CET SEAT BLOCKING SCAM| ಖಾಸಗಿ ಕಾಲೇಜುಗಳತ್ತ ಅನುಮಾನದ ಹುತ್ತ; ತನಿಖೆಗೆ ಸರ್ಕಾರ ಚಿಂತನೆ
ನೀಟ್ ಪರೀಕ್ಷೆ ಅಕ್ರಮದ ಬೆನ್ನಲ್ಲೇ ಸಿಇಟಿ ಪರೀಕ್ಷೆ ಸೀಟ್ ಬ್ಲಾಕಿಂಗ್ ದಂಧೆಯ ಶಂಕೆ ಪ್ರತಿಭಾನ್ವಿತ ವಿದ್ಯಾರ್ಥಿಗಳ ಎಂಜಿನಿಯರಿಂಗ್ ಕೋರ್ಸ್ ಪ್ರವೇಶದ ಅವಕಾಶ ಕಸಿಯುವಂತಾಗಿದೆ.
ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸುಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(CET)ಯ ʼಎರಡನೇ ಸುತ್ತಿನ ಮುಂದುವರಿದ ಸೀಟು ಹಂಚಿಕೆʼ ಪ್ರಕ್ರಿಯೆಯಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ತನಿಖೆಗೆ ಮುಂದಾಗಿದೆ. ವಿಶೇಷವೆಂದರೆ ನ್ಯೂ ಹೊರೈಜನ್ ಎಂಜಿನಿಯರಿಂಗ್ ಕಾಲೇಜು ಹಾಗೂ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜುಗಳ ಹೆಸರುಗಳು ಈ ವಿವಾದದಲ್ಲಿ ಕೇಳಿ ಬಂದಿವೆ.
ನೀಟ್ ಪರೀಕ್ಷೆ ಅಕ್ರಮದ ಬೆನ್ನಲ್ಲೇ ಸಿಇಟಿ ಪರೀಕ್ಷೆ ಸೀಟ್ ಬ್ಲಾಕಿಂಗ್ ದಂಧೆಯ ಶಂಕೆ ಪ್ರತಿಭಾನ್ವಿತ ವಿದ್ಯಾರ್ಥಿಗಳ ಎಂಜಿನಿಯರಿಂಗ್ ಕೋರ್ಸ್ ಪ್ರವೇಶದ ಅವಕಾಶ ಕಸಿಯುವಂತಾಗಿದೆ. ಈ ಮಧ್ಯೆ ಸಿಇಟಿ ಫಲಿತಾಂಶ ಘೋಷಣೆ ವಿಳಂಬ ಮಾಡಿದ್ದರಿಂದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹಗರಣದಲ್ಲಿ ಭಾಗಿಯಾಗಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿಬಂದಿದೆ.
ಏನಿದು ಸಿಇಟಿ ಪರೀಕ್ಷೆ?
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆಯೇ ಸಾಮಾನ್ಯ ಪ್ರವೇಶ ಪರೀಕ್ಷೆ(CET). ಎಂಜಿನಿಯರಿಂಗ್ ಹಾಗೂ ಇತರೆ ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತಿ ವರ್ಷ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತದೆ. ಸಿಇಟಿಯಲ್ಲಿ ಬಂದಿರುವ ಶ್ರೇಣಿ ಆಧರಿಸಿ ಸರ್ಕಾರಿ ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ.
ಯಾವ ಕೋರ್ಸ್‌ಗಳಿಗೆ ಸಿಇಟಿ?
ವಾಸ್ತುಶಿಲ್ಪ, ಎಂಜಿನಿಯರಿಂಗ್, ಬಿ.ಟೆಕ್, ಬಿ.ಎಸ್ಸಿ ಕೃಷಿ (ಆನರ್ಸ್), ಬಿ.ಎಸ್ಸಿ ರೇಷ್ಮೆ ಕೃಷಿ (ಆನರ್ಸ್), ಬಿ.ಎಸ್ಸಿ ತೋಟಗಾರಿಕೆ(ಆನರ್ಸ್), ಬಿ.ಎಸ್ಸಿ ಅರಣ್ಯ(ಆನರ್ಸ್), ಬಿ.ಟೆಕ್( ಜೈವಿಕ ತಂತ್ರಜ್ಞಾನ), ಬಿ.ಎಸ್ಸಿ ಸಮುದಾಯ ವಿಜ್ಞಾನ. (ಆನರ್ಸ್), ಬಿ.ಟೆಕ್ (ಅಗ್ರಿ ಎಂಜಿನಿಯರಿಂಗ್), ಬಿ.ಟೆಕ್ (ಆಹಾರ ತಂತ್ರಜ್ಞಾನ), ಬಿ.ಟೆಕ್ (ಡೈರಿ ಟೆಕ್ನಾಲಜಿ), ಬಿ.ಎಫ್.ಎಸ್ಸಿ (ಮೀನುಗಾರಿಕೆ), ಬಿ.ವಿ.ಎಸ್.ಸಿ. ಮತ್ತು ಎ.ಹೆಚ್., ಬಿ-ಫಾರ್ಮಾ ಮತ್ತು ಫಾರ್ಮಾ-ಡಿ ಕೋರ್ಸುಗಳಿಗೆ ಸಾಮಾನ್ಯ ಪ್ರವೇಶ ನಡೆಯುತ್ತದೆ.
ಸೀಟ್ ಬ್ಲಾಕಿಂಗ್ ಗೊತ್ತಾಗಿದ್ದು ಹೇಗೆ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರ್ಯಾಂಕಿಂಗ್ ಆಧಾರದ ಮೇಲೆ ಸೀಟು ಹಂಚಿಕೆ ನಡೆಯುತ್ತದೆ. ಪರೀಕ್ಷೆಯಲ್ಲಿ ಪಡೆದ ಶೇ ೫೦ ಅಂಕ ಹಾಗೂ ಸಿಇಟಿಯಲ್ಲಿ ಗಳಿಸಿದ ಶೇ ೫೦ ಅಂಕಗಳನ್ನು ಪರಿಗಣಿಸಿ ರ್ಯಾಂಕಿಂಗ್ ಪ್ರಕಟಿಸಲಾಗುತ್ತದೆ. ರ್ಯಾಂಕಿಂಗ್ ಪಟ್ಟಿಯಂತೆ ಅಭ್ಯರ್ಥಿಗಳು ತಾವು ಪ್ರವೇಶ ಪಡೆಯಲಿಚ್ಛಿಸುವ ಕಾಲೇಜುಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ.
2024 ನೇ ಸಾಲಿನ ಸಿಇಟಿಯಲ್ಲಿ ಉನ್ನತ ರ್ಯಾಂಕ್ ಪಡೆದವರು ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್, ಕೃತಕ ಬುದ್ದಿಮತ್ತೆ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮುನಿಕೇಷನ್ ಮತ್ತಿತರ ಬೇಡಿಕೆಯ ಕೋರ್ಸ್ ಆಯ್ಕೆ ಮಾಡಿಕೊಂಡರೂ ಅಂತಿಮ ಸುತ್ತಿನವರೆಗೂ ಸೀಟುಗಳನ್ನು ಹಿಡಿದಿಟ್ಟುಕೊಂಡು, ಪ್ರವೇಶ ಪಡೆದಿರಲಿಲ್ಲ. ಇದರಿಂದ ಭಾರೀ ಬೇಡಿಕೆಯ ಕೋರ್ಸ್‌ಗಳ ಸೀಟುಗಳು ಬಾಕಿ ಉಳಿದಿದ್ದವು. ಆ ಸೀಟುಗಳನ್ನು ಒಪ್ಪಂದದಂತೆ ಸರ್ಕಾರವು ಖಾಸಗಿ ಕಾಲೇಜುಗಳಿಗೆ ಹಿಂದಿರುಗಿಸಿತ್ತು. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಆ ಸೀಟುಗಳನ್ನು ಬ್ಲಾಕ್ ಮಾಡಿ ಪ್ರವೇಶ ವಂಚಿತ ವಿದ್ಯಾರ್ಥಿಗಳಿಗೆ ಮ್ಯಾನೇಜ್‌ಮೆಂಟ್ ಕೋಟಾದಡಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದವು ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಮಾಜಿ ಸಂಸದ ಹಾಗೂ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಜಾರಿಗೆ ತರುವಲ್ಲಿ ಶ್ರಮಿಸಿದ ವೀರಪ್ಪ ಮೊಯಿಲಿ ಅವರು, ವೃತ್ತಿಪರ ಕೋರ್ಸ್‌ಗಳಿಗೆ ಸಿಇಟಿ ಪರೀಕ್ಷೆಯಿಂದಾಗಿ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಕಾಲೇಜು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈಗ ಸೀಟ್ ಬ್ಲಾಕಿಂಗ್ ಕುರಿತು ಕೇಳಿಬಂದಿರುವ ದೂರುಗಳ ಬಗ್ಗೆ ಅಷ್ಟು ಮಾಹಿತಿ ಇಲ್ಲ ಎಂದು ಹೇಳಿದರು.
ಸೀಟು ಹಂಚಿಕೆ ಒಪ್ಪಂದವೇನು?
ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಲ್ಲಿ ಸೀಟು ಹಂಚಿಕೆ ಒಪ್ಪಂದವನ್ನು ಕಾಯ್ದೆಯ ಭಾಗವಾಗಿಯೇ ಇರಿಸಿಕೊಂಡು ೨೦೦೬ರಲ್ಲಿ ಸಿಇಟಿ ಕಾಯ್ದೆ ಜಾರಿಗೊಳಿಸಲಾಗಿತ್ತು.
ಸರ್ಕಾರ ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘದ ನಡುವೆ ಸೀಟು ಹಂಚಿಕೆ ಒಪ್ಪಂದ ನಡೆದಿತ್ತು. ಒಪ್ಪಂದದ ಕುರಿತು ಸುಪ್ರೀಂಕೋರ್ಟಿಗೂ ಪ್ರಮಾಣ ಪತ್ರ ಸಲ್ಲಿಸಿತ್ತು. ಒಪ್ಪಂದದನ್ವಯ ಸರ್ಕಾರಕ್ಕೆ ಶೇ 45, ಕಾಮೆಡ್-ಕೆ(ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ) ಶೇ 30 ಮತ್ತು ಆಡಳಿತ ಮಂಡಳಿಗೆ ಶೇ 25ರಷ್ಟು ಸೀಟುಗಳನ್ನು ಹಂಚಿಕೆ ಮಾಡಲು ಒಪ್ಪಂದದಲ್ಲಿ ತೀರ್ಮಾನಿಸಲಾಗಿತ್ತು. ಎರಡನೇ ಸುತ್ತಿನ ಮುಂದುವರಿದ ಸೀಟು ಹಂಚಿಕೆ ಪ್ರಕ್ರಿಯೆ ನಂತರವೂ ಉಳಿಯುವ ಸೀಟುಗಳನ್ನು ಖಾಸಗಿ ಕಾಲೇಜುಗಳಿಗೆ ಬಿಟ್ಟುಕೊಡುವ ಕುರಿತು ಒಪ್ಪಂದವಾಗಿತ್ತು.
ಖಾಲಿ ಉಳಿದಿದ್ದ ಸೀಟುಗಳೆಷ್ಟು, ಏಕೆ?
2024 ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ1,11, 294 ಸೀಟುಗಳು ಸಿಇಟಿ ಮೂಲಕ ಹಂಚಿಕೆ ಮಾಡಲು ಲಭ್ಯವಿದ್ದವು. ಈ ಪೈಕಿ 95, 290ಸೀಟುಗಳನ್ನು ರ್ಯಾಂಕಿಂಗ್ ಹಾಗೂ ಒಪ್ಪಂದದಂತೆ ಹಂಚಿಕೆ ಮಾಡಲಾಗಿತ್ತು. 16,004 ಸೀಟುಗಳು ಹಂಚಿಕೆಯಾಗದೇ ಉಳಿದಿದ್ದವು. ಇದರಲ್ಲಿ ಎಂಜಿನಿಯರಿಂಗ್ ಕೋರ್ಸಿನ ವಿವಿಧ ವಿಭಾಗಗಳ 13089, ಆರ್ಕಿಟೆಕ್ಚರ್ ಕೋರ್ಸಿನ 569 ಸೀಟುಗಳು ಹಂಚಿಕೆಯಾಗದೇ ಉಳಿದಿದ್ದವು. 2208 ಮಂದಿ ವಿದ್ಯಾರ್ಥಿಗಳಿಗೆ ವಿವಿಧ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾಗಿದ್ದರೂ ಶುಲ್ಕ ಪಾವತಿಸಿರಲಿಲ್ಲ, 95 ಮಂದಿ ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಪಡೆದು ಕಾಲೇಜುಗಳಿಗೆ ಹೋಗಿರಲಿಲ್ಲ, 45 ಮಂದಿ ಅಲ್ವಸ್ವಲ್ಪ ಶುಲ್ಕ ಪಾವತಿಸಿ ಪ್ರವೇಶ ಪಡೆದಿರಲಿಲ್ಲ.
ಸರ್ಕಾರ ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಂ ಸಂಘದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಈ ಸೀಟುಗಳನ್ನು ಖಾಸಗಿ ಕಾಲೇಜುಗಳಿಗೇ ಬಿಟ್ಟುಕೊಡಬೇಕಾಯಿತು. ಹೀಗೆ ಉಳಿದ ಸೀಟುಗಳನ್ನು ಖಾಸಗಿ ಕಾಲೇಜುಗಳು ದೊಡ್ಡ ಮೊತ್ತಕ್ಕೆ ಮಾರಿಕೊಂಡ ಪರಿಣಾಮ ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಂಪ್ಯೂಟರ್ ಸೈನ್ಸ್, ಕತಕ ಬುದ್ದಿಮತ್ತೆಯಂತಹ ಪ್ರಮುಖ ಕೋರ್ಸ್‌ಗಳು ಹೆಚ್ಚು ಪ್ರಮಾಣದಲ್ಲಿ ಬಾಕಿ ಉಳಿದಿದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೀಟ್ ಬ್ಲಾಕಿಂಗ್ ವ್ಯವಹಾರದ ಶಂಕೆ ಮೂಡಿತ್ತು. ಸೀಟು ಪಡೆದಿದ್ದ ಸುಮಾರು 2600ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆದಿರಲಿಲ್ಲ. ಇವರಿಗೆ ಇ-ಮೇಲ್ ಹಾಗೂ ಅಂಚೆ ಮುಖಾಂತರ ನೋಟಿಸ್ ನೀಡಲಾಗಿದೆ. ಕೆಲ ವಿದ್ಯಾರ್ಥಿಗಳು ಸೀಟು ಆಯ್ಕೆಗಾಗಿ ಒಂದೇ ಐಪಿ ವಿಳಾಸ ಬಳಸಿದ್ದರು. ಅ ಜೊತೆಗೆ ಅವರು ಒದಗಿಸಿದ್ದ ಮೊಬೈಲ್ ಸಂಖ್ಯೆಗಳು ನಕಲಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು.
ಬೆಂಗಳೂರಿನ ನ್ಯೂ ಹೊರೈಜನ್ ಎಂಜಿನಿಯರಿಂಗ್ ಕಾಲೇಜು ಹಾಗೂ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂತಹ ಅಕ್ರಮ ನಡೆದಿದ್ದವು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಕೌನ್ಸೆಲಿಂಗ್‌ನ್ಲಲೂ ಅಕ್ರಮ ?
ಕಳೆದ ವರ್ಷ ಸಿಇಟಿ ಕೌನ್ಸೆಲಿಂಗ್ ನಂತರವೂ ಕೆಲ ವಿದ್ಯಾರ್ಥಿಗಳು ಕಾಲೇಜುಗಳಿಗೆ ಪ್ರವೇಶ ಪಡೆಯದ ಈ ವರ್ಷ ಸಿಇಟಿ ಕೌನ್ಸೆಲಿಂಗ್‌ನಿಂದ 12 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿತ್ತು. ಈ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೊರೆ ಹೋಗಿದ್ದಾಗ ಸೀಟ್ ಬ್ಲಾಕಿಂಗ್ ಸಂಶಯದ ಬೆಳಕಿಗೆ ಬಂದಿತ್ತು.
ಕಳೆದ ವರ್ಷ ನ್ಯೂ ಹೊರೈಜನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಖಾಲಿ ಉಳಿದಿದ್ದ 40 ಸರ್ಕಾರಿ ಕೋಟಾ ಎಂಜಿನಿಯರಿಂಗ್ ಸೀಟುಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆ ಗಮನಕ್ಕೂ ತಾರದೇ ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳನ್ನಾಗಿ ಪರಿವರ್ತಿಸಿರುವುದು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲೂ ಹಿಂದಿನ ವರ್ಷದ ಸೀಟು ಹಂಚಿಕೆ ಮತ್ತು ಅನುಮೋದನೆ ಬಗ್ಗೆಯೂ ತನಿಖೆ ನಡೆಸುವಂತೆ ಸಚಿವರು ಕೆಇಎ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
4 ವರ್ಷ ಪ್ರವೇಶ ನಿರ್ಬಂಧಿಸಲು ಚಿಂತನೆ
ಸೀಟ್ ಬ್ಲಾಕಿಂಗ್ ಮಾಡಿಸಿ ಕಾಲೇಜುಗಳಿಗೆ ಪ್ರವೇಶ ಪಡೆಯದವರಿಗೆ ನಾಲ್ಕು ವರ್ಷಗಳವರೆಗೆ ರಾಜ್ಯದ ಯಾವುದೇ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯದಂತೆ ನಿರ್ಬಂಧಿಸುವ ಕುರಿತು ಚಿಂತನೆ ನಡೆದಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಸೀಟ್ ಬ್ಲಾಕಿಂಗ್ ತನಿಖೆಗೆ ಸಮಿತಿ ರಚನೆ?
ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಕೆಲ ಖಾಸಗಿ ಕಾಲೇಜುಗಳ ಭಾಗಿಯಾಗಿರುವ ಸಂಶಯದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಯೊಬ್ಬರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ತಾಂತ್ರಿ ಶಿಕ್ಷಣ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸೇರಿ ವಿವಿಧ ತಜ್ಞರು ಇರಲಿದ್ದಾರೆ ಎನ್ನಲಾಗಿದೆ.
ಕೌನ್ಸೆಲಿಂಗ್ ನಲ್ಲಿ ಸೀಟು ಪಡೆದರೂ ಕಾಲೇಜುಗಳಿಗೆ ಪ್ರವೇಶ ಪಡೆಯದ ೨೬೦೦ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಉತ್ತರಿಸಲು ವಾರದ ಗಡುವು ನೀಡಲಾಗಿದೆ, ವಿದ್ಯಾರ್ಥಿಗಳು ನೀಡುವ ಉತ್ತರ ಆಧರಿಸಿ ತನಿಖೆ ತೀವ್ರಗೊಳಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಒಪ್ಪಂದ ಬದಲಾವಣೆಗೆ ಚಿಂತನೆ
ಸರ್ಕಾರ ಹಾಗೂ ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳ ಸಂಘದೊಂದಿಗೆ ಮಾಡಟಿಕೊಂಡಿರುವ ಒಪ್ಪಂದದಲ್ಲೂ ಮಾರ್ಪಾಡು ತರಲು ಸರ್ಕಾರ ಚಿಂತನೆ ನಡೆಸಿದೆ. ಖಾಸಗಿ ಕಾಲೇಜುಗಳು ಸೀಟ್ ಬ್ಲಾಕಿಂಗ್ ದಂಧೆ ನಡೆಸುತ್ತಿರುವುದರಿಂದ ಸರ್ಕಾರಿ ಕೋಟಾದ ಸೀಟುಗಳು ಮ್ಯಾನೇಜ್‌ಮೆಂಟ್ ಸೀಟುಗಳಾಗಿ ಬದಲಾಗುತ್ತಿವೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಸರ್ಕಾರ ಮಾಡಿಕೊಂಡಿರುವ ಒಪ್ಪಂದದಲ್ಲಿ ಬದಲಾವಣೆಗಳನ್ನು ತರಲು ನಿರ್ಧರಿಸಿದೆ ಎನ್ನಲಾಗಿದೆ. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕರನ್ನು 'ದ ಫೆಡರಲ್ ಕರ್ನಾಟಕ' ಸಂಪರ್ಕಿಸಲು ಯತ್ನಿಸಿದರೂ ಅವರು ಲಭ್ಯರಾಗಿಲ್ಲ.
ಖಾಸಗಿ ಕಾಲೇಜುಗಳಿಂದ ಹಗರಣ; ಆರೋಪ
ಸಿಇಟಿ ಫಲಿತಾಂಶ ಪ್ರಕಟಿಸಲು ವಿಳಂಬ ಮಾಡುವ ಮೂಲಕ ಸರ್ಕಾರವು ಖಾಸಗಿ ಕಾಲೇಜುಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಸುಮಾರು 3 ಸಾವಿರ ಕೋಟಿ ರೂ. ಹಗರಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ವಿಟಿಯು ಅಂತಹ ಸಂಸ್ಥೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಮೂರು ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸುತ್ತಿದೆ. ಆದರೆ, ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದರ ಹಿಂದೆ ದೊಡ್ಡ ಹುನ್ನಾರವಿದೆ ಎಂದು ಕಳೆದ ಶುಕ್ರವಾರ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಇನ್ನು ಸಿಇಟಿ ಫಲಿತಾಂಶ ಪ್ರಕಟಕ್ಕೂ ಮುನ್ನವೇ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದ್ದು ಏಕೆ, ಯಾಕೆ ಎಂದು ಪ್ರಶ್ನಿಸಿದ್ದರು.