ತೆಲಂಗಾಣ ಪಟ್ಟಣದಲ್ಲಿ ಮಾರ್ವಾಡಿಗಳ ವಿರುದ್ಧ ‘ವಾಪಸ್ ಚಲೋ’ ಕೂಗು: ತೆಲುಗು ಬಿಡ್ಡರ ಆಕ್ರೋಶ
ತೆಲಂಗಾಣದ ಬಹುತೇಕ ಕಡೆ ಉತ್ತರ ಭಾರತದ ಮಾರ್ವಾಡಿಗಳೇ ತುಂಬಿಕೊಂಡಿದ್ದಾರೆ. ಜವಳಿ, ವಜ್ರ, ಚಿನ್ನ, ಸಗಟು, ಕಿರಾಣಿ ಅಂಗಡಿ ಸೇರಿದಂತೆ ವ್ಯಾಪಾರದ ಎಲ್ಲಾ ಕ್ಷೇತ್ರಗಳಲ್ಲಿ ಅವರೇ ಆಕ್ರಮಿಸಿಕೊಂಡಿದ್ದರಿಂದ ನಮ್ಮ ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದು ಸ್ಥಳೀಯರ ಆರೋಪವಾಗಿದ್ದು, ಮಾರ್ವಾಡಿಗಳ ವಿರುದ್ಧ ‘ವಾಪಸ್ ಚಲೋ’ ಕೂಗು ಎದ್ದಿದೆ.;
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಮಂಗಲ್ ಪುರಸಭೆಯ ವ್ಯಾಪ್ತಿಯಲ್ಲಿ ಆಗಸ್ಟ್ 18ರಂದು ಸ್ಥಳೀಯ ವ್ಯಾಪಾರಿಗಳು ನೀಡಿದ ಮುಷ್ಕರದ ಬಹಳ ದೊಡ್ಡ ಪರಿಣಾಮವನ್ನು ಬೀರಿದೆ. ಅವರ ಆಕ್ರೋಶವಿರುವುದು ಆ ಪ್ರದೇಶದಲ್ಲಿನ ಮಾರ್ವಾಡಿ ವ್ಯಾಪಾರಿ ಸಮುದಾಯದ ಪ್ರಾಬಲ್ಯದ ವಿರುದ್ಧ.
ಮೂಲತಃ ರಾಜಸ್ಥಾನದವರಾದ ಮಾರ್ವಾಡಿಗಳು, ಸ್ಥಳೀಯ ವ್ಯವಹಾರಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ ಎಂಬುದು ಆರೋಪ. ಇದಕ್ಕೆ ರಾಜಕೀಯ ಆಯಾಮವೂ ಸೇರಿಕೊಂಡಿದ್ದು, ಸಾಮಾಜಿಕ-ಸಾಂಸ್ಕೃತಿಕ ಸಮೀಕರಣಗಳಿಗೆ ಪುಷ್ಟಿ ನೀಡಿದೆ.
ರಾಜ್ಯ ರಾಜಧಾನಿ ಹೈದರಾಬಾದ್ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಅಮಂಗಲ್, ಸುಮಾರು 19,000 ಜನಸಂಖ್ಯೆಯನ್ನು ಹೊಂದಿರುವ ಊರು. ರಂಗಾರೆಡ್ಡಿ ಜಿಲ್ಲೆಯ ಆರ್ಥಿಕತೆಗೆ ಭಾರಿ ಕೊಡುಗೆ ನೀಡುತ್ತ ಬಂದಿರುವ ಮತ್ತು ಪ್ರತಿ ವ್ಯಕ್ತಿಯ ಆದಾಯವನ್ನು ರೂ. 9.47 ಲಕ್ಷಕ್ಕೆ ಹೆಚ್ಚಿಸುವ ಒಂದು ಜನನಿಬಿಡ ವ್ಯಾಪಾರ ಸಮುದಾಯಕ್ಕೆ ಈ ಊರು ನೆಲೆಯಾಗಿದೆ. ಇದು ಹೈದರಾಬಾದ್ಗಿಂತ ಸುಮಾರು ಎರಡು ಪಟ್ಟು ಹೆಚ್ಚು. ಹೈದರಾಬಾದ್ ರಾಜ್ಯದ ಶ್ರೀಮಂತ ಜಿಲ್ಲೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಎಲ್ಲೆಲ್ಲೂ ತುಂಬಿರುವ ಮಾರ್ವಾಡಿಗಳು
ಆ ಸಮುದಾಯದ ಪ್ರಾಬಲ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ‘ಮಾರ್ವಾಡಿಗಳೇ ಹಿಂದಕ್ಕೆ ಹೋಗಿ’ ಎಂಬ ಘೋಷಣೆಯನ್ನು ಮುಂದಿಟ್ಟಿದ್ದಾರೆ. ತೆಲಂಗಾಣದಲ್ಲಿ ಜವಳಿ, ವಜ್ರ, ಚಿನ್ನ, ಸಗಟು, ಚಿಲ್ಲರೆ ಮತ್ತು ಸ್ಥಳೀಯ ಕಿರಾಣಿ ಅಂಗಡಿಗಳು ಸೇರಿದಂತೆ ಬಹುತೇಕ ಎಲ್ಲಾ ವ್ಯಾಪಾರ ಕ್ಷೇತ್ರಗಳಲ್ಲಿ ಅವರೇ ಆಕ್ರಮಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಗುರುತರ ಆರೋಪ ಮಾಡುತ್ತಾರೆ.
ಈ ಆರೋಪದಲ್ಲಿನ ಸತ್ಯಾಸತ್ಯತೆಯನ್ನು ದೃಢೀಕರಿಸಲು ಯಾವುದೇ ಪ್ರಾಯೋಗಿಕ ದತ್ತಾಂಶ ಲಭ್ಯವಿಲ್ಲದೇ ಇದ್ದರೂ, ಇದರ ಹಿನ್ನೆಲೆಯಲ್ಲಿರುವ ರಾಜಕೀಯ ಗ್ರಹಿಕೆಯು ವಿವಾದಕ್ಕೆ ಕಾರಣವಾಗಿದೆ. ಮಾರ್ವಾಡಿಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಲವಾದ ಬೆಂಬಲಿಗರು ಮತ್ತು ಹಣಕಾಸುದಾರರು ಎಂದು ಪರಿಗಣಿಸಲಾಗಿದೆ.
ಪ್ರತಿಭಟಿಸುತ್ತಿರುವ ಸ್ಥಳೀಯ ಜನರ ಒಂದು ವರ್ಗವು, ಮಾರ್ವಾಡಿಗಳು ತೆಲಂಗಾಣದಲ್ಲಿ ಗಳಿಸಿದ ತಮ್ಮ ಲಾಭವನ್ನು ಬಿಜೆಪಿಗೆ ಹಣಕಾಸು ಒದಗಿಸಲು ಬಳಸುತ್ತಾರೆ ಎಂದು ಆರೋಪಿಸುತ್ತದೆ. ಅನೇಕರು ಬಿಜೆಪಿಯನ್ನು ‘ಉತ್ತರ ಭಾರತದ ಪಕ್ಷ’ ಎಂದೇ ಪರಿಗಣಿಸಿದ್ದಾರೆ.
ಹಬ್ಬಗಳಿಗೆ ವ್ಯಾಪಾರದ ಲೇಪ
ವ್ಯಾಪಾರದ ಹೊರತಾಗಿಯೂ ಹೊರ ರಾಜ್ಯದಿಂದ ಬಂದ ಮಾರ್ವಾಡಿಗಳು ತೆಲಂಗಾಣದೊಂದಿಗೆ ತಳಕು ಹಾಕಿಕೊಂಡಿರುವ ಧಾರ್ಮಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಬಿಜೆಪಿಗೆ ಸಹಾಯಮಾಡುತ್ತಿದ್ದಾರೆ ಎಂದೂ ಆರೋಪಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರಾಮ ನವಮಿ, ಗಣೇಶ ಚತುರ್ಥಿ ಮತ್ತು ದುರ್ಗಾ ಪೂಜಾದಂತಹ ಹಬ್ಬಗಳ ಸುತ್ತ ಹಬ್ಬಿಕೊಂಡಿರುವ ಆಚರಣೆಗಳೇ ಇದಕ್ಕೆ ಸಾಕ್ಷಿ ಎಂದು ಅವರು ಬೊಟ್ಟುಮಾಡುತ್ತಾರೆ.
ಉತ್ತರ ಭಾರತಕ್ಕೆ ಸೇರಿದ ಸಮುದಾಯದವರು ನಿರ್ಮಿಸಿದ ದೊಡ್ಡ ದೊಡ್ಡ ಪೆಂಡಾಲ್ಗಳನ್ನು ಕೇವಲ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭಗಳಾಗಿ ನೋಡದೆ, ಹೆಚ್ಚಾಗಿ ಲಾಭ-ಕೇಂದ್ರಿತ ವ್ಯಾಪಾರ ಉದ್ಯಮಗಳಾಗಿ ನೋಡಲಾಗುತ್ತಿದೆ.
ರಾಜ್ಯದ ಹಿಂದೂಗಳು ರಾಮ ನವಮಿ ಮತ್ತು ಗಣೇಶ ಚತುರ್ಥಿಯಂತಹ ಹಬ್ಬಗಳನ್ನು ಉತ್ಸಾಹದಿಂದ ಆಚರಿಸುತ್ತಿದ್ದರೂ, ಅವುಗಳ 'ವ್ಯಾಪಾರೀಕರಣ' ಸ್ಥಳೀಯರ ಪಾಲಿಗೆ ಅಪಥ್ಯವಾಗಿದೆ. ಅದನ್ನವರು ಸಂತೋಷದಿಂದ ಸ್ವೀಕರಿಸುತ್ತಿಲ್ಲ. “ಮಾರ್ವಾಡಿಗಳು ತೆಲಂಗಾಣದ ಸಂಸ್ಕೃತಿಯನ್ನು ಅಳವಡಿಸಿಕೊಂಡಿಲ್ಲ” ಎಂಬ ಸಿಟ್ಟು ಅವರಲ್ಲಿದೆ.
ಒಂದು ಕಾಲದಲ್ಲಿ, ಬಿಜೆಪಿಯನ್ನು ಉತ್ತರ ಭಾರತದಲ್ಲಿ ವ್ಯಾಪಾರ ಸಮುದಾಯದ ಪ್ರಾಬಲ್ಯ ಹೊಂದಿರುವ 'ಬನಿಯಾ ಪಕ್ಷ' (ವ್ಯಾಪಾರಿಗಳ ಪಕ್ಷ) ಎಂದು ಗ್ರಹಿಸಲಾಗಿತ್ತು. ಆದರೆ ಅದು ಬಹಳ ಹಿಂದಿನ ಮಾತು. ಪಕ್ಷವು ಈಗ ರಾಷ್ಟ್ರವ್ಯಾಪಿ ವಿಸ್ತರಿಸಿದೆ ಮತ್ತು ಜಾತಿಗಳು ಹಾಗೂ ಸಮುದಾಯಗಳನ್ನು ಒಳಗೊಂಡ ಗಣನೀಯ ಬೆಂಬಲ ನೆಲೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.
ತೆಲಂಗಾಣದಲ್ಲಿ ಇಂತಹ ಹಳೆಯ ನೆನಪುಗಳಿಗೆ ಮತ್ತೆ ಜೀವ ತುಂಬಲಾಗುತ್ತಿದೆ, ಇದಕ್ಕೆ ರಾಜಕೀಯ ಉದ್ದೇಶಗಳು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.
ಸ್ಥಳೀಯರ ತಿರುಗೇಟು
ತೆಲಂಗಾಣದ ಪ್ರಭಾವಿ ಕೇಂದ್ರ ಸಚಿವರಾದ ಬಂಡಿ ಸಂಜಯ್ ಕುಮಾರ್ ಅವರು ಈ ಪ್ರತಿಭಟನೆಯನ್ನು ಅಣಕಿಸಿ ಮಾತನಾಡಿದ್ದಾರೆ ಮತ್ತು ಇದು ಹಿಂದೂಗಳ ವಿರುದ್ಧದ ಹೋರಾಟ ಎಂದು ಟೀಕಿಸಿದ್ದಾರೆ. ಆದರೆ ಇದಕ್ಕೆ ಪ್ರತಿಭಟನಾಕಾರರು ತಿರುಗೇಟು ನೀಡಿ, ಅವರು ತೆಲಂಗಾಣದ ಹಿಂದೂಗಳ ಮತಗಳಿಂದಲೇ ಚುನಾವಣೆ ಗೆದ್ದಿದ್ದಾರೆ. “ಅವರೇನೂ ರಾಜಸ್ಥಾನ ಅಥವಾ ಹರಿಯಾಣದಿಂದ ಮತಗಳನ್ನು ಪಡೆದಿಲ್ಲ” ಎಂದು ಹೇಳಿದ್ದಾರೆ.
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷವಾದ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಈ ಆಂದೋಲನಗಳಿಗೆ ಪರೋಕ್ಷ ಬೆಂಬಲ ನೀಡುತ್ತಿವೆ ಎಂದು ನಂಬಲಾಗಿದೆ.
ಪ್ರಬಲ ಕಾಪು ಸಮುದಾಯಕ್ಕೆ ಸೇರಿದ ನಾಯಕರಾದ ಬಂಡಿ ಸಂಜಯ್ ಅವರು ಸ್ಥಳೀಯ ಬಿಜೆಪಿ ಮುಖ್ಯಸ್ಥರಾಗಿ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ರೂಪಿಸಿಕೊಂಡಿದ್ದರು. 2023ರಲ್ಲಿ, ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನವದೆಹಲಿಗೆ ತೆರಳಿದರು. ಆ ಸಮಯದಲ್ಲಿ, ಬಿಜೆಪಿಯು ಬಿಆರ್ಎಸ್ನೊಂದಿಗೆ ಪರೋಕ್ಷ ಒಪ್ಪಂದ ಮಾಡಿಕೊಂಡಿದೆ ಎಂದು ಶಂಕಿಸಲಾಗಿತ್ತು.
ಕೆಸಿಆರ್ ಎಂದು ಕರೆಯಲ್ಪಡುವ ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಬಂಡಿ ನಿರಂತರವಾಗಿ ದಾಳಿ ಮಾಡುತ್ತ ಬಂದಿರುವುದು ಈ ಊಹಾಪೋಹಕ್ಕೆ ಇಂಬು ನೀಡಿತ್ತು. ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್ಎಸ್ ಸೋತ ಬಳಿಕ ಪರಿಸ್ಥಿತಿ ಬದಲಾಗುತ್ತ ಹೋಯಿತು.
ವಿವಾದದ ಬೆಂಕಿಗೆ ಜಾತಿ ಸಮೀಕ್ಷೆಯ ತುಪ್ಪ
ಈ ವಿವಾದಕ್ಕೆ ಮತ್ತಷ್ಟು ಕುಮ್ಮುಕ್ಕು ನೀಡಿದ ಇನ್ನೊಂದು ಅಂಶವೆಂದರೆ, ಈ ವರ್ಷದ ಆರಂಭದಲ್ಲಿ ಚಾಲನೆ ನೀಡಲಾದ ರಾಜ್ಯದ ಜಾತಿ ಸಮೀಕ್ಷೆ. ಇದು ಹಿಂದುಳಿದ ವರ್ಗಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬುದನ್ನು ಎತ್ತಿ ತೋರಿಸಿದೆ.
ಇತರ ಸಮುದಾಯಗಳ ಸಂಖ್ಯೆಯಲ್ಲಿನ ಹಠಾತ್ ಹೆಚ್ಚಳವು, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಿಗುವ ಪ್ರಯೋಜನಗಳ ಪ್ರಮಾಣವನ್ನು ಹೆಚ್ಚಿಸಲು ಹಿಂದುಳಿದವರ ಸಂಖ್ಯೆಗೆ ಕಡಿವಾಣ ಹಾಕಲಾಗಿದೆ ಅಥವಾ ತಿರುಚಲಾಗಿದೆ ಎಂಬ ಸಂಶಯಕ್ಕೆ ಕಾರಣವಾಗಿದೆ. EWS ಸೌಲಭ್ಯಗಳು ಮುಖ್ಯವಾಗಿ ಮುಂದುವರಿದ ಸಮುದಾಯಗಳಿಗೆ ಹೋಗುತ್ತಿವೆ ಎಂಬುದು ಆಂದೋಲನಕಾರರ ಶಂಕೆ.
ತೆಲಂಗಾಣವು ಹೆಚ್ಚು ತೆರಿಗೆಗಳನ್ನು ಪಾವತಿಸಿದರೂ, ಕೇಂದ್ರದಿಂದ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯಲ್ಲಿ ನ್ಯಾಯಯುತ ಪಾಲು ಸಿಗುತ್ತಿಲ್ಲ ಎಂದು ಆಗಾಗ್ಗೆ ದೂರಲಾಗುತ್ತದೆ. ಒಂದು ದಶಕದ ಹಿಂದೆ ಸ್ಥಾಪನೆಯಾದ ಈ ರಾಜ್ಯವು ಉತ್ತರ ಭಾರತದ ಅನೇಕ ರಾಜ್ಯಗಳಿಗೆ ಹೋಲಿಸಿದರೆ ಶ್ರೀಮಂತವಾಗಿದೆ.
ತೆಲಂಗಾಣ ಎತ್ತಿರುವ ದನಿ ದಕ್ಷಿಣದ ಇತರ ರಾಜ್ಯಗಳ ದೂರುಗಳಿಗಿಂತ ಭಿನ್ನವೇನೂ ಇಲ್ಲ. ಆದರೆ ಹಿಂದಿಯನ್ನು ತೆಲಂಗಾಣದಲ್ಲಿ ಖುಲ್ಲಂಖುಲ್ಲ ಸ್ವೀಕರಿಸುವುದು ವಿಶೇಷ. ಒಂದು ಕಾಲದಲ್ಲಿ ನಿಜಾಮರು ಆಳಿದ ಈ ರಾಜ್ಯ/ಪ್ರದೇಶದಲ್ಲಿ ಹಿಂದಿ ಮತ್ತು ಉರ್ದು ಭಾಷೆಗಳ ಆಸಕ್ತಿದಾಯಕ ಮಿಶ್ರಣವಾಗಿರುವ ಹಿಂದಿಯನ್ನು ಬಳಸಲು ಯಾವುದೇ ಹಿಂಜರಿಕೆ ತೋರುವುದಿಲ್ಲ.
ಬಿಜೆಪಿಗೆ ಎಚ್ಚರಿಕೆಯ ಗಂಟೆ
ಆದರೆ, “ಮಾರ್ವಾಡಿಗಳು ಹಿಂದಕ್ಕೆ ಹೋಗಿ” ಎಂಬ ಹೊಸ ಘೋಷಣೆಯು ಬಿಜೆಪಿ ಮತ್ತು ಅದರ ಹಿಂದುತ್ವದ ಪರಿವಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಷ್ಟ್ರೀಯತೆಯ ಹಿಂದುತ್ವ ಬ್ರ್ಯಾಂಡ್ ಅನ್ನು ಮುನ್ನಲೆಗೆ ತರುವವರಿಗೆ ತೆಲಂಗಾಣದ ಉಪ-ರಾಷ್ಟ್ರೀಯತೆ ಡಿಚ್ಚಿ ಕೊಡುತ್ತಿರುವಂತೆ ಕಾಣುತ್ತಿದೆ. ಈ ರೀತಿಯ 'ಭೂಮಿ ಮತ್ತು ಪ್ರಾದೇಶಿಕ ಆಂದೋಲನ'ವು ಈ ಹಿಂದೆ ನಿಜಾಮನ ಆಡಳಿತವನ್ನೂ ಸುಟ್ಟುಹಾಕಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು.
ಚಂದ್ರಶೇಖರ ರಾವ್ ಅವರು 2001ರಲ್ಲಿ ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ಕಲ್ಪಿಸಬೇಕು ಎಂಬ ಏಕೈಕ ಉದ್ದೇಶದಿಂದ ತೆಲಂಗಾಣ ರಾಷ್ಟ್ರ ಸಮಿತಿ (ಈಗ ಬಿಆರ್‌ಎಸ್) ಎಂದು ಮರುನಾಮಕರಣ ಮಾಡಲಾಗಿದೆ) ಪಕ್ಷವನ್ನು ಸ್ಥಾಪಿಸಿದ್ದರು. 13 ವರ್ಷಗಳ ನಂತರ, ಹೊಸ ರಾಜ್ಯ ಉದಯವಾದಾಗ, ಅವರು ಅದರ ಮೊದಲ ಮುಖ್ಯಮಂತ್ರಿಯಾದರು, ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನ ಮಾಡಿದರು ಮತ್ತು ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಆಂಧ್ರ ಪ್ರದೇಶಕ್ಕೆ ಸೀಮಿತಗೊಳಿಸಿದರು.
ನಿಜಾಮನ ಆಡಳಿತದ ಅಸಮರ್ಥತೆಗಳನ್ನು ಕಾಂಗ್ರೆಸ್ ಮುಂದುವರಿಸಿದೆ ಎಂದು ಆರೋಪಿಸುವ ಮೂಲಕ ಬಿಜೆಪಿ ಆ ಪಕ್ಷವನ್ನು ಟೀಕಿಸಲು ನಿಜಾಮನ ಆಳ್ವಿಕೆಯನ್ನು ಬಳಸಿಕೊಳ್ಳುತ್ತಿದೆ. ಮತ್ತೊಂದೆಡೆ, ರಾವ್ ಅವರು ತೆಲಂಗಾಣದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್ ಮತ್ತು ಟಿಡಿಪಿ ಎರಡನ್ನೂ ದೂಷಿಸುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರ ಮತಗಳನ್ನು ಪಡೆಯುವ ಏಕೈಕ ಉದ್ದೇಶದಿಂದ ನಿಜಾಮರು ಅವರಿಗೆ ದಯಾಳುಗಳಾಗಿದ್ದಾರೆ.
ಸ್ಥಳೀಯ ಅಸ್ಮಿತೆಯ ಹೋರಾಟ
ಒಂದು ದಶಕದ ಅವಧಿಯಲ್ಲಿ ಕಾಂಗ್ರೆಸ್ ತೆಲಂಗಾಣದಲ್ಲಿ ಮತ್ತೆ ಅಧಿಕಾರ ಸೂತ್ರ ಹಿಡಿದಿರುವುದು ಬೇರೆ ವಿಷಯ. ಆದರೆ ಸ್ಥಳೀಯ ಅಸ್ಮಿತೆ ಮತ್ತು ಸ್ವಾಭಿಮಾನದ ಆಧಾರದ ಮೇಲೆ ನಡೆಯುತ್ತಿರುವ ಈ ಎರಡು ಆಂದೋಲನಗಳು ಯಶಸ್ವಿಯಾಗಿವೆ ಎಂಬುದನ್ನು ಗಮನಿಸಬೇಕಾಗಿದೆ.
ಕರ್ನಾಟಕದ ನಂತರ ಅತಿ ಹೆಚ್ಚು ನಿರುದ್ಯೋಗ ದರ ಇರುವುದು ತೆಲಂಗಾಣದಲ್ಲಿಯೇ. ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮತ್ತು ಸ್ಥಳೀಯ ಆರ್ಥಿಕತೆಯನ್ನು ‘ವಲಸಿಗರಾದ ಮಾರ್ವಾಡಿಗಳು' ಆಕ್ರಮಿಸಿಕೊಂಡಿದ್ದಾರೆ. ಇಂತಹುದೊಂದು ಗ್ರಹಿಕೆಯೇ ಬಿಜೆಪಿಯ ಚಿಂತೆ ಕಾರಣವಾದರೆ ಅಚ್ಚರಿಯಿಲ್ಲ.
‘ತೆಲುಗು ಬಿಡ್ಡ’ ಅಥವಾ ‘ತೆಲುಗರ ಹೆಮ್ಮೆ’ ಎಂಬುದಕ್ಕೆ ತೆಲುಗು ರಾಜಕೀಯದಲ್ಲಿ ಯಾವತ್ತೂ ಮೊದಲ ಆದ್ಯತೆ. ಇದೇ ಕಾರಣವನ್ನು ಮುಂದಿಟ್ಟುಕೊಂಡೇ 1983ರಲ್ಲಿ ಟಿಡಿಪಿ ಸಂಸ್ಥಾಪಕ ಎನ್ಟಿ ರಾಮರಾವ್ ಅವರು ಸರ್ವಶಕ್ತ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ನಾಂದಿಯಾಯಿತು.