ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್' ಆರ್ಭಟ: 15 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ
ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧಾರ್ ನಿರ್ದೇಶನದ ಸ್ಪೈ ಆಕ್ಷನ್ ಥ್ರಿಲ್ಲರ್ 'ಧುರಂಧರ್', ಚಿತ್ರಮಂದಿರಗಳಲ್ಲಿ ದಾಖಲೆಗಳ ಸುನಾಮಿ ಎಬ್ಬಿಸಿದೆ. ಈ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಳ ಗಡಿಯನ್ನು ಯಶಸ್ವಿಯಾಗಿ ದಾಟಿದೆ.
15 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ
ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರವು ಚಿತ್ರಮಂದಿರಗಳಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಮೂರನೇ ವಾರಕ್ಕೆ ಕಾಲಿಟ್ಟರೂ ಚಿತ್ರದ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಶುಕ್ರವಾರ ಅಂದರೆ ಚಿತ್ರದ 15ನೇ ದಿನದಂದು 'ಧುರಂಧರ್' ಭರ್ಜರಿ ಕಲೆಕ್ಷನ್ ಮಾಡುವ ಮೂಲಕ 500 ಕೋಟಿ ರೂ.ಗಳ ಮೈಲಿಗಲ್ಲು ದಾಟಿದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೂರನೇ ಶುಕ್ರವಾರ ಇಷ್ಟು ದೊಡ್ಡ ಮೊತ್ತದ ಹಣ ಗಳಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ. ಕಳೆದ ಗುರುವಾರ 25.30 ಕೋಟಿ ರೂ.ಗಳಿಸುವ ಮೂಲಕ ತನ್ನ ಎರಡನೇ ವಾರವನ್ನು ಒಟ್ಟು 479.50 ಕೋಟಿ ರೂ.ಗಳೊಂದಿಗೆ ಮುಕ್ತಾಯಗೊಳಿಸಿದ್ದ ಈ ಚಿತ್ರ, ಮೂರನೇ ಶುಕ್ರವಾರವೂ ಅದೇ ವೇಗದಲ್ಲಿ ಮುಂದುವರಿದಿದೆ.
ಆರಂಭಿಕ ವರದಿಗಳ ಪ್ರಕಾರ, ಸಿನಿಮಾ 15ನೇ ದಿನದಂದು ಸುಮಾರು 22 ರಿಂದ 23 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಈ ಹಿಂದೆ ವಿಕ್ಕಿ ಕೌಶಲ್ ಅವರ 'ಛಾವಾ' ಸಿನಿಮಾ ಮೂರನೇ ಶುಕ್ರವಾರ 13.30 ಕೋಟಿ ಗಳಿಸಿ ದಾಖಲೆ ನಿರ್ಮಿಸಿತ್ತು, ಆದರೆ ಈಗ 'ಧುರಂಧರ್' ಆ ದಾಖಲೆಯನ್ನು ಮುರಿದಿದೆ.
ಅತ್ಯಂತ ವೇಗವಾಗಿ 500 ಕೋಟಿ ಕ್ಲಬ್ ಸೇರಿದ ಹಿಂದಿ ಚಿತ್ರಗಳ ಪಟ್ಟಿಯಲ್ಲಿ 'ಧುರಂಧರ್' ಮೂರನೇ ಸ್ಥಾನದಲ್ಲಿದೆ. ಕೇವಲ 10 ದಿನಗಳಲ್ಲಿ ಈ ಸಾಧನೆ ಮಾಡಿದ ಅಲ್ಲು ಅರ್ಜುನ್ ಅವರ 'ಪುಷ್ಪ -2' ಮೊದಲ ಸ್ಥಾನದಲ್ಲಿದ್ದರೆ, ಶಾರುಖ್ ಖಾನ್ ಅವರ 'ಜವಾನ್' 13 ದಿನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ರಣಬೀರ್ ಕಪೂರ್ ಅವರ 'ಅನಿಮಲ್' (16 ದಿನಗಳು), 'ಸ್ತ್ರೀ 2', 'ಪಠಾಣ್' ಮತ್ತು 'ಬಾಹುಬಲಿ -2' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿರುವ 'ಧುರಂಧರ್' ಕೇವಲ 15 ದಿನಗಳಲ್ಲಿ ಈ ಮ್ಯಾಜಿಕ್ ನಂಬರ್ ತಲುಪಿದೆ. ಸದ್ಯ ವಾರಾಂತ್ಯದ ರಜೆ ಇರುವುದರಿಂದ ಶನಿವಾರ ಮತ್ತು ಭಾನುವಾರ ಚಿತ್ರದ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಚಿತ್ರವು ಕೇವಲ 2025ರ ದೊಡ್ಡ ಹಿಟ್ ಮಾತ್ರವಲ್ಲದೆ, ಬಾಲಿವುಡ್‌ನ ಸಾರ್ವಕಾಲಿಕ ಗರಿಷ್ಠ ಗಳಿಕೆಯ ಚಿತ್ರಗಳ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಈ ವಾರಾಂತ್ಯದಲ್ಲಿ ಇನ್ನೂ ಹಲವು ಹಳೆಯ ದಾಖಲೆಗಳು ಉಡೀಸ್ ಆಗಲಿದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ.