ಬೆಂಗಳೂರಿನ ರಸ್ತೆ ಗುಂಡಿಗಳ ಅವ್ಯವಸ್ಥೆ: ಕಿರಣ್ ಮಜುಂದಾರ್ ಟ್ವೀಟ್, ಸರ್ಕಾರಕ್ಕೆ ಮತ್ತೆ ತೀವ್ರ ಮುಜುಗರ
ಸಿಲಿಕಾನ್ ಸಿಟಿಯ ರಸ್ತೆ ಮತ್ತು ಕಸದ ಬಗ್ಗೆ ಮತ್ತೆ ಚರ್ಚೆಗಳು ಪ್ರಾರಂಭವಾಗಿವೆ. ರಸ್ತೆಗಳ ಕುರಿತು ಉದ್ಯಮಿಗಳ ಟ್ವಿಟ್‌ನಿಂದಾಗಿ ಮುಜುಗರಕ್ಕೊಳಗಾಗಿದ್ದ ಸರ್ಕಾರಕ್ಕೆ ಈಗ ಮತ್ತೊಮ್ಮೆ ಇರಿಸುಮುರಿಸಾಗಿದೆ.
ಸಿಲಿಕಾನ್ ಸಿಟಿ ಎಂದು ಖ್ಯಾತಿ ಗಿಟ್ಟಸಿರುವ ಬೆಂಗಳೂರು ನಗರದ ರಸ್ತೆಯ ಗುಂಡಿಗಳು ಮತ್ತು ಕಸದ ಸಮಸ್ಯೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಬಾರಿ ಚೀನಾದ ಉದ್ಯಮಿಯೊಬ್ಬರ ಆತಂಕಕಾರಿ ಪ್ರಶ್ನೆಯನ್ನು ಉಲ್ಲೇಖಿಸಿ, ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮಾಡಿರುವ ಟ್ವೀಟ್, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರ ಮುಜುಗರಕ್ಕೀಡುಮಾಡಿದೆ. ಈ ಟ್ವೀಟ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಿರಣ್ ಮಜುಂದಾರ್ ಶಾ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದು, ಸರ್ಕಾರದ ಹಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಯೋಕಾನ್ ಪಾರ್ಕ್‌ಗೆ ಭೇಟಿ ನೀಡಿದ್ದ ಚೀನಾದ ಉದ್ಯಮಿಯೊಬ್ಬರು, "ಇಲ್ಲಿನ ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ? ಸುತ್ತಲೂ ಇಷ್ಟೊಂದು ಕಸ ಏಕೆ ಬಿದ್ದಿದೆ? ನಿಮ್ಮ ಸರ್ಕಾರ ಹೂಡಿಕೆಯನ್ನು ಬೆಂಬಲಿಸಲು ಬಯಸುವುದಿಲ್ಲವೇ? ಚೀನಾದಿಂದ ಬಂದ ನನಗೆ, ಹೂಡಿಕೆಗೆ ಅನುಕೂಲಕರ ವಾತಾವರಣವಿದ್ದರೂ ಭಾರತ ಏಕೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ" ಎಂದು ಪ್ರಶ್ನಿಸಿದ್ದಾಗಿ ಕಿರಣ್ ಮಜುಂದಾರ್ ಶಾ ತಮ್ಮ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಡಿಕೆಶಿ-ಮಜುಂದಾರ್ ಟ್ವೀಟ್ ವಾರ್
ಕಿರಣ್ ಮಜುಂದಾರ್ ಶಾ ಅವರ ಟ್ವೀಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶ, ಗುರುತು ಮತ್ತು ಯಶಸ್ಸನ್ನು ನೀಡಿದೆ. ಇಲ್ಲಿ ಸವಾಲುಗಳಿವೆ, ಆದರೆ ನಾವು ಅವುಗಳನ್ನು ಆದ್ಯತೆಯ ಮೇಲೆ ಪರಿಹರಿಸುತ್ತಿದ್ದೇವೆ," ಎಂದು ಸಮರ್ಥಿಸಿಕೊಂಡಿದ್ದಾರೆ. "ರಸ್ತೆ ದುರಸ್ತಿಗಾಗಿ 1,100 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು, 10,000ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಿ, ಈಗಾಗಲೇ 5,000ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದೆ. ಬೆಂಗಳೂರಿಗೆ ಕೆಟ್ಟ ಹೆಸರು ತರುವ ಬದಲು, ನಾವೆಲ್ಲರೂ ಒಟ್ಟಾಗಿ ನಗರವನ್ನು ನಿರ್ಮಿಸೋಣ. ಜಗತ್ತು ಬೆಂಗಳೂರಿನ ಮೂಲಕವೇ ಭಾರತವನ್ನು ನೋಡುತ್ತದೆ," ಎಂದು ಅವರು ತಿರುಗೇಟು ನೀಡಿದ್ದಾರೆ.
ಪ್ರತಿಯಾಗಿ ಟ್ವೀಟ್ ಮಾಡಿದ ಕಿರಣ್ ಮಜುಂದಾರ್ ಶಾ, "ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಇದು ತುರ್ತು ಮತ್ತು ಗುಣಮಟ್ಟದ ಮನಸ್ಥಿತಿಯೊಂದಿಗೆ ಆಗಬೇಕಾದ ಸಾಮೂಹಿಕ ಪ್ರಯತ್ನ. ನಮ್ಮ ನಗರವನ್ನು ನಾವು ಹೇಗೆ ಸರಿಪಡಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸೋಣ," ಎಂದು ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ.
ಸಚಿವರ ಅಸಮಾಧಾನ
ಈ ಟ್ವೀಟ್ ವಾರ್‌ಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂ.ಬಿ. ಪಾಟೀಲ್, "ಬಯೋ ಟೆಕ್ನಾಲಜಿ ಬೆಂಗಳೂರಿಗೆ ಕೊಡುಗೆ ನೀಡಿದೆ, ಅದೇ ರೀತಿ ಬೆಂಗಳೂರು ಕೂಡ ಆ ಸಂಸ್ಥೆಗೆ ಎಲ್ಲವನ್ನೂ ಕೊಟ್ಟಿದೆ. ನಿರಂತರ ಮಳೆಯಿಂದಾಗಿ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು 1,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ, ಸ್ವಲ್ಪ ಸಮಯ ಬೇಕಾಗುತ್ತದೆ. ಪದೇ ಪದೇ ಈ ರೀತಿ ಮಾತನಾಡುವ ಉದ್ದೇಶವಾದರೂ ಏನು?" ಎಂದು ಕಿರಣ್ ಮಜುಂದಾರ್ ಅವರನ್ನು ಪ್ರಶ್ನಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಕೂಡ ಪ್ರತಿಕ್ರಿಯಿಸಿ, "ಬೆಂಗಳೂರಿನ ಯಾವ ಭಾಗವನ್ನು ಅವರು ನೋಡಿದ್ದಾರೋ ಗೊತ್ತಿಲ್ಲ. ಕೆಲಸಗಳು ಪ್ರಗತಿಯಲ್ಲಿವೆ. ನಿರಂತರ ಮಳೆಯ ನಡುವೆಯೂ ನಾವು ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿದ್ದೇವೆ. ಸಮಸ್ಯೆಗಳಿದ್ದರೆ ನೇರವಾಗಿ ಫೋನ್ ಮಾಡಿ ಮಾತನಾಡಬಹುದು. ಕಸ ಹಾಕುವವರು ಯಾರು? ನಾಗರಿಕರೂ ಜವಾಬ್ದಾರರಾಗಿರಬೇಕು ಮತ್ತು ಸರ್ಕಾರಕ್ಕೆ ಸಹಕಾರ ನೀಡಬೇಕು," ಎಂದು ಹೇಳಿದ್ದಾರೆ.
ಏನೇ ಸಮಸ್ಯೆ ಇದ್ದರೂ ಫೋನ್ ಮಾಡಿ ನಮ್ಮ ಬಳಿ ಮಾತಾಡಬಹುದು. ಎಲ್ಲರೂ ಅವರವರ ಪಾತ್ರ ನಿರ್ವಹಿಸಿದರೆ ರಾಜ್ಯಕ್ಕೆ ಒಳ್ಳೆಯದು. ಕಸ ಹಾಕುವವರು ಯಾರು? ಮೇಲಿಂದ ಬಂದು ಬೀಳುತ್ತಾ? ನಾಗರಿಕರು ಜವಾಬ್ದಾರರಾಗಬೇಕು ಮತ್ತು ಸರ್ಕಾರಕ್ಕೆ ಸಹಕಾರ ಕೊಡಬೇಕು ಎಂದು ತಿಳಿಸಿದ್ದಾರೆ.