IPL 2025: ನಾಳೆಯಿಂದ ಐಪಿಎಲ್ ಉತ್ಸವ ಶುರು; ಈ ಸಲ ಕಪ್ ಯಾರಿಗೆ?
ಈ ಬಾರಿ ಟೂರ್ನಿಗೆ ಒಟ್ಟು 13 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಎಲ್ಲಾ ತಂಡಗಳ ತವರು ಮೈದಾನದ ಜತೆಗೆ ಧರ್ಮಶಾಲಾ(3 ಪಂದ್ಯ), ಗುವಾಹಟಿ(2) ಹಾಗೂ ವಿಶಾಖಪಟ್ಟಣಂ(2)ನಲ್ಲೂ ಕೆಲ ಪಂದ್ಯಗಳು ಆಯೋಜನೆಗೊಳ್ಳಲಿವೆ.;
ವಿಶ್ವಾದ್ಯಂತ ಐಪಿಎಲ್ 18ನೇ ಆವೃತ್ತಿಯ (IPL 2025) ಆರಂಭದ ಸಂಭ್ರಮ ಜೋರಾಗುತ್ತಿದೆ. ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಹೇಗೆ ನಡೆಯಲಿದೆ, ಯಾರು ಮಿಂಚಲಿದ್ದಾರೆ ಎಂಬೆಲ್ಲ ಚರ್ಚೆಗಳು ಶುರುವಾಗಿವೆ. ಹೊಸ ತಂಡ, ಹೊಸ ನಾಯಕರು ಮತ್ತು ಹೊಸ ರೂಲ್ಸ್ಗಳು ಹೇಗೆ ಕಾರ್ಯನಿರ್ವಹಿಸಲಿವೆ ಎಂಬ ಕೌತುಕವೂ ಹೆಚ್ಚಾಗಿದೆ. ಏತನ್ಮಧ್ಯೆ, ಅಭಿಮಾನಿಗಳು ತಮ್ಮಿಷ್ಟದ ಫ್ರಾಂಚೈಸಿ ಹಾಗೂ ತಮ್ಮ ನೆಚ್ಚಿನ ಆಟಗಾರರ ಪ್ರದರ್ಶನ ಕಣ್ತುಂಬಿಕೊಳ್ಳುವುದಕ್ಕೆ ಕಾತರರಾಗಿದ್ದಾರೆ.
ಶನಿವಾರ ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ(KKR vs RCB) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಬಾರಿಯೂ ಹಲವು ಹೊಸತನದೊಂದಿಗೆ ಐಪಿಎಲ್ ಪಂದ್ಯಾವಳಿ ಸಾಗಲಿದೆ.
ಈ ಬಾರಿ 10 ತಂಡಗಳು ಪಾಲ್ಗೊಳ್ಳಲಿದ್ದು, 65 ದಿನಗಳ ಕಾಲ ಒಟ್ಟು 74 ಪಂದ್ಯಗಳು ನಡೆಯಲಿವೆ. ಮೇ 25ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಉದ್ಘಾಟನಾ ಪಂದ್ಯ ಹಾಗೂ ಫೈನಲ್‌ಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಒಟ್ಟು 12 ದಿನ ಡಬಲ್ ಹೆಡರ್(ದಿನಕ್ಕೆ 2 ಪಂದ್ಯ) ಇರಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.
ಟೂರ್ನಿ ಮಾದರಿ ಹೇಗೆ?
ಟೂರ್ನಿಯಲ್ಲಿ 10 ತಂಡಗಳಿದ್ದು, ಎಲ್ಲ ತಂಡಗಳು ತಲಾ 14 ಪಂದ್ಯಗಳನ್ನಾಡಲಿವೆ. ನಿರ್ದಿಷ್ಟ 5 ತಂಡಗಳ ವಿರುದ್ಧ ತಲಾ 2 ಹಾಗೂ ಇತರ 4 ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈರ್-1 ಪ್ರವೇಶಿಸಲಿದ್ದು, 3 ಮತ್ತು 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಆಡಲಿವೆ. ಬಳಿಕ ಕ್ವಾಲಿಫೈರ್-1ರಲ್ಲಿ ಸೋತ ತಂಡ, ಎಲಿಮಿನೇಟರ್ ಗೆದ್ದ ತಂಡ ಕ್ವಾಲಿಫೈರ್-2 ಪ್ರವೇಶಿಲಿವೆ.
13 ಕ್ರೀಡಾಂಗಣ ಆತಿಥ್ಯ
ಈ ಬಾರಿ ಟೂರ್ನಿಗೆ ಒಟ್ಟು 13 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಎಲ್ಲಾ ತಂಡಗಳ ತವರು ಮೈದಾನದ ಜತೆಗೆ ಧರ್ಮಶಾಲಾ(3 ಪಂದ್ಯ), ಗುವಾಹಟಿ(2) ಹಾಗೂ ವಿಶಾಖಪಟ್ಟಣಂ(2)ನಲ್ಲೂ ಕೆಲ ಪಂದ್ಯಗಳು ಆಯೋಜನೆಗೊಳ್ಳಲಿವೆ. ಆರ್‌ಸಿಬಿ ತನ್ನ ತವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 7 ಪಂದ್ಯಗಳನ್ನಾಡಲಿವೆ.
ಧೋನಿ ವಿದಾಯ?
ಬಹುತೇಕ ಎಂ.ಎಸ್ ಧೋನಿಗೆ ಇದು ವಿದಾಯದ ಐಪಿಎಲ್ ಎಂದೇ ಹೇಳಲಾಗುತ್ತಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಅವರು ಚೆನ್ನೈಗೆ ಆಗಮಿಸುವ ವೇಳೆ ರಹಸ್ಯ ಕೋಡ್ ಇರುವಂತಹ ಟಿ-ಶರ್ಟ್‌ಧರಿಸಿ ಬಂದಿದ್ದರು. ಇದರಲ್ಲಿ 'ಒಂದು ಕೊನೆಯ ಅವಕಾಶ' ಎಂದು ಬರೆದಿತ್ತು. ಹೀಗಾಗಿ ಅವರು ಅಭಿಮಾನಿಗಳಿಗೆ ನಿವೃತ್ತಿಯ ಸುಳಿವನ್ನು ಮೊದಲೇ ನೀಡಿದಂತಿದೆ. ಮುಂಬರುವ ಜುಲೈಗೆ 43 ವರ್ಷ ಪೂರೈಸಲಿರುವ ಧೋನಿ, ಮುಂಬರುವ ಆವೃತ್ತಿಯಲ್ಲಿ ಚೆನ್ನೈ ತಂಡದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳಲಿದ್ದಾರೆ.
ಹೊಸ ನಿಯಮಗಳೇನು?
ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿಯ (ಡಿಆರ್ಎಸ್) ಬಳಕೆಯನ್ನು ಈ ಬಾರಿ ಎತ್ತರ ಮತ್ತು ಆಫ್‌ಸ್ಟಂಪ್ ಹೊರಗಿನ ವೈಡ್ ಎಸೆತಗಳಿಗೂ ಬಳಸಬಹುದು.
ರಾತ್ರಿ ಪಂದ್ಯದ ವೇಳೆ ಇಬ್ಬನಿ ಕಾಟ ತಪ್ಪಿಸುವ ಸಲುವಾಗಿ ಪಂದ್ಯಗಳ 2ನೇ ಇನಿಂಗ್ಸ್ ವೇಳೆ 11ನೇ ಓವರ್ ನಂತರ 2ನೇ ಹೊಸ ಚೆಂಡು ಬಳಸುವ ಅವಕಾಶ. 2ನೇ ಹೊಸ ಚೆಂಡಿನ ಬಳಕೆಯ ಬಗ್ಗೆ ಮೈದಾನದ ಅಂಪೈರ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 2ನೇ ಹೊಸಚೆಂಡು ಬಳಕೆ ಕಡ್ಡಾಯವಲ್ಲ. ಇಬ್ಬನಿಯಿಂದ ಚೆಂಡಿನ ಸ್ಥಿತಿ ತೀರಾ ಹದಗೆಟ್ಟಾಗ ಮಾತ್ರ 2ನೇ ಹೊಸಚೆಂಡು ಬಳಕೆಯಾಗಲಿದೆ.
3 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದರೆ ನಾಯಕರಿಗೆ ಒಂದು ಪಂದ್ಯದ ನಿಷೇದವನ್ನು ಈ ಬಾರಿ ಕೈ ಬಿಡಲಾಗಿದೆ. ನಿಷೇದದ ಬದಲಾಗಿ ನಾಯಕರಿಗೆ ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ಈ ಡಿಮೆರಿಟ್ ಅಂಕಗಳು 3 ವರ್ಷಗಳ ಕಾಲ ಇರುತ್ತವೆ. ಸತತವಾಗಿ ಇಂಥ ತಪುಗಳು ಪುನರಾವರ್ತನೆಯಾದಾಗ ಮಾತ್ರ ನಿಷೇಧ ಹೇರಲಾಗುತ್ತದೆ.
ನಿಧಾನಗತಿ ಓವರ್ಗಾಗಿ ಪಂದ್ಯ ಸಂಭಾವನೆಯ ಶೇ. 25ರಿಂದ 75ರಷ್ಟು ದಂಡ ವಿಧಿಸುವುದನ್ನು ಈ ಸಲವೂ ಮುಂದುವರಿಸಲಾಗುತ್ತದೆ. ಡಿಮೆರಿಟ್ ಅಂಕ 4ಕ್ಕೇರಿದಾಗ ಮ್ಯಾಚ್ ರೆಫ್ರಿ ಶೇ. 100 ದಂಡ ವಿಧಿಸಬಹುದಾಗಿರುತ್ತದೆ.
ಹೊಸ ಕ್ಯಾಪ್ಟನ್ಗಳು
ಒಟ್ಟು 7 ತಂಡಗಳು ಐಪಿಎಲ್ ಆವೃತ್ತಿಯನ್ನು ಹೊಸ ನಾಯಕತ್ವದಡಿ ಆರಂಭಿಸಲಿವೆ. ಆದರೆ, ಇವುಗಳಲ್ಲಿ ಕೆಲವು ತಾತ್ಕಾಲಿಕ ವ್ಯವಸ್ಥೆಗಳಾಗಿವೆ. ಇವರಲ್ಲಿ ಅಚ್ಚರಿಯೆಂದರೆ ರಜತ್ ಪಾಟೀದಾರ್ ನೇಮಕ. ಭಾರತ ತಂಡದ ಪರ ಟಿ20 ಪಂದ್ಯಗಳನ್ನು ಆಡದ ಅವರು ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ.
ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಅವರಿಗೆ ಕೆ.ಎಲ್ ರಾಹುಲ್ ಬೆಂಬಲಕ್ಕೆ ಇದ್ದಾರೆ. ಶ್ರೇಯಸ್ ಐಯರ್ 2024ರಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಇದೀಗ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಅಜಿಂಕ್ಯ ರಹಾನೆ ಕೆಕೆಆರ್ ತಂಡದ ನಾಯಕರಾಗಿ ಐಯರ್‌ನ ಸ್ಥಾನ ತುಂಬಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡವು ಮೊದಲ ಮೂರು ಪಂದ್ಯಗಳನ್ನು ರಿಯಾನ್ ಪರಾಗ್ ನಾಯಕತ್ವದಲ್ಲಿ ಆಡಲಿದೆ. ಸಂಜು ಸ್ಯಾಮ್ಸನ್ ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದೇ ಅದಕ್ಕೆ ಕಾರಣ,.
ಮುಂಬೈ ಇಂಡಿಯನ್ಸ್ ತಂಡವನ್ನು ಸೂರ್ಯಕುಮಾರ್ ಯಾದವ್ ಅವರು ನಾಯಕತ್ವ ವಹಿಸಲಿದ್ದಾರೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ ಅಲಭ್ಯತೆ. ಕಳೆದ ಸೀಸನ್ನಲ್ಲಿ ಅವರು ನಿಧಾನಗತಿಯ ಬೌಲಿಂಗ್ ಮಾಡಿದಿ ತಪ್ಪಿಗಾಗಿ ಒಂದು ಪಂದ್ಯದ ನಿಷೇಧ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.
ಪಂತ್ಗೆ ಪುನರುಜ್ಜೀವನ
ರಿಷಭ್ ಪಂತ್ ಅವರು ತಮ್ಮ ವೃತ್ತಿಜೀವನದ ಹೊಸ ಅಧ್ಯಾಯ ಆರಂಭಿಸಲಿದ್ದಾರೆ. ಚೇತರಿಸಿಕೊಂಡಿರುವ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿ (ಲಕ್ನೋ ಸೂಪರ್ ಜೈಂಟ್ಸ್ ₹27 ಕೋಟಿಗೆ ಖರೀದಿ) ಹೊರ ಹೊಮ್ಮಿದ್ದಾರೆ. ಅವರಿಗೆ ತಮ್ಮ ಐಪಿಎಲ್ ಕೌಶಲವನ್ನು ಮತ್ತೊಮ್ಮೆ ಪ್ರದರ್ಶಿಸುವ ಅವಕಾಶ ಸಿಕ್ಕಿದೆ.
ಬುಮ್ರಾ ಫಿಟ್ನೆಸ್ ಕಳವಳ
ಮುಂಬೈ ತಂಡದ ಬೌಲಿಂಗ್ ಆಧಾರ ಸ್ತಂಭ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿರುವ ಬುಮ್ರಾ ಅವರು ಐಪಿಎಲ್ಗೆ ಫಿಟ್ ಆಗಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಬುಮ್ರಾ ಲಭ್ಯತೆ ಭಾರತ ತಂಡದ ಇಂಗ್ಲೆಂಡ್ ಪ್ರವಾಸಕ್ಕೂ ಮುಖ್ಯವಾಗಿದೆ.
ರೋ-ಕೋ ಮತ್ತೆ ಟಿ20ಯಲ್ಲಿ ಮಿಂಚು?
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕಳೆದ ವರ್ಷ ಭಾರತದ ಟಿ20 ವಿಶ್ವಕಪ್ ಗೆದ್ದ ನಂತರ ಚುಟುಕು ಮಾದರಿಯಿಂದ ನಿವೃತ್ತಿ ಹೊಂದಿದ್ದರು. ಈ ಐಪಿಎಲ್ ಅವರ ನಿವೃತ್ತಿಯ ನಂತರದ ಸ್ಪರ್ಧಾತ್ಮಕ ಟಿ20 ಟೂರ್ನಿಯಾಗಿದೆ.
2024ರ ಆವೃತ್ತಿಯಲ್ಲಿ ಅತ್ಯಧಿಕ ರನ್‌ಗಳನ್ನು ಗಳಿಸಿದ ಕೊಹ್ಲಿ (741 ರನ್‌ಗಳು) ಆರ್‌ಸಿಬಿ ತಂಡದ ಕೇಂದ್ರಬಿಂದುವಾಗಿದ್ದಾರೆ. ರೋಹಿತ್ ಅವರು ಕಳೆದ ಕೆಲವು ತಿಂಗಳಿಂದ ಸ್ಥಿರ ಪ್ರದರ್ಶನ ನೀಡದಿದ್ದರೂ, ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಮ್ಯಾಜಿಕ್ ಮಾಡಲಿದ್ದಾರೆ.