ಶುಲ್ಕ ಕಟ್ಟಲು ಹಣವಿಲ್ಲವೆಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾಗ್ಯಶ್ರೀ ಚಿಟಗುಪ್ಪಿ (19) ಎಂಬ ವಿದ್ಯಾರ್ಥಿನಿ, ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.;
ಸಾಂದರ್ಭಿಕ ಚಿತ್ರ
ಕಾಲೇಜು ಶುಲ್ಕವನ್ನು ಪಾವತಿಸಲು ಹಣವಿಲ್ಲ ಎಂದು ತಾಯಿ ಹೇಳಿದ್ದಕ್ಕೆ ಮನನೊಂದು, ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾಗ್ಯಶ್ರೀ ಚಿಟಗುಪ್ಪಿ (19) ಎಂಬ ವಿದ್ಯಾರ್ಥಿನಿ, ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ವಿವರ
ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ನಂತರ, ಭಾಗ್ಯಶ್ರೀ ಎಂಜಿನಿಯರಿಂಗ್ ಸೇರಲು ಹಠ ಮಾಡಿದ್ದಳು. ಆರ್ಥಿಕ ಸಂಕಷ್ಟದ ಅರಿವಿದ್ದ ತಾಯಿ, "ಶುಲ್ಕ ಕಟ್ಟಲು ಸಾಧ್ಯವಾಗುವುದಿಲ್ಲ" ಎಂದು ಮೊದಲೇ ಹೇಳಿದ್ದರೂ, ವಿದ್ಯಾರ್ಥಿನಿ ಪಟ್ಟು ಹಿಡಿದು ಪೇಮೆಂಟ್ ಸೀಟ್ ಮೂಲಕ ಕಾಲೇಜಿಗೆ ಸೇರಿದ್ದಳು.
ಮೂರನೇ ಸೆಮಿಸ್ಟರ್ ಶುಲ್ಕ ಪಾವತಿಸಲು ಸೆಪ್ಟೆಂಬರ್ 10 ಕೊನೆಯ ದಿನಾಂಕವಾಗಿತ್ತು. ಈ ಬಗ್ಗೆ ತಾಯಿಗೆ ತಿಳಿಸಿದಾಗ, ಅವರು, "ಶುಲ್ಕ ಕಟ್ಟುವಷ್ಟು ಹಣವಿಲ್ಲ, ಬಿಇ ಓದುವುದನ್ನು ಬಿಟ್ಟು ಬಿಸಿಎ ಮಾಡು" ಎಂದು ಸಲಹೆ ನೀಡಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ತಾಯಿ ಮನೆಗೆ ಹಿಂದಿರುಗಿದಾಗ, ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ನಾಲ್ಕು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಭಾಗ್ಯಶ್ರೀ, ಅಂಗನವಾಡಿ ಶಿಕ್ಷಕಿಯಾಗಿರುವ ತಾಯಿ ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದಳು. ತಾಯಿಯ ಅಸಹಾಯಕತೆ ಮತ್ತು ತನ್ನ ಕನಸು ನುಚ್ಚುನೂರಾಗುತ್ತಿದೆ ಎಂಬ ನೋವಿನಿಂದ ವಿದ್ಯಾರ್ಥಿನಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಈ ಘಟನೆಯು ಸಮಾಜದಲ್ಲಿ ಶಿಕ್ಷಣದ ವೆಚ್ಚ ಮತ್ತು ಆರ್ಥಿಕ ಒತ್ತಡಗಳು ಯುವ ಮನಸ್ಸುಗಳ ಮೇಲೆ ಬೀರುತ್ತಿರುವ ಪರಿಣಾಮವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)