ಸಸ್ಪೆನ್ಸ್ ಥ್ರಿಲ್ಲರ್ 'ದೃಶ್ಯಂ 3' ಸಿನಿಮಾ ರಿಲೀಸ್ ಡೇಟ್ ಅನೌನ್ಸ್
ಅಜಯ್ ದೇವಗನ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರವು ಅಕ್ಟೋಬರ್ 2, 2026 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಅಭಿಷೇಕ್ ಪಾಠಕ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
'ದೃಶ್ಯಂ 3' ಬಿಡುಗಡೆ ದಿನಾಂಕ ಘೋಷಣೆ ಆಗಿದೆ.
ಬಾಲಿವುಡ್‌ನ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ದೃಶ್ಯಂ 3' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಅಜಯ್ ದೇವಗನ್ ಅಭಿನಯದ ಈ ಚಿತ್ರವು 2026ರ ಅಕ್ಟೋಬರ್ 2ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಸಿನಿಮಾದ ಕಥೆಯ ದೃಷ್ಟಿಯಿಂದ ಅಕ್ಟೋಬರ್ 2ರ ದಿನಾಂಕಕ್ಕೆ ವಿಶೇಷ ಮಹತ್ವವಿರುವ ಕಾರಣ, ಚಿತ್ರತಂಡವು ಗಾಂಧಿ ಜಯಂತಿಯಂದೇ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ನಿರ್ಧರಿಸಿದೆ. ಸೋಮವಾರ ಬಿಡುಗಡೆಯಾದ ಹೊಸ ಪ್ರೋಮೋದಲ್ಲಿ ಈ ಘೋಷಣೆ ಮಾಡಲಾಗಿದ್ದು, 'ದೃಶ್ಯಂ 2' ಬಿಡುಗಡೆಯಾದ ನಾಲ್ಕು ವರ್ಷಗಳ ನಂತರ ಮೂರನೇ ಭಾಗವು ತೆರೆಗೆ ಬರುತ್ತಿದೆ.
ಈ ಚಿತ್ರದಲ್ಲಿ ಅಜಯ್ ದೇವಗನ್ ಅವರು ವಿಜಯ್ ಸಾಳಗಾಂವಕರ್ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆಗೆ ಟಬು, ಶ್ರಿಯಾ ಶರಣ್, ರಜತ್ ಕಪೂರ್, ಇಶಿತಾ ದತ್ತಾ ಮತ್ತು ಮೃಣಾಲ್ ಜಾಧವ್ ತಮ್ಮ ಹಳೆಯ ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಎರಡನೇ ಭಾಗದಲ್ಲಿ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದ ಅಕ್ಷಯ್ ಖನ್ನಾ ಅವರು ಈ ಭಾಗದಲ್ಲೂ ಇರಲಿದ್ದಾರೆಯೇ ಎಂಬ ಬಗ್ಗೆ ಚಿತ್ರತಂಡ ಇನ್ನೂ ಸುಳಿವು ನೀಡಿಲ್ಲ. ಚಿತ್ರದ ಟ್ರೈಲರ್ 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದ ಮೊದಲಾರ್ಧದಲ್ಲಿ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಮೂಲತಃ ಮಲಯಾಳಂನ 'ದೃಶ್ಯಂ' ಚಿತ್ರದ ರಿಮೇಕ್ ಆಗಿರುವ ಈ ಸರಣಿ ಹಿಂದಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿದೆ. 2015ರಲ್ಲಿ ತೆರೆಕಂಡ 'ದೃಶ್ಯಂ' ಮೊದಲ ಭಾಗ 197 ಕೋಟಿ ರೂಪಾಯಿ ಗಳಿಸಿದ್ದರೆ, 2022ರಲ್ಲಿ ಬಂದ ಎರಡನೇ ಭಾಗ 345 ಕೋಟಿ ರೂಪಾಯಿ ಲೂಟಿ ಮಾಡಿತ್ತು. ಅಭಿಷೇಕ್ ಪಾಠಕ್ ನಿರ್ದೇಶನದ ಈ ಚಿತ್ರಕ್ಕೆ ಅಮೀಲ್ ಕೀಯನ್ ಖಾನ್ ಮತ್ತು ಪರ್ವೇಜ್ ಶೇಖ್ ಚಿತ್ರಕಥೆ ಬರೆದಿದ್ದಾರೆ. ವಿಶೇಷವೆಂದರೆ, ಇದೇ ಕಥೆಯ ಮಲಯಾಳಂ ಆವೃತ್ತಿಯು 2026ರಲ್ಲಿ ತೆರೆಕಾಣುವ ಸಾಧ್ಯತೆಗಳಿದ್ದು, ಅಲ್ಲಿ ಮಮ್ಮುಟ್ಟಿ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.