IPL 2025: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಬೌಲರ್‌ಗಳಿಗೆ ಅರ್ಪಿಸಿದ ಆರ್ಸಿಬಿ ನಾಯಕ ರಜತ್
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 221 ರನ್‌ಗಳ ದೊಡ್ಡ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ 209 ರನ್‌ಗಳಿಗೆ ಸೀಮಿತಗೊಂಡು 12 ರನ್‌ಗಳ ಸೋಲು ಅನುಭವಿಸಿತು.;
ಆರ್ಸಿಬಿ ನಾಯಕ ರಜತ್ ಪಾಟೀದಾರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟೀದಾರ್ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು. ಆದರೆ, ಅವರು ಅದನ್ನು ತಮ್ಮ ತಂಡದ ಬೌಲರ್‌ಗಳಿಗೆ ಸಮರ್ಪಿಸಿದ್ದು, ಗೆಲುವಿಗೆ ಅವರೇ ಕಾರಣ ಎಂದು ಹೊಗಳಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 221 ರನ್‌ಗಳ ದೊಡ್ಡ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ 209 ರನ್‌ಗಳಿಗೆ ಸೀಮಿತಗೊಂಡು 12 ರನ್‌ಗಳ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ರಜತ್ ಪಾಟೀದಾರ್ 32 ಎಸೆತಗಳಲ್ಲಿ 64 ರನ್‌ಗಳ ಭರ್ಜರಿ ಆಟವಾಡಿದರು. ಇದರಲ್ಲಿ 5 ಫೋರ್ ಮತ್ತು 4 ಸಿಕ್ಸರ್‌ಗಳು ಸೇರಿಕೊಂಡಿವೆ. ಅವರಿಗೆ ಜತೆಯಾದ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 67 ರನ್‌ಗಳನ್ನು ಚಚ್ಚಿದರು.
ಪಂದ್ಯದ ನಂತರದ ಮಾತನಾಡಿದ ರಜತ್ ಪಾಟೀದಾರ್, "ಇದೊಂದು ಅದ್ಭುತ ಪಂದ್ಯ. ಗೆಲುವು ಕೂಡ ಅಮೋಘ. ಆದರೆ ಬೌಲರ್‌ಗಳಿಗೆ ಇದು ಸುಲಭ ಪಿಚ್ ಆಗಿರಲಿಲ್ಲ. ಈ ಮೈದಾನದಲ್ಲಿ ಯಾವುದೇ ತಂಡ ರನ್ ಗಳಿಸುವುದನ್ನು ತಡೆಯುವುದು ಕಷ್ಟ, ಆದರೂ ನಮ್ಮ ಬೌಲರ್‌ಗಳು ಧೈರ್ಯ ತೋರಿದ್ದಾರೆ. ಈ ಪ್ರಶಸ್ತಿ ನಿಜವಾಗಿಯೂ ಬೌಲಿಂಗ್ ಘಟಕಕ್ಕೆ ಸೇರಬೇಕು," ಎಂದು ಹೇಳಿದರು.
ನಾಯಕ ರಜತ್ ತಮ್ಮ ತಂಡದ ವೇಗದ ಬೌಲರ್‌ಗಳಾದ ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್ ಅವರನ್ನು ಶ್ಲಾಘಿಸಿದರು, ಜೊತೆಗೆ ಸ್ಪಿನ್ನರ್ ಕೃನಾಲ್ ಪಾಂಡ್ಯ ಅವರ 4-45 ರನ್‌ಗಳ ಪ್ರದರ್ಶನವನ್ನು ಮೆಚ್ಚಿದರು. ಕೃನಾಲ್ ಪಾಂಡ್ಯ ಕೊನೆಯ ಓವರ್‌ನಲ್ಲಿ ಮೂರು ವಿಕೆಟ್ ಪಡೆದು ಪಂದ್ಯವನ್ನು ಆರ್ಸಿಬಿ ಪರವಾಗಿ ತಿರುಗಿಸಿದ್ದರು.
ವಾಂಖೆಡೆ ಮೈದಾನದಲ್ಲಿ ಆರ್ಸಿಬಿಗೆ 10 ವರ್ಷಗಳ ನಂತರ ಗೆಲುವು ಸಿಕ್ಕಿದ್ದು, ಇದು ಆರ್ಸಿಬಿ ಅಭಿಮಾನಿಗಳಿಗೆ ಸಂತಸ ತಂದಿದೆ. ಮುಂಬೈ ತಂಡದಲ್ಲಿ ತಿಲಕ್ ವರ್ಮಾ (56 ರನ್) ಮತ್ತು ಹಾರ್ದಿಕ್ ಪಾಂಡ್ಯ (15 ಎಸೆತಗಳಲ್ಲಿ 42 ರನ್) ಉತ್ತಮ ಪ್ರಯತ್ನ ಮಾಡಿದರೂ ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಆಗಲಿಲ್ಲ.
ನಾಯಕತ್ವದ ಚತುರತೆ
ರಜತ್ ಪಾಟೀದಾರ್ ಅವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನ ಜೊತೆಗೆ ನಾಯಕತ್ವದಲ್ಲಿ ತೋರಿದ ಚತುರತೆಗೆ ಶ್ಲಾಘನೆಗೆ ಪಾತ್ರರಾದರು. ಈ ಗೆಲುವಿನೊಂದಿಗೆ ಆರ್ಸಿಬಿ ತಂಡವು ಐಪಿಎಲ್ 2025 ರ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ, ಆದರೆ ಎಂಐ ತಂಡವು ಈ ಋತುವಿನಲ್ಲಿ ನಾಲ್ಕನೇ ಸೋಲನ್ನು ಅನುಭವಿಸಿ ಒತ್ತಡದಲ್ಲಿದೆ.