ಸಿಂಧೂರ ಸಿಡಿಮದ್ದಾಗಿದೆ..! ಆಪರೇಷನ್ ಸಿಂಧೂರದ ಬಗ್ಗೆ ಪ್ರಧಾನಿ ಮೋದಿ ಬಣ್ಣನೆ

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಂತರ ಮೊದಲ ಬಾರಿಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಸಿಂಧೂರವನ್ನು ಅಳಿಸಲು ಹೊರಟವರು ಧೂಳಾಗಿ ಹೋದರು’ ಎಂದರು.;

Update: 2025-05-22 11:03 GMT

ಪಾಕಿಸ್ತಾನದ ವಿರುದ್ಧ ಯಶಸ್ವಿ ಸೇನಾ ಕಾರ್ಯಾಚರಣೆ ನಡೆಸಿದ ಭಾರತದ ಸಶಸ್ತ್ರ ಪಡೆಗಳ ಕಾರ್ಯವೈಖರಿಯನ್ನು ಪ್ರಶಂಸಿದ ಪ್ರಧಾನಿ ನರೇಂದ್ರ ಮೋದಿ, ‘ಸಿಂಧೂರವು ಸಿಡಿಮದ್ದಾಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ಶತ್ರು ದೇಶಗಳು ನೋಡಿದ್ದಾರೆ’ ಎಂದು ಹೇಳಿದರು.

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಂತರ ಮೊದಲ ಬಾರಿಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಸಿಂಧೂರವನ್ನು ಅಳಿಸಲು ಹೊರಟವರು ಧೂಳಾಗಿ ಹೋದರು’ ಎಂದರು.

‘ಸಿಂಧೂರವು ಬಂದೂಕಿನ ಸಿಡಿಮದ್ದಾಗಿ ಬದಲಾದಾಗ ಏನಾಗುತ್ತದೆ ಎಂಬುವುದನ್ನು ಜಗತ್ತು ಮತ್ತು ದೇಶದ ಶತ್ರುಗಳು ನೋಡಿದ್ದಾರೆ. ನನ್ನ ರಕ್ತನಾಳಗಳಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಸಿಂಧೂರ’ ಎಂದು ತಿಳಿಸಿದರು.

ಇದೇ ವೇಳೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾದ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಅವರು, ‘ಪ್ರತೀಕಾರದ ವಿಷಯದಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಮೂರು ಸಶಸ್ತ್ರ ಪಡೆಗಳಿಗೆ ನಮ್ಮ ಸರ್ಕಾರ ಅವಕಾಶ ನೀಡಿತ್ತು. ಮೂರು ಪಡೆಗಳು ಒಟ್ಟಾಗಿ ಭಾರತದ ಎದುರು ಪಾಕಿಸ್ತಾನ ಮಂಡಿಯೂರುವಂತೆ ಮಾಡಿವೆ’ ಎಂದು ಹೇಳಿದರು.

ಪಾಕಿಸ್ತಾನದೊಂದಿಗೆ ವ್ಯಾಪಾರ–ಮಾತುಕತೆ ಇಲ್ಲ

ಪಾಕಿಸ್ತಾನದೊಂದಿಗೆ ವ್ಯಾಪಾರವಾಗಲಿ, ಮಾತುಕತೆ ನಡೆಸುವುದಾಗಲಿ ಮಾಡುವುದಿಲ್ಲ. ಮಾತುಕತೆ ನಡೆಸುವುದಾದರೆ ಅದು ಪಾಕ್‌ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಮೋದಿ ಹೇಳಿದರು.

‘ಪಾಕಿಸ್ತಾನದ ಪರಮಾಣು ಬೆದರಿಕೆಗೆ ಭಾರತವು ಸೊಪ್ಪು ಹಾಕುವುದಿಲ್ಲ. ಅಲ್ಲದೇ ಭಯೋತ್ಪಾದಕರನ್ನು ಮತ್ತು ಅವರನ್ನು ಪೋಷಿಸುವ ದೇಶವನ್ನು ಪ್ರತ್ಯೇಕವಾಗಿ ನೋಡುವುದಿಲ್ಲ’ ಎಂದರು.

‘ಭಾರತದ ವಿರುದ್ಧ ನೇರ ಹೋರಾಟದಲ್ಲಿ ಪಾಕಿಸ್ತಾನ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ನೇರವಾಗಿ ಯುದ್ಧಕ್ಕೆ ಬಂದರೆ ಸೋಲಬೇಕಾಗುತ್ತದೆ ಎಂದೇ ಅದು ಭಯೋತ್ಪಾದನೆಯನ್ನು ಭಾರತದ ವಿರುದ್ಧ ಹೋರಾಡಲು ಅಸ್ತ್ರವನ್ನಾಗಿ ಮಾಡಿಕೊಂಡಿದೆ’ ಎಂದು ತಿಳಿಸಿದರು.

Tags:    

Similar News