IPL: ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ರೂಪಾಯಿ ದಂಡ
ಸಿಎಸ್‌ಕೆ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಐಪಿಎಲ್ ನಿಯಮ 2.22 ರಡಿ ಓವರ್ ರೇಟ್ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದ್ದರಿಂದ ತಂಡದ ನಾಯಕ ಶ್ರೇಯಸ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸದೆ.ದೆ̤;
ಪಂಜಾಬ್‌ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್(ಎಕ್ಸ್ ಖಾತೆಯಿಂದ)
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ ನಿಧಾನಗತಿಯ ಬೌಲಿಂಗ್‌ಗಾಗಿ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಬುಧವಾರ(ಏಪ್ರಿಲ್ 30) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಐಪಿಎಲ್ ನಿಯಮ 2.22 ರಡಿ ಓವರ್ ರೇಟ್ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದ್ದರಿಂದ ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ 12 ಲಕ್ಷ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಪಿನ್ನರ್ ಯಜುವೇಂದ್ರ ಚಹಲ್ ಸ್ಪಿನ್ ದಾಳಿಗೆ ನಲುಗಿದ ಚೆನ್ನೈ ಸೂಪರ್‌ಕಿಂಗ್ಸ್ ತಂಡ 19.2 ಓವರ್‌ಗಳಿಗೆ 190 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಆರಂಭಿಕ ಆಟಗಾರ ಫ್ರಭಸಿಮ್ರಾನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್‌ರ ಆಕರ್ಷಕ ಅರ್ಧಶತಕ ನೆರವಿನಿಂದ ಇನ್ನು ಎರಡು ಎಸೆತಗಳು ಬಾಕಿ ಇರುವಂತೆ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ಲೇ ಆಫ್ ರೇಸ್‌ನಿಂದ ಹೊರದಬ್ಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು.
ಹಲವು ನಾಯಕರಿಗೆ ದಂಡ
ಪ್ರಸಕ್ತ ವರ್ಷದಲ್ಲಿ ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಹಲವು ತಂಡಗಳ ನಾಯಕರಿಗೂ ದಂಡ ವಿಧಿಸಲಾಗಿದೆ. ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ರಿಯಾನ್ ಪರಾಗ್‌ಗೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ ಪ್ರಥಮ ಬಾರಿ ನಿಧಾನಗತಿ ಬೌಲಿಂಗ್‌ಗಾಗಿ 12 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ನಂತರ ನಾಯಕನಾಗಿ ವಾಪಸಾದ ಸಂಜು ಸ್ಯಾಮ್ಸನ್‌ಗೆ ಗುಜರಾತ್ ವಿರುದ್ದ ಪಂದ್ಯದಲ್ಲಿ ಎರಡನೇ ಬಾರಿ ನಿಧಾನಗತಿಯ ಬೌಲಿಂಗ್‌ಗಾಗಿ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.
ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಥಮ ಬಾರಿ ನಿಧಾನಗತಿಯ ಬೌಲಿಂಗ್‌ನಿಂದಾಗಿ 12 ಲಕ್ಷ ರೂಪಾಯಿ ದಂಡ ಕಟ್ಟಿದ್ದರು. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಲಕ್ನೋ ಸೂಪರ್ ಜೆಂಟ್ಸ್ ತಂಡದ ನಾಯಕ ರಿಷಭ್ ಪಂತ್ ಮಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 12 ಲಕ್ಷ ರೂಪಾಯಿ ದಂಡ ಕಟ್ಟಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ನಿಧಾನಗತಿಯ ಬೌಲಿಂಗ್‌ನಿಂದಾಗಿ ಮುಂಬೈ ವಿರುದ್ಧದ ಪಂದ್ಯದಲ್ಲಿ ದಂಡ ಕಟ್ಟಿದ್ದರು.