಅಕ್ಟೋಬರ್ 14) ಸೀಟು ಹಂಚಿಕೆ ಮಾತುಕತೆ ಸೌಹಾರ್ದಯುತವಾಗಿ ಇತ್ಯರ್ಥವಾಗಬೇಕು" ಮತ್ತು "ಬಿಹಾರದ ಹಿತಾಸಕ್ತಿಗಾಗಿ" ಮೈತ್ರಿಕೂಟವು ಹಾಗೇ ಉಳಿಯಬೇಕು ಎಂದು ತಮ್ಮ ಪಕ್ಷ ಬಯಸುತ್ತದೆ, ಆದರೆ ಆರ್‌ಜೆಡಿಯನ್ನು "ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿಯುವುದೇ ಏಕೈಕ ದಾರಿ ಎಂಬ ಹಂತಕ್ಕೆ ತಳ್ಳಬಾರದು" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಆಂತರಿಕ ಮೂಲಗಳು, ಮೈತ್ರಿ ಮಾತುಕತೆಗಳು "ಯಾವುದೇ ತೊಂದರೆಯಿಲ್ಲದೆ ಮುಂದುವರಿಯುತ್ತಿವೆ ಮತ್ತು ಮಂಗಳವಾರ ಪಾಟ್ನಾದಲ್ಲಿ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ಅಂತಿಮ ಪ್ರಕಟಣೆ ನಿರೀಕ್ಷಿಸಲಾಗಿದೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಮಂಗಳವಾರ ತನ್ನ ಕೇಂದ್ರ ಚುನಾವಣಾ ಸಮಿತಿ ಸಭೆಯನ್ನು ಕರೆದಿದ್ದು, ಬುಧವಾರದೊಳಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಇದರಲ್ಲಿ ಬಹುತೇಕವಾಗಿ ನವೆಂಬರ್ 6 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳು ಸೇರಿವೆ.
ಮಹಾಮೈತ್ರಿಕೂಟದಲ್ಲಿನ ಈ ಕೊನೆಯ ಕ್ಷಣದ ಗೊಂದಲವು, ಭಾನುವಾರ (ಅಕ್ಟೋಬರ್ 12) ತಮ್ಮ ಸೀಟು ಹಂಚಿಕೆ ಒಪ್ಪಂದವನ್ನು ಪ್ರಕಟಿಸಿದ್ದ ಎನ್‌ಡಿಎಯಲ್ಲೂ ಅಸಮಾಧಾನ ಹೊಗೆಯಾಡುತ್ತಿರುವ ನಡುವೆಯೇ ಪ್ರಕಟಗೊಂಡಿದೆ. ಎನ್‌ಡಿಎ ಒಪ್ಪಂದದ ಪ್ರಕಾರ, ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿ(ಯು) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ-ರಾಮ್‌ವಿಲಾಸ್‌ಗೆ 29 ಸ್ಥಾನಗಳನ್ನು ನೀಡಲಾಗಿದ್ದು, ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದುಸ್ತಾನಿ ಅವಾಮ್ ಮೋರ್ಚಾಗಳಿಗೆ ತಲಾ ಆರು ಸ್ಥಾನಗಳನ್ನು ನೀಡಲಾಗಿದೆ.
ನಿರ್ಣಾಯಕ ಹಂತಕ್ಕೆ ಪಾಟ್ನಾ ಸಜ್ಜು
ಮಾಂಝಿ ಮತ್ತು ಕುಶ್ವಾಹ ಇಬ್ಬರೂ ಎನ್‌ಡಿಎಯಲ್ಲಿ ತಮ್ಮನ್ನು "ಕಡಿಮೆ ಮೌಲ್ಯಮಾಪನ ಮಾಡಲಾಗಿದೆ" ಎಂದು ಸಾರ್ವಜನಿಕವಾಗಿ ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಕುಶ್ವಾಹ ಅವರು ಈ ಅಸಮರ್ಪಕ ಒಪ್ಪಂದದಿಂದ ಆಡಳಿತಾರೂಢ ಮೈತ್ರಿಕೂಟದ ಗೆಲುವಿನ ಸಾಧ್ಯತೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದೂ ಹೇಳಿದ್ದಾರೆ. ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷದ ಸಹೋದ್ಯೋಗಿ ಸಂಜಯ್ ಝಾ ಅವರು ಮೈತ್ರಿಕೂಟವು ಗೆಲುವಿನ ಹಾದಿಯಲ್ಲಿದೆ ಎಂದು ಹೇಳಿದರೂ, ಒಪ್ಪಂದದ ಬಗ್ಗೆ ನಿತೀಶ್ ಅವರ ಮೌನ ಎಲ್ಲರ ಹುಬ್ಬೇರಿಸಿದೆ.
ಎನ್‌ಡಿಎಯೊಳಗಿನ ಸೀಟು ಹಂಚಿಕೆಯ ಭಿನ್ನಾಭಿಪ್ರಾಯವು ಮಹಾಮೈತ್ರಿಕೂಟಕ್ಕೆ ಅನುಕೂಲಕರವಾಗಿ ಪರಿಣಮಿಸುತ್ತದೆ ಎಂದು ಆರ್‌ಜೆಡಿ ನಾಯಕರು ಅರಿತುಕೊಂಡಿದ್ದಾರೆ. ಆದರೆ 2020ರ ಫಾರ್ಮುಲಾದಂತೆ 70 ಸ್ಥಾನಗಳಿಗೆ ಕಾಂಗ್ರೆಸ್‌ನ ಹಠಮಾರಿ ನಿಲುವು ಅಂತಹ ಯಾವುದೇ ಲಾಭವನ್ನು ತಟಸ್ಥಗೊಳಿಸಬಹುದು ಎಂದು ಅವರು ಒಪ್ಪಿಕೊಳ್ಳುತ್ತಾರೆ.
ತೇಜಸ್ವಿ ಪಾಟ್ನಾಗೆ ಹಿಂದಿರುಗುವುದರೊಂದಿಗೆ, ಎಲ್ಲರ ಕಣ್ಣುಗಳು ಈಗ ಮಂಗಳವಾರ (ಅಕ್ಟೋಬರ್ 14) ಬಿಹಾರದ ರಾಜಧಾನಿಯಲ್ಲಿ ಏನಾಗುತ್ತದೆ ಎಂಬುದರ ಮೇಲೆ ನೆಟ್ಟಿದೆ. ಕಾಂಗ್ರೆಸ್ 2020ರ ಫಾರ್ಮುಲಾವನ್ನು ಪುನರಾವರ್ತಿಸಲು ಪಟ್ಟು ಹಿಡಿಯುವುದೇ? ಮುಕೇಶ್ ಸಹಾನಿ ಮಹಾಮೈತ್ರಿಕೂಟದೊಂದಿಗೆ ಉಳಿಯುವರೇ ಅಥವಾ ತಮ್ಮ ಇತ್ತೀಚಿನ ಎಕ್ಸ್ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ಏಕಾಂಗಿ ಪಯಣ ಬೆಳೆಸುವರೇ? ಮಹಾಮೈತ್ರಿಕೂಟವನ್ನು ಉಳಿಸಿಕೊಳ್ಳಲು ತೇಜಸ್ವಿ ಮಣಿಯುವರೇ? ಈ ಪ್ರಶ್ನೆಗಳಿಗೆ ಮಂಗಳವಾರ ಉತ್ತರ ಸಿಗುವ ನಿರೀಕ್ಷೆಯಿದೆ.