Dengue Outbreak | ನಿಖರ ಮಾಹಿತಿ ಮುಚ್ಚಿಡುತ್ತಿದೆಯೇ ಆರೋಗ್ಯ ಇಲಾಖೆ?

ಕರ್ನಾಟಕದಲ್ಲಿ ಡೆಂಗ್ಯೂ ಸೋಂಕು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಡೆಂಗ್ಯೂ ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ನಿತ್ಯ ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದರೂ, ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ಮಾತ್ರ ಬದಲಾವಣೆ ಕಾಣುತ್ತಿಲ್ಲ!;

Update: 2024-07-08 11:52 GMT
ಡೆಂಗ್ಯೂ

ಕರ್ನಾಟಕದಲ್ಲಿ ಡೆಂಗ್ಯೂ ಸೋಂಕು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಡೆಂಗ್ಯೂ ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆ ವಿಫಲ ಎಂಬ ಗಂಭೀರ ಆರೋಪಗಳು ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳಿಂದ ಕೇಳಿ ಬರುತ್ತಿದೆ.

ಆರೋಗ್ಯ ಇಲಾಖೆಯ ಅಧಿಕೃತ ಅಂಕಿ– ಅಂಶಗಳ ಪ್ರಕಾರ, ರಾಜ್ಯದಲ್ಲಿ ಇಲ್ಲಿಯವರೆಗೆ 7,165 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದು, 6 ಜನ ಸಾವನ್ನಪ್ಪಿದ್ದಾರೆ. ಆದರೆ, ಹುಬ್ಬಳ್ಳಿಯಲ್ಲಿ 4 ಜನ, ಮೈಸೂರಿನಲ್ಲಿ ಒಬ್ಬರು ಡೆಂಗ್ಯೂವಿನಿಂದ ಸಾವನ್ನಪ್ಪಿರುವುದು ವರದಿಯಾಗಿದೆ. ಹಾಗೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿತ್ಯ ಒಂದಿಲ್ಲೊಂದು ಡೆಂಗ್ಯೂ ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆದರೆ, ಆರೋಗ್ಯ ಇಲಾಖೆ ಅಧಿಕೃತ ದೈನಂದಿನ ಬುಲೆಟಿನ್‌ನಲ್ಲಿ ಈ ಸಾವುಗಳು ಲೆಕ್ಕಕ್ಕೆ ಸೇರುತ್ತಲೇ ಇಲ್ಲ!

ಕೇಂದ್ರ ಸರ್ಕಾರವು ಡೆಂಗ್ಯೂ ಪ್ರಕರಣಗಳಲ್ಲಿ (Case fatality rate) ಮರಣ ಪ್ರಮಾಣ ಶೇ.0.5 ಮೀರುವಂತಿಲ್ಲ ಎಂದು ನಿಗದಿ ಮಾಡಿದೆ. ಇದೀಗ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣದ ಸಾವಿನ ಪ್ರಮಾಣವು 0.08ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆದರೆ, ನಿತ್ಯವೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂವಿನಿಂದ ಸಾವನ್ನಪ್ಪುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆ ಪ್ರಕರಣಗಳನ್ನು ಆರೋಗ್ಯ ಇಲಾಖೆ ತನ್ನ ಅಧಿಕೃತ ವರದಿಯಲ್ಲಿ ದಾಖಲಿಸದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ರೋಗದ ತೀವ್ರತೆ ಹೆಚ್ಚು ತೋರಿಸಿದರೆ ತನ್ನ ವೈಫಲ್ಯದ ವಿರುದ್ಧ ಪ್ರತಿಪಕ್ಷಗಳು ಮತ್ತು ಸಾರ್ವಜನಿಕರ ಆಕ್ರೋಶ ಹೆಚ್ಚಲಿದೆ ಎಂಬ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಉದ್ದೇಶಪೂರ್ವಕವಾಗಿ ಸಾವಿನ ಪ್ರಮಾಣವನ್ನು ಮುಚ್ಚಿಡುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ಡೆಂಗ್ಯೂ ಪ್ರಕರಣ: ರಾಜ್ಯದ ಪರಿಸ್ಥಿತಿ ಏನಿದೆ ?

ಕರ್ನಾಟಕದಲ್ಲಿ ಇಲ್ಲಿಯವರೆಗೆ (ಜುಲೈ 7) 7,165 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದು, 6 ಜನ ಸಾವನ್ನಪ್ಪಿದ್ದಾರೆ. 54,820 ಜನರನ್ನು ಡೆಂಗ್ಯೂ ಪರೀಕ್ಷೆಗೆ ಒಳಪಡಿಸಲಾಗಿದೆ. 301 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಕಳೆದ 24 ಅವಧಿಯಲ್ಲೇ 159 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ.

ಯಾವ ಜಿಲ್ಲೆಯಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣ

ಬೆಂಗಳೂರಿನಲ್ಲಿ (ಬಿಬಿಎಂಪಿ ವ್ಯಾಪ್ತಿ) ಹೆಚ್ಚು ಡೆಂಗ್ಯೂ ಪ್ರಕರಣಗಳ ದೃಢಪಟ್ಟಿವೆ. ಬೆಂಗಳೂರಿನಲ್ಲಿ 1,988 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದು, 130 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಚಿಕ್ಕಮಗಳೂರಿನಲ್ಲಿ 546, ಮೈಸೂರಿನಲ್ಲಿ 496, ಧಾರವಾಡದಲ್ಲಿ 289 ಹಾಗೂ ಶಿವಮೊಗ್ಗದಲ್ಲಿ 292 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿದೆ.

35 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಡೆಂಗ್ಯೂವಿನಿಂದ 35 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಬೆಂಗಳೂರಿನಲ್ಲೇ 20 ಜನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 

ಜಿಲ್ಲೆ 

ಸಂಖ್ಯೆ

ಬೆಂಗಳೂರು

20

ಚಿಕ್ಕಬಳ್ಳಾಪುರ

2

ತುಮಕೂರು

2

ದಾವಣಗೆರೆ

2

ಗದಗ

1

ಬೀದರ್ 

3

ಹಾಸನ 

2

ಚಿಕ್ಕಮಗಳೂರು

3

ಒಟ್ಟು 

35

ಡೆಂಗ್ಯೂವಿನಿಂದ ಮೃತಪಟ್ಟವರು  

ಜಿಲ್ಲೆ

 ಸಾವು

ಬೆಂಗಳೂರು

 1

ಶಿವಮೊಗ್ಗ

 1

ಧಾರವಾಡ

 1

ಹಾವೇರಿ

 1

ಹಾಸನ 

2

ಒಟ್ಟು 

6

ಬಿಜೆಪಿಯಿಂದ ಬಿಬಿಎಂಪಿ ಆಯುಕ್ತರಿಗೆ ದೂರು

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆ ಹಿನ್ನೆಲೆಯಲ್ಲಿ, ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ಪಾಲಿಕೆ ಡೆಂಗ್ಯೂ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ಬಿಜೆಪಿ ನಿಯೋಗವು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಿದೆ.

ಬಿಬಿಎಂಪಿಯಿಂದ ಫಾಗಿಂಗ್ ಹಾಗೂ ಔಷಧಿ ಸಿಂಪಡಣೆಯನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.



ಸಂಪರ್ಕಕ್ಕೆ ಸಿಗದ ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ನಿಖರ ವರದಿಯ ಬಗ್ಗೆ ಗೊಂದಲ ಮೂಡಿದ್ದು, ಸಾವಿನ ಸಂಖ್ಯೆಯಲ್ಲೂ ಗೊಂದಲವಿದೆ. ಇದರ ಬಗ್ಗೆ ಮಾಹಿತಿ ಪಡೆಯಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ದ ಫೆಡರಲ್ ಕರ್ನಾಟಕ ಹಲವು ಬಾರಿ ಕರೆ ಮಾಡಿದರೂ, ಸಂಪರ್ಕಕ್ಕೆ ಸಿಗಲಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳಿಂದಲೂ ಉತ್ತರ ಸಿಗಲಿಲ್ಲ. 

ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು

ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳು, ಪ್ರಯೋಗಶಾಲೆಗಳು, ಡಯೋಗ್ನೋಸ್ಟಿಕ್ ಹಾಗೂ ಲ್ಯಾಬೊರೇಟರಿಗಳು ಸೇರಿದಂತೆ ರಾಜ್ಯಾದ್ಯಂತ ಏಕರೂಪದ ದರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಡೆಂಗ್ಯೂ ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಿದೆ. ಆದರೆ, ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕಡಿವಾಣಕ್ಕೆ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ. 

ಏಕರೂಪ ದರ ನಿಗದಿ

ಡೆಂಗ್ಯೂ ಸೋಂಕು ಪರೀಕ್ಷೆಯಾದ ಎಲಿಸಾ ಹಾಗೂ ರ‍್ಯಾಪಿಡ್ ಪರೀಕ್ಷೆಗೆ ಸರ್ಕಾರ ದರ ನಿಗದಿ ಮಾಡಿದೆ. ಅದರಂತೆ ಎಲಿಸಾ ಪರೀಕ್ಷೆಗೆ ತಲಾ 300 ರೂಪಾಯಿ ಹಾಗೂ ರ‍್ಯಾಪಿಡ್ ಪರೀಕ್ಷೆಗೆ 250 ರೂಪಾಯಿ ನಿಗದಿ ಮಾಡಲಾಗಿದೆ. 



ಸರ್ಕಾರದಿಂದ ಪ್ರತಿ ಶುಕ್ರವಾರ ಡ್ರೈ ಡೇ ಜಾಗೃತಿ ಮೂಡಿಸಲಾಗುತ್ತಿದೆ. ಅಂದರೆ ನೀರು ಸಂಗ್ರಹ ಮಾಡುವ ಸಾಧನಗಳನ್ನು ಖಾಲಿ ಮಾಡಿ ಸ್ವಚ್ಛವಾಗಿ ಇರಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಪ್ರತಿ ಶುಕ್ರವಾರವೂ ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ಡೆಂಗ್ಯೂ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲಾಗುತ್ತಿದೆ. 

Tags:    

Similar News