IPL 2025 | ಕೆಕೆಆರ್ vs ಆರ್‌ಸಿಬಿ ಉದ್ಘಾಟನಾ ಪಂದ್ಯಕ್ಕೆ ಮಳೆ ಬೆದರಿಕೆ

ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ನ್ಯೂ ಅಲಿಪೋರ್ ಕಚೇರಿ ಶನಿವಾರದಂದು "ಆರೆಂಜ್ ಎಲರ್ಟ್" ಪ್ರಕಟಿಸಿದೆ. ತೀವ್ರ ಗಾಳಿ, ಮಿಂಚು, ಗಾಳಿ ಮಳೆ, ಸಿಡಿಲು ಮತ್ತು ಮಳೆಯ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.;

Update: 2025-03-22 06:15 GMT

ಶನಿವಾರ ಇಲ್ಲಿ ಈಡನ್ ಗಾರ್ಡನ್ಸ್​ ಕ್ರಿಕೆಟ್​ ಮೈದಾನದಲ್ಲಿ ನಡೆಯಲಿರುವ ಐಪಿಎಲ್ 2025 ಆರಂಭಿಕ ಪಂದ್ಯಕ್ಕೆ ಮಳೆಯ ಅಡಚಣೆಯಾಗುವ ಎಲ್ಲ ಸಾಧ್ಯತೆಗಳಿವೆ. ಶನಿವಾರ ಬೆಳಗ್ಗಿನಿಂದಲೇ ಕೋಲ್ಕೊತಾದಲ್ಲಿ ಕರಿಮೋಡ ಕವಿದಿದ್ದು ಸಂಜೆಯ ವೇಳೆ ಜೋರು ಮಳೆಯಾಗುವ ಲಕ್ಷಣವಿದೆ. ಒಂದು ದಿನ ಮೊದಲು, ಸಂಜೆ ಗಂಟೆಗೆ ಸುರಿದ ನಿರಂತರ ಮಳೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಭ್ಯಾಸಗಳಿಗೆ ತೊಡಕು ಉಂಟಾಯಿತು.

ಅಭ್ಯಾಸವು ಸಂಜೆ 5 ಗಂಟೆಗೆ ಆರಂಭವಾಗಿದ್ದರೂ, ಸುಮಾರು 6 ಗಂಟೆಗೆ ಮಳೆ ಆರಂಭವಾಯಿತು. ಮೈದಾನದ ಸಿಬ್ಬಂದಿ ಕವರ್ ಹಾಕಿದ ಕಾರಣ ಆಟಗಾರರು ಅಭ್ಯಾಸ ನಿಲ್ಲಿಸಬೇಕಾಯಿತು. ಈಡನ್ ಗಾರ್ಡನ್ ಪೂರ್ತಿ ಮೈದಾನಕ್ಕೆ ಕವರ್‌ ಹೊಂದಿರುವ ಕೆಲವೇ ಸ್ಟೇಡಿಯಂ‌ಗಳಲ್ಲಿ ಒಂದಾಗಿದ್ದು, ಆಟದ ಮೈದಾನ ಸುರಕ್ಷಿತವಾಗಿರಲು ಸಹಾಯವಾಯಿತು.

ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ನ್ಯೂ ಅಲಿಪೋರ್ ಕಚೇರಿ ಶನಿವಾರದಂದು "ಆರೆಂಜ್ ಎಲರ್ಟ್" ಪ್ರಕಟಿಸಿದೆ. ತೀವ್ರ ಗಾಳಿ, ಮಿಂಚು, ಗಾಳಿ ಮಳೆ, ಸಿಡಿಲು ಮತ್ತು ಮಳೆಯ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

"ಶುಕ್ರವಾರ ಜಾರ್ಗ್ರಾಮ್, ಪೂರ್ವ ಹಾಗೂ ಪಶ್ಚಿಮ ಮೇದಿನಿಪುರ, ಬ್ಯಾಂಕುರಾ, ಪುರೂಲಿಯಾ, ಪೂರ್ವ ಬರ್ಡ್‌ವಾನ್, ಹುಗ್ಲಿ ಮತ್ತು ಹೌರಾ ಜಿಲ್ಲೆಗಳಲ್ಲಿ ಸಿಡಿಲು, ಗಾಳಿ ಮಳೆ, ಮಿಂಚು ಮತ್ತು ತೀವ್ರ ಗಾಳಿ ಬೀಸುವ ಸಾಧ್ಯತೆ ಇದೆ," ಎಂದು ಐಎಂಡಿ ಹೇಳಿದೆ.

ಶನಿವಾರ ನಾದಿಯಾ, ಬೀರ್ಭೂಮ್, ಮುರ್ಷಿದಾಬಾದ್, ಪೂರ್ವ ಬರ್ಡ್‌ವಾನ್ ಮತ್ತು ಉತ್ತರ ಹಾಗೂ ದಕ್ಷಿಣ 24 ಪರಗಣಗಳಲ್ಲಿ ಗಾಳಿ ಮಳೆ, ಮಿಂಚು, ಸಿಡಿಲು ಸಂಭವನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದಾರೆ.

ಪಂದ್ಯವನ್ನು ರಾತ್ರಿ 7.30ಕ್ಕೆ ಆರಂಭಿಸಲು ಉದ್ದೇಶಿಸಲಾಗಿದೆ, ಟಾಸ್ ರಾತ್ರಿ 7ಕ್ಕೆ ನಡೆಯಲಿದೆ.

ಉದ್ಘಾಟನಾ ಸಮಾರಂಭದ ಸಂಭ್ರಮ

ಸಂಜೆ 6 ಗಂಟೆಗೆ ಶ್ರೇಯಾ ಘೋಷಾಲ್ ಮತ್ತು ದಿಶಾ ಪಟಾನಿ ಸೇರಿದಂತೆ ಹಲವರ ಪಾಲ್ಗೊಳ್ಳುವಿಕೆಯ ನಡುವೆ ಐಪಿಎಲ್ ಉದ್ಘಾಟನೆಯಾಗಲಿದೆ. ಹವಾಮಾನ ಪರಿಸ್ಥಿತಿ ಮುಂದುವರಿದರೆ ಸಮಾರಂಭಕ್ಕೆ ಅಡಚಣೆ ಉಂಟಾಗಲಿದೆ.

ಐಪಿಎಲ್ ನಿಯಮಗಳ ಪ್ರಕಾರ, ಲೀಗ್ ಹಂತದ ಪಂದ್ಯಗಳಿಗೆ ಒಂದು ಗಂಟೆಯ ವಿಸ್ತರಣಾ ಸಮಯ ಇರುತ್ತದೆ. ಹೀಗಾಗಿ 12 ಗಂಟೆ ತನಕ ಪಂದ್ಯವನ್ನು ಕೊಂಡೊಯ್ಯುವ ಅವಕಾಶ ಇದೆ.

Tags:    

Similar News