BIFFes 2025 | ಚಂದನವನದ ಸರಳ ಸಜ್ಜನ ಚಾಮಯ್ಯ ಮೇಷ್ಟ್ರು ಇದ್ದಿದ್ದರೆ ನೂರು ವರ್ಷ...

ಕನ್ನಡ ಚಿತ್ರರಂಗದಲ್ಲಿ ಪೋಷಕನಟರಿಗೆ ತಾರಾಮೌಲ್ಯ ತಂದುಕೊಟ್ಟ, ಕೆ.ಎಸ್.‌ ಅಶ್ವತ್ಥ್‌ ಅವರು ಇಂದು ನಮ್ಮೊಂದಿಗಿದ್ದಿದ್ದರೆ ಅವರಿಗೆ ಮಾರ್ಚಿ 25 ಕ್ಕೆ ನೂರು ವರ್ಷವಾಗುತ್ತಿತ್ತು. ಅಶ್ವತ್ಥ್‌ ಅವರ ಒಂದು ಚಿತ್ರ Biffesನ 16ನೇ ಆವೃತ್ತಿಯಲ್ಲಿ ಪ್ರದರ್ಶಿಸಲಾಗುತ್ತಿದೆ.;

Update: 2025-02-23 01:40 GMT

ಕನ್ನಡ ಚಿತ್ರರಂಗದಲ್ಲಿ ಪೋಷಕ ಕಲಾವಿದರಿಗೆ ತಾರಾಮೌಲ್ಯದ ಭಾಗ್ಯ ತಂದುಕೊಟ್ಟ ಕನ್ನಡ ನೆಲದ ಅಪ್ಪಟ ಪ್ರತಿಭೆ- ಕೆ.ಎಸ್.‌ ಅಶ್ವತ್ಥ್‌ ಎಂದೇ ಖ್ಯಾತರಾದ ಕರಗನಹಳ್ಳಿ ಸುಬ್ಬರಾಯ ಅಶ್ವತ್ಥನಾರಾಯಣ ಇಂದು ನಮ್ಮೊಂದಿಗಿದ್ದಿದ್ದರೆ ಅವರಿಗೆ ʼಶತಮಾನಂ ಭವತಿʼ ಎನ್ನಬಹುದಿತ್ತೇನೋ.

ಆದರೆ ಆ ಭಾಗ್ಯ ಕನ್ನಡಿಗರಿಗೆ ದಕ್ಕಲಿಲ್ಲ ಎನ್ನುವುದು ವಿಷಾದದ ಸಂಗತಿ. ಅವರು ನಮ್ಮೊಂದಿಗಿದ್ದಿದ್ದರೆ ಅವರಿಗೆ ಈ ವರ್ಷ ಮಾರ್ಚ್ 25 ಕ್ಕೆ ನೂರು ವರ್ಷವಾಗುತ್ತಿತ್ತು.

ತಮ್ಮ ಚಲನಚಿತ್ರ ಅಭಿನಯದ ವೃತ್ತಿ ಜೀವನದಲ್ಲಿ 370ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ತಮ್ಮ 84ನೇ ವಯಸ್ಸಿನಲ್ಲಿ ಜನವರಿ 18, 2010ರಂದು ಕನ್ನಡ ಚಿತ್ರರಂಗವನ್ನು ಹಾಗೂ ಅವರ ಅಭಿಮಾನಿಗಳನ್ನು ಅನಾಥರನ್ನಾಗಿಸಿದರು. ತಮ್ಮ ಕಾಲಾವಧಿಯ ಶ್ರೇಷ್ಠ ನಟರಲ್ಲಿ ಒಬ್ಬರೆನ್ನಿಸಿಕೊಂಡು, ಡಾ. ರಾಜ್‌ ಕುಮಾರ್‌ ಜೊತೆಯಲ್ಲಿ ಕನ್ನಡ ಚಿತ್ರರಂಗವನ್ನು ಬೆಳೆಸಿ, ಇಂದಿನ ಸ್ಥಿತಿಗೆ ಕನ್ನಡ ಚಿತ್ರರಂಗವನ್ನು ತಂದು ನಿಲ್ಲಿಸಿದ ಮಹನೀಯರಲ್ಲಿ ಅಶ್ವತ್ಥ್‌ ಕೂಡ ಒಬ್ಬರು.

ನಾಗರಹಾವು

ಮಾರ್ಚಿ 1ರಿಂದ ಆರಂಭವಾಗಲಿರುವು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ದೇಶದ ಮಹಾನ್‌ ಕಲಾವಿದರನ್ನು ಗೌರವಿಸುವ ಒಂದು ಭಾಗವಾಗಿ ಕನ್ನಡದ ಕೆ.ಎಸ್.‌ ಅಶ್ವತ್ಥ್‌ ಅವರ, ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಜನಪ್ರಿಯ ʼನಾಗರಹಾವುʼ ಚಿತ್ರ ಪ್ರದರ್ಶನಗೊಳ್ಳಲಿದೆ. ಈ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರಾಗಿ ಮನೋಜ್ಞ ಅಭಿನಯ ನೀಡಿ, “ಇದ್ದರೆ, ಸಿಕ್ಕರೆ ಚಾಮಯ್ಯ ಮೇಷ್ಟ್ರಂಥ ಮೇಷ್ಟ್ರು ಸಿಗಬೇಕು” ಎಂದು ಹಂಬಲಿಸುವ ವಿದ್ಯಾರ್ಥಿಗಳು ಇಂದಿಗೂ ಹಂಬಲಿಸಿದರೆ, ಅದರ ಯಶಸ್ಸು ಅಶ್ವತ್ಥ್‌ ಗೇ ಸಲ್ಲಬೇಕು. ಇವರೊಬ್ಬ ಅವಿಸ್ಮರಣೀಯ ಕಲಾವಿದರು. ಚಿತ್ರರಂಗದ ಒಳಗೂ ಸರಳ-ಸಜ್ಜನ ಎನ್ನಿಸಿಕೊಂಡೇ ಬದುಕಿನುದ್ದಕ್ಕೂ ಜೀವಿಸಿದವರು. ತಮ್ಮ ಪಾತ್ರಗಳಿಗೆ ಜೀವ ತುಂಬುವ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ತಮಗೊಂದು ಸ್ಥಾನ ಪಡೆದುಕೊಂಡವರು. ಇಂದು ಅಶ್ವತ್ಥ್‌ ನಮ್ಮೊಂದಿಗಿಲ್ಲ. ಆದರೆ ಅವರ ನೆನಪು ಎಲ್ಲ ಕನ್ನಡಿಗರ ಎದೆಯಲ್ಲಿ ಹಸಿರಾಗಿದೆ.

ಸರ್ಕಾರಿ ನೌಕರಿಗೆ ತಿಲಾಂಜಲಿ

ಮಾನವೀಯ ವ್ಯಕ್ತಿತ್ವದ ಅಶ್ವತ್ಥ್‌ ಚಿತ್ರರಂಗಕ್ಕೆ ಬಂದದ್ದಾದರೂ ಹೇಗೆ. ಮೂಲತಃ ಹಾಸನದ ಹೊಳೆನರಸೀಪುರದಲ್ಲಿ ಹುಟ್ಟಿದ ಅಶ್ವತ್ಥ್‌. ಮೈಸೂರಿನಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಪಡೆದುಕೊಂಡ ಅಶ್ವತ್ಥ್‌ ತಮ್ಮ ಅಧ್ಯಯನ ಕಾಲದಲ್ಲಿಯೇ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದರು. ಆ ಕಾಲಕ್ಕೆ ಸ್ವಾತಂತ್ರ್ಯ ಚಳವಳಿಯ ಕಾವು ಏರುತ್ತಿದ್ದರಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅಶ್ವತ್ಥ್‌ ನಂತರ ಸುಮಾರು ಹತ್ತು ವರ್ಷಗಳ ಕಾಲ ಜಿಲ್ಲಾಧಿಕಾರಿ ಕಛೇರಿಯಲ್ಲಿ ಆಹಾರ ನಿರೀಕ್ಷಕರಾಗಿ ಮತ್ತು ಸ್ಟೆನೋಗ್ರಾಫರ್ ಆಗಿ ತಮ್ಮ ವೃತ್ತಿಜೀವನವನ್ನು ನಡೆಸಿದರು.

ರಂಗಭೂಮಿಯೇ ಚಿಮ್ಮುಹಲಿಗೆ

ಕನ್ನಡ ಚಿತ್ರರಂಗದ ಬಹುಮಂದಿ ಕಲಾವಿದರಂತೆ. ಅಶ್ವತ್ಥ್‌ ಅವರು ಕೂಡ ರಂಗಭೂಮಿಯ ಕೂಸು. ಆರಂಭದಲ್ಲಿ ಆಕಾಶವಾಣಿಯ ನಾಟಕ ವಿಭಾಗದಲ್ಲಿ ದುಡಿದ ಅಶ್ವತ್ಥ್‌, ಆಗಿನ ಕಾಲದಲ್ಲಿ ನಾಟಕ ವಿಭಾಗದ ಮುಖ್ಯಸ್ಥರಾಗಿದ್ದ ಎನ್‌ ಎಸ್‌ ವಾಮನರಾಯರಿಂದ ಅಭಿನಯದ ಪ್ರಾಥಮಿಕ ಪಾಠವನ್ನು ಕಲಿತವರು. ಎ ಎನ್‌ ಮೂರ್ತಿರಾವ್‌ ಹಾಗೂ ಪರ್ವತವಾಣಿ ಅವರ ರಚನೆಯ ನಾಟಕಗಳಲ್ಲಿ ಅಭಿನಯಿಸಿದರು. ಆಗ ಅವರಿಗೆ ತಾವು ಚಿತ್ರರಂಗಕ್ಕೆ ಕಾಲಿಡುತ್ತೇನೆ ಎಂಬ ಯಾವುದೇ ಕಲ್ಪನೆ ಕೂಡ ಇರಲಿಲ್ಲ. ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು ಎಂದರೂ ತಪ್ಪೇನಿಲ್ಲ.

ಕುಮಾರತ್ರಯರೊಂದಿಗೆ ತೆರೆ ಹಂಚಿಕೆ

ಹೆಚ್ಚೂ ಕಡಿಮೆ ಐವತ್ತರ ದಶಕದ ಅಂತಿಮ ಭಾಗದಿಂದ ತೊಂಭತ್ತರ ದಶಕದ ಕೊನೆಯತನಕ, ಅಶ್ವತ್ಥ್‌ ಅವರಿಲ್ಲದ ಚಿತ್ರಗಳೇ ಕನ್ನಡದಲ್ಲಿ ಅಪರೂಪ ಎನ್ನಬಹುದು. ಅಣ್ಣನಾಗಿಯೋ, ತಂದೆಯಾಗಿಯೋ, ಪಕ್ಕದ ಮನೆಯ ಗೃಹಸ್ಥನಾಗಿಯೋ, ಗೆಳೆಯನಾಗಿಯೋ ಯಾವುದಾದರೊಂದು ಪಾತ್ರದಲ್ಲಿ ಅಶ್ವತ್ಥ್‌ ಕಾಣಿಸಿಕೊಂಡು ತಮ್ಮ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಪೌರಾಣಿಕ ಪಾತ್ರಗಳಿರಲಿ, ರಾಜಕೀಯ ಪಾತ್ರಗಳಿರಲಿ, ಅವರೆಂದೂ ರಾಜನಾಗಲಿಲ್ಲ. ಅವರು ಸದಾ ಮಂತ್ರಿಯೇ. ಎಷ್ಟೋ ಬಾರಿ ತಮ್ಮ ಸಮಾನ ವಯಸ್ಕರಿಗೆ ತಂದೆಯಾಗಿ ಅಶ್ವತ್ಥ್‌ ನಟಿಸಿದ್ದೂ ಇದೆ. ಆ ಕಾಲದ ರಾಜ್‌ ಕುಮಾರ್‌, ಉದಯ ಕುಮಾರ್‌, ಕಲ್ಯಾಣ್‌ ಕುಮಾರ್‌, ಅರುಣ್‌ ಕುಮಾರ್‌ ಎಲ್ಲರೊಂದಿಗೂ ನಟಿಸಿದ ಕೀರ್ತೀ ಅಶ್ವತ್ಥ್‌ ಅವರದು.

ಇವರ ಅಭಿನಯ ಪ್ರತಿಭೆಯನ್ನು ಕಂಡ ಚಿತ್ರನಿರ್ದೇಶಕ ಕೆ. ಸುಬ್ರಹ್ಮಣ್ಯಂ ಅವರು ಇವರನ್ನು ತಮ್ಮ ʻಸ್ತ್ರೀ ರತ್ನʼ (1955) ಚಿತ್ರದಲ್ಲಿ ಮೊದಲ ಬಾರಿಗೆ ಪರಿಚಯಿಸಿದರು. ನಂತರ ಕುಟುಂಬದವರ ವಿರೋಧದ ನಡುವೆಯೂ ಅಶ್ವತ್ಥ್‌ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ ಪೂರ್ಣಪ್ರಮಾಣದಲ್ಲಿ ನಾಟಕ ಮತ್ತು ಚಿತ್ರರಂಗಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡರು. ಅಂದಿನ ಕಾಲಕ್ಕೆ ದಕ್ಷಿಣ ಭಾರತ ಚಿತ್ರರಂಗದ ಕೇಂದ್ರವಾದ ಮದ್ರಾಸ್ ನಲ್ಲಿ ಎಲ್ಲರಂತೆ ತಾವೂ ಹೋಗಿ ನೆಲೆಸಿದರು. ʼಕಚದೇವಯಾನಿʼ ʼಕೋಕಿಲವಾಣಿ (1956) ʻಚಿಂತಾಮಣಿʼ (1957)ರಲ್ಲಿ ಅಭಿನಯಿಸಿದರು. ಆ ಕಾಲದ ದಕ್ಷಿಣ ಭಾರತದ ಚಿತ್ರರಂಗದ ಸಾಮ್ರಾಜ್ಞಿ ಎನ್ನಿಸಿಕೊಂಡ ಬಿ. ಸರೋಜದೇವಿ ಎದುರು ನಾಯಕ ನಟರಾಗಿ ʻಶಿವಲಿಂಗಸಖಿʼ ಚಿತ್ರದಲ್ಲಿ ಕಾಣಿಸಿಕೊಂಡು, ಮುಖ್ಯವಾಹಿನಿಗೆ ತಲುಪಿದರು. ಮುಖ್ಯಪಾತ್ರವಾಗಿ ಬಹುಶಃ ಇದು ಅವರ ಕೊನೆಯ ಚಿತ್ರ ಕೂಡ ಎನ್ನುವುದು ಇಲ್ಲಿ ಮುಖ್ಯ ಸಂಗತಿ.

ʻಗಾಳಿಗೋಪುರʼದ ರಂಗಣ್ಣ

ಆನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಇವರು, ಆ ಸ್ಥಾನದಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಇವರಿಗೆ ಹೆಸರು ತಂದುಕೊಟ್ಟ ಪಾತ್ರ ʼಗಾಳಿಗೋಪುರʼದ ರಂಗಣ್ಣ. ಈ ಪಾತ್ರದಲ್ಲಿ ಮಗನನ್ನು ಕಳೆದುಕೊಂಡ ತಂದೆಯಾಗಿ, ಗೆಳೆಯರಿಂದಲೇ ಮೋಸ ಹೋದ ಗೆಳೆಯನಾಗಿ ಅಶ್ವತ್ಥ್‌ ಅಭಿನಯ ಮನೊಜ್ಞ. ನಂತರ ಪೌರಾಣಿಕ ಚಿತ್ರಗಳಾದ ʻಮಹಿಷಾಸುರ ಮರ್ಧಿನಿʼ , ʻಸ್ವರ್ಣಗೌರಿʼ, ʻಭಕ್ತ ಪ್ರಹ್ಲಾದ, ʻದಶಾವತಾರʼ, ಹಾಗೂ ʻನಾಗಾರ್ಜುನʼ ಚಿತ್ರಗಳಲ್ಲಿ ಅಭಿನಯಿಸಿ, ತಮಗೊಂದು ನೋಡುಗರ ವರ್ಗವನ್ನು ತಮಗರಿವಿಲ್ಲದಂತೆಯೇ ಸೃಷ್ಟಿಸಿಕೊಂಡರು.

ಪಾತ್ರ ಮುಖ್ಯ, ವ್ಯಕ್ತಿ ಮುಖ್ಯವಲ್ಲ ಎಂದು ನಂಬಿದ್ದ ಅಶ್ವತ್ಥ್‌ ಪ್ರತಿನಾಯಕನಾಗಿ ಅಭಿನಯಿಸಿದ್ದೂ ಇದೆ. ಆದರೆ ಅಂಥ ಪಾತ್ರಗಳು ಬೆರಳೆಣಿಕೆಯಷ್ಟು. ಉದಾಹರಣೆಗೆ ಅವರ ʼತಾಯಿ ದೇವರುʼ, ʻಜೇಡರ ಬಲೆʼ (ರಾಜ್‌ ಕುಮಾರ್‌ ಬಾಂಡ್‌ ಚಿತ್ರಗಳ ಸರಣಿಯ ಮೊದಲ ಚಿತ್ರ), ಚಿತ್ರಗಳಲ್ಲಿನ ಅವರ ಅಭಿನಯ. ಹಾಗೆಯೇ ಪುಟ್ಟಣ್ಣ ಕಣಗಾಲ್‌ ಅವರ ʻಶುಭಮಂಗಳʼ ಚಿತ್ರದಲ್ಲಿ ಅಸ್ತಮಾ ಪೀಡಿತ ವೈದ್ಯನ ಪಾತ್ರದಲ್ಲಿನ ಅವರ ಪ್ರತಿಭೆಯನ್ನು ಮರೆಯಲು ಸಾಧ್ಯವೇ ಇಲ್ಲ.

ರಾಜ್‌ ಅವರ ಜತೆ ಎಷ್ಟು ಸಿನಿಮಾ?

ಇಲ್ಲಿ ಇನ್ನೊಂದು ವಿಷಯವನ್ನು ಹೇಳಲೇ ಬೇಕು. ಅಶ್ವತ್ಥ್‌ ಅವರು ಡಾ. ರಾಜ್‌ ಕುಮಾರ್‌ ಅವರೊಂದಿಗೆ 94 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಯಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ʻಬೆಳ್ಳಿಮೋಡʼದಲ್ಲಿ ಸದಾಶಿವರಾಯರಾಗಿ, ʻಗೆಜ್ಜೆಪೂಜೆʼ ಯ ಅನಂತಯ್ಯನಾಗಿ, ʻಶರಪಂಜರʼದ ನಾರಾಯಣಪ್ಪನಾಗಿ ʻನಾಗರಹಾವುʼ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರಾಗಿ, ʻಉಪಾಸನೆʼಯ ಸುಬ್ಬರಾಯರಾಗಿ ಅಶ್ವತ್ಥ್‌ ಅವರ ಪಾತ್ರ ಇನ್ನೂ ಜನಮಾನಸದಲ್ಲಿ ಅಳಿಸಲಾಗದ ನೆನಪಾಗಿ ಉಳಿದಿದೆ ಎಂದರೆ, ನಿಜವಾಗಿಯೂ ಅವರ ಪ್ರತಿಭೆ ಅಂಥದ್ದಾಗಿತ್ತು ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.

ಉಯ್ಯಾಲೆಯ ಶೇಷಗಿರಿ

ಇಷ್ಟಾದರೂ ಅಶ್ವತ್ಥ್‌ ಆ ಕಾಲದ ಕೆಲವರಿಗೆ ನೆನಪಾಗುವುದು ʻಉಯ್ಯಾಲೆʼ ಚಿತ್ರದ ಅವರ ಶೇಷಗಿರಿ ಪಾತ್ರದ ಅಭಿನಯಕ್ಕಾಗಿ. 1969ರಲ್ಲಿ ಬಿಡುಗಡೆಯಾದ ʻಉಯ್ಯಾಲೆʼ ಆ ಕಾಲದ ಒಂದು ಮೈಲಿಗಲ್ಲಿನಂಥ ಚಿತ್ರ. ವೈವಾಹಿಕ ಬದುಕಿನಲ್ಲಿ ಹೆಣ್ಣಿನ ನಿರೀಕ್ಷೆಗಳ ಆಳ-ಅಗಲ ಅಳೆದ ಚಿತ್ರವಿದು. ಮೂಲತಃ ಚದುರಂಗ (ಸುಬ್ರಹ್ಮಣ್ಯರಾಜೇ ಅರಸ್)‌ ಅವರ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿ, ಎನ್.‌ ಲಕ್ಷ್ಮೀನಾರಾಯಣ್‌ ಅವರ ನಿರ್ದೇಶಿಸಿದ ಈ ಚಿತ್ರ.

ತನ್ನ ಪತಿಯಿಂದ ʻನಿರ್ಲಕ್ಷಿಸಲ್ಪಟ್ಟʼ ಮಹಿಳೆ ವಿವಾಹೇತರ ಪ್ರೀತಿಗೆ ಹಂಬಲಿಸುವ ಸೂಕ್ಷ್ಮ ಕಥಾನಕವಿದು. ಇದು ವೈವಾಹಿಕ ಜೀವನದ ಸಾಮಾಜಿಕ ಮತ್ತು ನೈತಿಕ ನಿಯಮಗಳನ್ನು ವಿಶ್ಲೇಷಿಸುವ ಚಿತ್ರ. ಇದರ ನಾಯಕಿ ಮಿನುಗುತಾರೆ ಕಲ್ಪನಾ. ಕಥೆ ಬರೆಯುವುದರೊಂದಿಗೆ ಚದುರಂಗ ಅವರು ಈ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ. ಈ ಚಿತ್ರದಲ್ಲಿ ಕಲ್ಪನಾ ಪತಿ ಶೇಷಗಿರಿ ಪಾತ್ರದಲ್ಲಿ ಅಶ್ವತ್ಥ್.-ಕಾಲೇಜು ಪ್ರಾಧ್ಯಾಪಕರಾಗಿ ಅಭಿನಯಿಸಿದ್ದಾರೆ. ಮತ್ತೊಂದು ಪಾತ್ರ-ಕೃಷ್ಣ. ಈ ಪಾತ್ರದಲ್ಲಿ ಡಾ. ರಾಜ್ ಕುಮಾರ್‌ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ರಾಜ್ಯ ಪ್ರಶಸ್ತಿ ಗಳಿಸಿತ್ತು. ಅಷ್ಟೇ ಅಲ್ಲ. 2019ರ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 50ನೇ ವರ್ಷ ದ ಚಿತ್ರವಾಗಿ ಪ್ರದರ್ಶಿಸಲಾಗಿತ್ತು. ಬಹುಶಃ 2007ರಲ್ಲಿ ಬಿಡುಗಡೆಯಾದ ದರ್ಶನ್‌ ಅಭಿನಯದ ʻಭೂಪತಿʼ ಅಶ್ವತ್ಥ್‌ ಅವರ ಕೊನೆಯ ಚಿತ್ರ.

ಡಾಕ್ಟೋರೇಟ್‌ ಗೌರವ

ಇಷ್ಟಾದರೂ ಅವರ ಸಮಕಾಲೀನರಿಗೆ ಸಿಕ್ಕ ಪುರಸ್ಕಾರ ಅಶ್ವತ್ಥ್‌ ಅವರಿಗೆ ದಕ್ಕಲಿಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸದೇ ಇರುವುದಿಲ್ಲ. ಇಡೀ ಕರ್ನಾಟಕದಲ್ಲಿ ಇರುವ ಏಕೈಕ ಸ್ಮಾರಕವು ಬೆಂಗಳೂರಿನ ಕೆಂಗೇರಿ ಉಪನಗರ “ಕೆ.ಎಸ್.‌ ಆಶ್ವತ್ಥ್‌ ಸ್ಮಾರಕ ಮಕ್ಕಳ ಉದ್ಯಾನ” ದ ಹೆಸರಿನಲ್ಲಿರುವುದಷ್ಟೇ ಅವರಿಗೆ ದಕ್ಕಿದ ಭಾಗ್ಯ. ಆದರೆ ಅವರಿಗೆ ಕರ್ನಾಟಕ ಸರ್ಕಾರದ ಡಾ. ರಾಜ್‌ ಕುಮಾರ್‌ ಜೀವಮಾನದ ಸಾಧನೆ ಪ್ರಶಸ್ತಿ ಲಭ್ಯವಾಗಿದೆ. ಐದು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆಗಾಗಿ 2008 ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್‌ ಪುರಸ್ಕಾರ ದೊರೆತಿದೆ. ತುಮಕೂರು ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್‌ ಪಡೆದ ಮೊದಲ ನಟ ಇವರು. "“ನನ್ನಲ್ಲಿರುವ ನಟನನ್ನು ಹೊರತಂದ ಎಲ್ಲ ನಿರ್ದೇಶಕರಿಗೆ ಈ ಪುರಸ್ಕಾರದ ಅರ್ಪಣೆ” ಎಂದು ಅವರು ಪುರಸ್ಕಾರ ಸ್ವೀಕರಿಸುವಾಗ ಹೇಳಿದ ಮಾತುಗಳು ಅವರ ಸಜ್ಜನಿಕೆಯ ಬದುಕಿಗೆ ಸಾಕ್ಷಿ.

ತುರ್ತುಸ್ಥಿತಿಯ ತಲೆಗೆ ಮಫ್ಲರ್‌ ಸುತ್ತಿ…

ಇವರು ಅಭಿನಯಿಸಿದ ಚಿತ್ರಗಳಲ್ಲಿ “ಇವರು ನಮ್ಮವರು ನಮ್ಮಂಥವರು” ಎನ್ನಿಸುವ ಭಾವ ಮೂಡಿಸುತ್ತಿದ್ದವರು ಅಶ್ವತ್ಥ್.‌ ಸಾಮಾನ್ಯ ಮಧ್ಯಮವರ್ಗದ ಮಂದಿಗಂತೂ ತುಂಬಾ ಹತ್ತಿರದವರು. ಇಂಥ ಮಂದಿ ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿರುವುದು ಕಾಲದ ದುರಂತ. ಅವರ ಕಾಲದ ಚಲನಚಿತ್ರ ಕಲಾವಿದರು ಮೈಸೂರಿನಲ್ಲಿ ಕಾರಿನಲ್ಲಿ ಓಡಾಡುತ್ತಿದ್ದಾಗ ಅಶ್ವತ್ಥ್‌ ಗೊತ್ತುಮಾಡಿಕೊಂಡಿದ್ದ ಟಾಂಗಾವೊಂದರಲ್ಲಿ ಓಡಾಡುತ್ತಿದ್ದುದನ್ನು ಈ ಪತ್ರಕರ್ತ ನೋಡಿದ ನೆನಪಿದೆ. ಅವರ ಮನೆಗೆ ಹೋಗಿ ಅವರೊಂದಿಗೆ ಗಂಟೆಗಟ್ಟಲೆ ಹರಟಿದ ನೆನಪಿನ್ನೂ ಮಾಸಿಲ್ಲ. ಅವರ ʼಆ ಕಾಲʼವನ್ನು ನೆನಪಿಸಿಕೊಳ್ಳುವ ಮಂದಿ ತುರ್ತುಸ್ಥಿತಿಯ ಆಸುಪಾಸಿನ ದಿನಗಳಲ್ಲಿ ಎಲ್ಲ ಭಾಷಣಗಳನ್ನು ಕೇಳಿಸಿಕೊಳ್ಳುತ್ತಿದ್ದುದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ತಮ್ಮ ಗುರುತು ಸಿಕ್ಕು, ಅವರ ದೃಷ್ಟಿ ತಮ್ಮ ಕಡೆಗೆ ಬೀಳದಿರಲಿ ಎಂದು ತಲೆಗೆ ಮಫ್ಲರ್‌ ಸುತ್ತಿಕೊಂಡು ಮೂಲೆಯೊಂದರಲ್ಲಿ ನಿಂತು ಭಾಷಣಗಳನ್ನು ಕೇಳುತ್ತಿದ್ದರು. ತಮ್ಮನ್ನು ತಾವೇ ಸರ್ವೇಸಾಮಾನ್ಯರನ್ನಾಗಿಸಿಕೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತಿದ್ದರು.

ಸಂಪಾದಿಸಿದ್ದು, ಆಸ್ತಿಯಲ್ಲ ಅಭಿಮಾನ

ಅಶ್ವಥ್ ಅವರನ್ನು ಇಂದು ನೆನಪಿಸಿಕೊಂಡರೆ ತೆರೆಯ ಮೇಲಿನ ಅಸಹಾಯಕ ತಂದೆಯ ಪಾತ್ರಗಳೇ ಕಣ್ಣಿಗೆ ರಾಚುತ್ತವೆ. ಆದರೆ ನಮ್ಮ ಕೆಎಸ್ ಅಶ್ವಥ್ ಅವರು 370ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರೂ ಕೊನೆಯ ತನಕ ಅವರ ಆರ್ಥಿಕ ಸ್ಥಿತಿ ಸುಧಾರಿಸಲಿಲ್ಲ. ಮನೆಯವರ ವಿರೋಧ ಕಟ್ಟಿಕೊಂಡು ಚಿನ್ನದಂತಹ ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬಣ್ಣದ ಜಗತ್ತಿಗೆ ಅಡಿಯಿಟ್ಟವರು ಅಶ್ವತ್ಥ್. ಅವರು ಇಷ್ಟೆಲ್ಲಾ ಸಿನಿಮಾಗಳಲ್ಲಿ ಅಭಿನಯಿಸಿದರೂ ತಲೆಮಾರಿಗಾಗುವಷ್ಟು ಆಸ್ತಿಯನ್ನೇನು ಸಂಪಾದನೆ ಮಾಡಲಿಲ್ಲ. ಅವರು ಸಂಪಾದಿಸಿದ್ದು ಅಭಿಮಾನಿಗಳನ್ನು ಮಾತ್ರ! ಅವರ ಶುದ್ಧವಾದ ಕನ್ನಡ, ಸ್ಪಷ್ಟವಾದ ಉಚ್ಛಾರ ಕೇಳುವುದಕ್ಕೆ ಕರ್ಣಾನಂದ.‌ ಅಶ್ವಥ್ ಅವರು ಬದುಕಿನಲ್ಲಿ ನಂಬಿದ ಘನತೆಯ ಮೌಲ್ಯಗಳಿಗೆ ಇಲ್ಲೊಂದ ನಿದರ್ಶನ ನೆನಪಾಗುತ್ತಿದೆ. ದಿನಕ್ಕೆ ರೂ.5000 ಸಂಭಾವನೆ ಲೆಕ್ಕಾಚಾರದಲ್ಲಿ ನಿರ್ಮಾಪಕರೊಬ್ಬರಿಗೆ ಅಶ್ವಥ್ ಅವರು ಎರಡು ದಿನಗಳ ಕಾಲ್‍ಶೀಟ್ ನೀಡಿದ್ದರಂತೆ. ಆದರೆ ಅಶ್ವಥ್ ಅವರ ಭಾಗದ ಚಿತ್ರೀಕರಣ ಒಂದೇ ದಿನಕ್ಕೆ ಮುಗಿಸಿದರಂತೆ. ಅಗ್ರಿಮೆಂಟ್ ಪ್ರಕಾರ ನಿರ್ಮಾಪಕರು ಅವರಿಗೆ ಎರಡು ದಿನದ ಸಂಭಾವನೆ ರೂ.10000 ನೀಡಿದರಂತೆ. ಮರುದಿನ ನಿರ್ಮಾಪಕರ ಬಳಿಗೆ ಹೋದ ಅಶ್ವಥ್ ಅವರು ರೂ.5000 ಹಿಂತಿರುಗಿಸಿ, ನನ್ನ ಭಾಗದ ಚಿತ್ರೀಕರಣ ಒಂದೇ ದಿನಕ್ಕೆ ಮುಗಿಯಿತಲ್ಲ. ಹಾಗಾಗಿ ಇನ್ನು ರೂ.5,000 ವಾಪಸ್ ತಗೊಳ್ಳಿ ಎಂದು ನೀಡಿದ್ದರಂತೆ. ಈ ಘಟನೆಯನ್ನು ಅವರ ಪುತ್ರ ಶಂಕರ್‌ ಅಶ್ವತ್ಥ್‌ ಅವರು ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡುತ್ತಾ ಹಂಚಿಕೊಂಡಾಗ ಅವರ ಕಣ್ಣಾಲಿಗಳು ಒದ್ದೆಯಾಗಿತ್ತು.

ಎಲ್ಲರೊಂದಿಗಿದ್ದೂ ಎಲ್ಲರಂತೆಯೇ ಇದ್ದವರು

ಅಶ್ವಥ್ ಅವರು ಇಷ್ಟೆಲ್ಲಾ ಸಿನಿಮಾಗಳಲ್ಲಿ ಅಭಿನಯಿಸಿದರೂ ತಲೆಮಾರಿಗಾಗುವಷ್ಟು ಆಸ್ತಿಯನ್ನೇನು ಸಂಪಾದನೆ ಮಾಡಲಿಲ್ಲ. ಅವರು ಸಂಪಾದಿಸಿದ್ದು ಅಭಿಮಾನಿಗಳನ್ನು ಮಾತ್ರ! ಅಶ್ವತ್ಥ್‌ ರನ್ನು ನೆನಪಿಸಿಕೊಂಡಾಗಲೆಲ್ಲಾ ಅವರ ಪಾತ್ರಗಳಿಗೂ ನಿಜ ಜೀವನಕ್ಕೂ ಏನೂ ವ್ಯತ್ಯಾಸ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಿಜ ಜೀವನದಲ್ಲೂ ಅದೇ ಮೈಸೂರು ಪೇಟ, ಕೋಟು, ಶಲ್ಯ ಧರಿಸಿದ ಅಪ್ಪನಂತೆ ಭಾಸವಾಗುತ್ತಾರೆ. ತೆರೆಯ ಮೇಲೂ ಮಧ್ಯಮ ವರ್ಗದ ಕುಟುಂಬ, ನಿಜಜೀವನದಲ್ಲೂ ಅದೇ ವ್ಯಕ್ತಿತ್ವ. ಕನ್ನಡ ಚಿತ್ರರಂಗಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಶ್ವತ್ಥ್ ಕೊನೆಗಾಲದಲ್ಲಿ ಆರ್ಥಿಕವಾಗಿ ಹೆಣಗಾಡಿದ್ದಂತೂ ನಿಜ

ಅಶ್ವಥ್‌ರನ್ನು ನೆನಪಿಸಿಕೊಂಡಾಗಲೆಲ್ಲಾ ಅವರ ಪಾತ್ರಗಳಿಗೂ ನಿಜ ಜೀವನಕ್ಕೂ ಏನೂ ವ್ಯತ್ಯಾಸ ಇರಲಿಲ್ಲ ಎಂಬಂತಿತ್ತು. ನಿಜ ಜೀವನದಲ್ಲೂ ಅದೇ ಮೈಸೂರು ಪೇಟ, ಕೋಟು, ಶಲ್ಯ ಧರಿಸಿದ ಅಪ್ಪನಂತೆ ಭಾಸವಾಗುತ್ತಾರೆ. ತೆರೆಯ ಮೇಲೂ ಮಧ್ಯಮ ವರ್ಗದ ಕುಟುಂಬ, ನಿಜಜೀವನದಲ್ಲೂ ಅದೇ ವ್ಯಕ್ತಿತ್ವ. ಕನ್ನಡ ಚಿತ್ರರಂಗಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಶ್ವಥ್ ಕೊನೆಗಾಲದಲ್ಲಿ ಆರ್ಥಿಕವಾಗಿ ಹೆಣಗಾಡಿದ್ದಂತೂ ನಿಜ.

Tags:    

Similar News