ಅತ್ಯಾಚಾರ ಆರೋಪ: ವಿಂಗ್ ಕಮಾಂಡರ್ ಮೇಲೆ ಎಫ್‌ಐಆರ್‌

ಶ್ರೀನಗರದ ಏರ್ ಫೋರ್ಸ್ ಸ್ಟೇಷನ್ ಅಧಿಕಾರಿಗಳು ತಮಗೆ ನಿರಂತರ ಕಿರುಕುಳ, ಮಾನಸಿಕ ಹಿಂಸೆ ನೀಡಿದ್ದಾರೆ. ವಿಚಾರಣೆ ನಡೆಸಿದ ಆಂತರಿಕ ಸಮಿತಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಿಲ್ಲ. ಎಲ್ಲರೂ ಅಪರಾಧಿಗೆ ಸಹಾಯ ಮಾಡುತ್ತಿದ್ದರು ಎಂದು ಮಹಿಳಾ ಅಧಿಕಾರಿ ದೂರಿದ್ದಾರೆ.

Update: 2024-09-11 07:52 GMT

ಭಾರತೀಯ ವಾಯುಪಡೆಯ ಮಹಿಳಾ ಫ್ಲೈಯಿಂಗ್ ಆಫೀಸರ್ ನೀಡಿದ ಅತ್ಯಾಚಾರ ದೂರಿನ ಮೇರೆಗೆ ವಿಂಗ್ ಕಮಾಂಡರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಐಎಎಫ್ ಅಧಿಕಾರಿಗಳು ಶ್ರೀನಗರದಲ್ಲಿ ನೆಲೆಸಿದ್ದಾರೆ. ತನಿಖೆಗೆ ಸಹಕರಿಸುತ್ತಿದ್ಧೇವೆ ಎಂದು ಐಎಎಫ್ ಹೇಳಿದೆ. 

ಎಫ್‌ಐಆರ್ ದಾಖಲು: ಮಹಿಳಾ ಅಧಿಕಾರಿ(26 ವರ್ಷ) ದೂರು ನೀಡಿದ ಒಂದು ದಿನದ ನಂತರ ಐಪಿಸಿ ಸೆಕ್ಷನ್ 376 (2) ರ ಅಡಿಯಲ್ಲಿ ಕೇಂದ್ರ ಕಾಶ್ಮೀರದ ಬುದ್ಗಾಮ್ ಪೊಲೀಸ್ ಠಾಣೆಯಲ್ಲಿ ಭಾನುವಾರ (ಸೆಪ್ಟೆಂಬರ್ 8) ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. 

ʻಪ್ರಕರಣದ ಬಗ್ಗೆ ತಿಳಿದಿದೆ. ಬುದ್ಗಾಮ್ ಪೊಲೀಸ್ ಠಾಣೆ ಈಸಂಬಂಧ ಶ್ರೀನಗರದ ವಾಯುಪಡೆ ಠಾಣೆಯನ್ನು ಸಂಪರ್ಕಿಸಿದೆ. ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ,ʼ ಎಂದು ಐಎಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಹೊಸ ವರ್ಷದ ಪಾರ್ಟಿಯಲ್ಲಿ ದೌರ್ಜನ್ಯ: ʻಡಿಸೆಂಬರ್ 31, 2023 ರಂದು ಅಧಿಕಾರಿಗಳ ಮೆಸ್‌ನಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ಉಡುಗೊರೆ ಸ್ವೀಕರಿಸಿದಿರಾ ಎಂದು ವಿಂಗ್‌ ಕಮ್ಯಾಂಡರ್‌ ಕೇಳಿದರು. ಇಲ್ಲ ಎಂದಾಗ ತಮ್ಮ ಕೋಣೆಗೆ ಬರಲು ಹೇಳಿ, ಮೌಖಿಕ ಸಂಭೋಗಕ್ಕೆ ಬಲವಂತಪಡಿಸಿದರು.ನಾನು ಪ್ರತಿರೋಧಿಸಿದೆ. ಕೊನೆಗೆ ಅವರನ್ನು ತಳ್ಳಿ ಓಡಿಹೋದೆ,ʼ ಎಂದಿದ್ದಾರೆ. 

ವರದಿ ಮಾಡಲು ಹಿಂಜರಿಕೆ: ಇಬ್ಬರು ಮಹಿಳಾ ಅಧಿಕಾರಿಗಳು ದೂರು ದಾಖಲಿಸಲು ಮಾರ್ಗದರ್ಶನ ನೀಡಿದರು. ಮಾನಸಿಕ ಆಘಾತಕ್ಕೆ ಒಳಗಾಗಿದ್ದ ನಾನು ದೂರು ದಾಖಲಿಸಲು ಹಿಂಜರಿದೆ. ಅವಿವಾಹಿತೆಗೆ ಸೇನೆಯಲ್ಲಿ ಈ ಅನುಭವದಿಂದಾದ ಮಾನಸಿಕ ಯಾತನೆಯನ್ನು ವಿವರಿಸಲು ಸಾಧ್ಯವಿಲ್ಲ. ಕೊನೆಗೆ, ಧೈರ್ಯ ಮಾಡಿ ದೂರು ನೀಡಿದೆ. ಕರ್ನಲ್ ಶ್ರೇಣಿಯ ಅಧಿಕಾರಿಯೊಬ್ಬರನ್ನು ತನಿಖೆಗೆ ನೇಮಿಸಲಾಯಿತು ಎಂದು ಹೇಳಿದರು.

ಮುಚ್ಚಿ ಹಾಕುವ ಯತ್ನ: ʻಜನವರಿ 29, 30ರಂದು ವಿಂಗ್ ಕಮಾಂಡರ್ ಜೊತೆ ಕುಳಿತುಕೊಳ್ಳುವಂತೆ ಮಾಡಲಾಯಿತು. ಅವರು ನನ್ನ ಹೇಳಿಕೆ ಮತ್ತು ಪರೀಕ್ಷೆಯನ್ನು ಗಮನಿಸಿದರು. ಅವರ ಉಪಸ್ಥಿತಿಯನ್ನು ವಿರೋಧಿಸಿದೆ. ತಪ್ಪು ಮರೆಮಾಡಲು, ತನಿಖೆಯನ್ನು ಮುಚ್ಚಲಾಯಿತು,ʼ ಎಂದು ಹೇಳಿದರು.

ʻಆನಂತರ, ಆಂತರಿಕ ಸಮಿತಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ತಿಳಿಸಲಾಯಿತು. ಸಮಿತಿಯನ್ನು ರಚಿಸಲು ಎರಡು ತಿಂಗಳು ತೆಗೆದುಕೊಂಡರು. ಆರೋಪಿಗೆ ಸಹಾಯ ಮಾಡಲು ನಿಲ್ದಾಣಾಧಿಕಾರಿ ಪ್ರಯತ್ನಿಸಿದರು. ತಾವು ಒತ್ತಾಯಿಸಿದ ಬಳಿಕವಷ್ಟೇ ವೈದ್ಯಕೀಯ ಪರೀಕ್ಷೆ ಮಾಡಲಾ ಯಿತು. ಆಂತರಿಕ ಸಮಿತಿ ಸಮರ್ಪಕವಾಗಿ ವಿಚಾರಣೆ ಮಾಡಲಿಲ್ಲ. ಎಲ್ಲರೂ ಅಪರಾಧಿಗೆ ಸಹಾಯ ಮಾಡುತ್ತಿದ್ದರು,ʼ ಎಂದು ಫ್ಲೈಯಿಂಗ್ ಆಫೀಸರ್ ಆರೋಪಿಸಿದ್ದಾರೆ.

ಪ್ರತಿದಿನ ಕಿರುಕುಳ: ʻಸಾಕ್ಷ್ಯಗಳ ಕೊರತೆಯಿಂದ ಘಟನೆ ಸಂಭವಿಸಿದೆಯೇ, ಇಲ್ಲವೇ ಎಂದು ಗೊತ್ತಾಗುತ್ತಿಲ್ಲ ಎಂದು ಆಂತರಿಕ ಸಮಿತಿ ಹೇಳಿದ್ದು, ಮೇ ತಿಂಗಳಲ್ಲಿ ತನಿಖೆಯನ್ನು ಮುಚ್ಚಿದೆ. ಸಾಕ್ಷಿಯನ್ನು ಮುಂದಿಟ್ಟುಕೊಂಡು ಯಾರೂ ಲೈಂಗಿಕ ದೌರ್ಜನ್ಯ ನಡೆಸುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಇಲ್ಲವೇ? ತಮಗೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದು, ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ನನ್ನ ವೈಯಕ್ತಿಕ ಸಂವಹನಗಳನ್ನು ಅನಧಿಕೃತವಾಗಿ ಮೇಲ್ವಿಚಾರಣೆ ಮಾಡಲಾಗಿದೆ. ನನ್ನೊಡನೆ ಮಾತನಾಡುವವರಿಗೆ ಕಿರುಕುಳ ನೀಡಲಾಗಿದೆ,ʼ ಎಂದು ದೂರಿದ್ದಾರೆ. 

Tags:    

Similar News