Wayanad landslide| ಮನುಷ್ಯರ ನಿರಾಸಕ್ತಿ, ದುರಾಸೆಗೆ ಪ್ರಕೃತಿ ಪ್ರತಿಕ್ರಿಯಿಸಿದೆ: ಕೇರಳ ಹೈಕೋರ್ಟ್

Update: 2024-08-24 07:41 GMT

200 ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ವಯನಾಡ್ ಭೂಕುಸಿತವು ಪ್ರಕೃತಿಯು ಮಾನವನ ʻನಿರಾಸಕ್ತಿ ಮತ್ತು ದುರಾಸೆʼ ಗೆ ಪ್ರತಿಕ್ರಿಯಿಸಿದ ಮತ್ತೊಂದು ಉದಾಹರಣೆ ಎಂದು ಕೇರಳ ಹೈಕೋರ್ಟ್ ಹೇಳಿದೆ. 

ʻಎಚ್ಚರಿಕೆಯ ಚಿಹ್ನೆಗಳುʼ ಬಹಳ ಹಿಂದೆಯೇ ಕಾಣಿಸಿಕೊಂಡಿವೆ. ಆದರೆ, ಅಭಿವೃದ್ಧಿ ಕಾರ್ಯಸೂಚಿಯಿಂದ ನಾವು ಅದನ್ನು ನಿರ್ಲಕ್ಷಿಸಿದ್ದೇವೆ. 2018 ಮತ್ತು 2019 ರ ನೈಸರ್ಗಿಕ ವಿಕೋಪಗಳು, ಸುಮಾರು ಎರಡು ವರ್ಷ ಕಾಲ ಮುಂದುವರಿದ ಸಾಂಕ್ರಾಮಿಕ ರೋಗ ಮತ್ತು ಇತ್ತೀಚಿನ ಭೂಕುಸಿತ ʻನಮ್ಮ ಮಾರ್ಗದಲ್ಲಿನ ದೋಷವನ್ನು ತೋರಿಸಿವೆ. ನಾವು ನಮ್ಮ ದಾರಿಯನ್ನು ಸರಿಪಡಿಸಿಕೊಳ್ಳದಿದ್ದರೆ ಮತ್ತು ಸಕಾರಾತ್ಮಕ ಪರಿಹಾರ ಕ್ರಮ ತೆಗೆದುಕೊಳ್ಳದಿದ್ದರೆ, ಬಹಳ ತಡವಾಗಿ ಬಿಡುತ್ತದೆʼ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ವಿ.ಎಂ. ಶ್ಯಾಮ್ ಕುಮಾರ್ ಅವರ ಪೀಠ ಸ್ವಯಂಪ್ರೇರಿತ ಮನವಿಯ ವಿಚಾರಣೆ ವೇಳೆ ಹೇಳಿದೆ.  

ಕೇರಳದಲ್ಲಿ ಸುಸ್ಥಿರ ಅಭಿವೃದ್ಧಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಅಭಿವೃದ್ಧಿ ಮಾದರಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ನೀತಿಯನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರದ ಮನವೊಲಿಸಲು ನ್ಯಾಯಾಲಯ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಂಡಿದೆ. ಭೂಕುಸಿತವು 3 ಹಳ್ಳಿಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, 119 ಜನರು ಇನ್ನೂ ಪತ್ತೆಯಾಗಿಲ್ಲ. 

ʻನೈಸರ್ಗಿಕ ಸಂಪನ್ಮೂಲಗಳ ಶೋಷಣೆ, ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ನೈಸರ್ಗಿಕ ವಿಕೋಪಗಳ ತಡೆಗಟ್ಟುವಿಕೆ, ನಿರ್ವ ಹಣೆ ಮತ್ತು ತಗ್ಗಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ರಾಜ್ಯದ ಅಸ್ತಿತ್ವದಲ್ಲಿರುವ ನೀತಿಗಳನ್ನು ನ್ಯಾಯಾಲಯ ಪರಿಶೀಲಿಸಲಿದೆ. ರಾಜ್ಯದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲು ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಮತ್ತು ಏಜೆನ್ಸಿಗಳಿಂದ ಮಾಹಿತಿ ಸಂಗ್ರಹಿಸಿ, ನೀತಿಗಳನ್ನು ಮರುರೂಪಿಸಲು ರಾಜ್ಯಕ್ಕೆ ನೆರವಾಗುವುದು ನ್ಯಾಯಾಲಯದ ಉದ್ದೇಶ,ʼ ಎಂದು ಹೇಳಿದೆ. 

ಮೂರು ಹಂತದ ಗುರಿ: ಮೊದಲನೆಯದಾಗಿ, ರಾಜ್ಯದ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲು ವೈಜ್ಞಾನಿಕ ದತ್ತಾಂಶಗಳ ಸಂಗ್ರಹ, ಆನಂತರ ಅವುಗಳನ್ನು ಜಿಲ್ಲಾವಾರು ಗುರುತಿಸಿ, ಘೋಷಿಸುವುದು. ʻವಾರಕ್ಕೊಮ್ಮೆ ವಯನಾಡ್ ಜಿಲ್ಲೆಯ ಸಂರಕ್ಷಣೆ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಪ್ರಯತ್ನಗಳ ಮೇಲ್ವಿಚಾರಣೆ ಮಾಡಲಾಗುತ್ತದೆ,ʼ ಎಂದು ನ್ಯಾಯಾಲಯ ಹೇಳಿದೆ. 

ಎರಡನೆಯದಾಗಿ, ನಿಯಂತ್ರಣ ಏಜೆನ್ಸಿಗಳು ಮತ್ತು ಸಲಹಾ ಮಂಡಳಿಗಳ ದತ್ತಾಂಶ ಸಂಗ್ರಹ. ಇದರಿಂದ, ಅಂತಹ ಏಜೆನ್ಸಿಗಳು ಮತ್ತು ಮಂಡಳಿಗಳು ತಮ್ಮ ಉದ್ದೇಶಿತ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಪೀಠ ಹೇಳಿದೆ.ಸಂಗ್ರಹಿ ಸಿದ ದತ್ತಾಂಶವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುತ್ತದೆ. ಇದರಿಂದ ಹಾಲಿ ಕಾನೂನು, ನಿಯಮ ಅಥವಾ ನಿಬಂಧನೆಗಳಿಗೆ ಸೂಕ್ತ ತಿದ್ದುಪಡಿ ತರಬಹುದು. 

ʻಮೂರನೇ ಹಂತದಲ್ಲಿ ಸ್ಥಳೀಯ ಸಂಸ್ಥೆಗಳಿಂದ ರಾಜ್ಯದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರಿಂದ ದತ್ತಾಂಶ ಸಂಗ್ರಹ. ಇದರಿಂದ ಮೂಲಸೌಕರ್ಯ ಅಭಿವೃದ್ಧಿ,ನೈಸರ್ಗಿಕ ಸಂಪನ್ಮೂಲಗಳ ಶೋಷಣೆ, ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ನೀತಿಗಳನ್ನು ರಾಜ್ಯ ಮರುರೂಪಿಸಬಹುದು,ʼ ಎಂದು ಹೇಳಿದೆ.  ಇದಕ್ಕಾಗಿ ರಾಜ್ಯವು ಪರಿಸರ ಪರಿಣಾಮ ಮೌಲ್ಯಮಾಪನ ನಡೆಸುತ್ತದೆ ಮತ್ತು ಸಂಬಂಧಿಸಿದ ಪ್ರದೇಶದವರ ಅಭಿಪ್ರಾಯ ಸಂಗ್ರಹಿಸಲು ಸಾರ್ವಜನಿಕ ವಿಚಾರಣೆ ನಡೆಸುತ್ತದೆ ಎಂದು ಅದು ಹೇಳಿದೆ. 

ನೈಸರ್ಗಿಕ ವಿಕೋಪ ಹೆಚ್ಚಳದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ಕಾಯ್ದೆ (ಡಿಎಂಎ) 2005 ರ ಅಡಿಯಲ್ಲಿ ವಿಷಯ ತಜ್ಞರ ಸಂಖ್ಯೆ ಹೆಚ್ಚಿಸಲಾಗುವುದೇ ಎಂದು ಸ್ಪಷ್ಟಪಡಿಸುವ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಮತ್ತು ಕೇರಳ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ. ಎಲ್ಲ ವಿವರ ಒಳಗೊಂಡ ಪ್ರಮಾಣಪತ್ರ ಸಲ್ಲಿಸಲು ನ್ಯಾಯಾಲಯ ಮೂರು ವಾರಗಳ ಕಾಲಾವಕಾಶ ನೀಡಿದೆ.

Tags:    

Similar News