ತಾಂತ್ರಿಕ ದೋಷಗಳ ನಡುವೆ ಜಾತಿ ಗಣತಿ: ಸರ್ಕಾರಕ್ಕೆ ಸಿ.ಟಿ. ರವಿ ಪತ್ರ, ಪರಿಹಾರಕ್ಕೆ ಆಗ್ರಹ

ಸಮೀಕ್ಷೆ ಆರಂಭಕ್ಕೂ ಮುನ್ನ ಸರಿಯಾದ ತರಬೇತಿ, ಮಾರ್ಗಸೂಚಿ ಮತ್ತು ತಾಂತ್ರಿಕ ಸಹಾಯವನ್ನು ಒದಗಿಸಬೇಕಾಗಿತ್ತು. ಆದರೆ ಅನೇಕ ಶಿಕ್ಷಕರು ಸೂಕ್ತ ತರಬೇತಿ ಪಡೆಯದೆ ಕಾರ್ಯಕ್ಕೆ ನೇಮಿತರಾಗಿದ್ದಾರೆ ಎಂದು ಸಿ.ಟಿ ರವಿ ಕಿಡಿಕಾರಿದ್ದಾರೆ.

Update: 2025-09-27 09:47 GMT
Click the Play button to listen to article

ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಅನೇಕ ಗೊಂದಲ ಮತ್ತು ತಾಂತ್ರಿಕ ತೊಂದರೆಗಳು ಎದುರಾಗಿವೆ.  ಪೂರ್ವ ತಯಾರಿ ಕೊರತೆ, ತಂತ್ರಾಂಶ ದೋಷ, ನೆಟ್‌ವರ್ಕ್‌ ಸಮಸ್ಯೆ, ಆಧಾರ್ ದೃಢೀಕರಣ ಸಮಸ್ಯೆ ಸೇರಿದಂತೆ ಹಲವು ಲೋಪಗಳು ಎದುರಾಗಿರುವ ಕಾರಣ ಸಮೀಕ್ಷೆ ವಿಳಂಬವಾಗುತ್ತಿದೆ. ಸಮಸ್ಯೆಗಳಿಂದಾಗಿ ಶಿಕ್ಷಕ ಗಣತಿದಾರರೂ ಕೂಡ ಹೈರಾಣಾಗಿದ್ದಾರೆ. ಈ ಸಂಬಂಧ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಲೋಪಗಳನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. 

ಸಮೀಕ್ಷೆ ಸವಾಲುಗಳು ಏನು?

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಾರ್ಯನಿರ್ವಹಣೆಯಲ್ಲಿ ಹಲವಾರು ಗಂಭೀರ ಸವಾಲುಗಳು ಎದುರಾಗುತ್ತಿವೆ. ಈ ಸಮೀಕ್ಷೆಯನ್ನು ನಿರ್ವಹಿಸುತ್ತಿರುವ ಶಿಕ್ಷಕ ಗಣತಿದಾರರು ತಾಂತ್ರಿಕ ಹಾಗೂ ಪ್ರಾಯೋಗಿಕ ತೊಂದರೆಗಳಿಂದಾಗಿ ಗೊಂದಲಕ್ಕೀಡಾಗಿದ್ದಾರೆ. ಸಮೀಕ್ಷೆಯ ಸಮರ್ಪಕ ಪೂರ್ವತಯಾರಿ ಹಾಗೂ ತಾಂತ್ರಿಕ ಸೌಲಭ್ಯಗಳ ಕೊರತೆಯಿಂದ ನಿರೀಕ್ಷಿತ ರೀತಿಯಲ್ಲಿ ಸಮೀಕ್ಷೆ ಕಾರ್ಯ ಸಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಸರಣಿಯಲ್ಲಿ ಜೋಡಿಸಿದ ಮನೆಗಳು 

ಸಮೀಕ್ಷೆಯಲ್ಲಿ ಮನೆಗಳನ್ನು ಸರಣಿ ಅಥವಾ ಒಂದೇ ಕಡೆಯಿಂದ ನಮೂದಿಸಿಲ್ಲ. ಗಣತಿದಾರರಿಗೆ ಇದರಿಂದ ಹೆಚ್ಚಿನ ತೊಂದರೆ ಉಂಟುಮಾಡುತ್ತಿದೆ. ಕೆಲವೊಮ್ಮೆ ಒಂದೇ ಮನೆಯ ಸಮೀಕ್ಷೆ ಮುಗಿಸಿ ಮತ್ತೊಂದು ಮನೆಗಾಗಿ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವು ಮನೆಗಳು ತಪ್ಪಿಹೋಗುತ್ತಿರುವುದು ಕಂಡು ಬಂದಿದೆ.

ಯುಎಚ್ಐಡಿ ಸಮಸ್ಯೆ

ಮನೆ ಗುರುತಿಸಲು ನೀಡಿರುವ ಯು.ಎಚ್.ಐ.ಡಿ ಸಂಖ್ಯೆಯ ಮೂಲಕ ಮಾಹಿತಿ ಹುಡುಕುವಲ್ಲಿ ತಾಂತ್ರಿಕ ದೋಷಗಳು ಕಂಡುಬರುತ್ತಿವೆ. ಇದು ಗಣತಿದಾರರ ಸಮಯ ಮತ್ತು ಶ್ರಮವನ್ನು ವ್ಯರ್ಥಗೊಳಿಸುತ್ತಿದೆ.

ಸಮೀಕ್ಷೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ವ್ಯವಸ್ಥೆಗೆ ಅವಲಂಬಿಸಿರುವುದರಿಂದ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಎದುರಾಗಿದೆ. ಅನೇಕ ಸಂದರ್ಭಗಳಲ್ಲಿ ಸಮೀಕ್ಷೆ ಕಾರ್ಯವನ್ನು ಅರ್ಧದಲ್ಲೇ ನಿಲ್ಲಿಸಬೇಕಾಗಿದೆ. 

ಇದಲ್ಲದೇ ಗಣತಿದಾರರು ಹಾಗೂ ಸಮೀಕ್ಷೆಯ ಮಾಹಿತಿದಾರರಿಗೆ ನೀಡಲಾಗುವ ಓಟಿಪಿ ಸರಿಯಾಗಿ ಬರದಿರುವುದರಿಂದ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿದೆ. ಆಧಾರ್ ದೃಢೀಕರಣಕ್ಕೂ ತೊಂದರೆ ಎದುರಾಗುತ್ತಿದೆ.

ಅತಿಯಾದ ಪ್ರಶ್ನೆಗಳ ಹೊರೆ

ಪ್ರತಿಯೊಂದು ಮನೆಯ ಸಮೀಕ್ಷೆಗೆ 60 ಪ್ರಶ್ನೆಗಳನ್ನು ಕಡ್ಡಾಯಗೊಳಿಸಿರುವುದು ಗಣತಿದಾರರ ಮೇಲೆ ಅತಿಯಾದ ಹೊರೆಯಾಗಿದೆ. ಇದರಿಂದ ಗಣತಿದಾರರಿಗೆ ಮಾತ್ರವಲ್ಲ, ಮಾಹಿತಿದಾರರಿಗೂ ಬೇಸರ ಉಂಟಾಗಿದೆ. ಗಣತಿದಾರರ ಕೆಲಸವನ್ನು ಅವರ ಕಾರ್ಯಸ್ಥಳಕ್ಕಿಂತ ದೂರದ ಪ್ರದೇಶಗಳಲ್ಲಿ ಹಂಚಿರುವುದರಿಂದ ಸಂಚಾರದಲ್ಲಿ ಸಮಯ ಮತ್ತು ಶ್ರಮ ವ್ಯರ್ಥವಾಗುತ್ತಿದೆ.

ಸಮೀಕ್ಷೆಗೆ ಸಂಬಂಧಿಸಿದ ಮನೆಗಳ ವಿಳಾಸ ಪಟ್ಟಿ ನೀಡದಿರುವುದು, ಸದಸ್ಯರನ್ನು ಸೇರಿಸುವುದು ಅಥವಾ ತೆಗೆದುಹಾಕುವ ಆಯ್ಕೆಯ ಕೊರತೆಯಿಂದ ಗೊಂದಲ ಹೆಚ್ಚಾಗಿದೆ. ಅಗತ್ಯ ದಾಖಲೆಗಳನ್ನು ಪಡೆಯುವಲ್ಲಿ ವಿಳಂಬವಾಗುತ್ತಿರುವುದು, ಜೊತೆಗೆ ಹೊಸ ಸೇರ್ಪಡೆಗಳ ಆಧಾರ್ KYC ಸಮಸ್ಯೆಗಳಿಂದ ಕಾರ್ಯ ನಿಧಾನಗತಿಯಾಗಿದೆ.

ಅಪ್ಲಿಕೇಷನ್ ತೊಂದರೆಗಳು

ಒಂದು ಗಂಟೆಗೂ ಹೆಚ್ಚು ಸಮಯ ಮಾಹಿತಿಯನ್ನು ತುಂಬಿದ ನಂತರವೂ "Upload Not Successful" ಎಂದು ತೋರಿಸುತ್ತಿರುವ ದೋಷ ಗಣತಿದಾರರಲ್ಲಿ ಬೇಸರ ಮೂಡಿಸಿದೆ. ಪ್ರತಿದಿನ ಅಪ್ಲಿಕೇಷನ್ ಡಿಲೀಟ್ ಮಾಡಿ ಮರುಸ್ಥಾಪಿಸಲು (reinstall) ಒತ್ತಾಯಿಸುತ್ತಿರುವುದು ಹೆಚ್ಚುವರಿ ಹೊರೆ ಉಂಟು ಮಾಡುತ್ತಿದೆ. ಹೊಸ ಅಪ್ಲಿಕೇಷನ್ ಸ್ಥಾಪಿಸಿದ ನಂತರ ಈಗಾಗಲೇ ನಮೂದಿಸಿದ್ದ ಮಾಹಿತಿಗಳು ಅಳಿದು ಹೋಗುತ್ತಿರುವುದು ಮತ್ತೊಂದು ಗಂಭೀರ ಸಮಸ್ಯೆಯಾಗಿದೆ.

ದೈಹಿಕ ಹಾಗೂ ಮಾನಸಿಕ ಒತ್ತಡ

ಒಂದೇ ದಿನ ಹಲವು ಗಂಟೆಗಳ ಕಾಲ ಮೊಬೈಲ್ ಬಳಸಿ ಮಾಹಿತಿಯನ್ನು ದಾಖಲಿಸುವುದರಿಂದ ಶಿಕ್ಷಕರು ಕಣ್ಣಿನ ತೊಂದರೆ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದೈಹಿಕ ನ್ಯೂನ್ಯತೆ ಹೊಂದಿರುವವರು, ಅನಾರೋಗ್ಯ ಪೀಡಿತರು ಹಾಗೂ ವಯೋವೃದ್ಧ ಶಿಕ್ಷಕರಿಗೆ ಈ ಕೆಲಸದಲ್ಲಿ ಪಾಲ್ಗೊಳ್ಳುವುದು ಕಷ್ಟಕರವಾಗಿದೆ. ಒಬ್ಬಂಟಿ ಮಹಿಳಾ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಸಾಮಾಜಿಕ ಮುಜುಗರದ ಸಮಸ್ಯೆಗಳು ಎದುರಾಗುತ್ತಿವೆ. ಕೆಲ ಶಿಕ್ಷಕರಿಗೆ ಮೊಬೈಲ್ ಹಾಗೂ ತಾಂತ್ರಿಕ ಉಪಕರಣಗಳ ಬಳಕೆಯಲ್ಲಿನ ಪರಿಣತಿ ಕೊರತೆಯಿಂದ ಸಮೀಕ್ಷಾ ಕಾರ್ಯ ಇನ್ನಷ್ಟು ಕಷ್ಟಕರವಾಗಿದೆ. ಮನೆಗಳ ಹಂಚಿಕೆ ಸಮಾನವಾಗಿಲ್ಲದಿರುವುದರಿಂದ ಕೆಲ ಗಣತಿದಾರರಿಗೆ ಹೆಚ್ಚಿನ ಹೊರೆ, ಇತರರಿಗೆ ಕಡಿಮೆ ಹೊರ ಬೀಳುತ್ತಿದೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ.

ಸಮೀಕ್ಷೆಯ ಸವಾಲುಗಳಿಗೆ ಬೇಕಿದೆ ಪರಿಹಾರ

ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವ ಶಿಕ್ಷಕ ಗಣತಿದಾರರು ಹಲವಾರು ತಾಂತ್ರಿಕ ಮತ್ತು ಪ್ರಾಯೋಗಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸಮೀಕ್ಷೆಯ ಉದ್ದೇಶ ಏನೇ ಆದರೂ, ಅದರ ಕಾರ್ಯವಿಧಾನದಲ್ಲಿ ಕಂಡುಬರುತ್ತಿರುವ ದೋಷಗಳು ಹಾಗೂ ಅಸಮರ್ಪಕತೆಗಳು ಗಣತಿದಾರರನ್ನು ಹತಾಶಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕೂಡಲೇ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾಗಿದೆ.

ದಿನಕ್ಕೆ 8 ರಿಂದ 10 ಮನೆಗಳ ಮಿತಿ

ಗಣತಿದಾರರ ಪ್ರಮುಖ ಬೇಡಿಕೆ ಎಂದರೆ ಪ್ರತಿದಿನದ ಸಮೀಕ್ಷಾ ಕೆಲಸಕ್ಕೆ ಮಿತಿ. ಪ್ರಸ್ತುತ ಪ್ರತಿಯೊಂದು ಮನೆಯಲ್ಲಿ 60ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಗಳನ್ನು ಸಂಗ್ರಹಿಸಬೇಕಾದ ಪರಿಸ್ಥಿತಿ ಇದೆ. ಈ ಕಾರ್ಯ ಸಮಯ ವ್ಯಯವಾಗಿದ್ದು, ದೈಹಿಕ ಮತ್ತು ಮಾನಸಿಕವಾಗಿ ಶಿಕ್ಷಕರಿಗೆ ಒತ್ತಡ ತಂದಿದೆ. ಆದ್ದರಿಂದ ದಿನಕ್ಕೆ ಗರಿಷ್ಠ 08 ರಿಂದ 10 ಮನೆಗಳಷ್ಟೇ ಸಮೀಕ್ಷೆ ನಡೆಸುವಂತೆ ಮಿತಿಗೊಳಿಸಬೇಕು.

ಆನ್‌ಲೈನ್‌ ಬದಲು ಪ್ರಶ್ನಾವಳಿ ಭರ್ತಿ ಮಾಡುವ ಅವಕಾಶ

ಆನ್‌ಲೈನ್‌ ಆಧಾರಿತ ವ್ಯವಸ್ಥೆಯಿಂದಾಗಿ ನೆಟ್‌ವರ್ಕ್‌ ಸಮಸ್ಯೆ, ಅಪ್ಲೋಡ್ ದೋಷ, ಓಟಿಪಿ ತೊಂದರೆಗಳಂತಹ ಅನೇಕ ಅಡಚಣೆಗಳು ಎದುರಾಗುತ್ತಿವೆ. ಇದರಿಂದ ಹಲವು ಗಂಟೆಗಳ ಶ್ರಮ ವ್ಯರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ 60 ಅಂಶಗಳ ಪ್ರಶ್ನಾವಳಿಯನ್ನು ಗಣತಿದಾರರು ಕೈಯಾರೆ ಭರ್ತಿ ಮಾಡಿ, ನಂತರ ಸಮಗ್ರವಾಗಿ ಮಾಹಿತಿ ದಾಖಲಿಸುವ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಗಳು ಕೇಳಿ ಬರುತ್ತಿವೆ.

ಸಮೀಕ್ಷೆಗೆ ಅಗತ್ಯ ತಯಾರಿ, ತಾಂತ್ರಿಕ ಸಹಾಯ

ಸಮೀಕ್ಷೆ ಆರಂಭಕ್ಕೂ ಮುನ್ನ ಸರಿಯಾದ ತರಬೇತಿ, ಮಾರ್ಗಸೂಚಿ ಮತ್ತು ತಾಂತ್ರಿಕ ಸಹಾಯವನ್ನು ಒದಗಿಸಬೇಕಾಗಿತ್ತು. ಆದರೆ ಅನೇಕ ಶಿಕ್ಷಕರು ಸೂಕ್ತ ತರಬೇತಿ ಪಡೆಯದೆ ಕಾರ್ಯಕ್ಕೆ ನೇಮಿತರಾಗಿದ್ದಾರೆ. ತಾಂತ್ರಿಕ ಜ್ಞಾನವಿಲ್ಲದೆ ಮೊಬೈಲ್ ಆಧಾರಿತ ಸಮೀಕ್ಷೆ ನಡೆಸುವುದು ಅವರಿಗೆ ಕಷ್ಟಕರವಾಗಿದೆ. ಆದ್ದರಿಂದ ಸಮೀಕ್ಷೆಗೆ ಸರಿಯಾದ ಪೂರ್ವ ತಯಾರಿ, ತಾಂತ್ರಿಕ ನೆರವು ಮತ್ತು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕಾಗಿದೆ.

ಶಿಕ್ಷಕರ ಸಂಕಷ್ಟ

ಕಳೆದ ಐದು ದಿನಗಳಿಂದ ಶಿಕ್ಷಕರು ಬೀದಿ ಬೀದಿಗಳಲ್ಲಿ ತಿರುಗಿ ಸಮೀಕ್ಷೆ ನಡೆಸಲು ಪ್ರಯತ್ನಿಸಿದರೂ ಫಲಿತಾಂಶ ಶೂನ್ಯವಾಗಿದೆ. ಇದರಿಂದ ಅವರ ಶ್ರಮ ವ್ಯರ್ಥವಾಗಿದ್ದು, ಸಾರ್ವಜನಿಕರ ಮುಂದೆ ಗೊಂದಲಕ್ಕೆ, ಸಾರ್ವಜನಿಕ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ.

ಇದಲ್ಲದೆ, ಶಿಕ್ಷಣ ಇಲಾಖೆಯ ಬೇರೆ ಜವಾಬ್ದಾರಿಗಳ ಜೊತೆಗೆ ಪಾಠ ಭೋಧನೆಗೂ ಸಮರ್ಪಣೆ ನೀಡಬೇಕಿರುವ ಶಿಕ್ಷಕರಿಗೆ ನವರಾತ್ರಿ ಹಬ್ಬದ ವೇಳೆಯಲ್ಲೇ ಈ ಹೆಚ್ಚುವರಿ ಕಾರ್ಯಭಾರ ನೀಡಿರುವುದು ಮತ್ತಷ್ಟು ತೊಂದರೆ ತಂದಿದೆ. ಸಮಾಜದ ನಿಜವಾದ ಸ್ಥಿತಿಗತಿಗಳನ್ನು ತಿಳಿಯುವ ನಿಟ್ಟಿನಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿಗಳ ಜಾತಿ ಸಮೀಕ್ಷೆ ಗಣತಿದಾರರ ಶ್ರಮದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಅವರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವುದು ಸರ್ಕಾರದ ಹೊಣೆಗಾರಿಕೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. 

Tags:    

Similar News