'ತೆಲಂಗಾಣದ ರಾಜಕುಮಾರಿ' ಕೆ ಕವಿತಾ ಅವರ ಪತನಕ್ಕೆ ಕಾರಣವೇನು?
ನಿಜಾಮಾಬಾದ್‌ನಿಂದ 2014 ರಿಂದ 2019ರವರೆಗೆ ಲೋಕಸಭಾ ಸಂಸದೆಯಾಗಿ ಸೇವೆ ಸಲ್ಲಿಸಿದ ಕವಿತಾ, ದೆಹಲಿಯಲ್ಲಿ ಬಿಆರ್‌ಎಸ್ ಮುಖವಾಗಿ ಪ್ರಭಾವ ಬೀರಿದ್ದರು.;
ಕವಿತಾ ಮತ್ತಷ್ಟು ಬಹಿರಂಗಪಡಿಸದಂತೆ ತಡೆಯಲು ಕೆಸಿಆರ್ ಅವರ ಕ್ರಮವನ್ನು ಹತಾಶ ಕ್ರಮವೆಂದು ಪರಿಗಣಿಸಲಾಗುತ್ತಿದೆ.
ಮಾರ್ಚ್ 2024ರಲ್ಲಿ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗುವವರೆಗೂ "ತೆಲಂಗಾಣದ ರಾಜಕುಮಾರಿ" ಎಂದೇ ಕರೆಯಲ್ಪಡುತ್ತಿದ್ದ ಕಲ್ವಕುಂಟ್ಲ ಕವಿತಾ ಇದೀಗ ತಮ್ಮದೇ ಪಕ್ಷದಿಂದ ಹೊರಹಾಕಲ್ಪಟ್ಟಿದ್ದಾರೆ.
ನಿಜಾಮಾಬಾದ್‌ನಿಂದ 2014 ರಿಂದ 2019ರವರೆಗೆ ಲೋಕಸಭಾ ಸಂಸದೆಯಾಗಿ ಸೇವೆ ಸಲ್ಲಿಸಿದ ಕವಿತಾ, ದೆಹಲಿಯಲ್ಲಿ ಬಿಆರ್‌ಎಸ್ ಮುಖವಾಗಿ ಪ್ರಭಾವ ಬೀರಿದ್ದರು. ಆದರೆ, ಅವರ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗಬಾರದೆಂದು ಬಿಆರ್‌ಎಸ್ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ತಮ್ಮ ಮೊದಲ ಸಂಪುಟದಲ್ಲಿ ಯಾವುದೇ ಮಹಿಳಾ ಸಚಿವರನ್ನು ಸೇರಿಸದ ಕ್ರಮವು ವ್ಯಾಪಕವಾಗಿ ಟೀಕಿಸಲ್ಪಟ್ಟಿತು.
ಇಂದು, ಅದೇ ಕೆಸಿಆರ್ ಅವರು ತಮ್ಮ ಮಗಳು ಮತ್ತು ಪ್ರಸ್ತುತ ತೆಲಂಗಾಣ ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾರನ್ನು ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಬಿಆರ್‌ಎಸ್ ಪ್ರಧಾನ ಕಾರ್ಯದರ್ಶಿಗಳಾದ ಟಿ.ರವೀಂದರ್ ರಾವ್ ಮತ್ತು ಸೋಮ ಭರತ್ ಕುಮಾರ್ ಹೇಳುವಂತೆ, ಹಿರಿಯ ನಾಯಕರು ಈ ನಿರ್ಧಾರಕ್ಕೆ ಮನ್ನಣೆ ನೀಡಿದ್ದಾರೆ. ಆದರೆ, ಕವಿತಾರನ್ನು ಪಕ್ಷದಿಂದ ಸಂಪೂರ್ಣವಾಗಿ ಹೊರಹಾಕಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕವಿತಾ ಉಚ್ಛಾಟನೆಗೆ ಕಾರಣಗಳೇನು?
ಕೌಟುಂಬಿಕ ಪೈಪೋಟಿಗಳು
ತೆಲಂಗಾಣದಲ್ಲಿ ರಾಜಕೀಯ ಕೌಟುಂಬಿಕ ಪೈಪೋಟಿ ತಾರಕಕ್ಕೇರಿದ್ದು, ಬಿಆರ್‌ಎಸ್ ಪಕ್ಷದ (BRS) ಮುಖ್ಯಸ್ಥರ ಪುತ್ರಿ ಕವಿತಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಆದರೆ, ಮೂಲಗಳ ಪ್ರಕಾರ ಕವಿತಾ ಅವರು ತಮ್ಮ ಸೋದರ ಮಾವ ಟಿ. ಹರೀಶ್ ರಾವ್ ಮತ್ತು ಸೋದರ ಸಂಬಂಧಿ ಜೋಗಿನಪಲ್ಲಿ ಸಂತೋಷ್ ಅವರ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳೇ ಈ ಕ್ರಮಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಕಾಲೇಶ್ವರಂ ಯೋಜನೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂದು ಕವಿತಾ ಇತ್ತೀಚೆಗೆ ಗಂಭೀರ ಆರೋಪ ಮಾಡಿದ್ದರು. ಹರೀಶ್ ರಾವ್ ಮತ್ತು ಸಂತೋಷ್ ಗುತ್ತಿಗೆದಾರರೊಂದಿಗೆ ಸೇರಿ ಭಾರಿ ಪ್ರಮಾಣದ ಹಣವನ್ನು ಹಂಚಿಕೊಂಡಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದರು. ಈ ಆರೋಪಗಳು ರಾಜ್ಯಾದ್ಯಂತ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ವಿಶೇಷವಾಗಿ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಇದೇ ವಿಷಯದಲ್ಲಿ ಈಗಾಗಲೇ ಮಾಡಿರುವ ಆರೋಪಗಳಿಗೆ ಕವಿತಾ ಅವರ ಹೇಳಿಕೆಗಳು ಮತ್ತಷ್ಟು ಪುಷ್ಟಿ ನೀಡಿದಂತಾಗಿತ್ತು.
ಕವಿತಾ ಅವರ ಈ ಹೇಳಿಕೆಗಳು ಪಕ್ಷದೊಳಗಿನ ಆಂತರಿಕ ಸಂಘರ್ಷವನ್ನು ತೀವ್ರಗೊಳಿಸಿವೆ. ಇದರಿಂದಾಗಿ ಪಕ್ಷದ ನಾಯಕತ್ವ ಮತ್ತು ಸ್ವತಃ ಕೆಸಿಆರ್ ಅವರ ಕುಟುಂಬವೇ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಕವಿತಾ ಅವರು ಮತ್ತಷ್ಟು ವಿಷಯಗಳನ್ನು ಬಹಿರಂಗಪಡಿಸುವುದನ್ನು ತಡೆಯಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಕೆಸಿಆರ್ ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
‘ರಾಜಕುಮಾರಿ’ ಎಲ್ಲಿಗೆ ಜಾರಿದಳು?
2014ರಲ್ಲಿ ತೆಲಂಗಾಣ ರಚನೆಯ ನಂತರ, ಕವಿತಾ ತಮ್ಮ ಸಹೋದರ ಕೆ.ಟಿ. ರಾಮರಾವ್ (ಕೆ.ಟಿ.ಆರ್) ಅವರ ಜೊತೆಗೆ ಪಕ್ಷದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದರು. ಅವರ ಮಾತು ಅಂತಿಮವೆಂದು ಪರಿಗಣಿಸಲಾಗುತ್ತಿತ್ತು. ಕೆ.ಟಿ.ಆರ್ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ರಾಜ್ಯಾದ್ಯಂತ ಅಧಿಕಾರ ಹೊಂದಿದ್ದರೆ, ಕವಿತಾ ಸಂಸದೆಯಾಗಿ ದೆಹಲಿಯಲ್ಲಿ ವಿಷಯಗಳನ್ನು ನಿರ್ವಹಿಸುತ್ತಿದ್ದರು.
ಅವರ "ಸಾಂಸ್ಕೃತಿಕ ಸಂಘಟನೆ" ತೆಲಂಗಾಣ ಜಾಗೃತಿ, ಅರೆ-ರಾಜಕೀಯ ಶಕ್ತಿಯಾಗಿ ಬೆಳೆದಿತು. ಜಾಗೃತಿ ಮತ್ತು ಸರ್ಕಾರ ಪ್ರಾಯೋಜಿತ ಬತುಕಮ್ಮ ಉತ್ಸವಗಳ ಮೂಲಕ ಅವರು ಗಳಿಸಿದ ಪ್ರಾಮುಖ್ಯತೆ ಅವರ ಘನತೆಯನ್ನು ಮತ್ತಷ್ಟು ಹೆಚ್ಚಿಸಿತು. ಈ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಭಾರಿ ಹಣ ಹರಿಯಿತು.
ಆದರೆ ಇದರಿಂದ ಅನಿವಾರ್ಯವಾದ ಚರ್ಚೆ ಪ್ರಾರಂಭವಾಯಿತು. ಕೆಸಿಆರ್ ಅವರ ರಾಜಕೀಯ ಪರಂಪರೆಯನ್ನು ಯಾರು ಮುಂದುವರಿಸುತ್ತಾರೆ, ಕೆ.ಟಿ.ಆರ್ ಅಥವಾ ಕವಿತಾ? ಕುಟುಂಬದೊಳಗೆ ಪೈಪೋಟಿಯ ಬೀಜಗಳು ಇದೇ ವೇಳೆ ಬಿತ್ತಲ್ಪಟ್ಟವು ಎಂದು ಹಲವರು ಅಭಿಪ್ರಾಯಪಟ್ಟರು.
ಯೋಜನೆಗಳು ‘ಎಟಿಎಂ’ಗಳಾಗಿ ಮಾರ್ಪಟ್ಟವು
2019ರಲ್ಲಿ ಕೆಸಿಆರ್ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಕುಟುಂಬದ ಪ್ರಾಬಲ್ಯ ಇನ್ನಷ್ಟು ಗಟ್ಟಿಯಾಯಿತು. ಅವರ ಸೋದರಳಿಯ ಜೋಗಿನಪಲ್ಲಿ ಸಂತೋಷ್ ಕುಮಾರ್ ರಾಜ್ಯಸಭಾ ಸದಸ್ಯರಾದರೆ, ಮಗ ಕ್ಯಾಬಿನೆಟ್ ಸಚಿವನಾಗಿ ಸರ್ಕಾರದಲ್ಲಿ ಬಹುತೇಕ ಎರಡನೇ ಸ್ಥಾನವನ್ನು ಹಿಡಿದಿದ್ದ. ಇನ್ನೊಬ್ಬ ಸೋದರಳಿಯ ಕೂಡ ಸಚಿವ ಸ್ಥಾನ ಪಡೆದಿದ್ದ. ಕವಿತಾ ಸ್ವತಃ "ರಾಜಕುಮಾರಿ" ಎಂದು ಕರೆಯಲ್ಪಟ್ಟರು. ಇದರಿಂದ ಕೆಸಿಆರ್ ಅವರ ಕುಟುಂಬವೇ ಎಲ್ಲಾ ಅಧಿಕಾರ ಸ್ಥಾನಗಳನ್ನು ಕಬಳಿಸಿದೆ ಎಂಬ ಟೀಕೆಗಳು ಕೇಳಿಬಂದವು.
ದೆಹಲಿಯಲ್ಲಿ ಕವಿತಾ ಮದ್ಯ ನೀತಿಯಲ್ಲಿ ಪ್ರಭಾವ ಬೀರುವ ಪ್ರಯತ್ನ ಮಾಡಿದರೆಂದು, ಜೊತೆಗೆ ತೆಲುಗು ಮದ್ಯ ಉದ್ಯಮಿಗಳಿಗೆ ಪರವಾನಗಿಗಳನ್ನು ಕೊಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇದೇ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊದಲಾದ ಉನ್ನತ ರಾಷ್ಟ್ರೀಯ ನಾಯಕರೇ, ತೆಲಂಗಾಣ ಯೋಜನೆಗಳನ್ನು ವೈಯಕ್ತಿಕ ಎಟಿಎಂಗಳಾಗಿ ಮಾಡಿಬಿಟ್ಟಿದ್ದಾರೆಂದು ಕೆಸಿಆರ್ ಕುಟುಂಬದ ವಿರುದ್ಧ ಕಿಡಿಕಾರಿದ್ದರು.
ದೆಹಲಿ ಮದ್ಯ ನೀತಿ ಹಗರಣ
ದೆಹಲಿ ಮದ್ಯ ನೀತಿ ಹಗರಣದಲ್ಲಿ, ಹರೀಶ್ ಮತ್ತು ಸಂತೋಷ್ ವಿರುದ್ಧವೂ ಕವಿತಾ ಭ್ರಷ್ಟಾಚಾರದ ಆರೋಪ ಮಾಡಿದ್ದರೂ, ಅವರು ಕೂಡ ಆರೋಪಮುಕ್ತರಾಗಿಲ್ಲ. ಮದ್ಯ ನೀತಿ ಒಂದು ದೊಡ್ಡ ಹಗರಣವಾಗಿ ರೂಪುಗೊಂಡಂತೆ, ಅವರ ಹೆಸರು ಪ್ರಮುಖವಾಗಿ ಹೊರಹೊಮ್ಮಿತು. ಇದರಿಂದ ಮಾರ್ಚ್ 2024ರಲ್ಲಿ ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸಿತು. ಅವರ ಬಂಧನವು ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ದುರ್ಬಲಗೊಳಿಸಿತು. ತೆಲಂಗಾಣದ ಜನರು, ರಾಜ್ಯ ರಚನೆ ಚಳವಳಿಯ ಹಿಂದಿನ ಪಕ್ಷ, ಅದರ ಮೊದಲ ಕುಟುಂಬ ಮತ್ತು ಪ್ರಮುಖ ನಾಯಕರನ್ನು ಕೇವಲ ಹತ್ತು ವರ್ಷಗಳಲ್ಲಿ ಮಸುಕಾಗುತ್ತಿರುವುದನ್ನು ಕಂಡಿದ್ದಾರೆ.
ಅಂತಿಮವಾಗಿ, ಈ ʼಕಪ್ಪು ಚುಕ್ಕೆʼಯನ್ನು ಹೊರಗಿನವರು ಅಥವಾ ಪ್ರತಿಸ್ಪರ್ಧಿಗಳು ಹೇರಲಿಲ್ಲ; ಅದು ಒಳಗಿನಿಂದಲೇ ಮೂಡಿಬಂದಿತು.ಗಣ್ಯ ಕುಟುಂಬದ ಇತರರನ್ನು ಕೆಡವಲು ಕವಿತಾ ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ, ಅವರ ತಂದೆಯೇ ಆಕೆಯನ್ನು ಪಕ್ಷದಿಂದ ಹೊರಗಟ್ಟುವ ನಿರ್ಧಾರ ತೆಗೆದುಕೊಂಡಿದ್ದಾರೆ.