ಸಂಜು ವೆಡ್ಸ್ ಗೀತಾ- 2 ಸಿನಿಮಾದ ಹಾಡಿಗೆ ಕುಣಿದ ತುಪ್ಪದ ಬೆಡಗಿ ರಾಗಿಣಿ
ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ಸಂದರ್ಭದ ದೃಶ್ಯದ ಪಾರ್ಟಿ ಸಾಂಗ್‌ನಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಿದ್ದಾರೆ.;
ಲವ್ ಸ್ಟೋರಿಗಳತ್ತ ಒಲವು ಹೊಂದಿರುವ ನಿರ್ದೇಶಕ ನಾಗಶೇಖರ್, ಈಗ ಮತ್ತೊಂದು ರೊಮ್ಯಾಂಟಿಕ್ ಸಿನಿಮಾವನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ. ದಶಕದ ಹಿಂದೆ ತಮ್ಮದೇ ನಿರ್ದೇಶನದಲ್ಲಿ ತೆರೆಕಂಡು ಭಾರೀ ಹಿಟ್ ಆಗಿದ್ದ ʼಸಂಜು ವೆಡ್ಸ್ ಗೀತಾʼ ಸಿನಿಮಾದ ಸೀಕ್ವೆಲ್ ಕಥೆಯನ್ನು ʼಸಂಜು ವೆಡ್ಸ್ ಗೀತಾ- 2ʼ ಹೆಸರಿನಲ್ಲಿ ಹೇಳಲು ಹೊರಟಿದ್ದಾರೆ.
ಶ್ರೀನಗರ ಕಿಟ್ಟಿ ಹಾಗೂ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ʼಸಂಜು ವೆಡ್ಸ್ ಗೀತಾ 2ʼ ಸಿನಿಮಾದ ಹಾಡೊಂದರ ಶೂಟಿಂಗ್ ಕುರಿತು ಮಾಹಿತಿ ಹೊರಬಿದ್ದಿದೆ. ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ದೃಶ್ಯದಲ್ಲಿ ಬರುವ ಪಾರ್ಟಿ ಸಾಂಗ್ ಅದಾಗಿದ್ದು, ವಿಶೇಷವಾಗಿ ಈ ಹಾಡಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇವರಿಬ್ಬರ ಜೊತೆ ಹೆಜ್ಜೆ ಹಾಕಿದ್ದಾರೆ.
ಕುಂಬಳಗೋಡು ಬಿಜಿಎಸ್ ಪ್ರೌಢಶಾಲೆಯ ಗಾಜಿನ ಮನೆಯಲ್ಲಿ ಚಿತ್ರೀಕರಣ ನಡೆದಿದ್ದು, ಈ ಹಾಡಿನಲ್ಲಿ 200 ರಿಂದ 250 ನೃತ್ಯಗಾರರು ಭಾಗವಹಿಸಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ ಈ ಹಾಡಿಗೆ ದನಿಯಾಗಿದ್ದು ಬಜರಂಗಿ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಬಿರುಸಿನ ಡಬ್ಬಿಂಗ್ ಕೆಲಸ
ಈಗಾಗಲೇ ಚಿತ್ರದ ಎಡಿಟಿಂಗ್ ಮುಗಿದು, ಡಬ್ಬಿಂಗ್ ಕೂಡ ಕೊನೇ ಹಂತದಲ್ಲಿದೆ. ಚಿತ್ರಕ್ಕೆ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ ಮೂರನೇ ಹಂತದ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ 50 ಲಕ್ಷ ರೂ.ಗಳ ವೆಚ್ಚದಲ್ಲಿ ಕುಣಿಗಲ್ ನ ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳವರೆಗೆ ಅದ್ದೂರಿಯಾಗಿ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಹಾಡುಗಳನ್ನು ಹಾಸನ ಮತ್ತು ಹಾವೇರಿಯಲ್ಲಿ ಅದ್ದೂರಿ ಸಮಾರಂಭದಲ್ಲಿ ರಿಲೀಸ್ ಮಾಡುವ ಯೋಜನೆ ಟೀಂಗೆ ಇದೆ,
ಪವಿತ್ರಾ ಇಂಟರ್‌ನ್ಯಾಶನಲ್ ಮೂವೀ ಮೇಕರ್ಸ್ ಬ್ಯಾನರ್‌ನಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿದ ಈ ಚಿತ್ರಕ್ಕೆ ನಾಗಶೇಖರ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನವಿದೆ. ಶ್ರೀಧರ್ ವಿ ಸಂಭ್ರಮ್ ಐದು ಹಾಡುಗಳನ್ನು ರಚಿಸಿದ್ದಾರೆ.
ಸಂಜು ವೆಡ್ಸ್ ಗೀತಾ 2 ನಲ್ಲಿ ಚೇತನ್ ಚಂದ್ರ ಅತಿಥಿ ಪಾತ್ರದಲ್ಲಿ ಮತ್ತು ಸಂಪತ್ ಕುಮಾರ್ ಖಳನಾಯಕನಾಗಿ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮತ್ತು ಗಿಚ್ಚಿ ಗಿಲಿಗಿಲಿ ವಿನೋದ್ ಕಾಣಿಸಿಕೊಂಡಿದ್ದಾರೆ.