ಲಕ್ನೋ, ಫೆ. 25- ಪಕ್ಷದ ಸಂಸದರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಪಕ್ಷದ ಜನಪ್ರತಿನಿಧಿಗಳಿಗೆ
ಸೂಚಿಸಿದ್ದಾರೆ.
ಅಂಬೇಡ್ಕರ್ ನಗರದ ಬಿಎಸ್‌ಪಿ ಸಂಸದ ರಿತೇಶ್ ಪಾಂಡೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಮಾಯಾವತಿ ಈ ಹೇಳಿಕೆ ನೀಡಿದ್ದಾರೆ.
ʻಪಕ್ಷದ ಸಂಸದರು ತಮಗೆ ನೀಡಲಾದ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಎಸ್‌ಪಿ ರಾಜಕೀಯ ಪಕ್ಷ ದೊಂದಿಗೆ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಸ್ವಾಭಿಮಾನ ಧ್ಯೇಯಕ್ಕೆ ಮೀಸಲಾದ ಚಳವಳಿಯೂ ಇದೆ. ಇದರಿಂದಾಗಿ ಪಕ್ಷದ ನೀತಿ ಮತ್ತು ಕಾರ್ಯಶೈಲಿ ಬಂಡವಾಳಶಾಹಿಗಿಂತ ಭಿನ್ನವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯಲ್ಲಿ ಪಕ್ಷ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುತ್ತದೆ" ಎಂದು ಮಾಯಾವತಿ ಹಿಂದಿಯಲ್ಲಿ 'ಎಕ್ಸ್' ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ʻ ಬಿಎಸ್‌ಪಿ ಸಂಸದರು ತಮ್ಮ ಜನರ ಕಾಳಜಿ ವಹಿಸಿದ್ದಾರೆಯೇ? ಕ್ಷೇತ್ರದಲ್ಲಿ ಪೂರ್ಣ ಸಮಯ ವಿನಿಯೋಗಿಸಿದ್ದಾರೆಯೇ? ಅವರು ಪಕ್ಷ ಕಾಲಕಾಲಕ್ಕೆ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕುʼ ಎಂದು ಹೇಳಿದ್ದಾರೆ.
ಪಾಂಡೆ ಬಿಎಸ್‌ಪಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ,ʻತಮ್ಮನ್ನು ದೀರ್ಘಕಾಲ ಸಭೆಗಳಿಗೆ ಕರೆಯದ ಕಾರಣ ಹಾಗೂ ಪಕ್ಷದ ನಾಯಕತ್ವ ತಮ್ಮೊಂದಿಗೆ ಮಾತನಾಡದ ಕಾರಣ ಪಕ್ಷಕ್ಕೆ ತಮ್ಮ ಸೇವೆ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆʼ ಎಂದು ಹೇಳಿದ್ದಾರೆ. ರಾಜೀನಾಮೆ ಪತ್ರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ʻದೀರ್ಘಕಾಲದಿಂದ ಪಕ್ಷದ ಸಭೆಗಳಿಗೆ ನನ್ನನ್ನು ಕರೆಯುತ್ತಿಲ್ಲ ಅಥವಾ ಪಕ್ಷದ ನಾಯಕತ್ವವು ನನ್ನೊಂದಿಗೆ ಮಾತನಾಡಿಲ್ಲ.ನಿಮ್ಮನ್ನು (ಮಾಯಾವತಿ) ಮತ್ತು ಪಕ್ಷದ ಉನ್ನತ ನಾಯಕತ್ವವನ್ನು ಸಂಪರ್ಕಿಸಲು ಮತ್ತು ಭೇಟಿ ಮಾಡಲು ನಡೆಸಿ ಹಲವಾರು ಪ್ರಯತ್ನಗಳು ಫಲಕಾರಿಯಾಗಿಲ್ಲʼ ಎಂದು ಪಾಂಡೆ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ʻಹಾಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇಲ್ಲ. ಪಕ್ಷದೊಂದಿಗಿನ ಸಂಬಂಧವನ್ನು ಮುರಿಯುವುದು ಕಠಿಣ ನಿರ್ಧಾರʼ ಎಂದು ಬರೆದಿದ್ದಾರೆ.