ಬೆಂಗಳೂರಿನಲ್ಲಿ ರೌಡಿಗಳ ಹೆಡೆಮುರಿ ಕಟ್ಟಲು ಪೊಲೀಸರ ದಿಢೀರ್ ಕಾರ್ಯಾಚರಣೆ: 1,478 ಪುಂಡರ ಪರೇಡ್​

ಅಪರಾಧ ಚಟುವಡಿಕೆಗಳಲ್ಲಿ ಭಾಗವಹಿಸಿದವರ ಪೈಕಿ 165 ರೌಡಿಶೀಟರ್‌ಗಳು, ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದವರ ಪೈಕಿ ಮೂವರು ರೌಡಿಗಳು, ಏಳು ಮಂದಿ ವಾರಂಟುದಾರರು ಸೇರಿದಂತೆ ಒಟ್ಟು 1478 ಮಂದಿಯನ್ನು ಪರಿಶೀಲಿಸಲಾಗಿದೆ.

Update: 2025-09-20 09:29 GMT

ರೌಡಿ ಶೀಟರ್‌ ಮನೆಗಳ ಮೇಲೆ ಪೊಲೀಸ್‌ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದರು. 

Click the Play button to listen to article

ನಗರದಲ್ಲಿ ಸಾರ್ವಜನಿಕರ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಶನಿವಾರ, ನಗರದ 11 ಪೊಲೀಸ್ ವಿಭಾಗಗಳ ಉಪ ಆಯುಕ್ತರ (ಡಿಸಿಪಿ) ನೇತೃತ್ವದಲ್ಲಿ, ರೌಡಿಶೀಟರ್‌ಗಳು ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದವರ ವಿರುದ್ಧ ದಿಢೀರ್ ದಾಳಿಗಳನ್ನು ನಡೆಸಿ, ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

ಈ ಬೃಹತ್ ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತರು, "ನಗರದಲ್ಲಿ ಅಪರಾಧಗಳನ್ನು ನಿಯಂತ್ರಿಸುವುದು ಮತ್ತು ಅಪರಾಧಿಗಳ ಜಾಲವನ್ನು ಧ್ವಂಸಗೊಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ," ಎಂದು ತಿಳಿಸಿದ್ದಾರೆ. ಒಟ್ಟು 1,478 ಮಂದಿಯನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಅವರಲ್ಲಿ 165 ರೌಡಿಶೀಟರ್‌ಗಳು, ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಮೂವರು, ವಾರಂಟ್ ಜಾರಿಯಾದರೂ ನ್ಯಾಯಾಲಯಕ್ಕೆ ಹಾಜರಾಗದ ಏಳು ಮಂದಿ, ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗುವ ಮೂವರು, ವಿವಿಧ ಪ್ರಕರಣಗಳಲ್ಲಿ ಭಾಗಿಯಾದ 124 ಮಂದಿ, ಹಾಗೂ ಮಾದಕ ವಸ್ತುಗಳ ಬಳಕೆ ಪ್ರಕರಣ ಎದುರಿಸುತ್ತಿರುವ 10 ಮಂದಿ ಸೇರಿದ್ದಾರೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಮನೆಗಳ ಮೇಲೆ ದಾಳಿ

ನಗರದ ಪ್ರತಿ ಉಪ ವಿಭಾಗಗಳಲ್ಲಿ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ನೇತೃತ್ವದಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಪೂರ್ವ ವಿಭಾಗದ ಹಲಸೂರು, ಬಾಣಸವಾಡಿ, ಇಂದಿರಾನಗರ, ಹೆಣ್ಣೂರು, ರಾಮಮೂರ್ತಿ ನಗರ, ಭಾರತಿ ನಗರ, ಶಿವಾಜಿನಗರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿಗಳ ಮನೆಗಳಲ್ಲಿ ಪರಿಶೀಲನೆ ನಡೆಸಲಾಯಿತು.

ನಗರದಲ್ಲಿ ಅಪರಾಧ ಸಂಖ್ಯೆಗಳ ಹೆಚ್ಚಳ

ಇತ್ತೀಚೆಗೆ ನಗರದಲ್ಲಿ ಸರಗಳ್ಳತನ ಮತ್ತು ಪುಡಿ ರೌಡಿಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಈ ಉದ್ದೇಶಿತ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ವೇಳೆ ರೌಡಿಗಳ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸುಳಿವು ಸಿಕ್ಕರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಅಲ್ಲದೆ, ದಾಳಿಯ ಸಂದರ್ಭದಲ್ಲಿ ಮನೆಗಳಲ್ಲಿ ಮಾರಣಾಂತಿಕ ಆಯುಧಗಳು ಪತ್ತೆಯಾದರೆ, 'ಶಸ್ತ್ರಾಸ್ತ್ರ ನಿಷೇಧ ಕಾಯ್ದೆ' ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಹಿಂದೆಯೂ ಕಳೆದ ಫೆಬ್ರವರಿ ತಿಂಗಳಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆದಿತ್ತು. ಆಗ ಸುಮಾರು 400 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ಮಾಡಿ, 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ 15 ಮಂದಿಯನ್ನು ವಶಕ್ಕೆ ಪಡೆದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಆಗಲೂ ಸಹ, ರೌಡಿಗಳ ಮನೆಗಳಲ್ಲಿ ಕೆಲವು ಮಾರಕಾಸ್ತ್ರಗಳು ಪತ್ತೆಯಾಗಿದ್ದವು. ಅವರ ಉದ್ಯೋಗ, ಮೊಬೈಲ್ ನಂಬರ್‌ಗಳನ್ನು ಪಡೆದು, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದರು. 

Tags:    

Similar News