ಸ್ಟೈಲಿಷ್ ಆಗಿ ಮೂಡಿಬಂತು ‘ರಕ್ಕಿ’ ಸಿನಿಮಾದ ಫಸ್ಟ್ ಡ್ರಾಪ್!

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಶುಭ ಹಾರೈಕೆಯೊಂದಿಗೆ ಬಿಡುಗಡೆಯಾಗಿರುವ ಈ ಚಿತ್ರದ ‘ಫಸ್ಟ್ ಡ್ರಾಪ್’ ಮತ್ತು ನಾಯಕ ರಕ್ಕಿ ಸುರೇಶ್ ಅವರ ‘ರಗಡೋ ರಕ್ಕಿ’ ಎಂಬ ಸಿಗ್ನೇಚರ್ ಸ್ಟೆಪ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Update: 2025-12-20 06:28 GMT
Click the Play button to listen to article

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ “ರಕ್ಕಿ” ಚಿತ್ರದ ಫಸ್ಟ್‌ಲುಕ್‌ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಹೈ-ಎನರ್ಜಿ ‘ರಗಡೋ ರಕ್ಕಿ’ ಸ್ಟೆಪ್: ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ರಗಡೋ ರಕ್ಕಿ ಎಂಬ ಹೈ-ಎನರ್ಜಿ ಹುಕ್ ಸ್ಟೆಪ್ ಅನ್ನು ಚಿತ್ರತಂಡ ಇತ್ತೀಚೆಗೆ ಪರಿಚಯಿಸಿದೆ. ನೃತ್ಯ ನಿರ್ದೇಶಕ ಕಂಬಿ ರಾಜು ಅವರ ಕೊರಿಯೋಗ್ರಫಿಯಲ್ಲಿ ಮೂಡಿಬಂದಿರುವ ಈ ವಿಶಿಷ್ಟ ಸಿಗ್ನೇಚರ್ ಸ್ಟೆಪ್ ಈಗಾಗಲೆ ಯುವಜನತೆಯ ಗಮನ ಸೆಳೆದಿದೆ. ಹೊಸ ನಾಯಕ ನಟ ರಕ್ಕಿ ಸುರೇಶ್ ಈ ವಿಶಿಷ್ಟ ಸ್ಟೆಪ್ ಮೂಲಕ ಮಾಸ್ ಎಂಟ್ರಿ ನೀಡಿದ್ದು, ಬೆಳ್ಳಿತೆರೆಗೆ ಭರವಸೆಯ ನಾಯಕನ ಆಗಮನದ ಮುನ್ಸೂಚನೆ ನೀಡಿದ್ದಾರೆ.

ನಿರ್ದೇಶಕ ವೆಂಕಟ್ ಭಾರದ್ವಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಟಾಕಿ ಭಾಗದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸದ್ಯ ಚಿತ್ರವು ಡಬ್ಬಿಂಗ್ ಹಂತದಲ್ಲಿದ್ದು, ತಾಂತ್ರಿಕ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಶೀಘ್ರದಲ್ಲೇ ಚಿತ್ರತಂಡ ಬೆಂಗಳೂರಿನ ಹೊರವಲಯದಲ್ಲಿ ಎರಡು ಪ್ರಮುಖ ಹಾಡುಗಳ ಚಿತ್ರೀಕರಣವನ್ನು ನಡೆಸಲಿದ್ದು, ಇವು ಚಿತ್ರದ ಹೈಲೈಟ್ ಆಗಲಿವೆ ಎಂದು ತಂಡ ತಿಳಿಸಿದೆ.

SNR ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುರೇಶ್ ಸಾಲಿಗ್ರಾಮ ನಿರ್ಮಿಸಿರುವ ಈ ಚಿತ್ರವು ಒಂದು ಕ್ರೈಂ ಆಧಾರಿತ ಎಂಟರ್‌ಟೈನ್‌ಮೆಂಟ್ ಥ್ರಿಲ್ಲರ್ ಆಗಿದೆ. ರಕ್ಕಿ ಸುರೇಶ್ ಅವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ಮತ್ತು ಪಲ್ಲವಿ ಮಂಜುನಾಥ್ ನಟಿಸಿದ್ದಾರೆ. ಹಿರಿಯ ನಟರಾದ ಬಿ. ಸುರೇಶ್, ಸಂಪತ್ ಮೈತ್ರೇಯ, ಬಲರಾಜ್ ವಾಡಿ ಮತ್ತು ರಮೇಶ್ ಪಂಡಿತ್ ಅವರಂತಹ ಅನುಭವಿ ಕಲಾವಿದರ ತಾರಾಗಣ ಚಿತ್ರಕ್ಕಿದೆ.

ಲೋಕಿ ತವಸ್ಯ ಅವರ ಸಂಗೀತ ಮತ್ತು ಐಸಾಕ್ ಪ್ರಭಾಕರ್ ಅವರ ಛಾಯಾಗ್ರಹಣ ಚಿತ್ರದ ಮೆರುಗು ಹೆಚ್ಚಿಸಿವೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಮತ್ತು ಬಿಡುಗಡೆ ದಿನಾಂಕವನ್ನು ಘೋಷಿಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.

Tags:    

Similar News