ವೈಶಾಕ್‌ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾನೆ: ಕರುನಾಡಿನ ವೇಗಿಯ ಅಪ್ಪನ ಹೃದಯಾಳದ ಮಾತು

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್​ ಕಿಂಗಸ್​ ತಂಡ 5 ವಿಕೆಟ್​​ಗೆ 243 ರನ್‌ಗಳ ದೊಡ್ಡ ಮೊತ್ತವನ್ನು ಗಳಿಸಿತು. ಗುಜರಾತ್ ತಂಡ 232 ರನ್​ ಬಾರಿಸಲು 5 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.;

By :  Aprameya C
Update: 2025-03-27 02:30 GMT

ವೇಗದ ಬೌಲರ್ ವೈಶಾಕ್‌ ವಿಜಯಕುಮಾರ್ ಐಪಿಎಲ್ 2025ರ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಪಂಜಾಬ್ ಕಿಂಗ್ಸ್ (PBKS) ತಂಡದ 11 ರನ್‌ಗಳ ರೋಚಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಂಗಳೂರು ಮೂಲದ ಈ ಆಟಗಾರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು, ಡೆತ್ ಓವರ್‌ಗಳಲ್ಲಿ ತಮ್ಮ ನಿಖರ ಬೌಲಿಂಗ್‌ನಿಂದ ಎದುರಾಳಿಗಳನ್ನು ಕಟ್ಟಿಹಾಕಿದ್ದರು. ಈ ಸಾಧನೆಯ ಬಗ್ಗೆ ವೈಶಾಕ್‌ ಅವರ ತಂದೆ ಬಿ.ಎನ್. ಕುಮಾರ್ (ವಿಜಯಕುಮಾರ್) "ದ ಫೆಡರಲ್" ಜೊತೆ ಮಾತನಾಡುತ್ತಾ ಕೊಂಡಾಡಿದ್ದಾರೆ. ಕೋಚ್ ಪಾಂಟಿಂಗ್​ ಸೇರಿದಂತೆ ಹಲವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.


ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್​ ಕಿಂಗಸ್​ ತಂಡ 5 ವಿಕೆಟ್​​ಗೆ 243 ರನ್‌ಗಳ ದೊಡ್ಡ ಮೊತ್ತವನ್ನು ಗಳಿಸಿತು. ಗುಜರಾತ್ ತಂಡ 232 ರನ್​ ಬಾರಿಸಲು 5 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. 13ನೇ ಓವರ್ ಮುಗಿದಾಗ ಗುಜರಾತ್​ಗೆ 42 ಎಸೆತಗಳಲ್ಲಿ 92 ರನ್‌ಗಳ ಅಗತ್ಯವಿತ್ತು ಮತ್ತು 8 ವಿಕೆಟ್‌ಗಳು ಕೈಯಲ್ಲಿದ್ದವು. ಆಗ ಶ್ರೇಯಸ್ ಅಯ್ಯರ್ ವೈಶಾಕ್‌ ಗೆ 15ನೇ ಓವರ್‌ ಎಸೆಯುವ ಅವಕಾಶ ಕೊಟ್ಟರು. ವೈಶಾಕ್‌ ತಮ್ಮ ಮೊದಲ ಓವರ್‌ನಲ್ಲಿ ಕೇವಲ 5 ರನ್ ಬಿಟ್ಟುಕೊಟ್ಟರು. 17ನೇ ಓವರ್‌ನಲ್ಲೂ 5 ರನ್‌ಗಳನ್ನು ಮಾತ್ರ ನೀಡಿದರು. ಗುಜರಾತ್​ ಬ್ಯಾಟ್ಸ್‌ಮನ್‌ಗಳಾದ ಜೋಸ್ ಬಟ್ಲರ್ ಮತ್ತು ಶೆರ್ಫೇನ್ ರುದರ್‌ಫೋರ್ಡ್‌ಗೆ ದೊಡ್ಡ ಶಾಟ್‌ಗಳನ್ನು ಆಡಲು ಅವಕಾಶ ನೀಡಲಿಲ್ಲ. 19ನೇ ಓವರ್‌ನಲ್ಲಿ 18 ರನ್‌ಗಳು ಬಂದರೂ, ಕೊನೆಯ ಓವರ್‌ಗೆ 26 ರನ್‌ಗಳ ರಕ್ಷಣೆಯ ಜವಾಬ್ದಾರಿಯನ್ನು ಆರ್ಶದೀಪ್ ಸಿಂಗ್‌ಗೆ ಬಿಟ್ಟರು. ವೈಶಾಕ್‌


ರ ಬೌಲಿಂಗ್ ಅಂಕಿ-ಅಂಶ 3 ಓವರ್‌ಗಳಲ್ಲಿ ವಿಕೆಟ್​ ಗಳಿಕೆಯಿಲ್ಲದ 28 ರನ್​ಗಳಾಗಿತ್ತು. .

"ವೈಶಾಕ್‌ ಪಂಜಾಬ್ ಕಿಂಗ್ಸ್‌ಗೆ ಗೆಲುವು ತಂದುಕೊಟ್ಟಿದ್ದಾನೆ ಎಂಬುದು ನನಗೆ ಖುಷಿ ತಂದಿದೆ. ಇದು ಅವನ ಗಾಯದ ನಂತರದ ಮೊದಲ ಪಂದ್ಯ. ಇಂತಹ ಪ್ರದರ್ಶನವನ್ನು ನಾನು ನಿರೀಕ್ಷಿಸಿರಲಿಲ್ಲ. ಇದಕ್ಕಿಂತ ಹೆಚ್ಚೇನು ಬೇಕು? ನನಗೆ ಹೆಮ್ಮೆ ಇದೆ. ಐಪಿಎಲ್ 2025ರ ಉಳಿದ ಪಂದ್ಯಗಳಲ್ಲೂ ಇದೇ ರೀತಿ ಮುಂದುವರಿಯಲಿ," ಎಂದು ವಿಜಯಕುಮಾರ್ ಹೇಳಿದ್ದಾರೆ.

ಪಾಂಟಿಂಗ್‌ ಮೆಚ್ಚುಗೆ

ಪಂಜಾಬ್ ಕಿಂಗ್ಸ್​ ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್, ವೈಶಾಕ್‌ ಪಂದ್ಯದ ಗತಿಯನ್ನು ಬದಲಾಯಿಸಿದರು ಎಂದು ಶ್ಲಾಘಿಸಿದ್ದಾರೆ. . "ನಾನು ಡಗೌಟ್‌ನಲ್ಲಿ ಕುಳಿತಿದ್ದಾಗ, ಗುಜರಾತ್ ತಂಡಕ್ಕೆ ಒಂದು ಓವರ್‌ಗೆ 13-14 ರನ್ ಬೇಕಿತ್ತು. ಶ್ರೇಯಸ್‌ಗೆ ಸಂದೇಶ ಕಳುಹಿಸಲಾಯಿತು. ತಕ್ಷಣ ‘ವೈಶಾಕ್‌ಗೆ ಕೈಗೆ ಚೆಂಡು ನೀಡಲಾಯಿತು. ಅವರು ಯಾರ್ಕರ್‌ಗಳನ್ನು ಎಸೆದು ಪಂದ್ಯ ಮುಗಿಸಿದ," ಎಂದು ಪಾಂಟಿಂಗ್ ಹೇಳಿದರು.

ರಿಕಿಯ ಮೆಚ್ಚುಗೆಯ ಬಗ್ಗೆಯೂ ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. "ರಿಕಿ ಪಾಂಟಿಂಗ್‌ರಂತಹ ದಂತಕತೆಯಿಂದ ಪ್ರಶಂಸೆ ಸಿಗುವುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದು ವೈಶಾಕ್‌ಗೆ ಮಾತ್ರವಲ್ಲ, ನಮಗೆಲ್ಲರಿಗೂ ದೊಡ್ಡ ಸಂಗತಿ . ಪಾಂಟಿಂಗ್ ಐಪಿಎಲ್‌ನ ಶ್ರೇಷ್ಠ ತರಬೇತುದಾರರಲ್ಲಿ ಒಬ್ಬರು. ಅವರು ಶಿಸ್ತು, ಆಟಗಾರರ ಬೆಂಬಲ ಮತ್ತು ಅವರಿಂದ ಉತ್ತಮ ಪ್ರದರ್ಶನ ಪಡೆಯಲು ಒತ್ತು ನೀಡುತ್ತಾರೆ. ವೈಶಾಕ್‌ಗೆ ಅವರ ಜೊತೆ ಕೆಲಸ ಮಾಡುವ ಅದೃಷ್ಟವಿದೆ. ಈ ಐಪಿಎಲ್‌ನಲ್ಲಿ ಅವನು ಉತ್ತಮ ಬೌಲರ್ ಆಗಿ ಹೊರಹೊಮ್ಮುತ್ತಾನೆ ಎಂದು ಭಾವಿಸುತ್ತೇನೆ," ಎಂದರು.

ಆರ್‌ಸಿಬಿ ಬಿಡುಗಡೆಯ ಬಗ್ಗೆ ನಿರಾಸೆ

ವೈಶಾಕ್‌ ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿದ್ದರು. ಆದರೆ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ RCB ಅವರನ್ನು ಬಿಡುಗಡೆ ಮಾಡಿತು. ಪಂಜಾಬ್​ 1.8 ಕೋಟಿ ರೂಪಾಯಿಗೆ ಅವರನ್ನು ಖರೀದಿಸಿತು. ಬೆಂಗಳೂರು ಹುಡುಗನಾಗಿ ಆರ್​ಸಿಬಿಯಿಂದ ಬಿಡುಗಡೆಯಾದ ಬಗ್ಗೆ ಅಭಿಮಾನಿಗಳಂತೆ ತಂದೆಗೂ ನಿರಾಸೆಯಾಯಿತು.

"RCB ವೈಶಾಕ್‌ರನ್ನು ಉಳಿಸಿಕೊಳ್ಳದೇ ಇದ್ದದ್ದು ನಿರಾಸೆ ತಂದಿತು. ಆದರೆ ಪ್ರತಿ ತಂಡಕ್ಕೂ ತನ್ನದೇ ಆದ ಯೋಜನೆ ಇರುತ್ತದೆ. ಹರಾಜಿನಲ್ಲಿ ವೈಶಾಕ್‌ರ ಹೆಸರು ಬರುವ ಮೊದಲು ಮತ್ತೊಬ್ಬ ವೇಗದ ಬೌಲರ್‌ಗಾಗಿ ಆರ್​ಸಿಬಿ ಬಿಡ್ ಮಾಡಿತ್ತು. ಬಹುಶಃ ಅವನ ಹೆಸರು ಮೊದಲೇ ಬಂದಿದ್ದರೆ, ಆರ್​ಸಿಬಿ ಅವನನ್ನು ಖರೀದಿಸುತ್ತಿತ್ತೇನೋ. ಅದಕ್ಕಾಗಿ ಪಶ್ಚಾತ್ತಾಪವಿಲ್ಲ. ಇದು ದೇವರ ಇಚ್ಛೆ ಎಂದು ಭಾವಿಸುತ್ತೇವೆ. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತದೆ," ಎಂದು ವಿಜಯಕುಮಾರ್ ಹೇಳಿದರು.

ಎನ್‌ಸಿಎಯಲ್ಲಿ ಗಾಯದ ಚೇತರಿಕೆ

ವೈಶಾಕ್‌ ಕ್ವಾಡ್ರಿಸೆಪ್ಸ್ ಗಾಯದ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಚೇತರಿಕೆಗಾಗಿ ಶ್ರಮಿಸಿದ್ದರು. "ಗಾಯದ ನಂತರ ಎರಡು ತಿಂಗಳಿಗಿಂತ ಹೆಚ್ಚು ಕಾಲ, ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಎನ್‌ಸಿಎಯಲ್ಲಿ ಕಠಿಣ ಶ್ರಮ ಮಾಡಿದ. ಅವನ ಶ್ರಮಕ್ಕೆ ಈ ಪಂದ್ಯದಲ್ಲಿ ಫಲ ಸಿಕ್ಕಿದೆ," ಎಂದು ತಂದೆ ತಿಳಿಸಿದರು. ವೈಶಾಕ್‌ರ ಕ್ರಿಕೆಟ್ ಕನಸನ್ನು ಬೆಂಬಲಿಸಲು ವಿಜಯಕುಮಾರ್ ತಮ್ಮ ಕೆಲಸವನ್ನು ತ್ಯಜಿಸಿದ್ದರು.

ಪರ್ಪಲ್ ಕ್ಯಾಪ್ ಗುರಿ

ವೈಶಾಕ್‌ ಐಪಿಎಲ್ 2025ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆಯುವ ಗುರಿಯನ್ನು ಹೊಂದಿದ್ದಾರೆ. "ಅವನು ಎಲ್ಲ ಪಂದ್ಯಗಳಲ್ಲಿ ಆಡಿದರೆ, ಪರ್ಪಲ್ ಕ್ಯಾಪ್ ಗೆಲ್ಲುವ ಕನಸು ನನಸಾಗಬಹುದು. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಲ್ಲ, ಪೂರ್ಣ ಸದಸ್ಯನಾಗಿ ಆಡಬೇಕು," ಎಂದು ವಿಜಯಕುಮಾರ್ ಆಶಿಸಿದರು. "ನಾನು ವೈಶಾಕ್‌ ಜೊತೆ ಪಂದ್ಯದ ಮೊದಲು ಮತ್ತು ನಂತರ ಮಾತನಾಡುತ್ತೇನೆ, ಆದರೆ ಕ್ರಿಕೆಟ್ ಬಗ್ಗೆ ಚರ್ಚಿಸುವುದಿಲ್ಲ. ಅದಕ್ಕೆ ತಂಡದ ತರಬೇತುದಾರರಿದ್ದಾರೆ," ಎಂದು ಅವರು ಹೇಳಿದರು.

Tags:    

Similar News