ಗುಟ್ಟಾಗಿ ನಡೆದೇ ಹೋಯ್ತಾ ರಶ್ಮಿಕಾ-ದೇವರಕೊಂಡ ಮದ್ವೆ? ಭಾರೀ ವೈರಲಾಗ್ತಿದೆ ಈ ಫೋಟೋ

ಇತ್ತೀಚೆಗೆ ಈ ಜೋಡಿಯು ಮದುವೆಯ ಉಡುಪಿನಲ್ಲಿರುವ ಸುಂದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ, ಈ ಚಿತ್ರಗಳು ಅಧಿಕೃತವಲ್ಲ. ಇವುಗಳನ್ನು AI (ಕೃತಕ ಬುದ್ಧಿಮತ್ತೆ) ಬಳಸಿ ಸೃಷ್ಟಿಸಲಾಗಿದೆ.

Update: 2025-12-20 06:38 GMT
ವೈಲರಾಗುತ್ತಿರುವ ಎಐ ರಚಿತ ಚಿತ್ರ
Click the Play button to listen to article

ದಕ್ಷಿಣ ಭಾರತದ ಖ್ಯಾತ ನಟರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಕುರಿತಾದ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಈ ಜೋಡಿಯು 2026ರ ಫೆಬ್ರವರಿಯಲ್ಲಿ ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಕ್ಟೋಬರ್ 2025ರಲ್ಲಿ ಹೈದರಾಬಾದ್‌ನಲ್ಲಿ ಈ ತಾರಾ ಜೋಡಿಯು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವಿಜಯ್ ದೇವರಕೊಂಡ ಅವರ ತಂಡದ ಮೂಲಗಳು ತಿಳಿಸಿವೆ. 

ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮತ್ತು ವಿಜಯ್ ಮದುವೆಯ ಉಡುಪಿನಲ್ಲಿರುವ ಸುಂದರವಾದ ಚಿತ್ರಗಳು ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿವೆ. ಆದರೆ, ಈ ಚಿತ್ರಗಳು ಅಧಿಕೃತವಲ್ಲ ಮತ್ತು ಇವು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳಾಗಿವೆ ಎಂದು ದೃಢಪಟ್ಟಿದೆ. ಕೇವಲ ರಶ್ಮಿಕಾ ಮತ್ತು ವಿಜಯ್ ಮಾತ್ರವಲ್ಲದೆ, ಮಹೇಶ್ ಬಾಬು, ಪ್ರಭಾಸ್ ಅವರಂತಹ ಇತರ ಸ್ಟಾರ್ ನಟರು ಮದುವೆಯಲ್ಲಿ ಭಾಗವಹಿಸಿರುವಂತೆ ಬಿಂಬಿಸುವ ಚಿತ್ರಗಳು ಕೂಡ ಎಐ ರಚಿತ ಚಿತ್ರವಾಗಿದ್ದು, ಇವು ಸತ್ಯಕ್ಕೆ ದೂರವಾಗಿವೆ.

 ತಮ್ಮ ವಿರುದ್ಧ ಇಂತಹ ಎಐ ತಂತ್ರಜ್ಞಾನದ ದುರ್ಬಳಕೆಯ ಬಗ್ಗೆ ರಶ್ಮಿಕಾ ಮಂದಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸತ್ಯವನ್ನು ಸೃಷ್ಟಿಸಬಹುದಾದ ಕಾಲದಲ್ಲಿ ವಿವೇಚನೆಯೇ ನಮ್ಮ ದೊಡ್ಡ ರಕ್ಷಣೆ" ಎಂದು ಹೇಳಿರುವ ಅವರು, ಇಂಟರ್ನೆಟ್‌ನಲ್ಲಿ ಕಾಣುವ ಪ್ರತಿಯೊಂದೂ ವಾಸ್ತವವಲ್ಲ ಎಂದು ಎಚ್ಚರಿಸಿದ್ದಾರೆ. ಮಹಿಳೆಯರನ್ನು ಗುರಿಯಾಗಿಸಿಕೊಂಡು ಇಂತಹ ಅಶ್ಲೀಲ ಅಥವಾ ಸುಳ್ಳು ಮಾಹಿತಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಮ್ಮ ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ, "ನಾನು ಮದುವೆಯ ಸುದ್ದಿಯನ್ನು ದೃಢಪಡಿಸುವುದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ. ಸಮಯ ಬಂದಾಗ ನಾನೇ ಇದರ ಬಗ್ಗೆ ಮಾತನಾಡುತ್ತೇನೆ," ಎಂದು ಗೌಪ್ಯತೆಯನ್ನು ಕಾಯ್ದುಕೊಂಡಿದ್ದಾರೆ.

ಶ್ರೀಲಂಕಾ ಪ್ರವಾಸ: ಬ್ಯಾಚುಲರ್ ಪಾರ್ಟಿಯೇ?

ಇತ್ತೀಚೆಗಷ್ಟೇ 29ನೇ ವಸಂತಕ್ಕೆ ಕಾಲಿಟ್ಟ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ತಮ್ಮ ಆಪ್ತ ಗೆಳತಿಯರೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಫೋಟೋಗಳನ್ನು ರಶ್ಮಿಕಾ ಹಂಚಿಕೊಳ್ಳುತ್ತಿದ್ದಂತೆಯೇ,ಇದು ಮದುವೆಗೆ ಮುನ್ನ ನಡೆಯುತ್ತಿರುವ ಬ್ಯಾಚುಲರ್ ಪಾರ್ಟಿ ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಆದರೆ ರಶ್ಮಿಕಾ ಇದನ್ನು ಕೇವಲ ಗೆಳತಿಯರ ಜೊತೆಗಿನ ಪುಟ್ಟ ವಿರಾಮ ಎಂದು ಕರೆದಿದ್ದಾರೆ.

 ನಿಶ್ಚಿತಾರ್ಥ, ಮದುವೆ ವದಂತಿ

ವರದಿಗಳ ಪ್ರಕಾರ, ಈ ಜೋಡಿಯ ನಿಶ್ಚಿತಾರ್ಥವು ಕಳೆದ ಅಕ್ಟೋಬರ್ ತಿಂಗಳಲ್ಲಿ ಹೈದರಾಬಾದ್‌ನ ವಿಜಯ್ ಅವರ ನಿವಾಸದಲ್ಲಿ ಅತ್ಯಂತ ಖಾಸಗಿಯಾಗಿ ನಡೆದಿದೆ ಎಂದು ಹೇಳಲಾಗುತ್ತಿದೆ. 36 ವರ್ಷದ ವಿಜಯ್ ಮತ್ತು 29 ವರ್ಷದ ರಶ್ಮಿಕಾ ಅವರ ವಿವಾಹವು 2026ರ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.  ಮದುವೆ ನಿಗದಿಯಾಗಿದೆ ಎಂದು ವರದಿಯಾಗಿದ್ದರೂ, ಎರಡೂ ಕುಟುಂಬದ ಸದಸ್ಯರಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ಜೋಡಿಯ ಅಧಿಕೃತ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

'ಗೀತಾ ಗೋವಿಂದಂ' ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಈ ಜೋಡಿ, ಅಂದಿನಿಂದಲೂ ತಮ್ಮ ಕೆಮಿಸ್ಟ್ರಿಯಿಂದಾಗಿ ಸದಾ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಇತ್ತೀಚಿನ ಸಂದರ್ಶನಗಳಲ್ಲಿ ಈ ಬಗ್ಗೆ ನೇರ ಉತ್ತರ ನೀಡದಿದ್ದರೂ, ಸನ್ನೆಗಳ ಮೂಲಕ ವಿಷಯವನ್ನು ಗುಟ್ಟಾಗಿರಿಸಿದ್ದಾರೆ.

Tags:    

Similar News