ಟಾಕ್ಸಿಕ್ | ಯಶ್‌ಗೆ ಜೋಡಿಯಾದ ಬಾಲಿವುಡ್ ಬ್ಯೂಟಿ ಕಿಯಾರಾ
ಬಾಲಿವುಡ್ ನಟಿ ಕಿಯಾರ ಅಡ್ವಾಣಿ ಇದೀಗ ಯಶ್‌ಗೆ ಜೋಡಿಯಾಗಲಿದ್ದಾರೆ ಎನ್ನಲಾಗಿದೆ.;
ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ 'ಟಾಕ್ಸಿಕ್' ಚಿತ್ರ ತಂಡ ಈ ತಿಂಗಳು ಶೂಟಿಂಗ್ ಪ್ರಾರಂಭಿಸಲು ಸಜ್ಜಾಗಿದೆ. ಚಿತ್ರದ ತಾರಾಗಣದ ಬಗ್ಗೆ ಈಗಾಗಲೇ ಹಲವು ಊಹಾಪೋಹಗಳು ಕೇಳಿಬರುತ್ತಿದ್ದು, ಬಾಲಿವುಡ್ ನಟಿ ಕಿಯಾರ ಅಡ್ವಾಣಿ ಇದೀಗ ಯಶ್‌ಗೆ ಜೋಡಿಯಾಗಲಿದ್ದಾರೆ ಎನ್ನಲಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ, ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವು ಈಗಾಗಲೇ ಪ್ರೇಕ್ಷಕರಲ್ಲಿ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಮಲಯಾಳಂ ನಟ ಶೈನ್ ಟಾಮ್ ಚಾಕೊ ಮತ್ತು ಹಿಂದಿ ನಟ ನವಾಜುದ್ದೀನ್ ಸಿದ್ದಿಕ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಯಶ್ ಜೊತೆಗೆ ಟಾಕ್ಸಿಕ್ ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಚಿತ್ರವು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿರುವ ಕಿಯಾರಾಗೆ ಇದು ಚೊಚ್ಚಲ ಕನ್ನಡ ಚಿತ್ರವಾಗಲಿದೆ. ಹಿಂದಿ ಚಿತ್ರರಂಗದ ಬಹುತೇಕ ನಟ-ನಟಿಯರು ಈಗಾಗಲೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದು, ಕನ್ನಡ ಸಿನಿಮಾಗಳ ಜನಪ್ರಿಯತೆಯಿಂದಾಗಿ ಸ್ಯಾಂಡಲ್‌ವುಡ್ ಚಿತ್ರಗಳಲ್ಲಿ ನಟಿಸಲೂ ಕೂಡ ನಟ-ನಟಿಯರು ಮುಂದಾಗುತ್ತಿದ್ದಾರೆ.
ಈ ಹಿಂದೆ ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳಿತ್ತು. ಆದರೆ ಡೇಟ್ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಈ ಸಿನಿಮಾವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಕ್ರೂ ಚಿತ್ರದಲ್ಲಿ ನಟಿಸಿರುವ ಕರೀನಾ ಸದ್ಯ ಸಿಂಗಂ ಅಗೇನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ಇತರ ಪಾತ್ರವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಅಧಿಕೃತ ಘೋಷಣೆ ಮಾಡಲು ಯೋಜಿಸಿದೆ. ಟಾಕ್ಸಿಕ್ ಚಿತ್ರಕ್ಕೆ ಜೆರೆಮಿ ಸ್ಟಾಕ್ ಸಂಗೀತ ಮತ್ತು ರಾಜೀವ್ ರವಿ ಛಾಯಾಗ್ರಹಣವನ್ನು ನಿರ್ವಹಿಸಲಿದ್ದಾರೆ.