ಬಾಂಬ್ ಸ್ಫೋಟಿಸಿ ಮೂವರನ್ನು ಕೊಂದ ಆರೋಪದ ಮೇಲೆ ಇಬ್ಬರು ಶಂಕಿತರನ್ನು ಬಂಧಿಸಿದ ವೇಳೆ ನಡೆದ ಹಿಂಸಾಚಾರದಲ್ಲಿ ಎನ್‌ಐ ಎ ಅಧಿಕಾರಿ ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಡಿಸೆಂಬರ್ 2022ರಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಬಲೈ ಚರಣ್ ಮೈತಿ ಮತ್ತು ಮನೋಬ್ರತಾ ಜಾನಾ ಅವರನ್ನು ಪೊಲೀಸರು ಶನಿವಾರ ಬಂಧಿಸಿದರು. ಜಾನಾ ಅವರ ಮನೆ ಸೇರಿದಂತೆ ಐದು ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಯಿತು. ಎನ್‌ಐಎ ತಂಡ ಬಂಧಿತರೊಂದಿಗೆ ಪೊಲೀಸ್ ಠಾಣೆಗೆ ತೆರಳಲು ಪ್ರಯತ್ನಿಸಿದಾಗ, ಸ್ಥಳೀಯ ನಿವಾಸಿಗಳ ಗುಂಪೊಂದು ಅಧಿಕಾರಿಗಳ ಮೇಲೆ ದಾಳಿ ನಡೆಸಿತು. ಒಬ್ಬರಿಗೆ ಸಣ್ಣಪುಟ್ಟ ಗಾಯ ಹಾಗೂ ಎನ್‌ಐಎಯ ವಾಹನಕ್ಕೆ ಹಾನಿಯಾಗಿದೆ.
ಜನಾ ಮತ್ತು ಮೈತಿ ಅವರು ಭಯೋತ್ಪಾದನೆಗೆ ಕಚ್ಚಾ ಬಾಂಬ್ ತಯಾರಿ ಮತ್ತು ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಎನ್‌ಐಎ ಕೂಡ ದೂರು ದಾಖಲಿಸಿದೆ. ʻಸ್ಥಳೀಯರು ಘೇರಾವ್ ಮಾಡಿದರು ಮತ್ತು ಕಲ್ಲು ತೂರಿದರು. ಎನ್‌ಐಎ ಅಧಿಕಾರಿ ಯೊಬ್ಬರು ಗಾಯಗೊಂಡಿದ್ದಾರೆʼ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎನ್‌ಐಎ ವಿರುದ್ಧ ಮಮತಾ ವಾಗ್ದಾಳಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪೂರ್ವ ಮಿಡ್ನಾಪುರ ಜಿಲ್ಲೆಯ ಭೂಪತಿನಗರದಲ್ಲಿ ಗ್ರಾಮಸ್ಥರ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಶನಿವಾರ ಬಲೂರ್‌ಘಾಟ್‌ನಲ್ಲಿ ಆರೋಪಿಸಿದರು. 2022 ರಲ್ಲಿ ನಡೆದ ಪಟಾಕಿ ಸಿಡಿತ ಘಟನೆ ಕುರಿತು ವಿಚಾರಣೆಗೆ ತನಿಖಾ ಸಂಸ್ಥೆ ತಂಡ ಗ್ರಾಮಸ್ಥರ ಮನೆಗಳಿಗೆ ಹೋಗಿದೆ. ಎನ್‌ಐಎ ಮಹಿಳೆ ಯರ ಮೇಲೆ ದಾಳಿ ನಡೆಸಿದ್ದು, ಜನ ಸಿಟ್ಟಿಗೆದ್ದು ಪ್ರತಿಭಟಿಸಿದ್ದಾರೆ ಎಂದು ಹೇಳಿದರು.
ʻಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಗೆಲ್ಲಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಚುನಾವಣೆ ಆಯೋಗ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕೆಂದು ಬಯಸುತ್ತೇವೆ. ಬಿಜೆಪಿಯ ಆಯೋಗವಾಗಿ ಬದಲಾಗಬಾರದು. ಇಸಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಆದರೆ, ಇಡಿ, ಸಿಬಿಐ ಮತ್ತು ಐಟಿ ಅಧಿಕಾರಿಗಳನ್ನು ಬದಲಿಸಿಲ್ಲ. ಎನ್‌ಐಎ, ಸಿಬಿಐ ಬಿಜೆಪಿಯ ಸಹೋದರರು; ಇಡಿ ಮತ್ತು ಐಟಿ ಬಿಜೆಪಿಯ ಹಣದ ಪೆಟ್ಟಿಗೆಗಳು,ʼ ಎಂದು ಬ್ಯಾನರ್ಜಿ ಹೇಳಿದರು.
ಬಾಂಬ್ ದಾಳಿ ವಿವರ: ಡಿಸೆಂಬರ್ 2022ರಲ್ಲಿ ಪೂರ್ವ ಮೇದಿನಿಪುರದ ನರುಅಬಿಲ್ಲಾ ಗ್ರಾಮದ ರಾಜ್‌ಕುಮಾರ್ ಮನ್ನಾ ಅವರ ಮನೆಯಲ್ಲಿ ನಡೆದ ಸ್ಫೋಟದಲ್ಲಿ ಬಿಸ್ವಜಿತ್ ಗಯೆನ್, ಬುದ್ಧದೇಬ್ ಮನ್ನಾ ಸಾವಿಗೀಡಾದರು. ಜೂನ್ 4, 2023 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ಎನ್‌ಐಎ, ಜನಾ ಮತ್ತು ಮೈಟಿಯನ್ನು ಶನಿವಾರ ಬಂಧಿಸಿತು.