ದುಬೈ ಏರ್‌ಶೋನಲ್ಲಿ 'ತೇಜಸ್' ದುರಂತ: ತಾಂತ್ರಿಕ ತೊಂದರೆ ಸುಳ್ಳೆಂದ ಮರುದಿನವೇ ಅನಾಹುತ!
ವಾಯುಪಡೆಯು ಈ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಗೊಂಡಿದ್ದು, "ದುರಂತದ ನಿಖರ ಕಾರಣ ಪತ್ತೆಹಚ್ಚಲು 'ಕೋರ್ಟ್ ಆಫ್ ಎಂಕ್ವೈರಿ'ಗೆ (Court of Inquiry) ಆದೇಶಿಸಲಾಗಿದೆ," ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದ ಹೆಮ್ಮೆಯ ಲಘು ಯುದ್ಧ ವಿಮಾನ 'ತೇಜಸ್' (LCA Tejas) ಇಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ 'ದುಬೈ ಏರ್‌ಶೋ 2025' (Dubai Airshow 2025) ವೇಳೆ ಪತನಗೊಂಡಿದ್ದು, ವಿಮಾನದಲ್ಲಿದ್ದ ಭಾರತೀಯ ವಾಯುಪಡೆಯ ಅನುಭವಿ ಪೈಲಟ್ ಹುತಾತ್ಮರಾಗಿದ್ದಾರೆ. ಶುಕ್ರವಾರ ಏರ್‌ಶೋದ ಕೊನೆಯ ದಿನದ ಪ್ರದರ್ಶನದ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ.
ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ನಮನ್ ಸ್ಯಾಲ್ (Squadron Leader Naman Syal) ಮೃತ ಪೈಲಟ್ ಎಂದು ಗುರುತಿಸಲಾಗಿದೆ. ವಾಯುಪಡೆಯು ಈ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, "ದುರಂತದ ನಿಖರ ಕಾರಣ ಪತ್ತೆಹಚ್ಚಲು 'ಕೋರ್ಟ್ ಆಫ್ ಎಂಕ್ವೈರಿ'ಗೆ (Court of Inquiry) ಆದೇಶಿಸಲಾಗಿದೆ," ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
'ಆಯಿಲ್ ಲೀಕ್' ವದಂತಿ ಮತ್ತು ವಾಸ್ತವ
ದುರಂತಕ್ಕೂ ಕೇವಲ ಒಂದು ದಿನ ಮುಂಚೆ, ಸಾಮಾಜಿಕ ಜಾಲತಾಣಗಳಲ್ಲಿ ತೇಜಸ್ ವಿಮಾನದಿಂದ ಆಯಿಲ್ ಲೀಕ್ ಆಗುತ್ತಿದೆ ಎಂಬ ವಿಡಿಯೋಗಳು ಹರಿದಾಡಿದ್ದವು. ಇದನ್ನು ತೀವ್ರವಾಗಿ ಖಂಡಿಸಿದ್ದ ಭಾರತ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ (PIB Fact Check) ಘಟಕ, "ಇದು ತೇವಾಂಶದ ವಾತಾವರಣದಲ್ಲಿ ವಿಮಾನದ ಆಕ್ಸಿಜನ್ ಸಿಸ್ಟಮ್‌ನಿಂದ ನೀರು ಹೊರಹಾಕುವ ಸಹಜ ಪ್ರಕ್ರಿಯೆ. ಆಯಿಲ್ ಲೀಕ್ ಎಂಬುದು ಸುಳ್ಳು ಸುದ್ದಿ," ಎಂದು ಸ್ಪಷ್ಟಪಡಿಸಿತ್ತು. ಆದರೆ, ಈ ಸ್ಪಷ್ಟನೆ ನೀಡಿದ ಮರುದಿನವೇ ವಿಮಾನ ಪತನಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅನುಮಾನದ ಹುತ್ತ: ಯಾಂತ್ರಿಕ ದೋಷವೋ?
ಫ್ಯಾಕ್ಟ್ ಚೆಕ್ ಘಟಕವು 'ಆಯಿಲ್ ಲೀಕ್' ಸುದ್ದಿಯನ್ನು ಪ್ರಾಪಗಾಂಡಾ (Propaganda) ಎಂದು ತಳ್ಳಿಹಾಕಿದ ಬೆನ್ನಲ್ಲೇ ಈ ಅವಘಡ ಸಂಭವಿಸಿರುವುದು ಕಾಕತಾಳೀಯವೆನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇದೊಂದು ವಿಧ್ವಂಸಕ ಕೃತ್ಯ (Sabotage) ಇರಬಹುದೇ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ತಜ್ಞರು ತನಿಖಾ ವರದಿ ಬರುವವರೆಗೂ ಊಹಾಪೋಹಗಳಿಗೆ ಕಿವಿಗೊಡದಂತೆ ಸಲಹೆ ನೀಡಿದ್ದಾರೆ.
ಎರಡು ದಶಕಗಳಲ್ಲಿ 2ನೇ ದುರಂತ
2001ರಲ್ಲಿ ಮೊದಲ ಹಾರಾಟ ನಡೆಸಿದ ತೇಜಸ್ ಇತಿಹಾಸದಲ್ಲಿ ಇದು ಎರಡನೇ ಪತನವಾಗಿದೆ. ಮೊದಲನೆಯದು 2024ರ ಮಾರ್ಚ್‌ನಲ್ಲಿ ರಾಜಸ್ಥಾನದಲ್ಲಿ ಸಂಭವಿಸಿತ್ತು. ಆದರೆ, ಈ ಬಾರಿ ಪೈಲಟ್ ಪ್ರಾಣ ಕಳೆದುಕೊಂಡಿರುವುದು ತೇಜಸ್ ಯೋಜನೆಯ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.