ADR Report | ದೇಶದ ಶ್ರೀಮಂತ ಶಾಸಕರಲ್ಲಿ ಡಿ.ಕೆ. ಶಿವಕುಮಾರ್‌ಗೆ ಎರಡನೇ ಸ್ಥಾನ
ಕರ್ನಾಟಕವು ಶತಕೋಟ್ಯಾಧಿಪತಿ ಶಾಸಕರ ವಿಷಯದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಆಂಧ್ರಪ್ರದೇಶ 27 ಶಾಸಕರೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಮಹಾರಾಷ್ಟ್ರ 18 ಶಾಸಕರೊಂದಿಗೆ ಮೂರನೇ ಸ್ಥಾನದಲ್ಲಿದೆ.;

ಡಿಕೆ ಶಿವಕುಮಾರ್
ಕೋಟ್ಯಾಧಿಪತಿ ಶಾಸಕರ ರಾಜ್ಯ ಎಂಬ ಕರ್ನಾಟಕದ ಹಣೆಪಟ್ಟಿ ಈ ಬಾರಿಯೂ ಮುಂದುವರಿದಿದ್ದು, 31 ಶಾಸಕರು 100 ಕೋಟಿ ರೂ.ಗಿಂತಲೂ ಹೆಚ್ಚು ಘೋಷಿತ ಆಸ್ತಿ ಹೊಂದಿದ್ದಾರೆ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 1413 ಕೋಟಿ ರೂ. ಘೋಷಿತ ಆಸ್ತಿಯೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಮುಂಬೈನ ಘಾಟ್ಕೋಪರ್ ಕ್ಷೇತ್ರ ಪ್ರತಿನಿಧಿಸುವ ಬಿಜೆಪಿಯ ಪರಾಗ್ ಶಾ 3383 ಕೋಟಿ ರೂ. ಘೋಷಿತ ಆಸ್ತಿಯೊಂದಿಗೆ ಮೊದಲ ಸ್ಥಾನವನ್ನು ಪಡೆದಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 28 ರಾಜ್ಯ, 3 ಕೇಂದ್ರಾಡಳಿತ ಪ್ರದೇಶದಲ್ಲಿನ ಒಟ್ಟು 4092 ಶಾಸಕರ ಘೋಷಿತ ಆಸ್ತಿ ಅಧ್ಯಯನದ ಮಾಡಿ ಈ ವರದಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಕರ್ನಾಟಕವು ಶತಕೋಟ್ಯಾಧಿಪತಿ ಶಾಸಕರ ವಿಷಯದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಆಂಧ್ರಪ್ರದೇಶ 27 ಶಾಸಕರೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಮಹಾರಾಷ್ಟ್ರ 18 ಶಾಸಕರೊಂದಿಗೆ ಮೂರನೇ ಸ್ಥಾನದಲ್ಲಿದೆ. ಶಾಸಕರ ಒಟ್ಟು ಘೋಷಿತ ಆಸ್ತಿ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಕರ್ನಾಟಕದ 223 ಶಾಸಕರ ಒಟ್ಟು ಘೋಷಿತ ಆಸ್ತಿ 14,179 ಕೋಟಿ ರೂ.ನಷ್ಟಿದೆ ಎಂದು ವರದಿ ತಿಳಿಸಿದೆ.
ಟಾಪ್ 10 ಶ್ರೀಮಂತರಲ್ಲಿ ಕರ್ನಾಟಕದ ನಾಲ್ವರು ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್‌ನ ಪ್ರಿಯಾಕೃಷ್ಣ 1156 ಕೋಟಿ ರೂ.ನೊಂದಿಗೆ 4ನೇ ಸ್ಥಾನದಲ್ಲಿ ಮತ್ತು ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಸಚಿವ ಬೈರತಿ ಸುರೇಶ್ 648 ಕೋಟಿ ರೂ.ನೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದ ಇಂಡಸ್ ಕ್ಷೇತ್ರದ ಬಿಜೆಪಿ ಶಾಸಕ ನಿರ್ಮಲ್ ಕುಮಾರ್ ಧಾರಾ ಅವರು ಅತ್ಯಂತ ಬಡ ಶಾಸಕರಾಗಿದ್ದಾರೆ. ಇವರ ಒಟ್ಟು ಘೋಷಿತ ಆಸ್ತಿ ಕೇವಲ 1,700 ರೂ ಆಗಿದೆ ಎಂದು ವರದಿ ಹೇಳಿದೆ.
ಟಾಪ್ 5 ಶ್ರೀಮಂತ ಶಾಸಕರು
ಪರಾಗ್ ಶಾ – 3383 ಕೋಟಿ ರೂಪಾಯಿ
ಡಿ.ಕೆ. ಶಿವಕುಮಾರ್ – 1413 ಕೋಟಿ ರೂಪಾಯಿ
ಕೆ.ಎಚ್. ಪುಟ್ಟಸ್ವಾಮಿ ಗೌಡ – 1267 ಕೋಟಿ ರೂಪಾಯಿ
ಪ್ರಿಯಾಕೃಷ್ಣ – 1156 ಕೋಟಿ ರೂಪಾಯಿ
ಬೈರತಿ ಸುರೇಶ್ – 648 ಕೋಟಿ ರೂಪಾಯಿ
ಅತಿ ಬಡ ಶಾಸಕ
ನಿರ್ಮಲ್ ಕುಮಾರ್ ಧಾರಾ – 1700 ರೂಪಾಯಿ
ಅತಿ ಹೆಚ್ಚು ಸಾಲ
ಇತೀ ಹೆಚ್ಚು ಸಾಲ ಹೊಂದಿರುವ ಟಾಪ್ 10 ಶಾಸಕರ ಪೈಕಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದಾರೆ. ಪ್ರಿಯಾಕೃಷ್ಣ 881 ಕೋಟಿ ರೂ ನೊಂದಿಗೆ ಮೊದಲ ಸ್ಥಾನದಲ್ಲಿ, ಡಿ.ಕೆ.ಶಿವಕುಮಾರ್ 245 ಕೋಟಿ ರೂ ನೊಂದಿಗೆ 3ನೇ ಸ್ಥಾನ ಮತ್ತು ಬೈರತಿ ಸುರೇಶ್ 114 ಕೋಟಿ ರೂ ಸಾಲದೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.
ಹಾಗೆಯೇ ಬಿಜೆಪಿ ಒಟ್ಟು 1653 ಶಾಸಕರನ್ನು ಹೊಂದಿದ್ದು, ಅವರ ಒಟ್ಟಾರೆ ಆಸ್ತಿ 26,270 ಕೋಟಿ ರುಪಾಯಿ. ಇದು ಸಿಕ್ಕಿಂ, ನಾಗಾಲ್ಯಾಂಡ್ (23,086 ಕೋಟಿ) ಮತ್ತು ಮೇಘಾಲಯ ರಾಜ್ಯಗಳ ಒಟ್ಟಾರೆ ವಾರ್ಷಿಕ ಬಜೆಟ್‌ಗಿಂತಲೂ ಹೆಚ್ಚು. ಕಾಂಗ್ರೆಸ್ ಶಾಸಕರು (646 ಶಾಸಕರು) 17,357 ಕೋಟಿ ರೂ, ಟಿಡಿಪಿ ಶಾಸಕರು (134 ಶಾಸಕರು) 9,108 ಕೋಟಿ ರೂ ಒಟ್ಟಾರೆ ಆಸ್ತಿ ಹೊಂದಿದ್ದಾರೆ.
2023 ರಲ್ಲಿ ಅಸೋಸಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ (ಎನ್ಇಡಬ್ಲ್ಯೂ) ಸಂಸ್ಥೆಗಳು ನಡೆಸಿರುವ ಅಧ್ಯಯನ ವರದಿಯಲ್ಲಿ ಡಿ.ಕೆ.ಶಿವಕುಮಾರ್ ಅವರು 1,413 ಕೋಟಿ ರೂ. ಆಸ್ತಿಯೊಂದಿಗೆ ದೇಶದ ಅತ್ಯಂತ ಸಿರಿವಂತ ಶಾಸಕರಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದರು. ಆದರೆ ಈ ಬಾರಿ ಎರಡನೇ ಸ್ಥಾನಕ್ಕೆ ಇಳಿದಿದ್ದು, ಮೊದಲನೇ ಸ್ಥಾನವನ್ನು ಪರಾಗ್ ಶಾಗೆ ಒಲಿದಿದೆ.