CAFE BLAST | ಶಂಕಿತ ಉಗ್ರನ ಮಾಹಿತಿಗೆ 10 ಲಕ್ಷ ರೂ. ಬಹುಮಾನ ಘೋಷಣೆ
ಶಂಕಿತ ಉಗ್ರನ ಚಿತ್ರ ಹಂಚಿಕೊಂಡ ಎನ್‌ಐಎ | ಮಾಹಿತಿ ಗೌಪ್ಯವಾಗಿರಿಸುವ ಭರವಸೆ;
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಫೋಟಿಸಿದ ಶಂಕಿತ ಉಗ್ರನ ಬಗ್ಗೆ ಮಾಹಿತಿ ನೀಡಿದವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಘೋಷಿಸಿದೆ.
ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಟ್ವೀಟ್ ಮಾಡಲಾಗಿದ್ದು, ಶಂಕಿತ ಉಗ್ರ ರಾಮೇಶ್ವರಂ ಕೆಫೆ ಪ್ರವೇಶಿಸುವಾಗ ಕ್ಯಾಪ್, ಮಾಸ್ಕ್ ಮತ್ತು ಕನ್ನಡಕವನ್ನು ಧರಿಸಿದ್ದ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.
ಬಾಂಬ್ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಂಕಿತ ಉಗ್ರನ ಗುರುತು ಸಿಕ್ಕರೆ ಯಾವ ವಿಳಾಸಕ್ಕೆ ಮಾಹಿತಿ ಹಂಚಿಕೊಳ್ಳಬೇಕು ಎನ್ನುವ ವಿವರವನ್ನೂ ನೀಡಲಾಗಿದೆ. ಶಂಕಿತ ಉಗ್ರನ ಬಗ್ಗೆ ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿ ಇರಿಸುವುದಾಗಿ ಎನ್‌ಐಎ ತಿಳಿಸಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆಯನ್ನು ಈಚೆಗೆ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಮಾರ್ಚ್ 1 ರಂದು ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ 10 ಜನರು ಗಾಯಗೊಂಡಿದ್ದರು.
ಈ ಸ್ಫೋಟವನ್ನು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮೂಲಕ ನಡೆಸಲಾಗಿದೆ ಎಂದು ಅಂದಾಜಿಸಲಾಗಿದೆ. ಸ್ಫೋಟದ ನಂತರ, ಕರ್ನಾಟಕ ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಎನ್ಐಎ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳನ್ನು ತನಿಖೆ ಮಾಡಲು ರಚಿಸಲಾಗಿರುವ ವಿಶೇಷ ತನಿಖಾ ಸಂಸ್ಥೆಯಾಗಿದೆ. 26/11 ಮುಂಬೈ ಭಯೋತ್ಪಾದನಾ ದಾಳಿಯ ನಂತರ 2008 ರಲ್ಲಿ ಎನ್‌ಐಎ ರಚಿಸಲಾಗಿದೆ.