ಇತಿಹಾಸ ಬರೆದ ನಾಗಾಲ್ಯಾಂಡ್‌ ಚುನಾವಣೆ: 198 ಮಹಿಳೆಯರು ಕಣದಲ್ಲಿ

ನಾಗಾಲ್ಯಾಂಡಿನಲ್ಲಿ 20 ವರ್ಷಗಳು ಹಾಗೂ ಕಾನೂನು ಅಡೆತಡೆಗಳ ಬಳಿಕ ಮಹಿಳೆಯರಿಗೆ ಶೇ.33 ಮೀಸಲು ನೀಡಿರುವ ನಾಗರಿಕ ಚುನಾವಣೆಗಳು ನಡೆಯುತ್ತಿವೆ. ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ.

Update: 2024-06-26 10:10 GMT
ಗ್ರಾಮಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಲ್ಲ.ಆದರೆ, ಅವರು ಕುಟುಂಬ ಮತ್ತು ಸಮುದಾಯ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ; ಅಂತರ್ ಗ್ರಾಮಗಳ ಕದನ ಮತ್ತು ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಾರೆ.

ನಾಗಾಲ್ಯಾಂಡಿನಲ್ಲಿ ಮೊದಲ ಬಾರಿಗೆ ಮಹಿಳಾ ಕೋಟಾದೊಂದಿಗೆ ನಗರ ಸ್ಥಳೀಯ ಸಂಸ್ಥೆ (ಯುಎಲ್‌ಬಿ)ಗಳಿಗೆ ಚುನಾವಣೆ ಇಂದು (ಜೂನ್ 26) ನಡೆಯುತ್ತಿದೆ. 198 ಮಹಿಳೆಯರು ಕಣದಲ್ಲಿದ್ದು, ರಾಜ್ಯ ರಾಜಕೀಯದಲ್ಲಿ ಪುರುಷ ಏಕಸ್ವಾಮ್ಯವನ್ನು ಮುರಿಯುವ ನಿರೀಕ್ಷೆಯಿದೆ.

ದಿಮಾಪುರ, ಕೊಹಿಮಾ ಮತ್ತು ಮೊಕೋಕ್ಚುಂಗ್‌ ಮುನ್ಸಿಪಲ್ ಕೌನ್ಸಿಲ್‌ಗಳು ಮತ್ತು 36 ಟೌನ್ ಕೌನ್ಸಿಲ್‌ಗಳು 20 ವರ್ಷಗಳ ನಂತರ ಚುನಾ ವಣೆಗೆ ಹೋಗುತ್ತಿವೆ. ಮಹಿಳೆಯರಿಗೆ ಶೇ. 33 ಮೀಸಲಿಗೆ ಪ್ರಬಲ ಬುಡಕಟ್ಟು ಸಂಘಟನೆಗಳ ಆಕ್ಷೇಪ ಅಡೆತಡೆಗೆ ಕಾರಣ.

2017 ರಲ್ಲಿ ನಾಗಾಲ್ಯಾಂಡ್ ಸರ್ಕಾರವು ಸಂವಿಧಾನದ 74ನೇ ತಿದ್ದುಪಡಿಯನ್ವಯ ಶೇ.33 ಮಹಿಳಾ ಮೀಸಲಿನೊಂದಿಗೆ ಚುನಾವಣೆ ನಡೆಸಲು ಪ್ರಯತ್ನಿಸಿದಾಗ, ಹಿಂಸಾತ್ಮಕ ಪ್ರತಿರೋಧ ಎದುರಾಗಿತ್ತು. ಮತದಾನದ ಮುನ್ನಾ ದಿನ ನಡೆದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡರು. ಪ್ರತಿಭಟನಾಕಾರರು ಕೊಹಿಮಾ ಮುನ್ಸಿಪಲ್ ಕೌನ್ಸಿಲ್ ಕಟ್ಟಡ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದರು. ವಾರಗಳ ಕಾಲ ನಡೆದ ನಿರಂತರ ಹಿಂಸಾಚಾರದಿಂದ ಆಗಿನ ಮುಖ್ಯಮಂತ್ರಿ ಟಿ.ಆರ್. ಝೆಲಿಯಾಂಗ್ ರಾಜೀನಾಮೆ ನೀಡಬೇಕಾಯಿತು.

ಲವಲವಿಕೆ ವಾತಾವರಣ: ಆದರೆ, ಈ ಬಾರಿ ಮಹಿಳೆಯರಲ್ಲಿ ನಿರೀಕ್ಷೆ ಮತ್ತು ಭರವಸೆ ಮೂಡಿದೆ. ʻನಾಗರಿಕ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ನಾಗಾ ಮಹಿಳೆಯರ ರಾಜಕೀಯ ಸಬಲೀಕರಣದ ಕಡೆಗಿನ ದೊಡ್ಡ ಹೆಜ್ಜೆ. ನಾನು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದೇನೆ.ಚುನಾಯಿತಳಾದರೆ, ನನ್ನ ಪ್ರದೇಶದ ಉನ್ನತಿಗೆ ಕೆಲಸ ಮಾಡುತ್ತೇನೆ. ಮಹಿಳೆಯರ ಧ್ವನಿಯೂ ಆಗುತ್ತೇನೆ,ʼ ಎಂದು ದಿಮಾಪುರ ವಾರ್ಡ್ ನಂ 4 ರ ಕಾಂಗ್ರೆಸ್ ಅಭ್ಯರ್ಥಿ ಅಪಾಲೆ ತೋಪಿ ಹೇಳಿದರು.

ಕಣದಲ್ಲಿರುವ 523 ಅಭ್ಯರ್ಥಿಗಳಲ್ಲಿ 198 ಮಹಿಳೆಯರಿದ್ದಾರೆ. ಆರಂಭದಲ್ಲಿ 238 ಮಹಿಳೆಯರು ಸೇರಿದಂತೆ 670 ಮಂದಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 79 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದರು; 64 ಮಂದಿ ಅವಿರೋಧವಾಗಿ ಗೆಲುವು ಸಾಧಿಸಿದ್ದು, ನಾಲ್ಕು ನಾಮಪತ್ರಗಳು ತಿರಸ್ಕೃತಗೊಂಡಿವೆ.

ಹೊಸ ದಾಖಲೆ: ರಾಜ್ಯದಲ್ಲಿ ಈವರೆಗೆ ಇಷ್ಟು ಸಂಖ್ಯೆಯ ಮಹಿಳಾ ಸ್ಪರ್ಧಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸಿರಲಿಲ್ಲ. ಅವರ ಪ್ರಾತಿನಿಧ್ಯ ಎಷ್ಟು ಕಳಪೆಯಾಗಿತ್ತು ಎಂದರೆ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಐದಕ್ಕಿಂತ ಹೆಚ್ಚಿರಲಿಲ್ಲ.

ಇದಕ್ಕೆ ಕಾರಣವೇನೆಂದರೆ, ನಾಗಾ ಸಾಂಪ್ರದಾಯಿಕ ಆಚರಣೆಗಳು ಮತ್ತು ಕಾನೂನುಗಳು ಅಧಿಕಾರದ ಸ್ಥಾನಗಳಿಂದ ಮಹಿಳೆಯರನ್ನು ಹೊರಗಿಡುತ್ತವೆ. ಗ್ರಾಮಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರುವುದಿಲ್ಲ. ಆದರೆ, ಅವರು ಕುಟುಂಬ ಮತ್ತು ಸಮುದಾಯ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ; ಅಂತರ್ ಗ್ರಾಮಗಳ ಕದನಗಳು ಮತ್ತು ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಾರೆ.

 ನಾಗಾ ಸಾಂಪ್ರದಾಯಿಕ ಆಚರಣೆಗಳ ಉಲ್ಲಂಘನೆ; ನಾಗಾ ಸಂಸ್ಕೃತಿ, ಸಂಪ್ರದಾಯಗಳು, ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು ಮತ್ತು ಭೂ ಮಾಲೀಕತ್ವವನ್ನು ರಕ್ಷಿಸಲು ಸಂವಿಧಾನದ 371 ಎ ವಿಧಿ ಅಡಿಯಲ್ಲಿ ರಾಜ್ಯಕ್ಕೆ ನೀಡಲಾದ ವಿಶೇಷ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಬುಡಕಟ್ಟು ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.

ನಾಗಾ ಮಹಿಳಾ ಸಂಘಟನೆಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಹೋದಾಗ, ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. 2022ರಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನದ ಪ್ರಕಾರ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಕಾಯಿದೆಗೆ ತಿದ್ದುಪಡಿ: ಅಡೆತಡೆಗಳನ್ನು ನಿವಾರಿಸಲು ಸರ್ಕಾರವು ಬುಡಕಟ್ಟು ಸಂಘಟನೆಗಳೊಂದಿಗೆ ಸರಣಿ ಸಮಾಲೋಚನಾ ಸಭೆಗಳನ್ನು ನಡೆಸಿತು. ಸರ್ಕಾರ 2023 ರಲ್ಲಿ ನಾಗಾಲ್ಯಾಂಡ್ ಮುನ್ಸಿಪಲ್ ಕಾಯಿದೆಗೆ ತಿದ್ದುಪಡಿ ತಂದು, ಅಧ್ಯಕ್ಷ ಸ್ಥಾನದ ಮೀಸಲು ತೆಗೆದುಹಾಕಿ, ಚುನಾವಣೆಗೆ ದಾರಿ ಮಾಡಿಕೊಟ್ಟಿತು. ಗಮನಾರ್ಹ ಅಂಶವೆಂದರೆ, ನಾಗಾಲ್ಯಾಂಡ್ ಕಳೆದ ವರ್ಷವಷ್ಟೇ ಮೊದಲ ಬಾರಿಗೆ ಇಬ್ಬರು ಮಹಿಳೆಯರನ್ನು ವಿಧಾನಸಭೆಗೆ ಆಯ್ಕೆ ಮಾಡಿದೆ. 2022ರಲ್ಲಿ ರಾಜ್ಯದ ಮೊದಲ ಮಹಿಳಾ ರಾಜ್ಯಸಭೆ ಸದಸ್ಯೆ, ಬಿಜೆಪಿಯ ಫಾಂಗ್ನಾನ್ ಕೊನ್ಯಾಕ್ ಆಯ್ಕೆಯಾದರು.

ʻರಾಜ್ಯ ಸರ್ಕಾರ ಅಧ್ಯಕ್ಷರ ಉನ್ನತ ಹುದ್ದೆಯನ್ನು ಕಾಯ್ದಿರಿಸದಿರಲು ಒಪ್ಪಿಕೊಂಡಿರುವುದರಿಂದ, ನಮ್ಮ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಮಧ್ಯಸ್ಥಗಾರರು ಭಾವಿಸಿದ್ದಾರೆ. ಇದರಿಂದ ಮೀಸಲಿಗೆ ಸಮ್ಮತಿ ನೀಡಿದ್ದೇವೆ,ʼ ಎಂದು ಹಿರಿಯ ನಾಗಾ ಬುಡಕಟ್ಟು ನಾಯಕ ಇಮ್ಟಿಪೋಕಿಮ್ ಹೇಳಿದರು. ಅವರು ಇತ್ತೀಚಿನವರೆಗೆ ನಾಗಾ ಹೋಹೋನ ಹಿರಿಯ ಸದಸ್ಯರಾಗಿದ್ದರು ಮತ್ತು ಅಯೋ ನಾಗಾ ಸಮುದಾಯದ ಪ್ರಮುಖ ಸಂಸ್ಥೆ, ಅಯೋ ಸೆಂಡೆನ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ನಾಗಾ ಹೋಹೋ ಹಾಲಿ ಮುಖ್ಯಸ್ಥ ಸುಲಂತಂಗ್ ಲೋಥಾ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ.

ʻನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ಅವರ ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಮಹಿಳೆ ಯರು ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕಡೆಗೆ ಗಮನ ಹರಿಸುವುದು ಮತ್ತು ನೀತಿ ರಚನೆ ಮೇಲೆ ಪ್ರಭಾವ ಬೀರುವ ಮಹಿಳಾ ನಾಯಕರ ಹೊರಹೊಮ್ಮುವಿಕೆಯಿಂದ ಒಟ್ಟಾರೆ ಆಡಳಿತದ ಗುಣಮಟ್ಟ ಹೆಚ್ಚುತ್ತದೆ.ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ; ಹೆಚ್ಚು ಸಮಾನ ಸಮಾಜವನ್ನು ಉತ್ತೇಜಿಸುತ್ತದೆ,ʼ ಎಂದು ಎಂಐಟಿ ಸ್ಕೂಲ್ ಆಫ್ ಗವರ್ನಮೆಂಟ್‌ನ ವಿದ್ಯಾರ್ಥಿ ಬೊಮಿಟೊ ವಿ ಕಿನಿಮಿ ಹೇಳಿದರು.

ಹೊಸ ಆರಂಭ: ʻಮಹಿಳೆಯರು ಶಾಸಕಾಂಗ ಸಂಸ್ಥೆಗಳಲ್ಲಿ ಸೇರಿದ ಮಾತ್ರಕ್ಕೆ ರಾಜಕೀಯ ಅಧಿಕಾರ ಸಿಗುವುದಿಲ್ಲʼ ಎಂದು ಆಂಗ್ಲ ದಿನಪತ್ರಿಕೆ ಸಂಪಾದಕಿ ಮೊನಾಲಿಸಾ ಚಾಂಗ್ಕಿಜಾ ಹೇಳುತ್ತಾರೆ.

ʻದೇಶದ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳಲ್ಲಿದ್ದ ಮಹಿಳೆಯರು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನದನ್ನು ಮಾಡಲಿಲ್ಲ.ಇತ್ತೀಚೆಗೆ ಚುನಾಯಿತರಾದ ಶಾಸಕಿಯರು ಮತ್ತು ಏಕೈಕ ರಾಜ್ಯಸಭಾ ಸದಸ್ಯೆ ತಮ್ಮದೇ ಹಾದಿ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಪಕ್ಷದ ಪುರುಷ ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ,ʼ ಎಂದು ಹೇಳಿದರು. 

ಆದರೆ, ನಾಗಾ ಸಮಾಜವನ್ನು ಲಿಂಗ ಸಮನ್ವಯಗೊಳಿಸಲು ಹೊಸ ಆರಂಭ ಮಾಡಲಾಗಿದೆ,ʼ ಎಂದು ಸೇರಿಸಿದರು. ಮುಂದಿನ ಹಂತದಲ್ಲಿ ಸಾಂಪ್ರದಾಯಿಕ ಕಾನೂನುಗಳು ಮಹಿಳೆಯರನ್ನು ಒಳಗೊಳ್ಳುವಂತೆ ಸುಧಾರಿಸಬೇಕಿದೆ ಎಂದು ಹೇಳಿದರು.

Tags:    

Similar News