CSR Fund Racket: ಕಾರ್ಪೊರೇಟ್ ನಿಧಿ ದುರ್ಬಳಕೆಗೆ ಬ್ರೇಕ್, ಶಿಕ್ಷಣಕ್ಕೆ ಆದ್ಯತೆ : ಸದ್ಯದಲ್ಲೇ ಹೊಸ ಕಾನೂನು?
ಸಿಎಸ್‌ಆರ್ ನಿಧಿಯನ್ನು ಸಮರ್ಪಕವಾಗಿ ಮತ್ತು ಕಡ್ಡಾಯವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಕಠಿಣ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
ಕಾರ್ಪೊರೇಟ್ ಕಂಪನಿಗಳು ಸಮಾಜ ಸೇವೆಗಾಗಿ ಮೀಸಲಿಡುವ 'ಸಿಎಸ್‌ಆರ್' (ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿ ನಿಜವಾಗಿ ಪ್ರಯೋಜನವಾಗುತ್ತಿದೆಯೆ? ಕಾನೂನು ಪ್ರಕಾರ ವಿನಿಯೋಗಿಸಬೇಕಾದ ಆ ನಿಧಿ, ಕೆಲವು ಬ್ರೋಕರ್‌ಗಳ ಅಥವಾ ಎನ್‌ಜಿಒಗಳ ಮೂಲಕ ಕಮಿಷನ್ ದಂಧೆಗೆ ಕಾರಣವಾಗಿದೆಯೆ? ಅಥವಾ ಆ ಸಂಸ್ಥೆಗಳ ಕೆಲವು ವೈಯಕ್ತಿಕ ಹಿತಾಸಕ್ತಿಗಳು ದುರುಪಯೋಗ ಪಡಿಸಿಕೊಂಡು ಹಣ ಗುಳುಂ ಮಾಡುತ್ತಿವೆಯೇ??
ಈ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಹಾಗೂ ಸಿಎಸ್‌ಆರ್ ಫಂಡ್ ಸದುಪಯೋಗದ ಬಗ್ಗೆ ಹಾಗೂ ರಾಜ್ಯದಲ್ಲಿ ಪ್ರಮುಖವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ನಿಧಿ ಬಳಕೆಗೆ ಒಂದು ಶಾಸನ ತರಲು ಸರ್ಕಾರ ಸಿದ್ಧವಾಗಿದೆ. ಆ ಸಂಬಂಧ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆ ಒಂದು ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ.
ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ
ಸರ್ಕಾರಿ ಶಾಲೆಗಳ ದುಸ್ಥಿತಿ ಸುಧಾರಿಸಲು ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಅನುದಾನದ ಕೊರತೆ ಎದುರಾಗುತ್ತಿರುವ ಬೆನ್ನಲ್ಲೇ, ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕಾರ್ಪೊರೇಟ್ ಕಂಪನಿಗಳು ಸಮಾಜ ಸೇವೆಗಾಗಿ ಮೀಸಲಿಡುವ 'ಸಿಎಸ್‌ಆರ್' (ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯನ್ನು ಸಮರ್ಪಕವಾಗಿ ಮತ್ತು ಕಡ್ಡಾಯವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಕಠಿಣ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಪೊರೇಟ್ ಕಂಪನಿಗಳ 'ಸಾಮಾಜಿಕ ಹೊಣೆಗಾರಿಕೆ ನಿಧಿ' ಹಾದಿ ತಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಆ ಹಣವನ್ನು ಕಡ್ಡಾಯವಾಗಿ ಮತ್ತು ಪಾರದರ್ಶಕವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವಂತೆ ಮಾಡಲು ಕಠಿಣ ಕಾನೂನು ರೂಪಿಸಲು ಮುಂದಾಗಿದೆ. ಈ ಸಂಬಂಧ ಸಿದ್ಧಪಡಿಸಲಾದ ಕರಡು ಮಸೂದೆಗೆ ಗುರುವಾರ (ನ.27) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆಯಿದ್ದು, ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಇದು ಕಾಯ್ದೆಯಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.
ಸಿಎಸ್‌ಆರ್ ನಿಧಿ ಅಕ್ರಮ ಬಳಕೆ
ಸರ್ಕಾರ ಹೊಸ ಕಾನೂನು ತರಲು ಮುಖ್ಯ ಕಾರಣ ಸಿಎಸ್‌ಆರ್ ನಿಧಿಯಲ್ಲಿ ನಡೆಯುತ್ತಿರುವ ಭಾರೀ ಅಕ್ರಮವಾಗಿದೆ. ರಾಜ್ಯದ ಹಲವು ಕಾರ್ಪೊರೇಟ್ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ರಾಜ್ಯದ ಅಭಿವೃದ್ಧಿಗೆ ಬಳಸುವ ಬದಲು, ಬೇರೆ ರಾಜ್ಯಗಳ ಖಾಸಗಿ ಸೇವಾ ಸಂಸ್ಥೆಗಳಿಗೆ ವರ್ಗಾಯಿಸುತ್ತಿವೆ. ಕಂಪನಿಗಳು ಬೇರೆ ರಾಜ್ಯದ ಎನ್‌ಜಿಒಗಳಿಗೆ ಚೆಕ್ ಮೂಲಕ ಹಣ ನೀಡುತ್ತವೆ. ಆ ಎನ್‌ಜಿಒಗಳು ಹಣವನ್ನು ಪಡೆದು, ಅದರಲ್ಲಿ ಶೇ.50 ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ಅಥವಾ ನಗದು ರೂಪದಲ್ಲಿ ಕಂಪನಿಗಳಿಗೆ ವಾಪಸ್ ನೀಡುತ್ತಿವೆ. ಇದರಿಂದಾಗಿ, ಕಾನೂನಿನ ಪ್ರಕಾರ ಖರ್ಚು ಮಾಡಬೇಕಾದ ಹಣವೂ ಸರಿಯಾಗಿ ಸಮಾಜಕ್ಕೆ ತಲುಪುತ್ತಿಲ್ಲ ಮತ್ತು ರಾಜ್ಯದ ಸಂಪನ್ಮೂಲ ಬೇರೆಡೆ ಪಾಲಾಗುತ್ತಿದೆ. ಈ ಅಕ್ರಮಕ್ಕೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೊಸ ಕಾನೂನಿನ ಪ್ರಕಾರ, ರಾಜ್ಯದ ಕಂಪನಿಗಳು ರಾಜ್ಯದ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ ಮತ್ತು ಹಣದ ವಿನಿಯೋಗದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಹೇಳಲಾಗಿದೆ.
ಕಂಪನಿ ಕಾಯ್ದೆಯ ಪ್ರಕಾರ, ಲಾಭದಲ್ಲಿರುವ ಪ್ರತಿಯೊಂದು ಕಾರ್ಪೊರೇಟ್ ಕಂಪನಿಯು ತನ್ನ ಲಾಭದ ನಿರ್ದಿಷ್ಟ ಭಾಗವನ್ನು (ಶೇ.2 ರಷ್ಟು) ಸಮಾಜ ಸೇವೆಯ ಚಟುವಟಿಕೆಗಳಿಗೆ ಮೀಸಲಿಡಬೇಕು. ರಾಜ್ಯದಲ್ಲಿ ಸಾವಿರಾರು ಬಹುರಾಷ್ಟ್ರೀಯ ಮತ್ತು ದೇಶೀಯ ಕಂಪನಿಗಳಿದ್ದು, ಸಾವಿರಾರು ಕೋಟಿ ರೂಪಾಯಿ ಸಿಎಸ್‌ಆರ್ ನಿಧಿ ಲಭ್ಯವಿರುತ್ತದೆ. ಆದರೆ, ಇದರಲ್ಲಿ ಅಕ್ರಮ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
ಅಕ್ರಮದ ಸ್ವರೂಪ
ರಾಜ್ಯದ ಮೂಲಸೌಕರ್ಯಗಳನ್ನು (ನೀರು, ವಿದ್ಯುತ್, ರಸ್ತೆ, ಮಾನವ ಸಂಪನ್ಮೂಲ) ಬಳಸಿಕೊಂಡು ಇಲ್ಲಿಯೇ ಲಾಭ ಗಳಿಸುವ ಕಂಪನಿಗಳು, ಸಮಾಜ ಸೇವೆ ಮಾಡುವಾಗ ಮಾತ್ರ ಕರ್ನಾಟಕವನ್ನು ಮರೆಯುತ್ತವೆ. ತಮ್ಮ ಸಿಎಸ್‌ಆರ್ ನಿಧಿಯನ್ನು ರಾಜ್ಯದ ಅಭಿವೃದ್ಧಿಗೆ ಬಳಸುವ ಬದಲು, ಬೇರೆ ರಾಜ್ಯಗಳ ಹೆಸರುವಾಸಿಯಲ್ಲದ ಎನ್‌ಜಿಒಗಳಿಗೆ ವರ್ಗಾಯಿಸುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಕಂಪನಿಗಳು ಬೇರೆ ರಾಜ್ಯದ ಎನ್‌ಜಿಒಗಳಿಗೆ ಚೆಕ್ ಮೂಲಕ ಅಧಿಕೃತವಾಗಿ ಹಣ ನೀಡುತ್ತವೆ. ಆದರೆ, ಆ ಎನ್‌ಜಿಒಗಳು ಹಣ ಪಡೆದ ನಂತರ, ಅದರಲ್ಲಿ ಕೇವಲ ಅರ್ಧದಷ್ಟು ಮಾತ್ರ ಖರ್ಚು ಮಾಡಿ ಉಳಿದ ಶೇ.50 ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ಅಥವಾ ನಗದು ರೂಪದಲ್ಲಿ ಕಂಪನಿಯ ಮಾಲೀಕರಿಗೆ ಅಥವಾ ಅಧಿಕಾರಿಗಳಿಗೆ ವಾಪಸ್ ತಲುಪಿಸುತ್ತಿವೆ ಎಂಬ ಗುರುತರ ಆರೋಪಗಳಿವೆ. ಕಾಗದ ಪತ್ರಗಳಲ್ಲಿ ಕೋಟ್ಯಂತರ ರೂಪಾಯಿ ಸಮಾಜ ಸೇವೆಗೆ ಖರ್ಚಾಗಿದೆ ಎಂದು ತೋರಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಆ ಹಣ ಮರಳಿ ಕಂಪನಿಯ ಖಜಾನೆಗೆ ಕಪ್ಪು ಹಣವಾಗಿ ಸೇರುತ್ತಿದೆ. ಇದರಿಂದ ಒಂದೆಡೆ ಸರ್ಕಾರಕ್ಕೆ ತೆರಿಗೆ ನಷ್ಟವಾದರೆ, ಇನ್ನೊಂದೆಡೆ ಸಮಾಜಕ್ಕೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ.
ಹೊಸ ಕಾನೂನು: ಅಕ್ರಮಕ್ಕೆ ಕಡಿವಾಣ
ಎಲ್ಲ ಅಕ್ರಮಗಳಿಗೆ ಬ್ರೇಕ್ ಹಾಕಲು ಮತ್ತು ರಾಜ್ಯದ ಹಣ ರಾಜ್ಯದ ಮಕ್ಕಳಿಗೇ ಸಿಗುವಂತೆ ಮಾಡಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಕಠಿಣ ಕಾನೂನು ರೂಪಿಸಲಾಗಿದೆ. ಗುರುವಾರದ ಸಂಪುಟ ಸಭೆಯಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲೇ ಬಳಕೆ ಕಡ್ಡಾಯ
ರಾಜ್ಯದಲ್ಲಿ ನೋಂದಾಯಿತವಾಗಿರುವ ಅಥವಾ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಕಡ್ಡಾಯವಾಗಿ ಕರ್ನಾಟಕದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲೇಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
ಶಿಕ್ಷಣಕ್ಕೆ ಮೊದಲ ಆದ್ಯತೆ
ಸಿಎಸ್‌ಆರ್ ನಿಧಿಯನ್ನು ಆರೋಗ್ಯ, ಪರಿಸರ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಬಳಸಲಾಗುತ್ತದೆ. ಆದರೆ, ಪ್ರಸ್ತುತ ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿರುವುದರಿಂದ, ಹೊಸ ಕಾನೂನಿನಲ್ಲಿ 'ಶಿಕ್ಷಣ ಕ್ಷೇತ್ರಕ್ಕೆ', ಅದರಲ್ಲಿಯೂ ಮುಖ್ಯವಾಗಿ 'ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ' ಮೊದಲ ಆದ್ಯತೆ ನೀಡಬೇಕೆಂದು ಕಡ್ಡಾಯಗೊಳಿಸಲಾಗುತ್ತಿದೆ.
ಪಾರದರ್ಶಕತೆ
ಹಣವನ್ನು ಯಾವ ಎನ್‌ಜಿಒಗೆ ನೀಡಲಾಗಿದೆ, ಆ ಎನ್‌ಜಿಒ ಎಲ್ಲಿ ಕೆಲಸ ಮಾಡುತ್ತಿದೆ, ಮತ್ತು ಹಣ ಹೇಗೆ ಬಳಕೆಯಾಗಿದೆ ಎಂಬುದರ ಸಂಪೂರ್ಣ ಲೆಕ್ಕಪತ್ರವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಶಿಕ್ಷಣ ಇಲಾಖೆಯು ನೇರವಾಗಿ ಈ ನಿಧಿಯ ಬಳಕೆಯ ಉಸ್ತುವಾರಿ ನೋಡಿಕೊಳ್ಳುವಂತಹ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
ಅಧಿವೇಶನದಲ್ಲಿ ಕಾಯ್ದೆ ಜಾರಿ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯು ಈ ಸಂಬಂಧ ಕರಡು ಸಿದ್ಧಪಡಿಸಲಾಗಿದೆ. ಗುರುವಾರ (ನ.27) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದ್ದು, ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಸಂಪುಟದ ಒಪ್ಪಿಗೆ ಸಿಕ್ಕ ನಂತರ, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಮಂಡಿಸಿ, ಕಾಯ್ದೆಯಾಗಿ ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳು ಮೂಲಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಸರ್ಕಾರ ನೀಡುವ ಅನುದಾನ ಶಿಕ್ಷಕರ ಸಂಬಳ ಮತ್ತು ಬಿಸಿಯೂಟದಂತಹ ನಿರ್ವಹಣಾ ವೆಚ್ಚಗಳಿಗೆ ಸಾಕಾಗುತ್ತದೆಯೇ ಹೊರತು, ಕಟ್ಟಡ ದುರಸ್ತಿ ಅಥವಾ ಹೈಟೆಕ್ ಸೌಲಭ್ಯಗಳಿಗೆ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೃಹತ್ ಕಾರ್ಪೊರೇಟ್ ಕಂಪನಿಗಳು ನೀಡುವ ಸಿಎಸ್‌ಆರ್ ನಿಧಿಯನ್ನು ನೇರವಾಗಿ ಶಿಕ್ಷಣ ಕ್ಷೇತ್ರಕ್ಕೆ, ಅದೂ ಮುಖ್ಯವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲು ಹೊಸ ಕಾನೂನು ಚೌಕಟ್ಟನ್ನು ರಚಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಆರೋಗ್ಯ ಇಲಾಖೆ ಸೇರಿದಂತೆ ಇತರೆ ಕ್ಷೇತ್ರದಲ್ಲಿ ನಿಧಿ ಬಳಕೆ ಮಾಡುವ ಬದಲು ಶಾಲೆಗಳಿಗೆ ಬಳಕೆ ಮಾಡಲು ಮೊದಲ ಆದ್ಯತೆ ನೀಡುವ ಸಂಬಂಧ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು.
ಶಿಕ್ಷಣ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ 46,757 ಸರ್ಕಾರಿ ಶಾಲೆಗಳಿದ್ದು, 42.92 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಆಘಾತಕಾರಿ ವಿಷಯವೆಂದರೆ ಇದರಲ್ಲಿ ಸುಮಾರು 22 ಸಾವಿರ ಶಾಲೆಗಳು ತುರ್ತಾಗಿ ದುರಸ್ತಿಗೆ ಒಳಪಡಬೇಕಾದ ಸ್ಥಿತಿಯಲ್ಲಿವೆ. ಮಳೆಗಾಲದಲ್ಲಿ ಸೋರುವ ಛಾವಣಿಗಳು, ಕುಸಿದು ಬೀಳುವ ಹಂತದಲ್ಲಿರುವ ಗೋಡೆಗಳು, ಶೌಚಾಲಯಗಳ ಕೊರತೆ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿವೆ. ಈ ಶಾಲೆಗಳನ್ನು ದುರಸ್ತಿಗೊಳಿಸಲು ಮತ್ತು ಆಧುನೀಕರಣಗೊಳಿಸಲು ಸಾವಿರಾರು ಕೋಟಿ ರೂಪಾಯಿಗಳ ಅಗತ್ಯವಿದೆ. ಸರ್ಕಾರದ ಬಜೆಟ್‌ನಲ್ಲಿ ಇದಕ್ಕೆ ಸಂಪೂರ್ಣ ಹಣ ಹೊಂದಿಸುವುದು ಕಷ್ಟಕರವಾಗಿರುವುದರಿಂದ, ಸಿಎಸ್‌ಆರ್ ನಿಧಿಯ ಮೇಲೆ ಕಣ್ಣಿಡಲಾಗಿದೆ ಎನ್ನಲಾಗಿದೆ.
ಸಿಎಸ್‌ಆರ್ ನಿಧಿ: 8 ಸಾವಿರ ಕೋಟಿ ರೂ. ಬೃಹತ್ ನಿರೀಕ್ಷೆ
ಶಿಕ್ಷಣ ಇಲಾಖೆಯ ಅಂದಾಜಿನ ಪ್ರಕಾರ, ರಾಜ್ಯದಲ್ಲಿರುವ ಐಟಿ-ಬಿಟಿ ಹಾಗೂ ಇತರೆ ಬೃಹತ್ ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಒಗ್ಗೂಡಿಸಿದರೆ ಸುಮಾರು 8 ಸಾವಿರ ಕೋಟಿ ರೂ.ಗಿಂತ ಹೆಚ್ಚು ಮೊತ್ತ ಲಭ್ಯವಾಗುವ ನಿರೀಕ್ಷೆಯಿದೆ. ಈ ಬೃಹತ್ ಮೊತ್ತವನ್ನು ಕೇವಲ ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸುವಂತೆ ಕಾನೂನು ರೂಪಿಸಿದರೆ, ರಾಜ್ಯದ ಸರ್ಕಾರಿ ಶಾಲೆಗಳ ಚಿತ್ರಣವನ್ನೇ ಬದಲಾಯಿಸಬಹುದು ಎಂಬುದು ಶಿಕ್ಷಣ ಇಲಾಖೆಯ ಉದ್ದೇಶವಾಗಿದೆ.
ಸರ್ಕಾರ ನಡೆಗೆ ಕಂಪನಿಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ?
ಸರ್ಕಾರವು ಸಿಎಸ್‌ಆರ್ ನಿಧಿ ಕುರಿತು ಹೊಸ ಕಾನೂನು ತರಲು ಮುಂದಾಗಿರುವ ನಡೆಗೆ ಖಾಸಗಿ ಕಂಪನಿಯೊಂದರ ಫೌಂಡೇಷನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಫೌಂಡೇಷನ್ ಪ್ರಕಾರ, ಸಿಎಸ್‌ಆರ್ ನಿಧಿಯನ್ನು ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಬಳಕೆ ಮಾಡಬಹುದು. ಆದರೆ, ಸಾಮಾನ್ಯವಾಗಿ ಯಾವುದೇ ಕಂಪನಿಯು ಸ್ಥಳೀಯವಾಗಿಯೇ ಸಿಎಸ್‌ಆರ್ ನಿಧಿಯನ್ನು ಬಳಕೆ ಮಾಡುತ್ತವೆ. ಸ್ಥಳೀಯ ನೆಲ, ಜಲ, ಮೂಲಸೌಕರ್ಯ ಬಳಕೆ ಮಾಡುವುದರಿಂದ ಅದೇ ಭಾಗಕ್ಕೆ ಸಿಎಸ್‌ಆರ್ ನಿಧಿ ಬಳಕೆ ಮಾಡುತ್ತದೆ. ಸಿಎಸ್‌ಆರ್ ನಿಧಿಯನ್ನು ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಒಟ್ಟು 17 ವಿಭಾಗಗಳಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಒಂದೇ ವಿಭಾಗಕ್ಕೆ ಬಳಕೆ ಮಾಡುವಂತೆ ಕಾನೂನು ತಂದರೆ ಸಹಜವಾಗಿ ಕಂಪನಿಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಶಿಕ್ಷಣ ಕ್ಷೇತ್ರವನ್ನು ಬಲಗೊಳಿಸಬೇಕು ಎಂಬ ನಿರ್ಣಯ ಸೂಕ್ತವಾಗಿದೆ. ಹಾಗಂತ ಅದೇ ಕ್ಷೇತ್ರಕ್ಕೆ ಬಳಕೆ ಮಾಡಬೇಕು ಎಂಬುದು ಸರಿಯಲ್ಲ. ಆದರೂ ಸರ್ಕಾರವು ಯಾವ ರೀತಿಯಲ್ಲಿ ಕಾನೂನು ರೂಪಿಸುತ್ತದೆ ಎಂಬುದನ್ನು ಗಮನಿಸಲಾಗುವುದು ಎಂದು ತಿಳಿಸಿದೆ.
ಕಾರ್ಪೊರೇಟ್ ಕಂಪನಿಗಳು ಕೇವಲ ಲಾಭ ಮಾಡಿಕೊಳ್ಳುವುದಲ್ಲದೆ, ತಾವು ಬೆಳೆದ ಸಮಾಜಕ್ಕೆ, ಅದರಲ್ಲೂ ಮುಖ್ಯವಾಗಿ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಸರ್ಕಾರಿ ಶಾಲೆಗಳಿಗೆ ನೆರವಾಗಬೇಕು ಎಂಬುದು ಈ ಯೋಜನೆಯ ಆಶಯ. ಈ ಹೊಸ ಕಾನೂನು ಜಾರಿಯಾದರೆ, ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿರುವ ಸಾವಿರಾರು ಸರ್ಕಾರಿ ಶಾಲೆಗಳಿಗೆ ನವಚೈತನ್ಯ ಸಿಗುವುದರಲ್ಲಿ ಅನುಮಾನವಿಲ್ಲ. ಅಕ್ರಮವಾಗಿ ಪೋಲಾಗುತ್ತಿರುವ ಸಾವಿರಾರು ಕೋಟಿ ರೂಪಾಯಿಗಳು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆಯಾದರೆ ಅದು ನಿಜಕ್ಕೂ ಕ್ರಾಂತಿಕಾರಿ ಬದಲಾವಣೆಯಾಗಲಿದೆ.