ಸ್ಥಳೀಯ ವ್ಯಾಪಾರಕ್ಕೆ ಕುತ್ತು; ತೆಲಂಗಾಣದಲ್ಲಿ ʻಮಾರ್ವಾಡೀಸ್ ಗೋ ಬ್ಯಾಂಕ್ ಆಂದೋಲನʼ
ಮಾರ್ವಾಡಿಗಳು ತೆಲಂಗಾಣದ ಬಹುತೇಕ ಎಲ್ಲಾ ವ್ಯಾಪಾರ ಕ್ಷೇತ್ರಗಳನ್ನು, ಅಂದರೆ ಜವಳಿ, ವಜ್ರಗಳು, ಚಿನ್ನ, ಸಗಟು, ಚಿಲ್ಲರೆ, ಮತ್ತು ಸ್ಥಳೀಯ ಕಿರಾಣಾ ಅಂಗಡಿಗಳನ್ನು ವಶಪಡಿಸಿಕೊಂಡಿದ್ದಾರೆ.;
ಸಾಂದರ್ಭಿಕ ಚಿತ್ರ
ರಾಜಸ್ಥಾನದ ಮಾರ್ವಾಡಿಗಳಿಂದ ಸ್ಥಳೀಯ ವ್ಯಾಪಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಮಂಗಲ್ ಪುರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ ವ್ಯಾಪಾರಿಗಳು ಮುಷ್ಕರ ನಡೆಸಿದ್ದು, ಗೋ ಬ್ಯಾಕ್ ಮಾರ್ವಾಡಿ ಎಂಬ ಆಂದೋಲನ ಆರಂಭಿಸಿದ್ದಾರೆ.
ಹೈದರಾಬಾದ್‌ನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಮತ್ತು 19ಸಾವಿರ ಜನಸಂಖ್ಯೆ ಹೊಂದಿರುವ ಅಮಂಗಲ್ ಪುರಸಭೆಯಲ್ಲಿ ಅತಿ ಹೆಚ್ಚು ಮಾರ್ವಾಡಿಗಳು ವ್ಯಾಪಾರ ಆರಂಭಿಸಿದ್ದಾರೆ. ರಂಗಾರೆಡ್ಡಿ ಜಿಲ್ಲೆಯು ಆರ್ಥಿಕತೆಗೆ ಭಾರಿ ಕೊಡುಗೆ ನೀಡುತ್ತಿರುವ ಹಾಗೂ 9.47 ಲಕ್ಷ ರೂ.ತಲಾ ಆದಾಯ ಹೊಂದಿರುವ ಜಿಲ್ಲೆಯಾಗಿದೆ. ಅಲ್ಲದೇ ಹೈದರಾಬಾದ್‌ಗಿಂತ ಸುಮಾರು ಎರಡು ಪಟ್ಟು ಹೆಚ್ಚು ಆದಾಯ ತರುತ್ತಿದೆ. ಆದರೆ, ಇತ್ತೀಚೆಗೆ ರಂಗಾರೆಡ್ಡಿ ಜಿಲ್ಲೆಯಲ್ಲಿ ಮಾರ್ವಾಡಿಗಳು ಎಲ್ಲಾ ರೀತಿಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಸ್ಥಳೀಯರ ವ್ಯಾಪಾರಕ್ಕೆ ತೊಂದರೆಯಾಗಿದೆ ಎಂದು ಅಮಂಗಲ್ ನಿವಾಸಿಗಳು ಆರೋಪಿಸಿದ್ದಾರೆ.
ಜವಳಿ, ವಜ್ರ, ಚಿನ್ನ, ಸಗಟು, ಚಿಲ್ಲರೆ ಮತ್ತು ಸ್ಥಳೀಯ ಕಿರಾಣಿ ಅಂಗಡಿಗಳಿಗೂ ಮಾರ್ವಾಡಿಗಳು ಪ್ರವೇಶ ಮಾಡಿದ್ದಾರೆ. ಇದರಿಂದ ಸ್ಥಳೀಯರು ಬವಣೆ ಅನುಭವಿಸಬೇಕಾಗಿದೆ. ಇದರ ವಿರುದ್ಧ 'ಮಾರ್ವಾಡಿಸ್ ಗೋ ಬ್ಯಾಕ್' ಎಂಬ ಘೋಷಣೆಯೊಂದಿಗೆ ಮುಷ್ಕರ ಆರಂಭಿಸಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.
ಮಾರ್ವಾಡಿಗಳಿಗೆ ಬಿಜೆಪಿ ಬೆಂಬಲ
ಮಾರ್ವಾಡಿಯವರನ್ನು ಬಿಜೆಪಿ ಬೆಂಬಲಿಸುತ್ತಿದೆ ಎಂಬ ರಾಜಕೀಯ ಗ್ರಹಿಕೆ ತೀವ್ರ ವಿವಾದ ಸೃಷ್ಟಿಸಿದೆ. ತೆಲಂಗಾಣದಿಂದ ಗಳಿಸುವ ಲಾಭದ ಹಣವನ್ನು ಮಾರ್ವಾಡಿಗರು ಬಿಜೆಪಿಗೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಇನ್ನು ಕೆಲವರು ಬಿಜೆಪಿಯನ್ನು 'ಉತ್ತರ ಭಾರತೀಯ' ಪಕ್ಷ ಎಂದು ಟೀಕಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ತೆಲಂಗಾಣ ಸಂಸ್ಕೃತಿ 'ಪರಕೀಯ'
ತೆಲಂಗಾಣದಲ್ಲಿ ಮಾರ್ವಾಡಿಗರ ಉಪಟಳದಿಂದ ಸ್ಥಳೀಯ ಸಂಸ್ಕೃತಿಯೂ ಬದಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರಾಮ ನವಮಿ, ಗಣೇಶ ಚತುರ್ಥಿ ಮತ್ತು ದುರ್ಗಾ ಪೂಜೆಯಂತಹ ಹಬ್ಬಗಳನ್ನು ಹೆಚ್ಚು ವಿಜೃಂಬಣೆಯಿಂದ ಆಚರಿಸುವ ಮೂಲಕ ಮಾರ್ವಾಡಿಗರು ತಮ್ಮ ಪಾರುಪತ್ಯೆ ಹೆಚ್ಚಿಸಿಕೊಂಡಿದ್ದಾರೆ. ತೆಲಂಗಾಣವನ್ನು ಲಾಭದ ಉದ್ದೇಶದೊಂದಿಗೆ ವಾಣಿಜ್ಯ ವ್ಯಾಪಾರ ಕೇಂದ್ರವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ತೆಲಂಗಾಣದಲ್ಲಿ ಹಿಂದೂಗಳು ರಾಮನವಮಿ ಮತ್ತು ಗಣೇಶ ಚತುರ್ಥಿಯಂತಹ ಹಬ್ಬಗಳನ್ನು ಉತ್ಸಾಹದಿಂದ ಆಚರಿಸಿದರೂ, ಈ ಹಬ್ಬಗಳ ‘ವಾಣಿಜ್ಯೀಕರಣ’ದ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಮಾರ್ವಾಡಿಗರು ತೆಲಂಗಾಣದ ಸಂಪ್ರದಾಯ ಉಲ್ಲಂಘಿಸುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ತೆಲಂಗಾಣದ ಫೈರ್‌ಬ್ರಾಂಡ್ ಎಂದೇ ಕರೆಯಲಾಗುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರು, ಈ ಮುಷ್ಕರವನ್ನು ಹಿಂದೂಗಳ ವಿರುದ್ಧದ ತಂತ್ರ ಎಂದು ಟೀಕಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸ್ಥಳೀಯರು, ನೀವು ತೆಲಂಗಾಣದಲ್ಲಿ ಹಿಂದೂಗಳ ವೋಟಿನಿಂದ ಚುನಾವಣೆ ಗೆದ್ದಿದ್ದೀರಿ. ರಾಜಸ್ಥಾನ ಅಥವಾ ಹರಿಯಾಣದಿಂದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಆರ್‌ಎಸ್ ಈ ಆಂದೋಲನಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿವೆ ಎನ್ನಲಾಗಿದೆ.
ಜಾತಿ ಸಮೀಕ್ಷೆಯಿಂದ ವಿವಾದ
ವರ್ಷಾರಂಭದಲ್ಲಿ ನಡೆದ ಜಾತಿ ಸಮೀಕ್ಷೆಯಿಂದಲೇ ವಿವಾದ ಸೃಷ್ಟಿಯಾಗಿದೆ. ಈ ಸಮೀಕ್ಷೆಯು ಹಿಂದುಳಿದ ವರ್ಗಗಳ (BC) ಜನಸಂಖ್ಯೆ ಕಡಿಮೆಯಾಗಿದೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಾಗಿದೆ ಎಂದು ತೋರಿಸಿತ್ತು.
ಇತರ ಸಮುದಾಯಗಳಲ್ಲಿನ ಹಠಾತ್ ಹೆಚ್ಚಳವು ಆರ್ಥಿಕವಾಗಿ ದುರ್ಬಲ ವರ್ಗದ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಹಿಂದುಳಿದ ವರ್ಗಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಈ ಸಮೀಕ್ಷೆಯು ಅನುಮಾನಕ್ಕೆ ಕಾರಣವಾಗಿದೆ ಎಂದು ಹೋರಾಟಗಾರರು ಹೇಳಿದ್ದಾರೆ.