ಜಿಸಿಸಿ ರಾಜಧಾನಿಯತ್ತ ಕರ್ನಾಟಕ ದಾಪುಗಾಲು : ದೇಶದ ಅರ್ಧದಷ್ಟು ಕಂಪನಿಗಳಿಗೆ ನೆಲೆ
10 ಕೋಟಿ ರೂ.ನಿಂದ 100ಕೋಟಿ ರೂ. ವಾರ್ಷಿಕ ಆದಾಯ ಹೊಂದಿರುವ 480 ಜಾಗತಿಕ ಸಾಮರ್ಥ್ಯದ ಕಂಪನಿ ಪೈಕಿ ಕರ್ನಾಟಕದಲ್ಲೇ ಸರಿಸುಮಾರು ಅರ್ಧದಷ್ಟು, ಅಂದರೆ 230 ಕಂಪನಿಗಳು ನೆಲೆ ಹೊಂದಿವೆ.
ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ದೇಶದ ಐಟಿ ವಲಯದ ನಾಯಕ. ಕರ್ನಾಟಕವು ಶ್ರೀಮಂತ ನವೋದ್ಯಮ ಪರಿಸರ ವ್ಯವಸ್ಥೆಯ ತಾಣ. ದೇಶದಲ್ಲಿನ ಒಟ್ಟಾರೆ ಜಾಗತಿಕ ಸಾಮರ್ಥ್ಯದ ಕಂಪನಿಗಳ ಪೈಕಿ ಅರ್ಧದಷ್ಟು ಕರುನಾಡಿನಲ್ಲಿಯೇ ಇವೆ...!
ಹೌದು, ದೇಶದಲ್ಲಿ 100 ಮಿಲಿಯನ್ ಡಾಲರ್‌ನಿಂದ (10 ಕೋಟಿ ರೂ.) 1ಬಿಲಿಯನ್ ಡಾಲರ್‌ವರೆಗೆ (100ಕೋಟಿ ರೂ.) ವಾರ್ಷಿಕ ಆದಾಯ ಹೊಂದಿರುವ 480 ಜಾಗತಿಕ ಸಾಮರ್ಥ್ಯದ ಕಂಪನಿ (ಜಿಸಿಸಿ) ಪೈಕಿ ಕರ್ನಾಟಕದಲ್ಲೇ ಸರಿಸುಮಾರು ಅರ್ಧದಷ್ಟು, ಅಂದರೆ 230 ಕಂಪನಿಗಳು ನೆಲೆ ಹೊಂದಿವೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಭಾಗಿತ್ವದಲ್ಲಿ ಝಿನೋವ್ ಸಂಸ್ಥೆ ರೂಪಿಸಿದ ವರದಿ ಇದನ್ನು ಸಾಬೀತು ಮಾಡಿದೆ.
ವಿಶ್ವದ ಹಲವು ಉನ್ನತ ಐಟಿ ಕಂಪನಿಗಳಿಗೆ ಬೆಂಗಳೂರು ನೆಲೆಯಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್ಅಪ್ ಸಂಸ್ಕೃತಿ ನೆಲೆಯಾಗಿರುವ ಕರ್ನಾಟಕವು ನಾವೀನ್ಯತೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿ ಹೊರಹೊಮ್ಮಿದೆ. ಬೆಂಗಳೂರು ದೇಶದ ಮತ್ತು ಏಷ್ಯಾದ ಅತ್ಯುತ್ತಮ ನವೋದ್ಯಮ ಕೇಂದ್ರಗಳಲ್ಲಿ ಒಂದಾಗಿದೆ. ಇದು ನವೋದ್ಯಮಗಳು ಮತ್ತು ಐಟಿ ಸಂಸ್ಥೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಸರ್ಕಾರದ ನೀತಿ, ಪ್ರತಿಭಾನ್ವಿತರ ಮಾನವ ಸಂಪನ್ಮೂಲ ಮತ್ತು ದೇಶದ ಬಯೋಟೆಕ್ನಾಲಜಿ ರಾಜಧಾನಿಯಾಗಿರುವುದರಿಂದ ನವೋದ್ಯಮ ಸ್ಥಾಪನೆಗೆ ಬೆಂಗಳೂರು ಪ್ರಮುಖ ತಾಣವಾಗಿದೆ. ಇತ್ತೀಚೆಗಿನ ವರ್ಷದಲ್ಲಿ ಬೆಂಗಳೂರಿನ ಜತೆಗೆ ರಾಜ್ಯದ ಇತರೆ ಜಿಲ್ಲೆಗಳನ್ನು ಸಹ ನವೋದ್ಯಮ ತಾಣವನ್ನಾಗಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ.
ಯೂನಿಕಾರ್ನ್ ಆರ್ಥಿಕತೆಯ ಕಂಪನಿಗಳು ರಾಜ್ಯದಲ್ಲಿ 74 ಸಾವಿರಕ್ಕಿಂತ ಅಧಿಕ ವೃತ್ತಿಪರ ಉದ್ಯೋಗಿಗಳನ್ನು ಸೃಷ್ಟಿ ಮಾಡಿವೆ. ಈ ಮೂಲಕ ವಿಶೇಷವಾಗಿ ಬೆಂಗಳೂರು ದೇಶದ ಆವಿಷ್ಕಾರದ ಹಬ್ ಆಗಿ ಹೊರಹೊಮ್ಮಿದೆ. ಈ ಕಂಪನಿಗಳು ವೇಗವಾಗಿ ಬೆಳೆಯುತ್ತಿರುವುದು ಮಾತ್ರವಲ್ಲದೆ ದೊಡ್ಡ ಮಟ್ಟದ ಕಂಪನಿಗಳಿಗೆ ಹೋಲಿಸಿದರೆ ಶೇ.1.4ರಷ್ಟು ವೇಗವಾಗಿ ಪ್ರೌಢಾವಸ್ಥೆಗೆ ತಲುಪುತ್ತಿವೆ. ಉತ್ಪಾದನೆಯಲ್ಲಿ ಸಂಪೂರ್ಣ ಮಾಲೀಕತ್ವ ಸಾಧಿಸುವ ಜತೆಗೆ ಕೃತಕ ಬುದ್ಧಿಮತ್ತೆ ಅಳವಡಿಕೆಯಲ್ಲಿ ಮುಂದಿದ್ದು, ಸಿಎಕ್ಸ್‌ಒ ಹಂತದ ನಾಯಕತ್ವ ಅಂದರೆ ಆರ್ಥಿಕತೆ, ತಾಂತ್ರಿಕತೆಯಿಂದ ಹಿಡಿದು ಗ್ರಾಹಕರನ್ನು ಸೆಳೆಯುವವರೆಗಿನ ಎಲ್ಲ ಹಂತದ ಅನುಭವಿ ನಾಯಕತ್ವವನ್ನು ಹೊಂದುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
ಮೂರು ವರ್ಷದಲ್ಲಿ 164 ಜೆಸಿಸಿಗಳ ಸ್ಥಾಪನೆ:
ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ 164 ಹೊಸ ಜಿಸಿಸಿಗಳು ಸ್ಥಾಪನೆಯಾಗಿವೆ. ಅದರಲ್ಲಿ ಶೇ. 43ರಷ್ಟು ಬೆಂಗಳೂರಿನಲ್ಲಿವೆ. ಇನ್ನುಳಿದವು ರಾಜ್ಯದ ವಿವಿಧ ನಗರದಲ್ಲಿ ಎಲೆ ಎತ್ತಿವೆ. ರಾಜ್ಯದಲ್ಲಿ ಸ್ಥಾಪನೆಯಾಗಿರುವ ಶೇ. 73ರಷ್ಟು ಕಂಪನಿಗಳು ಉತ್ತರ ಅಮೆರಿಕಾ ಮೂಲದವುಗಳಾದರೆ, ಶೇ. 16ರಷ್ಟು ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದ ಮೂಲಗಳಾಗಿವೆ. ಶೇ. 11ರಷ್ಟು ಚೀನಾ, ಜಪಾನ್, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ಮೂಲದವಾಗಿವೆ. ಈ ಅವಧಿಯಲ್ಲಿ ಪೈಕಿ ಶೇ .47ರಷ್ಟು ಕಂಪನಿಗಳು ಟೆಕ್, ಮೀಡಿಯಾ, ಟೆಲಿಕಾಂ ಉದ್ಯಮಗಳಾದರೆ, ಶೇ. 24ರಷ್ಟು ಗ್ರಾಹಕ ನೆರವಿನ ಕಂಪನಿಗಳಾಗಿವೆ. ಉಳಿದಂತೆ ಸೆಮಿಕಂಡಕ್ಟರ್, ಲೈಫ್ ಸೈನ್ಸ್, ಫಿನಾನ್ಸ್, ಎನರ್ಜಿ ರಿಸೋರ್ಸ್ ಕಂಪನಿಗಳು ಸ್ಥಾಪನೆಯಾಗಿವೆ. ಜತೆಗೆ ಶೆ. 44ರಷ್ಟು ಕಂಪನಿಗಳು 1ಬಿಲಿಯನ್ ಡಾಲರ್ ಆದಾಯ ಹೊಂದಿದ್ದರೆ, ಆ ಪೈಕಿ ಅರ್ಧದಷ್ಟು ಕಂಪನಿಗಳು 5ಬಿಲಿಯನ್ ಆದಾಯ ಹೊಂದಿವೆ. ಶೇ. 64ರಷ್ಟು ಕಂಪನಿಗಳು 200ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿವೆ ಎಂದು ವರದಿ ತಿಳಿಸಿದೆ.
ರಾಜ್ಯದಲ್ಲಿ18300 ಸ್ಟಾರ್ಟ್‌ಅಪ್‌ಗಳು
ರಾಜ್ಯದಲ್ಲಿ 18300 ಸ್ಟಾರ್ಟ್‌ಅಪ್ ಕಂಪನಿಗಳಿವೆ. ಬೆಂಗಳೂರಿನಲ್ಲಿರುವ ಶೇ. 25ರಷ್ಟು ಕಂಪನಿಗಳು ಡೀಪ್ ಟೆಕ್ ತಂತ್ರಜ್ಞಾನ, 400+ ಎಂಎನ್‌ಸಿ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ಜಾಗತಿಕ ಮಟ್ಟದ ಕಂಪನಿಗಳಾಗಿವೆ. ರಾಜ್ಯದಲ್ಲಿ ಜಾರಿಗೊಳಿಸಿರುವ ‘ಬಿಯಾಂಡ್ ಬೆಂಗಳೂರು’ ನೀತಿಯಿಂದ ಇದು ಸಾಧ್ಯವಾಗಿದೆ. ರಾಜ್ಯದ ಟು ಟೈರ್ ಸಿಟಿಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಉದ್ಯಮಗಳು ವ್ಯಾಪಿಸುತ್ತಿವೆ. ಇಲ್ಲಿ ಶೇ. 15-25ರಷ್ಟು ಕಡಿಮೆ ವೆಚ್ಚದಲ್ಲಿ ಉದ್ಯಮ ಸ್ಥಾಪಿಸಲು ನೆರವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಮುಂದಿನ 2030ರ ವೇಳೆಗೆ ದೇಶವು ಜಿಸಿಸಿ ವಲಯದಲ್ಲಿ 100 ಬಿಲಿಯನ್ ಡಾಲರ್ ಆರ್ಥಿಕತೆಯಾಗುವತ್ತ ಹೆಜ್ಜೆ ಇಡಲಿದ್ದು, ಕರ್ನಾಟಕವು ಈ ಹಂತದಲ್ಲಿಯೂ ಇದೇ ರೀತಿ ತನ್ನ ಬೆಳವಣಿಗೆ ಮಟ್ಟವನ್ನು ಉಳಿಸಿಕೊಂಡು ಮುಂದುವರಿಯಲಿದೆ. ಜತೆಗೆ ಎಐ, ಕ್ಲೌಡ್, ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಹೆಚ್ಚಿನ ಕೌಶಲ್ಯ ಸಾಧಿಸಿ ದೇಶಕ್ಕೆ ಕೊಡುಗೆ ನೀಡಲಿದ್ದು, ಜಾಗತಿಕ ಮಟ್ಟದ ನಾಯಕತ್ವ ಪಡೆಯುವತ್ತ ಸಾಗಲಿದೆ ಎಂದು ವರದಿ ಹೇಳಿದೆ.
'ಬಿಯಾಂಡ್ ಬೆಂಗಳೂರು' ಉಪಕ್ರಮ
ರಾಜ್ಯದಲ್ಲಿ ಉದ್ಯಮಗಳ ಬೆಳವಣಿಗೆ ಕುರಿತು ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, 1985ರಲ್ಲಿ ಬೆಂಗಳೂರು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಐಟಿ ಕೇಂದ್ರವಾಗಿ ತನ್ನ ಪಯಣವನ್ನು ಆರಂಭಿಸಿದ ನಂತರ, ಇಂದು ರಾಜ್ಯವು 200ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯದ ಕಂಪನಿಗಳಿಗೆ ಆಶ್ರಯವಾಗಿದೆ. ಇವುಗಳಲ್ಲಿ 6ಲಕ್ಷಕ್ಕೂ ಹೆಚ್ಚು ವೃತ್ತಿಪರರು ಉದ್ಯೋಗದಲ್ಲಿದ್ದಾರೆ. ಇದರಿಂದಾಗಿ, ಬೆಂಗಳೂರು ಪ್ರಮುಖ ಜಿಸಿಸಿ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಹೊರತಾದ ಪ್ರದೇಶಗಳಲ್ಲಿ ಸಮಾನ ಬೆಳವಣಿಗೆಯನ್ನು ಉತ್ತೇಜಿಸಲು, "ಬಿಯಾಂಡ್ ಬೆಂಗಳೂರು" ಉಪಕ್ರಮವನ್ನು ಕೈಗೊಳ್ಳಲಾಗಿದೆ. ಇದರ ಉದ್ದೇಶ ರಾಜ್ಯಾದಾದ್ಯಂತ ಹೊಸ ತಾಂತ್ರಿಕ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವುದು. ಈ ಕಾರ್ಯಕ್ರಮವು ಕೈಗಾರಿಕೆಗೆ 100 ಬಿಲಿಯನ್ ಡಾಲರ್ ಕೊಡುಗೆಯನ್ನು ನೀಡುವುದು, 10 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸುವುದು ಮತ್ತು 10 ಸಾವಿರ ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗೆ ನೆರವಾಗುವುದನ್ನು ಗುರಿಯಾಗಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮುಂತಾದ ಮಹಾನಗರಗಳನ್ನು ಹಬ್‌ಗಳಾಗಿ ಮತ್ತು ಕಲಬುರಗಿ, ಶಿವಮೊಗ್ಗ, ತುಮಕೂರು ಮುಂತಾದ ಸ್ಥಳಗಳನ್ನು ಸ್ಪೋಕ್‌ಗಳಾಗಿ ಕಲ್ಪಿಸಿದೆ. ಈ ಸ್ಪೋಕ್‌ಗಳು ಪ್ರತಿಭೆ, ಮೂಲಸೌಕರ್ಯ ಮತ್ತು ಸಂಪೂರ್ಣ ಐಟಿ ಸೇವೆಗಳನ್ನು ಒದಗಿಸುತ್ತವೆ. ಇದನ್ನು ಅನುಸರಿಸುವ ಕಂಪನಿಗಳಿಗೆ ಸರ್ಕಾರದ ನೀತಿ ಪ್ರಯೋಜನಗಳೂ ಲಭ್ಯ ಇದೆ ಎಂದಿದ್ದಾರೆ.
ಜಿಸಿಸಿ ತಾಣವಾಗಿ ಕರ್ನಾಟಕದ ಪಯಣ:
ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಮಾತನಾಡಿ, ಜಿಸಿಸಿ ತಾಣವಾಗಿ ಕರ್ನಾಟಕದ ಪಯಣವು ಮೂರು ದಶಕಗಳ ಹಿಂದೆ ಆರಂಭವಾಯಿತು. ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಬೆಂಗಳೂರಿನಲ್ಲಿ ಭಾರತದ ಮೊದಲ ಜಿಸಿಸಿ ಸ್ಥಾಪನೆಯೊಂದಿಗೆ ಪ್ರಾರಂಭವಾಗಿದ್ದು, ಬಳಿಕ ರಾಜ್ಯವು ಅಸಾಮಾನ್ಯ ಬೆಳವಣಿಗೆಯನ್ನು ಕಂಡುಬಂದಿದೆ. ತದನಂತರದಲ್ಲಿ ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ಡಿಜಿಟಲ್ ನವೀನತೆ, ಹಾಗೂ ವ್ಯವಹಾರ ನಿರ್ವಹಣೆಯ ಅತ್ಯುತ್ತಮ ಕೇಂದ್ರಗಳಾಗಿ ವಿಸ್ತರಿಸಿವೆ ಎಂದು ಹೇಳಿದ್ದಾರೆ.
ರಾಜ್ಯದ ಪ್ರತಿಭೆಯನ್ನು ಆಕರ್ಷಿಸುವ ಮತ್ತು ಬೆಳೆಸುವ ಸಾಮರ್ಥ್ಯ ಜಿಸಿಸಿ ಹೊಂದಿದೆ. ರಿಟೇಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ತಯಾರಿಕಾ ಸೇವೆಗಳು ಮೊದಲಾದ ವಿವಿಧ ಕ್ಷೇತ್ರಗಳ ಅಗತ್ಯಗಳಿಂದಾಗಿ ಜಾಗತಿಕ ಕಂಪನಿಗಳು ಮಹತ್ವದ ಹೂಡಿಕೆಗಳನ್ನು ಮಾಡುತ್ತಿವೆ. ಹೆಚ್ಚುವರಿಯಾಗಿ, ಕರ್ನಾಟಕ ತನ್ನ ಸ್ಥಾನವನ್ನು ಬಲಪಡಿಸಿಕೊಂಡು ಜಾಗತಿಕ ಜಿಸಿಸಿ ಕೇಂದ್ರವಾಗಿ ಹೊರಹೊಮ್ಮಿದೆ. ಅದರ ಕೇಂದ್ರ ಕಚೇರಿಗಳು ವಿಶ್ವದಾದ್ಯಂತ ಹರಡಿಕೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.
ಸಮತೋಲನ ಬೆಳವಣಿಗೆಗಾಗಿ, ಸರ್ಕಾರವು "ಬಿಯಾಂಡ್ ಬೆಂಗಳೂರು" ಉಪಕ್ರಮವನ್ನು ಮುಂದುವರಿಸಿದೆ. ಇದರ ಉದ್ದೇಶವು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಶಿವಮೊಗ್ಗ ಮತ್ತು ತುಮಕೂರು ಮುಂತಾದ ಉದಯೋನ್ಮುಖ ತಾಂತ್ರಿಕ ನಗರಗಳಲ್ಲಿ ಹೊಸ ತಂತ್ರಜ್ಞಾನ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವುದಾಗಿದೆ. ಕಂಪನಿಗಳು ತಮ್ಮ ಕಾರ್ಯಚಟುವಟಿಕೆಗಳನ್ನು ರಾಜಧಾನಿಯ ಹೊರತಾಗಿ ಸ್ಥಾಪಿಸಲು ಮತ್ತು ವಿಸ್ತರಿಸಲು ಸರ್ಕಾರ ಪ್ರೋತ್ಸಾಹಕ ನೀತಿಗಳನ್ನು ಮತ್ತು ಪ್ರೋತ್ಸಾಹಕಗಳನ್ನು ಒದಗಿಸುತ್ತಿದೆ ಎಂದಿದ್ದಾರೆ.
ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜಿಸ್‌ನ ಸಿಇಒ ದತ್ತಾತ್ರೀ ಸಲಗಮೆ ಮಾತನಾಡಿ, ಕರ್ನಾಟಕವು ಹಲವು ವರ್ಷಗಳಿಂದ ಸಂಶೋಧನೆ, ಸ್ಟಾರ್ಟ್‌ಅಪ್‌ಗಳು ಮತ್ತು ತಂತ್ರಜ್ಞಾನ ಕಂಪನಿಗಳಿಗೆ ಉತ್ತೇಜನ ನೀಡುತ್ತಿದೆ. ತಂತ್ರಜ್ಞಾನ ಕಾರ್ಯಗಳನ್ನು ಉತ್ತೇಜಿಸುವುದರ ಜತೆಗೆ ಅತ್ಯುತ್ತಮ ಪ್ರತಿಭಾವಂತರನ್ನು ಬೆಳೆಸುವಲ್ಲಿ ಅತ್ಯುತ್ತಮ ನಗರವಾಗಿದೆ. ಕೇವಲ ಪ್ರತಿಭಾ ಕೇಂದ್ರವಾಗಿರದೆ, ಜಾಗತಿಕ ಸಾಮರ್ಥ್ಯಗಳ ಕೇಂದ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2029ರೊಳಗೆ 500 ಹೊಸ ಜಿಸಿಸಿಗಳ ಆಕರ್ಷಿಸುವ ಗುರಿ:
ರಾಜ್ಯ ಸರ್ಕಾರವು ಕರ್ನಾಟಕ ಜಿಸಿಸಿ ನೀತಿ 2024–2029 ಅನ್ನು ಬಿಡುಗಡೆ ಮಾಡಿದ್ದು, 2029ರೊಳಗೆ 500 ಹೊಸ ಜಿಸಿಸಿಗಳನ್ನು ಸೆಳೆಯುವ ಗುರಿ ಹೊಂದಲಾಗಿದೆ. 3.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಸುಮಾರು 50 ಬಿಲಿಯನ್ ಅಮೆರಿಕನ್ ಡಾಲರ್‌ಗಳ (500 ಕೋಟಿ ರೂ.) ಆರ್ಥಿಕ ಉತ್ಪಾದನೆ ಸಾಧಿಸುವ ಗುರಿ ಹೊಂದಲಾಗಿದೆ. ಈ ನೀತಿಯಡಿ ಬಿಯಾಂಡ್ ಬೆಂಗಳೂರು ಯೋಜನೆಗೆ ವಿಶೇಷ ಪ್ರೋತ್ಸಾಹ ನೀಡಲಾಗಿದ್ದು, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ ಮುಂತಾದ ನಗರಗಳಲ್ಲಿ ಜಿಸಿಸಿ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ. ಇತ್ತೀಚಿನ ನಾಲ್ಕು ವರ್ಷಗಳಲ್ಲಿ ಬೆಂಗಳೂರು ಹೊರಗಿನ ನಗರಗಳಲ್ಲಿ 5,600 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ.ಕರ್ನಾಟಕದಲ್ಲಿ ಲಭ್ಯವಿರುವ ಉನ್ನತ ಮಟ್ಟದ ತಂತ್ರಜ್ಞಾನ ಮೂಲಸೌಕರ್ಯ, ಪ್ರತಿಭಾಶಕ್ತಿ ಹಾಗೂ ಸರ್ಕಾರದ ಪ್ರೋತ್ಸಾಹಗಳಿಂದ ಮುಂದಿನ ಐದು ವರ್ಷಗಳಲ್ಲಿ ರಾಜ್ಯವು ಜಿಸಿಸಿ ಕ್ಷೇತ್ರದಲ್ಲಿ ಅಗ್ರಗಣ್ಯ ತಾಣವಾಗಲಿದೆ ಎಂದು ಹೇಳಲಾಗಿದೆ.
ಐಟಿ, ಫೈನಾನ್ಸ್, ಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ, ವಾಹನ ತಂತ್ರಜ್ಞಾನ, ಆರೋಗ್ಯ ಕ್ಷೇತ್ರಗಳಲ್ಲಿ ಜಾಗತಿಕ ಕಂಪನಿಗಳು ತಮ್ಮ ತಂತ್ರಜ್ಞಾನ ಮತ್ತು ಆವಿಷ್ಕಾರ ಕೇಂದ್ರಗಳು ಸ್ಥಾಪನೆಗೊಂಡಿವೆ. ಜೆಪಿ ಮಾರ್ಗನ್, ಗೋಲ್ಡ್‌ಮನ್ ಸ್ಯಾಚ್ಸ್, ವಾಲ್‌ಮಾರ್ಟ್, ಗೂಗಲ್, ಮೈಕ್ರೋಸಾಫ್ಟ್, ಮರ್ಸಿಡಿಸ್-ಬೆನ್ಜ್ ಮುಂತಾದ ದಿಗ್ಗಜ ಸಂಸ್ಥೆಗಳು ಬೆಂಗಳೂರಿನ ಜಿಸಿಸಿಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ನಗರವನ್ನು ಈಗಾಗಲೇ ಜಿಸಿಸಿ ರಾಜಧಾನಿ ಎಂದು ಕರೆಯಲಾಗುತ್ತಿದ್ದು, ಮುಂದಿನ ದಿನದಲ್ಲಿ ಅಧಿಕೃತ ಮುದ್ರೆ ಬೀಳುವ ನಿರೀಕ್ಷೆಯಲ್ಲಿ ರಾಜ್ಯವು ಕಾರ್ಯೋನ್ಮುಖವಾಗಿದೆ.