KKR vs RCB: IPL 2025 ಉದ್ಘಾಟನಾ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಐವರು ಆಟಗಾರರು ಇವರು
ಆರ್ಸಿಬಿ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಉತ್ತಮ ಪ್ರದರ್ಶನ ನೀಡಿದ್ದು, ಕಳೆದ ವರ್ಷದ ಮೆಗಾ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ 11.50 ಕೋಟಿ ರೂಪಾಯಿ ಪಡೆದು ಸೇರ್ಪಡೆಗೊಂಡಿದ್ದರು. ಅವರು ಮೊದಲ ಪಂದ್ಯದಲ್ಲಿಯೇ ಅರ್ಧ ಶತಕ ಬಾರಿಸಿ ತಮ್ಮ ಮೊತ್ತವನ್ನು ಸಮರ್ಥಿಸಿಕೊಂಡಿದ್ದಾರೆ.;
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಮ್ಮ IPL 2025 ಅಭಿಯಾನವನ್ನು ಶನಿವಾರ ರಾತ್ರಿ (ಮಾರ್ಚ್ 22) ಆರಂಭಿಸಿದ್ದು, ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ, ಟಾಸ್ ಗೆದ್ದ ಆರ್ಸಿಬಿ, ಎದುರಾಳಿ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ 174 ರನ್ಗಳಿಗೆ ಸೀಮಿತಗೊಳಿಸಿತು. ಬಳಿಕ ಬ್ಯಾಟ್ ಮಾಡಿ 16.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ ಗುರಿಯನ್ನು ಬೆನ್ನತ್ತಿತು.
ಈ ರೋಮಾಂಚಕಾರಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಐವರು ಆಟಗಾರರ ವಿವರ ಇಲ್ಲಿದೆ
1. ಫಿಲ್ ಸಾಲ್ಟ್ (RCB)
ಆರ್ಸಿಬಿ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್, ಇವರು ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ 11.50 ಕೋಟಿ ರೂಪಾಯಿ ಪಡೆದ ಸೇರ್ಪಡೆಗೊಂಡಿದ್ದರು. ತಮ್ಮ ದೊಡ್ಡ ಬೆಲೆಯನ್ನು ಸಮರ್ಥಿಸಿಕೊಂಡಿರುವ ಅವರು ಮೊದಲ ಪಂದ್ಯದಲ್ಲಿಯೇ ಅರ್ಧ ಶತಕ ಬಾರಿಸಿದರು. IPL 2024ರಲ್ಲಿ ಅವರು ಕೆಕೆಆರ್ ತಂಡದಲ್ಲಿದ್ದು ಟ್ರೋಫಿ ಗೆದ್ದಿದ್ದರು. ಸಾಲ್ಟ್ 31 ಎಸೆತಗಳಲ್ಲಿ 56 ರನ್ (9 ಬೌಂಡರಿ, 2 ಸಿಕ್ಸರ್) ಗಳಿಸಿದರು. ಅವರು ವಿರಾಟ್ ಕೊಹ್ಲಿಯೊಂದಿಗೆ ಕೇವಲ 8.3 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 95 ರನ್‌ಗಳ ಜೊತೆಯಾಟವಾಡಿದರು. ಸಾಲ್ಟ್‌ರ ಆಕ್ರಮಣಕಾರಿ ಬ್ಯಾಟಿಂಗ್ 175 ರನ್‌ಗಳ ಗುರಿಯನ್ನು ಬೆನ್ನತ್ತಲು ಆರ್ಸಿಬಿಗೆ ಸುಲಭವಾಯಿತು.
2 ಜೋಶ್ ಹೇಜಲ್‌ವುಡ್ (RCB)
ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಈ ವರ್ಷ ಬೆಂಗಳೂರು ತಂಡಕ್ಕೆ ಮರಳಿದ್ದಾರೆ. ಮೆಗಾ ಹರಾಜಿನಲ್ಲಿ ಅವರನ್ನು 12.50 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು, ಇದು ಆರ್ಸಿಬಿ ಅತ್ಯಂತ ದುಬಾರಿ ಖರೀದಿಯಾಗಿತ್ತು. ಇತ್ತೀಚಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿಅವರು ಗಾಯದಿಂದಾಗಿ ಆಡಿರಲಿಲ್ಲ, ಆದರೆ ಕ್ರಿಕೆಟ್‌ಗೆ ಅತ್ಯುತ್ತಮವಾಗಿ ಮರಳಿದ ಅವರು 4 ಓವರ್‌ಗಳಲ್ಲಿ 22 ಬಿಟ್ಟುಕೊಟ್ಟು 2 ವಿಕೆಟ್ ಉರುಳಿಸಿದ್ದಾರೆ. ಪಂದ್ಯದ ಮೊದಲ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿದ ಅವರು ಹರ್ಷಿತ್ ರಾಣಾ ಅವರ ವಿಕೆಟ್ ಪಡೆದರು. ಹೇಜಲ್‌ವುಡ್ ತಮ್ಮ 24 ಎಸೆತಗಳಲ್ಲಿ 16 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.
3. ಕೃಣಾಲ್ ಪಾಂಡ್ಯ (RCB)
ಆರ್ಸಿಬಿಗೆ ಹೊಸದಾಗಿ ಸೇರಿದ ಇನ್ನೊಬ್ಬ ಆಟಗಾರ ಕೃನಾಲ್ ಪಾಂಡ್ಯ ತಮ್ಮ ಪ್ರದರ್ಶನದಿಂದ ಮಿಂಚಿದ್ದಾರೆ. ಮೆಗಾ ಹರಾಜಿನಲ್ಲಿ ಅವರನ್ನು 5.75 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು. ಆರ್ಸಿಬಿ ಪರ ತಮ್ಮ ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ 29 ರನ್ ಬಿಟ್ಟುಕೊಡ್ಡು 3 ವಿಕೆಟ್ ಕಬಳಿಸಿದರು. . ಅವರು ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದರು.
4. ವಿರಾಟ್ ಕೊಹ್ಲಿ (RCB)
ವಿರಾಟ್ ಕೊಹ್ಲಿ ಮತ್ತೊಮ್ಮೆ ಚೇಸ್ ಮಾಸ್ಟರ್ ಎಂಬುದನ್ನು ಸಾಬೀತುಪಡಿಸಿದರು. ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದಲ್ಲಿ ಆಡಿದ ಏಕೈಕ ಆಟಗಾರರಾಗಿರುವ ಕೊಹ್ಲಿ ಗುರಿ ಬೆನ್ನಟ್ಟುವ ವೇಳೆ ಸಂಯಮದಿಂದ ಆಡಿದರು . ಗೆಲುವಿನ ಅರ್ಧಶತಕದ ಜತೆಗೆ , ಅವರು ಕೆಕೆಆರ್ ವಿರುದ್ಧ 1,000 ರನ್‌ಗಳನ್ನು ಪೂರೈಸಿದರು. ಕೊಹ್ಲಿ 36 ಎಸೆತಗಳಲ್ಲಿ 59 ರನ್ (4 ಬೌಂಡರಿ, 3 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.
5. ಅಜಿಂಕ್ಯ ರಹಾನೆ (KKR)
ಕೆಕೆಆರ್ನ ಹೊಸ ನಾಯಕ ಅಜಿಂಕ್ಯ ರಹಾನೆ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, 31 ಎಸೆತಗಳಲ್ಲಿ 56 ರನ್ (6 ಬೌಂಡರಿ, 4 ಸಿಕ್ಸರ್) ಗಳಿಸಿದರು. ಅವರು ಆಕ್ರಮಣಕಾರಿಯಾಗಿ ಆಡುತ್ತಿದ್ದಾಗ ಕೆಕೆಆರ್ 200ಕ್ಕೂ ಅಧಿಕ ರನ್ ಗಳಿಸುವ ಹಾದಿಯಲ್ಲಿತ್ತು. ಆದರೆ ಆರ್ಸಿಬಿ ನಿಯಮಿತ ವಿಕೆಟ್ ಉರುಳಿಸಿ ರನ್ ವೇಗವನ್ನು ಹತೋಟಿಗೆ ತಂದಿತು.