ಜಾತಿ ಗಣತಿ-2025| ಪ್ರತಿ ಕನ್ನಡಿಗನೂ ತಿಳಿಯಬೇಕಾದ ಸಂಗತಿಗಳು ಇಲ್ಲಿವೆ

ವಿವಿಧ ಸಮುದಾಯಗಳ ನಡುವೆ ಇರುವ ಶೈಕ್ಷಣಿಕ, ಔದ್ಯೋಗಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಅವುಗಳ ನಿವಾರಣೆಗೆ ಸೂಕ್ತ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು ಸಮೀಕ್ಷೆಯ ಉದ್ದೇಶ

Update: 2025-09-19 01:30 GMT

ಕರ್ನಾಟಕ ಸರ್ಕಾರವು ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲು ಒಂದು ಮಹತ್ವಾಕಾಂಕ್ಷೆಯ ಯೋಜನೆಯಾದ "ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2025" ಅನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿದೆ. ನಾಡಿನ ಪ್ರತಿಯೊಂದು ಕುಟುಂಬದ, ಪ್ರತಿಯೊಂದು ಸಮುದಾಯದ ವಾಸ್ತವ ಚಿತ್ರಣವನ್ನು ಕಟ್ಟಿಕೊಡುವ, ಅಭಿವೃದ್ಧಿಯ ಹೊಸ ನಕ್ಷೆಯನ್ನು ರೂಪಿಸುವ ಒಂದು ವೈಜ್ಞಾನಿಕ ಪ್ರಯತ್ನ ಇದು ಎಂದು ಕರ್ನಾಟಕ ಸರ್ಕಾರ ಹೇಳುತ್ತಿದೆ. ಬೃಹತ್ ಸಮೀಕ್ಷೆಯ ಉದ್ದೇಶ, ಮಹತ್ವ, ವಿಧಾನ ಮತ್ತು ಇದರಲ್ಲಿ ಸಾರ್ವಜನಿಕರ ಪಾತ್ರವೇನು ಎಂಬುದನ್ನು ನೋಡೋಣ.

ಸಮೀಕ್ಷೆಯ ಮೂಲ ಉದ್ದೇಶಗಳೇನು?

ಈ ಸಮೀಕ್ಷೆಯು ರಾಜ್ಯದ ಅಭಿವೃದ್ಧಿ ನೀತಿಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇದರ ಪ್ರಮುಖ ಉದ್ದೇಶಗಳು ಹೀಗಿವೆ.

ಪ್ರಾಯೋಗಿಕ ಮಾಹಿತಿ ಸಂಗ್ರಹ : ರಾಜ್ಯದಲ್ಲಿರುವ ಎಲ್ಲಾ ಜಾತಿ, ಸಮುದಾಯಗಳು ಮತ್ತು ಧರ್ಮಗಳ ಜನರ ಪ್ರಸ್ತುತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ನೈಜ ಮತ್ತು ಅಂಕಿಅಂಶ ಆಧಾರಿತ ಮಾಹಿತಿ ಕಲೆಹಾಕುವುದು.

ಕಲ್ಯಾಣ ಯೋಜನೆಗಳ ವಿತರಣೆ : ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಮೀಸಲಾತಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿವೆಯೇ ಎಂದು ಪರಿಶೀಲಿಸುವುದು.

ಅಸಮಾನತೆಗಳ ಗುರುತಿಸುವಿಕೆ: ವಿವಿಧ ಸಮುದಾಯಗಳ ನಡುವೆ ಇರುವ ಶೈಕ್ಷಣಿಕ, ಔದ್ಯೋಗಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ವೈಜ್ಞಾನಿಕವಾಗಿ ಗುರುತಿಸಿ, ಅವುಗಳ ನಿವಾರಣೆಗೆ ಸೂಕ್ತ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು.

ಸಮಗ್ರ ದತ್ತಾಂಶ ಬ್ಯಾಂಕ್ ರಚನೆ: ಭವಿಷ್ಯದ ಯೋಜನೆಗಳಿಗೆ ಮತ್ತು ಸಂಶೋಧನೆಗಳಿಗೆ ಆಧಾರವಾಗಬಲ್ಲ ಒಂದು ಸಮಗ್ರ ದತ್ತಾಂಶ ಬ್ಯಾಂಕ್ ಸಿದ್ಧಪಡಿಸುವುದು.

ಸಮೀಕ್ಷೆ ವೇಳೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ

ಈ ಬಾರಿಯ ಸಮೀಕ್ಷೆಯನ್ನು ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನ ಬಳಸಿ ನಡೆಸಲಾಗುತ್ತಿದೆ. ಇದು ಸಮೀಕ್ಷೆಯ ಪಾರದರ್ಶಕತೆ ಮತ್ತು ನಿಖರತೆ ಹೆಚ್ಚಿಸಲಿದೆ.

ಮೊಬೈಲ್ ಆ್ಯಪ್​ ಬಳಕೆ: ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೊಬೈಲ್ ಅಪ್ಲಿಕೇಶನ್ (EDCS ಆ್ಯಪ್​) ಮೂಲಕ ಮಾಹಿತಿ ದಾಖಲಿಸುತ್ತಾರೆ.

ವಿಶಿಷ್ಟ ಕುಟುಂಬ ಗುರುತಿನ ಸಂಖ್ಯೆ (UHID): ಪ್ರತಿಯೊಂದು ಕುಟುಂಬಕ್ಕೂ ಒಂದು ವಿಶಿಷ್ಟ ಗುರುತಿನ ಸಂಖ್ಯೆ (Unique Household Identity) ನೀಡಲಾಗುತ್ತದೆ. ಇದು ಮಾಹಿತಿಯ ನಕಲು ಅಥವಾ ಗೊಂದಲ ತಪ್ಪಿಸಲು ಸಹಕಾರಿ.

ಜಿಪಿಎಸ್ ಮತ್ತು ಜಿಯೋ-ಟ್ಯಾಗಿಂಗ್: ಗಣತಿದಾರರು ಭೇಟಿ ನೀಡುವ ಪ್ರತಿ ಮನೆಯನ್ನು ಜಿಪಿಎಸ್ ಮೂಲಕ ಗುರುತಿಸಿ, ಮನೆಯ ಜಿಯೋ-ಟ್ಯಾಗ್ ಮಾಡಿದ ಫೋಟೋವನ್ನು ಅಪ್‌ಲೋಡ್ ಮಾಡುತ್ತಾರೆ. ಇದು ಸಂಗ್ರಹಿಸಿದ ಮಾಹಿತಿಯ ಅಧಿಕೃತ ಎಂಬುದನ್ನು ಖಾತರಿ ಮಾಡುತ್ತದೆ.

ಗಣತಿ ಬ್ಲಾಕ್‌ಗಳ ರಚನೆ: ಸಮೀಕ್ಷೆಯ ಸುಲಭ ನಿರ್ವಹಣೆಗಾಗಿ, ಪ್ರತಿ 100 ರಿಂದ 150 ಮನೆಗಳನ್ನು ಒಳಗೊಂಡ "ಗಣತಿ ಬ್ಲಾಕ್" (Enumeration Block) ಗಳನ್ನು ರಚಿಸಲಾಗಿದೆ.

ಸಮೀಕ್ಷೆಯಲ್ಲಿ ಯಾವೆಲ್ಲಾ ಮಾಹಿತಿಗಳನ್ನು ಸಂಗ್ರಹ

ಈ ಸಮೀಕ್ಷೆಯ ಪ್ರಶ್ನಾವಳಿಯನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ. ಇದು ಒಂದು ಕುಟುಂಬದ ಸಮಗ್ರ ಚಿತ್ರಣವನ್ನು ಪಡೆಯಲು ಸಹಾಯ ಮಾಡುತ್ತದೆ.

ಭಾಗ-1: ಕುಟುಂಬದ ಸದಸ್ಯರ ವೈಯಕ್ತಿಕ ವಿವರಗಳು

ಈ ಭಾಗದಲ್ಲಿ ಕುಟುಂಬದ ಮುಖ್ಯಸ್ಥರು ಮತ್ತು ಇತರ ಎಲ್ಲಾ ಸದಸ್ಯರ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗುತ್ತದೆ.

ಮೂಲಭೂತ ವಿವರಗಳು: ಸದಸ್ಯರ ಹೆಸರು, ಕುಟುಂಬ ಮುಖ್ಯಸ್ಥರೊಂದಿಗಿನ ಸಂಬಂಧ, ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ (EPIC) ಸಂಖ್ಯೆ, ಲಿಂಗ, ವಯಸ್ಸು, ಮತ್ತು ಮಾತೃಭಾಷೆ.

ಜಾತಿ ಮತ್ತು ಧರ್ಮ: ಪ್ರತಿಯೊಬ್ಬರ ಧರ್ಮ, ಜಾತಿ, ಉಪಜಾತಿ ಮತ್ತು ಜಾತಿಯ ಪರ್ಯಾಯ ಹೆಸರುಗಳನ್ನು ದಾಖಲಿಸಲಾಗುತ್ತದೆ. ಮೀಸಲಾತಿ ಮತ್ತು ಇತರ ಯೋಜನೆಗಳಿಗೆ ಈ ಮಾಹಿತಿ ಅತ್ಯಂತ ನಿರ್ಣಾಯಕವಾಗಿರುವುದರಿಂದ, ಜನರು ತಮ್ಮ ಜಾತಿ ಮತ್ತು ಉಪಜಾತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುವುದು ಅತ್ಯಗತ್ಯ. ಜಾತಿ ಪ್ರಮಾಣಪತ್ರ ಪಡೆದಿದ್ದೀರಾ ಎಂಬ ಪ್ರಶ್ನೆಯೂ ಇರುತ್ತದೆ.

ಶೈಕ್ಷಣಿಕ ವಿವರಗಳು: ಸದಸ್ಯರ ಗರಿಷ್ಠ ವಿದ್ಯಾರ್ಹತೆ, 6 ರಿಂದ 16 ವರ್ಷದೊಳಗಿನ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರೆ ಅದರ ವಿವರ ಮತ್ತು ಕಾರಣ, ಹಾಗೂ 16 ರಿಂದ 40 ವರ್ಷದೊಳಗಿನವರು ಶಿಕ್ಷಣವನ್ನು ಮುಂದುವರಿಸದಿರಲು ಕಾರಣಗಳನ್ನು ಕೇಳಲಾಗುತ್ತದೆ.

ಉದ್ಯೋಗ ಮತ್ತು ಆರ್ಥಿಕ ಸ್ಥಿತಿ: ಪ್ರಸ್ತುತ ಉದ್ಯೋಗದ ಸ್ವರೂಪ (ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ, ಕೃಷಿ, ದಿನಗೂಲಿ), ಕುಟುಂಬದ ಸಾಂಪ್ರದಾಯಿಕ ವೃತ್ತಿ, ವಾರ್ಷಿಕ ಆದಾಯ, ಆದಾಯ ತೆರಿಗೆ ಪಾವತಿದಾರರೇ ಎಂಬ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಎಂಎಸ್‌ಎಂಇ ನೋಂದಣಿ ವಿವರಗಳನ್ನೂ ಕೇಳಲಾಗುತ್ತದೆ.

ಮೀಸಲಾತಿ ಸೌಲಭ್ಯಗಳು: ಶಿಕ್ಷಣ, ಉದ್ಯೋಗ, ವಿದ್ಯಾರ್ಥಿವೇತನ ಅಥವಾ ಇನ್ನಿತರ ಮೀಸಲಾತಿ ಸೌಲಭ್ಯಗಳನ್ನು ಪಡೆದಿದ್ದೀರಾ ಎಂಬ ಮಾಹಿತಿ ಹಾಗೂ ಸಂವಿಧಾನದ 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದವರು ಯಾವುದೇ ಪ್ರಯೋಜನ ಪಡೆದಿದ್ದಾರೆಯೇ ಎಂಬ ವಿವರಗಳನ್ನು ದಾಖಲಿಸಲಾಗುತ್ತದೆ.

ಆರೋಗ್ಯ ಮತ್ತು ಅಂಗವೈಕಲ್ಯ: ಅಂಗವೈಕಲ್ಯವಿದೆಯೇ (UDID ಸಂಖ್ಯೆಯೊಂದಿಗೆ), ಆರೈಕೆದಾರರ ಅವಶ್ಯಕತೆಯಿದೆಯೇ, ದೈನಂದಿನ ಚಟುವಟಿಕೆಗಳಿಗೆ ಯಾವುದೇ ಉಪಕರಣ ಬಳಸುತ್ತಿದ್ದೀರಾ ಹಾಗೂ ಆರೋಗ್ಯ ವಿಮೆ ವಿವರಗಳನ್ನು ಕೇಳಲಾಗುತ್ತದೆ.

ರಾಜಕೀಯ ಪ್ರಾತಿನಿಧ್ಯ: ಕುಟುಂಬದ ಯಾರಾದರೂ ಸಂಸದ, ಶಾಸಕ, ಅಥವಾ ಸ್ಥಳೀಯ ಸಂಸ್ಥೆಗಳ (ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ) ಸದಸ್ಯರಾಗಿದ್ದಾರೆಯೇ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಭಾಗ-2: ಕುಟುಂಬದ ಒಟ್ಟಾರೆ ವಿವರಗಳು

ಈ ಭಾಗದಲ್ಲಿ ಕುಟುಂಬದ ಆಸ್ತಿ, ಸೌಲಭ್ಯಗಳು ಮತ್ತು ಜೀವನಶೈಲಿಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತದೆ.

ಆಸ್ತಿಪಾಸ್ತಿ ವಿವರಗಳು: ಕುಟುಂಬದ ಸದಸ್ಯರೆಲ್ಲರ ಹೆಸರಿನಲ್ಲಿರುವ ಒಟ್ಟು ಕೃಷಿ ಭೂಮಿ (ಒಣ, ತರಿ, ಬಾಗಾಯ್ತು), ಅದರ ವಿಸ್ತೀರ್ಣ, ನೀರಾವರಿ ಮೂಲಗಳು ಮತ್ತು ಭೂಮಿ ಸ್ವಾಧೀನಪಡಿಸಿಕೊಂಡ ವಿಧಾನ. ಇದಲ್ಲದೆ, ವಾಸದ ಮನೆ, ನಿವೇಶನ, ವಾಣಿಜ್ಯ ಕಟ್ಟಡಗಳಂತಹ ಸ್ಥಿರಾಸ್ತಿಗಳ ವಿವರಗಳು.

ಚರಾಸ್ತಿಗಳು: ದ್ವಿಚಕ್ರ ವಾಹನ, ಕಾರು, ಟ್ರ್ಯಾಕ್ಟರ್, ರೆಫ್ರಿಜರೇಟರ್, ವಾಷಿಂಗ್ ಮಷಿನ್, ಕಂಪ್ಯೂಟರ್, ಮೊಬೈಲ್ ಫೋನ್‌ನಂತಹ ಚರಾಸ್ತಿಗಳ ವಿವರಗಳು.

ಜಾನುವಾರು ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು: ಹಸು, ಎಮ್ಮೆ, ಕುರಿ, ಮೇಕೆ, ಕೋಳಿ ಮುಂತಾದ ಜಾನುವಾರುಗಳ ಸಂಖ್ಯೆ ಹಾಗೂ ಹೈನುಗಾರಿಕೆ, ಕೋಳಿ ಸಾಕಣೆ, ರೇಷ್ಮೆ ಕೃಷಿಯಂತಹ ಚಟುವಟಿಕೆಗಳ ಬಗ್ಗೆ ಮಾಹಿತಿ.

ಮೂಲಭೂತ ಸೌಕರ್ಯಗಳು: ವಾಸಿಸುವ ಮನೆಯ ಸ್ವರೂಪ (ಕಚ್ಚಾ/ಪಕ್ಕಾ), ಮಾಲೀಕತ್ವ (ಸ್ವಂತ/ಬಾಡಿಗೆ), ಕುಡಿಯುವ ನೀರಿನ ಮೂಲ, ಅಡುಗೆಗೆ ಬಳಸುವ ಇಂಧನ (ಗ್ಯಾಸ್, ಸೌದೆ), ಶೌಚಾಲಯ ಸೌಲಭ್ಯ ಮತ್ತು ವಿದ್ಯುತ್ ಸಂಪರ್ಕದ ಮೂಲ ಯಾವುದು ಎಂಬ ವಿವರಗಳು.

ಸಾಲ ಮತ್ತು ಸಬ್ಸಿಡಿ: ಕುಟುಂಬವು ಯಾವುದೇ ಉದ್ದೇಶಕ್ಕಾಗಿ (ಕೃಷಿ, ವ್ಯಾಪಾರ, ಶಿಕ್ಷಣ) ಸಾಲ ಪಡೆದಿದೆಯೇ ಮತ್ತು ಅದರ ಮೂಲ ಯಾವುದು (ಬ್ಯಾಂಕ್, ಸಹಕಾರಿ ಸಂಘ, ಖಾಸಗಿ ವ್ಯಕ್ತಿಗಳು) ಎಂಬ ಮಾಹಿತಿ.

ಸರ್ಕಾರಿ ಯೋಜನೆಗಳ ಪ್ರಯೋಜನಗಳು: ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ, ಅನ್ನಭಾಗ್ಯ, ಆರೋಗ್ಯ ವಿಮೆ, ಪಿಂಚಣಿ ಮುಂತಾದ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಕುಟುಂಬವು ಪಡೆಯುತ್ತಿದೆಯೇ ಎಂಬ ವಿವರಗಳು.

ಇತರೆ ವಿವರಗಳು: ಕುಟುಂಬದ ಯಾವುದೇ ಸದಸ್ಯರು ಅನಿವಾಸಿ ಭಾರತೀಯರೇ (NRI), ಕುಟುಂಬದಲ್ಲಿ ನ್ಯಾಯಾಲಯದಲ್ಲಿ ಪ್ರಕರಣಗಳಿವೆಯೇ, ಅಥವಾ ಯಾವುದೇ ಕಾರಣಕ್ಕಾಗಿ ಕುಟುಂಬವು ಸ್ಥಳಾಂತರಗೊಂಡಿದೆಯೇ ಎಂಬಂತಹ ಪೂರಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.

ಸಾರ್ವಜನಿಕರ ಜವಾಬ್ದಾರಿಗಳೇನು?

ಈ ಸಮೀಕ್ಷೆಯ ಯಶಸ್ಸು ಸಂಪೂರ್ಣವಾಗಿ ಸಾರ್ವಜನಿಕರ ಸಹಕಾರದ ಮೇಲೆ ನಿಂತಿದೆ.

1. ಸರಿಯಾದ ಮಾಹಿತಿ ನೀಡಿ: ನಿಮ್ಮ ಮನೆಗೆ ಬರುವ ಗಣತಿದಾರರಿಗೆ ಯಾವುದೇ ಹಿಂಜರಿಕೆಯಿಲ್ಲದೆ, ಸತ್ಯ ಮತ್ತು ನಿಖರವಾದ ಮಾಹಿತಿಯನ್ನು ನೀಡಿ. ನೀವು ನೀಡುವ ಪ್ರತಿಯೊಂದು ಮಾಹಿತಿಯು ನಾಡಿನ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ.

2. ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ: ಗಣತಿದಾರರು ಬರುವಾಗ, ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಡಿತರ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಆಸ್ತಿ ಸಂಬಂಧಿತ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡರೆ ಪ್ರಕ್ರಿಯೆಯು ಸುಲಭವಾಗುತ್ತದೆ.

3. ಗೌಪ್ಯತೆ: ನೀವು ನೀಡುವ ಎಲ್ಲಾ ಮಾಹಿತಿಯನ್ನು "ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023" ಅಡಿಯಲ್ಲಿ ಸಂಪೂರ್ಣವಾಗಿ ಗೌಪ್ಯ. ಇದನ್ನು ಕೇವಲ ನೀತಿ ನಿರೂಪಣೆ ಮತ್ತು ಸಂಖ್ಯಾಶಾಸ್ತ್ರೀಯ ಉದ್ದೇಶಗಳಿಗೆ ಮಾತ್ರ ಬಳಸಲಾಗುತ್ತದೆ.

4. ಸಹಕಾರ ನೀಡಿ: ಗಣತಿದಾರರು ಸರ್ಕಾರದ ಪ್ರತಿನಿಧಿಗಳಾಗಿದ್ದು, ಅವರಿಗೆ ಸಂಪೂರ್ಣ ಸಹಕಾರ ನೀಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ, ಅವರ ಬಳಿ ಇರುವ ಗುರುತಿನ ಚೀಟಿಯನ್ನು ಪರಿಶೀಲಿಸಿ ಅಥವಾ ಸಹಾಯವಾಣಿಯನ್ನು ಸಂಪರ್ಕಿಸಿ. (ಸಹಾಯವಾಣಿ ಸಂಖ್ಯೆ: 8050770004).

Tags:    

Similar News