Who is Vignesh Puthur?: ಚೆನ್ನೈ ತಂಡದ 3 ವಿಕೆಟ್ ಉರುಳಿಸಿದ ಆಟೋರಿಕ್ಷಾ ಡ್ರೈವರ್ ಮಗ!
ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ವಿಘ್ನೇಶ್ ಪುತ್ತೂರು, 32 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.;
ಐಪಿಎಲ್ (IPL 2025) ಟೂರ್ನಿಯ ವಿಶೇಷತೆ ಏನೆಂದರೆ ದೇಶದ ಮೂಲೆಮೂಲೆಗಳಿಂದ ಎಲ್ಲ ರೀತಿಯ ಪ್ರತಿಭೆಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸುವುದು. ಅಂತೆಯೇ ಪ್ರತಿಯೊಂದು ಆವೃತ್ತಿಯಲ್ಲಿಯೂ ಎಲೆ ಮರೆ ಕಾಯಿಯಂಥ ಪ್ರತಿಭೆಗಳನ್ನು ನೋಡುತ್ತೇವೆ. ಅದೇ ರೀತಿ ಹಾಲಿ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಡ ಕುಟುಂಬದಿಂದ ಪ್ರತಿಭಾವಂತ ಎಡಗೈ ಸ್ಪಿನ್ನರ್ ವಿಘ್ನೇಶ್ ಪುತ್ತೂರು ( Vignesh Puthur) ಗಮನ ಸೆಳೆದಿದ್ದಾರೆ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಪರ ಅವರು ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ಅವರು ತಮ್ಮ ಕೈಚಳಕದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 156 ರನ್‌ಗಳ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಹಂತದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್‌ಗೆ ರಚಿನ್ ರವೀಂದ್ರ ಮತ್ತು ಋತುರಾಜ್ ಗಾಯಕ್ವಾಡ್ 67 ರನ್‌ಗಳ ಅಮೂಲ್ಯ ಜೊತೆಯಾಟವನ್ನಾಡಿದರು. ಈ ಸಮಯದಲ್ಲಿ ಬೌಲಿಂಗ್‌ಗೆ ಬಂದ ವಿಘ್ನೇಶ್ ಪುತ್ತೂರು, ಗಾಯಕ್ವಾಡ್ ಅವರನ್ನು ಔಟ್ ಮಾಡಿ ಮುಂಬೈಗೆ ಮುನ್ನಡೆ ತಂದರು. ತಮ್ಮ ಮುಂದಿನ ಓವರ್‌ಗಳಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಶಿವಂ ದುಬೆ (9) ಮತ್ತು ದೀಪಕ್ ಹೂಡಾ (3) ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದೊಳಗೆ ವಿಶ್ವಾಸ ಮೂಡಿಸಿದರು.
ಈ ಮೂಲಕ ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ವಿಘ್ನೇಶ್ ಪುತ್ತೂರು, 32 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಸ್ಪಿನ್ ಮೋಡಿಯ ನಡುವೆಯೂ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೈಫಲ್ಯದಿಂದಾಗಿ ಪಂದ್ಯವನ್ನು 4 ವಿಕೆಟ್‌ಗಳಿಂದ ಕಳೆದುಕೊಂಡಿತು.
ಮೂಲ ಬೆಲೆ 30 ಲಕ್ಷ ರೂಪಾಯಿಗೆ ಮುಂಬೈ ಇಂಡಿಯನ್ಸ್ ಸೇರಿದ್ದ ವಿಘ್ನೇಶ್ ಪುತ್ತೂರು ಇದೀಗ 2025ರ ಐಪಿಎಲ್ ಅನಾವರಣಗೊಳಿಸಿದ ಪ್ರತಿಭೆ ಎನಿಸಿಕೊಂಡಿದ್ದಾರೆ.
ವಿಘ್ನೇಶ್ ಪುತ್ತೂರು ಯಾರು?
23 ವರ್ಷದ ವಿಘ್ನೇಶ್ ಪುತ್ತೂರು ಕೇರಳದ ಮಲಪ್ಪುರಂನ ನಿವಾಸಿ. ಅವರು ಕೇರಳದ ಅಂಡರ್-14 ಮತ್ತು ಅಂಡರ್-19 ತಂಡಗಳನ್ನು ಪ್ರತಿನಿಧಿಸಿದ್ದಾರೆ, ಆದರೆ ಸೀನಿಯರ್ ತಂಡಕ್ಕೆ ಪ್ರವೇಶಿಸಿಲ್ಲ. ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅಲೆಪ್ಪಿ ರಿಪಲ್ಸ್ ಪರ ಆಡಿದ್ದು, ಮೂರು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದ ಅವರು ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕಾಣಿಸಿಕೊಂಡಿದ್ದರು.
ಮಧ್ಯಮ ವೇಗದ ಬೌಲರ್ ಆಗಿದ್ದ ಅವರು ಸ್ಥಳೀಯ ಕ್ರಿಕೆಟಿಗ ಮೊಹಮ್ಮದ್ ಷರೀಫ್ ಸಲಹೆಯಂತೆ ಲೆಗ್ ಸ್ಪಿನ್ ಆಗಿ ಬದಲಾಗಿದ್ದರು.
ವಿಘ್ನೇಶ್ ತನ್ನ ಕ್ರಿಕೆಟ್ ವೃತ್ತಿಜೀವನ ಮುಂದುವರಿಸಲು ತ್ರಿಶೂರ್‌ಗೆ ಹೋಗಿದ್ದರು. ಅಲ್ಲಿ ಕೇರಳ ಕಾಲೇಜು ಪ್ರೀಮಿಯರ್ ಟಿ20 ಲೀಗ್‌ನಲ್ಲಿ ಸೇಂಟ್ ಥಾಮಸ್ ಕಾಲೇಜು ಪರ ಉತ್ತಮ ಪ್ರದರ್ಶನ ನೀಡಿದ್ದರು. ಜಾಲಿ ರೋವರ್ಸ್ ಕ್ರಿಕೆಟ್ ಕ್ಲಬ್ ಪರ ಆಟವಾಡಿದ ವಿಘ್ನೇಶ್ ನಂತರ ಅಲೆಪ್ಪಿ ರಿಪಲ್ಸ್ ತಂಡದಲ್ಲಿ ಸ್ಥಾನ ಗಳಿಸಿದ್ದರು.
ಆಟೋ ಚಾಲಕನ ಮಗ
ವಿಘ್ನೇಶ್ ತಂದೆ ಸುನೀಲ್ ಕುಮಾರ್ ಆಟೋ ಚಾಲಕರಾಗಿದ್ದು, ತಾಯಿ ಬಿಂದು ಗೃಹಿಣಿ. ಹಣಕಾಸಿನ ಸಂಕಷ್ಟಗಳ ನಡುವೆಯೂ ಪೋಷಕರು ನೀಡಿದ ಬೆಂಬಲವೇ ವಿಘ್ನೇಶ್‌ಗೆ ಐಪಿಎಲ್‌ಗೆ ಪ್ರವೇಶದ ರಹದಾರಿಯಾಯಿತು.