LSG vs DC: ಡೆಲ್ಲಿ ಕ್ಯಾಪಿಟಲ್ಸ್‌ಗೆ ವಿರೋಚಿತ ಗೆಲುವು ತಂದುಕೊಟ್ಟ ಆಶುತೋಷ್ ಶರ್ಮಾ
ಲಕ್ನೊ ತಂಡ, ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರೂ, ಡೆತ್ ಓವರ್‌ಗಳಲ್ಲಿ ಬೌಲಿಂಗ್ ವೈಫಲ್ಯದಿಂದ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.;
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡವು ಸೋಲಿನಂಚಿನಿಂದ ಪಾರಾಗಿ ರೋಚಕ ಗೆಲುವು ಸಾಧಿಸಿದೆ. ಲಕ್ನೊ ಸೂಪರ್ ಜಯಂಟ್ಸ್ (ಎಲ್‌ಎಸ್‌ಜಿ) ವಿರುದ್ಧದ ಈ ಪಂದ್ಯದಲ್ಲಿ ಆಶುತೋಷ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ಬಲದಿಂದ ಡೆಲ್ಲಿ ತಂಡ ಒಂದು ವಿಕೆಟ್ ಗೆಲುವು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2025ರಲ್ಲಿ ತನ್ನ ಖಾತೆ ತೆರೆದಿದೆ.
ಲಕ್ನೊ ತಂಡ, ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರೂ, ಡೆತ್ ಓವರ್‌ಗಳಲ್ಲಿ ಬೌಲಿಂಗ್ ವೈಫಲ್ಯದಿಂದ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ವಿಶಾಖಪಟ್ಟಣಂನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತ ಎಲ್‌ಎಸ್‌ಜಿ ಮೊದಲು ಬ್ಯಾಟಿಂಗ್ ಮಾಡಿತು. ಮಿಚೆಲ್ ಮಾರ್ಷ್ (72 ರನ್) ಮತ್ತು ನಿಕೋಲಸ್ ಪೂರನ್ (75 ರನ್) ಅವರ ಸ್ಫೋಟಕ ಅರ್ಧಶತಕಗಳ ಬಲದಿಂದ ಲಕ್ನೊ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 209 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಮಾರ್ಷ್ ಮತ್ತು ಪೂರನ್ ಎರಡನೇ ವಿಕೆಟ್‌ಗೆ 87 ರನ್‌ಗಳ ಭರ್ಜರಿ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಮಾರ್ಷ್ 36 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 200ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರೆ, ಪೂರನ್ 30 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 250ರ ಸ್ಟ್ರೈಕ್ ರೇಟ್‌ನಲ್ಲಿ ಅಬ್ಬಸಿದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ ಅಜೇಯ 27 ರನ್ (19 ಎಸೆತ) ಗಳಿಸಿ ಮೊತ್ತವನ್ನು 209ಕ್ಕೆ ತಲುಪಿಸಿದರು.
ಡೆಲ್ಲಿ ಬೌಲರ್‌ಗಳ ಪೈಕಿ ಮಿಚೆಲ್ ಸ್ಟಾರ್ಕ್ 3 ವಿಕೆಟ್‌ಗಳನ್ನು ಕಿತ್ತು ಮಿಂಚಿದರೆ, ಕುಲ್ದೀಪ್ ಯಾದವ್ 2 ವಿಕೆಟ್‌ಗಳನ್ನು ಪಡೆದರು.
ಡೆಲ್ಲಿಗೆ ಆರಂಭ: ಆರಂಭಿಕ ಆಘಾತ
210 ರನ್‌ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಶಾರ್ದುಲ್ ಠಾಕೂರ್ ಎರಡು ವಿಕೆಟ್‌ಗಳನ್ನು ಕಿತ್ತು ಡೆಲ್ಲಿ ತಂಡ ಕೇವಲ 7 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಳ್ಳುವಂತೆ ಮಾಡಿದರು. ಈ ಹಂತದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ನಾಯಕ ಅಕ್ಷರ್ ಪಟೇಲ್ (22) ಮತ್ತು ಫಾಫ್ ಡು ಪ್ಲೆಸಿಸ್ (29) 43 ರನ್‌ಗಳ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. ಆದಾಗ್ಯೂ, ದಿಗ್ವೇಶ್ ರಾಥಿ ಮತ್ತು ರವಿ ಬಿಷ್ಣೋಯ್ ಈ ಜೋಡಿಯನ್ನು ಬೇರ್ಪಡಿಸಿದರು. ಹೀಗಾಗಿ ಡೆಲ್ಲಿ 65 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಯಿತು.
ಆಶುತೋಷ್ ಶರ್ಮಾ ಮತ್ತು ವಿಪ್ರಾಜ್ ಅಬ್ಬರ
ತಂಡದ ಸಂಕಷ್ಟದ ಸಮಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಆಶುತೋಷ್ ಶರ್ಮಾ ಮತ್ತು ಟ್ರಿಸ್ಟನ್ ಸ್ಟಬ್ಸ್ ಜೋಡಿ 65 ರನ್‌ಗಳ ಜೊತೆಯಾಟವಾಡಿ ತಂಡವನ್ನು 110ರ ಗಡಿ ದಾಟಿಸಿತು. ಸ್ಟಬ್ಸ್ 34 ರನ್ (22 ಎಸೆತ) ಗಳಿಸಿ ಎಂ. ಸಿದ್ದಾರ್ಥ್‌ಗೆ ಬೌಲ್ಡ್ ಆದರು. ನಂತರ ಕ್ರೀಸ್‌ಗೆ ಬಂದ ವಿಪ್ರಾಜ್ ನಿಗಮ್ ಕೇವಲ 15 ಎಸೆತಗಳಲ್ಲಿ 39 ರನ್‌ಗಳ ಸ್ಫೋಟಕ ಆಟವಾಡಿ ಪಂದ್ಯಕ್ಕೆ ತಿರುವು ಕೊಟ್ಟರು. ಆದರೆ, ಅವರು ದಿಗ್ವೇಶ್ ರಾಥಿಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಸ್ಟಾರ್ಕ್ ಮತ್ತು ಕುಲ್ದೀಪ್ ಯಾದವ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ, ಮತ್ತು ಡೆಲ್ಲಿ 192 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸನಿಹಕ್ಕೆ ಬಂದಿತ್ತು.
ರೋಮಾಂಚಕಾರಿ ಗೆಲುವು
ಕೊನೆಯ 9 ಎಸೆತಗಳಲ್ಲಿ ಡೆಲ್ಲಿಗೆ 18 ರನ್‌ಗಳ ಅಗತ್ಯವಿತ್ತು, ಮತ್ತು ಕೇವಲ ಒಂದು ವಿಕೆಟ್ ಮಾತ್ರ ಉಳಿದಿತ್ತು. ಈ ಸಂದರ್ಭದಲ್ಲಿ ಆಶುತೋಷ್ ಶರ್ಮಾ. ಪ್ರಿನ್ಸ್ ಯಾದವ್‌ರ ಮೂರು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿ 12 ರನ್‌ಗಳನ್ನು ಕಲೆಹಾಕಿದರು. ಕೊನೆಯ ಓವರ್‌ಗೆ 6 ರನ್ ಬೇಕಿತ್ತು. ಶಹಬಾಝ್ ಅಹ್ಮದ್ ಬೌಲಿಂಗ್‌ನ ಮೊದಲ ಎಸೆತದಲ್ಲಿ ಮೋಹಿತ್ ಶರ್ಮಾರನ್ನು ಬೀಟ್ ಮಾಡಿದರೂ, ರಿಷಭ್ ಪಂತ್ ಸ್ಟಂಪಿಂಗ್ ಅವಕಾಶವನ್ನು ಕೈಚೆಲ್ಲಿದರು. ಎರಡನೇ ಎಸೆತದಲ್ಲಿ ಮೋಹಿತ್ ಸಿಂಗಲ್ ತೆಗೆದು ಆಶುತೋಷ್‌ಗೆ ಸ್ಟ್ರೈಕ್ ಕೊಟ್ಟರು. ಮೂರನೇ ಎಸೆತದಲ್ಲಿ ಆಶುತೋಷ್ ಸಿಕ್ಸರ್ ಬಾರಿಸಿ, ಮೂರು ಎಸೆತಗಳು ಬಾಕಿ ಇರುವಂತೆಯೇ ಡೆಲ್ಲಿಗೆ ಒಂದು ವಿಕೆಟ್‌ನ ಗೆಲುವು ತಂದುಕೊಟ್ಟರು. ಆಶುತೋಷ್ 31 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ ಅಜೇಯ 66 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಲಕ್ನೊ ಸೋಲಿನ ಕಾರಣ
ಲಕ್ನೊ ತಂಡ ಆರಂಭದಲ್ಲಿ ಡೆಲ್ಲಿ ತಂಡದ 5 ವಿಕೆಟ್‌ಗಳನ್ನು ಬೇಗನೆ ಕಿತ್ತು ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ, ಡೆತ್ ಓವರ್‌ಗಳಲ್ಲಿ ಬೌಲಿಂಗ್ ದಾಳಿ ವಿಫಲವಾದದ್ದು ಸೋಲಿಗೆ ಕಾರಣವಾಯಿತು. ಶಾರ್ದುಲ್ ಠಾಕೂರ್ (2/22), ಎಂ. ಸಿದ್ದಾರ್ಥ್ (2/39), ಮತ್ತು ದಿಗ್ವೇಶ್ ರಾಥಿ (2/31) ಆರಂಭದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ, ಕೊನೆಯ ಓವರ್‌ಗಳಲ್ಲಿ ಆಶುತೋಷ್‌ರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಬೆದರಿದರು.
ಸ್ಕೋರ್ ವಿವರ
ಲಕ್ನೊ ಸೂಪರ್ ಜಯಂಟ್ಸ್: 20 ಓವರ್‌ಗೆ 209-8 (ಮಿಚೆಲ್ ಮಾರ್ಷ್ 72, ನಿಕೋಲಸ್ ಪೂರನ್ 75, ಡೇವಿಡ್ ಮಿಲ್ಲರ್ 27*; ಮಿಚೆಲ್ ಸ್ಟಾರ್ಕ್ 3/42, ಕುಲ್ದೀಪ್ ಯಾದವ್ 2/20)
ಡೆಲ್ಲಿ ಕ್ಯಾಪಿಟಲ್ಸ್: 19.3 ಓವರ್‌ಗೆ 211-9 (ಆಶುತೋಷ್ ಶರ್ಮಾ 66*, ವಿಪ್ರಾಜ್ ನಿಗಮ್ 39, ಟ್ರಿಸ್ಟನ್ ಸ್ಟಬ್ಸ್ 34; ಶಾರ್ದುಲ್ ಠಾಕೂರ್ 2/22, ಎಂ. ಸಿದ್ದಾರ್ಥ್ 2/39, ದಿಗ್ವೇಶ್ ರಾಥಿ 2/31)