ಉತ್ತರಪ್ರದೇಶ,ಮಾ.6: ಮಹಿಳೆಯರ ವಿರುದ್ಧದ ಅಪರಾಧಗಳ ನಿರ್ವಹಣೆಗಾಗಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ʻಈ ಜಂಗಲ್ ರಾಜ್‌ನಲ್ಲಿ ಮಹಿಳೆಯಾಗಿರುವುದು ಅಪರಾಧʼ ಎಂದು ಹೇಳಿದರು.
ಕಾನ್ಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಅವರ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.
ʻಸಂತ್ರಸ್ತ ಕುಟುಂಬದ ಮೇಲೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆʼ ಎಂದು ಎಕ್ಸ್‌ನಲ್ಲಿ ಪ್ರಿಯಾಂಕಾ ಗಾಂಧಿ ಬರೆದಿದ್ದಾರೆ. ʻಉತ್ತರ ಪ್ರದೇಶದಲ್ಲಿ ಸಂತ್ರಸ್ತ ಹೆಣ್ಣುಮಕ್ಕಳು ಮತ್ತು ಮಹಿಳೆಯರು ನ್ಯಾಯ ಕೇಳಿದರೆ, ಅವರ ಕುಟುಂಬವನ್ನು ನಾಶಪಡಿಸಲಾಗುತ್ತದೆ. ಉನ್ನಾವೋ, ಹತ್ರಾಸ್‌ನಿಂದ ಕಾನ್ಪುರದವರೆಗೆ ಸಂತ್ರಸ್ತ ಮಹಿಳೆಯರ ಕುಟುಂಬಗಳನ್ನು ನಾಶಪಡಿಸಲಾಗಿದೆ. ರಾಜ್ಯದ ಕೋಟಿಗಟ್ಟಲೆ ಮಹಿಳೆಯರು ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ʼ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ತಿಂಗಳು ಕಾನ್ಪುರದ ಘಟಂಪುರ ಪ್ರದೇಶದ ಹಳ್ಳಿಯೊಂದರಲ್ಲಿ ಇಟ್ಟಿಗೆ ಗೂಡು ಬಳಿ ಹೊಲದಲ್ಲಿ ಅತ್ಯಾಚಾರಕ್ಕೊಳಗಾದ ಇಬ್ಬರು ಹುಡುಗಿಯರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಇಟ್ಟಿಗೆ ಭಟ್ಟಿಯ ಗುತ್ತಿಗೆದಾರ ರಾಮರೂಪ್ ನಿಶಾದ್ (48), ಅವರ ಮಗ ರಾಜು (18) ಮತ್ತು ಸೋದರಳಿಯ ಸಂಜಯ್ (19) ಅತ್ಯಾಚಾರ ಎಸಗಿದ್ದಾರೆ ಎಂದು ಕುಟುಂಬದವರು ಆರೋಪಿ ಸಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹರೀಶ್ ಹೇಳಿದ್ದಾರೆ.
ಕುಟುಂಬದ ಪ್ರಕಾರ, ಆರೋಪಿಗಳು 16 ಮತ್ತು 14 ವರ್ಷ ವಯಸ್ಸಿನ ಬಾಲಕಿಯರನ್ನು ಬ್ಲ್ಯಾಕ್‌ಮೇಲ್ ಮಾಡಲು ಕೃತ್ಯದ ವಿಡಿಯೋ ಕೂಡ ಮಾಡಿದ್ದರು. ಇದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.