Op Sindoor ; ಮುನ್ನೆಚ್ಚರಿಕೆ ಕ್ರಮವಾಗಿ ಧರ್ಮಶಾಲಾ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್

ಮೇ 11ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಪಟೇಲ್ ತಿಳಿಸಿದ್ದಾರೆ.;

Update: 2025-05-08 10:35 GMT

ಪ್ರಾತಿನಿಧಿಕ ಚಿತ್ರ.

ಪಹಲ್ಗಾಮ್ ದಾಳಿಗೆ ಭಾರತದ ಪ್ರತೀಕಾರದ ಕ್ಷಿಪಣಿ ಹಾರಿಸಿ ಉಗ್ರರ ನೆಲೆಗಳನ್ನು ನಾಶ ಮಾಡಿದ ಬಳಿಕ ಉಭಯ ದೇಶಗಳ ನಡುವೆ ತ್ವೇಷಮಯ ಸ್ಥಿತಿ ಸೃಷ್ಟಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಿಮಾಚಲ ಪ್ರದೇಶದ ಧರ್ಮಶಾಲಾ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಕೆಲವು ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. ಇದರ ಪರಿಣಾಮ ಐಪಿಎಲ್ ಮೇಲೂ ಪರಿಣಾಮ ಬೀರಿದೆ.

ಮೇ 11ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅನಿಲ್ ಪಟೇಲ್ ತಿಳಿಸಿದ್ದಾರೆ. ಈ ಪಂದ್ಯವು ನಿಗದಿತ ಸಮಯದಂತೆ ಸಂಜೆ 3.30ಕ್ಕೆ ನಡೆಯಲಿದೆ.

ಇಂದು (ಮೇ 8) ಧರ್ಮಶಾಲಾದಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ನಿಗದಿಯಂತೆ ನಡೆಯಲಿದೆ. ಈಗಾಗಲೇ ಎರಡೂ ತಂಡಗಳು ಧರ್ಮಶಾಲಾಕ್ಕೆ ಆಗಮಿಸಿವೆ.

ಧರ್ಮಶಾಲಾ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಮೇ 10 ರವರೆಗೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಮೇ 11 ರಂದು ಪಂದ್ಯವಾಡಬೇಕಿದ್ದ ಮುಂಬೈ ಇಂಡಿಯನ್ಸ್ ತಂಡದ ಪ್ರಯಾಣಕ್ಕೆ ಅಡಚಣೆಯುಂಟಾಗಿತ್ತು. ಹೀಗಾಗಿ ಪಂದ್ಯವನ್ನು ಅಹಮದಾಬಾದ್​ಗೆ ಸ್ಥಳಾಂತರ ಮಾಡಲಾಗಿದೆ.

ಅದೇ ದಿನ (ಮೇ 11) ರಾತ್ರಿ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ನಿಗದಿಯಂತೆ ನಡೆಯಲಿದೆ. ಆದರೆ, ಧರ್ಮಶಾಲಾ ಮತ್ತು ಚಂಡೀಗಢ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿರುವುದರಿಂದ ಮುಂದಿನ ಪಂದ್ಯಗಳ ಬಗ್ಗೆಯೂ ಅನಿಶ್ಚಿತತೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣವು ಪಂಜಾಬ್ ಕಿಂಗ್ಸ್ ತಂಡದ ಎರಡನೇ ತವರು ಮೈದಾನವಾಗಿದೆ. ಆದರೆ, ಭದ್ರತಾ ಕಾರಣಗಳಿಂದಾಗಿ ಇಲ್ಲಿ ನಡೆಯಬೇಕಿದ್ದ ಪ್ರಮುಖ ಪಂದ್ಯವನ್ನು ಸ್ಥಳಾಂತರಿಸಬೇಕಾಗಿದೆ. 

Tags:    

Similar News