
ಸಾಂದರ್ಭಿಕ ಚಿತ್ರ
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ
ಎರಡು ತಿಂಗಳ ಕಂತು ಪಾವತಿಸದಿದ್ದಾಗ, ಸಾಲ ವಸೂಲಾತಿ ಸಿಬ್ಬಂದಿ ಚಿತ್ರಲಿಂಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ದಾವಣಗೆರೆ: ಖಾಸಗಿ ಮೈಕ್ರೋ ಫೈನಾನ್ಸ್‌ನಿಂದ ಪಡೆದ ಸಾಲದ ಕಂತು ಕಟ್ಟದ ಕಾರಣಕ್ಕೆ ಸಿಬ್ಬಂದಿ ನೀಡಿದ ಕಿರುಕುಳ ಮತ್ತು ಅವಾಚ್ಯ ನಿಂದನೆಗೆ ನೊಂದು, ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಚಿತ್ರಲಿಂಗ (31) ಮೃತಪಟ್ಟ ದುರ್ದೈವಿ. ಇವರು ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಸಾಲ ಪಡೆದಿದ್ದರು. ಎರಡು ತಿಂಗಳ ಕಂತು ಪಾವತಿಸದಿದ್ದಾಗ, ಸಾಲ ವಸೂಲಾತಿ ಸಿಬ್ಬಂದಿ ಚಿತ್ರಲಿಂಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ತೀವ್ರವಾಗಿ ನೊಂದ ಚಿತ್ರಲಿಂಗ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಬರೆದಿಟ್ಟ ಡೆತ್ ನೋಟ್‌ನಲ್ಲಿ, ಖಾಸಗಿ ಬ್ಯಾಂಕ್ ಮತ್ತು ಫೈನಾನ್ಸ್‌ಗಳ ಹೆಸರು ಹಾಗೂ ಕಿರುಕುಳ ನೀಡಿದ ಸಿಬ್ಬಂದಿಯ ಮೊಬೈಲ್ ಸಂಖ್ಯೆಗಳನ್ನು ಉಲ್ಲೇಖಿಸಿದ್ದಾರೆ.
"ನನ್ನ ಪತ್ನಿಯ ಹೆಸರಿನಲ್ಲಿ ಸಾಲ ಮಾಡಿದ್ದೆ, ನನ್ನನ್ನು ಕ್ಷಮಿಸು. ಮನೆಯಲ್ಲಿ ಅಡುಗೆ ಮಾಡಿದ್ದೇನೆ, ಊಟ ಮಾಡು" ಎಂದು ಡೆತ್ ನೋಟ್‌ನಲ್ಲಿ ಭಾವನಾತ್ಮಕವಾಗಿ ಬರೆದಿದ್ದಾರೆ.
ಚಿತ್ರಲಿಂಗ ಅವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತರ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮೃತ ಚಿತ್ರಲಿಂಗ ಅವರು ಪತ್ನಿ ಮತ್ತು ಮಗನೊಂದಿಗೆ ಶಿರಮಗೊಂಡನಹಳ್ಳಿಯಲ್ಲಿ ವಾಸವಾಗಿದ್ದರು.