ಯುಪಿಯಲ್ಲಿ ಬಿಜೆಪಿ ಸೋಲು: 6 ಪ್ರಮುಖ ಕಾರಣ ಗುರುತಿಸಿದ ವರದಿ

ಬಿಜೆಪಿಯ ಸೋಲಿಗೆ ವರದಿ ಆರು ಪ್ರಮುಖ ಕಾರಣಗಳನ್ನು ಗುರುತಿಸಿದೆ. ಅವೆಂದರೆ, ಆಡಳಿತಾತ್ಮಕ ದರ್ಪ, ಪ್ರಶ್ನೆಪತ್ರಿಕೆ ಸೋರಿಕೆ, ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ, ಸರ್ಕಾರಿ ಹುದ್ದೆಗಳಲ್ಲಿ ಗುತ್ತಿಗೆ ಕಾರ್ಮಿಕರ ನೇಮಕ, ಚುನಾವಣೆ ಬೆಂಬಲದಲ್ಲಿ ಸ್ಥಿತ್ಯಂತರ ಮತ್ತು ದಲಿತ ಮತಗಳಲ್ಲಿ ಕಡಿತ.

Update: 2024-07-18 13:20 GMT
ಲಕ್ನೋದಲ್ಲಿ ಜುಲೈ 14 ರಂದು ನಡೆದ ಬಿಜೆಪಿಯ ಉತ್ತರಪ್ರದೇಶ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜೆ.ಪಿ. ನಡ್ಡಾ, ಯೋಗಿ ಆದಿತ್ಯನಾಥ್ ಮತ್ತಿತತರು ಪಾಲ್ಗೊಂಡಿದ್ದರು

ಉತ್ತರ ಪ್ರದೇಶ ಬಿಜೆಪಿ ಘಟಕ 15 ಪುಟಗಳ ವರದಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಕಳಪೆ ಸಾಧನೆಗೆ ಆರು ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದೆ.

ಅಮೇಥಿ ಮತ್ತು ಫೈಜಾಬಾದ್‌ನಂತಹ ಪ್ರಮುಖ ಕ್ಷೇತ್ರಗಳಲ್ಲಿ ಸೋಲಿಗೆ ಕಾರಣಗಳನ್ನು ಕಂಡುಕೊಳ್ಳಲು 40,000 ಜನರಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ.

ಆರು ಪ್ರಮುಖ ಕಾರಣ: ಬಿಜೆಪಿಯ ಶೋಚನೀಯ ಸೋಲಿಗೆ ಆರು ಪ್ರಮುಖ ಕಾರಣಗಳನ್ನು ಗುರುತಿಸಿದೆ. ಅವೆಂದರೆ, ಆಡಳಿತಾತ್ಮಕ ದರ್ಪ, ಪ್ರಶ್ನೆಪತ್ರಿಕೆ ಸೋರಿಕೆ, ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ, ಸರ್ಕಾರಿ ಹುದ್ದೆಗಳಲ್ಲಿ ಗುತ್ತಿಗೆ ಕಾರ್ಮಿಕರ ನೇಮಕ, ಚುನಾವಣೆ ಬೆಂಬಲದಲ್ಲಿ ಸ್ಥಿತ್ಯಂತರ ಮತ್ತು ದಲಿತ ಮತಗಳಲ್ಲಿ ಕಡಿತ. 

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಕನಿಷ್ಠ 15 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದೆ. ಗುತ್ತಿಗೆ ನೌಕರರು ಸರ್ಕಾರಿ ಉದ್ಯೋಗಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರ ಮೀಸಲು ವಿರುದ್ಧ ಇದೆ ಎಂಬ ನಿರೂಪಣೆ ಹಾಗೂ ಮೀಸಲು ವಿರುದ್ಧ ಪಕ್ಷದ ನಾಯಕರ ಹೇಳಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದವು ಎಂದು ವರದಿ ಹೇಳಿದೆ. 

ಸ್ವಪ್ರತಿಷ್ಠೆಗಳ ಘರ್ಷಣೆ?: ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮತ್ತಿತರ ಅಧಿಕಾರಿಗಳು ಶಾಸಕರಿಗಿಂತ ಹೆಚ್ಚಿನ ಅಧಿಕಾರವನ್ನು ಚಲಾಯಿಸುತ್ತಾರೆ, ಪಕ್ಷದ ಕಾರ್ಯಕರ್ತರನ್ನು ಅವಮಾನಿಸುತ್ತಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಲವು ವರ್ಷಗಳಿಂದ ನಿರ್ಮಿಸಿದ ಸಂಪರ್ಕಗಳನ್ನು ಪಕ್ಷ ಕಳೆದುಕೊಳ್ಳುತ್ತಿದೆ. ಪಕ್ಷದ ಕಾರ್ಯಕರ್ತರನ್ನು ಗೌರವದಿಂದ ಕಾಣಬೇಕು ಎಂದು ವರದಿಯಲ್ಲಿದೆ.

ಪ್ರತಿಪಕ್ಷಗಳು ಜನರೊಂದಿಗೆ ಪ್ರತಿಧ್ವನಿಸುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎತ್ತಿದವು. ಹಳೆಯ ಪಿಂಚಣಿ ಯೋಜನೆಯಂತಹ ಸಮ ಸ್ಯೆಗಳು ಹಿರಿಯ ನಾಗರಿಕರನ್ನು ಹಾಗೂ ಅಗ್ನಿವೀರ್ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ಕಾಳಜಿಗಳು ಯುವಕರ ಕಾಳಜಿಯನ್ನು ಪ್ರತಿಧ್ವನಿ ಸಿದವು ಎಂದು ವರದಿ ಹೇಳಿದೆ.

ಮತಬ್ಯಾಂಕ್‌ಗಳ ಸ್ಥಿತ್ಯಂತರ: ಠಾಕೂರ್ ಮತ್ತು ಯಾದವ್ ಮತ ಬ್ಯಾಂಕ್‌ನ ಗಣನೀಯ ಕುಗ್ಗುವಿಕೆ, ಕುರ್ಮಿ ಮತ್ತು ಮೌರ್ಯ ಸಮುದಾಯಗಳಿಂದ ಬೆಂಬಲ ಕುಸಿತ, ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಕ್ಕೆ ಕಡಿಮೆ ಮತ ಬಂದಿರುವುದು ಮತ್ತು ಕೆಲವು ಪ್ರದೇಶಗಳಲ್ಲಿ ಕಾಂಗ್ರೆಸ್‌ನ ಮತಗಳಿಕೆ ಸುಧಾರಣೆಯನ್ನು ವರದಿ ಉಲ್ಲೇಖಿಸಿದೆ. 

ಬಿಜೆಪಿಯ ಮತ ಗಳಿಕೆ ಪಾಲು ಶೇ. 8ರಷ್ಟು ಕುಸಿದಿದೆ. ಭವಿಷ್ಯದ ಚುನಾವಣೆಗಳು ʻಅಗಾಡಾ ವರ್ಸಸ್ ಪಿಚಡಾ (ಬಡವ ವಿ/ಎ‌ಸ್‌ ಶ್ರೀಮಂತ) ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.

ಎಸ್ಪಿ ಪುನರುತ್ಥಾನ: ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್, 43 ಸ್ಥಾನ ಗಳಿಸಿವೆ. ಎನ್‌ಡಿಎ ಪಾಲು 36ಕ್ಕೆ ಕುಸಿದಿದೆ. 2019ರಲ್ಲಿ ಎಸ್ಪಿ ಕೇವಲ 5 ಸ್ಥಾನ ಗೆದ್ದಿತ್ತು. ಬಿಜೆಪಿ ಪಾಲು 62 ರಿಂದ 33 ಸ್ಥಾನಗಳಿಗೆ ಇಳಿದಿದೆ.

ಸೋಲಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಕಾರಣ ಎಂದು ಒಪ್ಪಿಕೊಳ್ಳಲು ಬೆಂಬಲಿಗರು ನಿರಾಕರಿಸಿದ್ದಾರೆ. ಆಡಳಿತದ ಮೇಲಿನ ಹಿಡಿತ ಮತ್ತು ಕಟ್ಟುನಿಟ್ಟು ಕಾನೂನು-ಸುವ್ಯವಸ್ಥೆಯಿಂದ ಬಿಜೆಪಿ ತನ್ನ ಹಿಡಿತ ಉಳಿಸಿಕೊಂಡಿದೆ. ಜನಪ್ರಿಯವಲ್ಲದ ಅಭ್ಯರ್ಥಿಗಳ ಪುನರಾವರ್ತನೆಯೇ ಪ್ರಮುಖ ಸಮಸ್ಯೆ. ಇದರಲ್ಲಿ ಆದಿತ್ಯನಾಥ್ ಯಾವುದೇ ಪಾತ್ರ ವಹಿಸಿಲ್ಲ ಎಂದು ಹೇಳುತ್ತಾರೆ.

ಆಂತರಿಕ ಕಲಹ?: ಜುಲೈ 14 ರಂದು ಲಕ್ನೋದಲ್ಲಿ ಆದಿತ್ಯನಾಥ್ ಅವರ ಅಧ್ಯಕ್ಷತೆ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾಗವಹಿಸಿ ದ್ದಸಭೆಯಲ್ಲಿ ನಡೆದ ಚರ್ಚೆಗಳನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ʻಬಿಜೆಪಿ ತನ್ನ ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತಿದೆ,ʼ ಎಂದು ಆದಿತ್ಯನಾಥ್‌ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ, ʻಸರ್ಕಾರಕ್ಕಿಂತ ಸಂಸ್ಥೆ ದೊಡ್ಡದುʼ ಎಂದು ಹೇಳಿದ್ದರು.

ʻಬಿಜೆಪಿಯ ಯೋಜನೆಗಳಲ್ಲಿ ಯಾವಾಗಲೂ ಸರ್ಕಾರಕ್ಕಿಂತ ಸಂಘಟನೆಗೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಸಚಿವರು, ಶಾಸಕರು, ಜನಪ್ರತಿನಿಧಿಗಳು ಪಕ್ಷದ ಕಾರ್ಯಕರ್ತರನ್ನು ಗೌರವಿಸಿ, ಅವರ ಘನತೆ ಕಾಪಾಡಬೇಕು. ನಾನು ಮೊದಲು ಪಕ್ಷದ ಕಾರ್ಯಕರ್ತ ಮತ್ತು ನಂತರ ಉಪ ಮುಖ್ಯಮಂತ್ರಿ,ʼ ಎಂದು ಮೌರ್ಯ ಅವರು ಅಪರೋಕ್ಷವಾಗಿ ಸಿಎಂ ವಿರುದ್ಧ ಕಿಡಿ ಕಾರಿದ್ದರು.

ಉಪಚುನಾವಣೆ ಮೇಲೆ ಗಮನ: ಈ ಹೇಳಿಕೆಗಳು ನಾಯಕರ ನಡುವಿನ ಆಂತರಿಕ ಕಲಹಕ್ಕೆ ಕಾರಣವಾಗಿವೆ. ರಾಜ್ಯ ಘಟಕ ಭಿನ್ನಾಭಿ ಪ್ರಾಯಗಳನ್ನು ತಕ್ಷಣವೇ ಪರಿಹರಿಸಿಕೊಳ್ಳಬೇಕು ಮತ್ತು ಮೇಲ್ಜಾತಿ-ಹಿಂದುಳಿದ ಜಾತಿ ಎಂಬ ವಿಭಜನೆಯನ್ನು ತಡೆಯಲು ತಳ ಮಟ್ಟದಿಂದ ಕೆಲಸ ಪ್ರಾರಂಭಿಸಬೇಕು ಎಂದು ವರದಿಯು ಕೇಂದ್ರ ನಾಯಕತ್ವಕ್ಕೆ ತಿಳಿಸಿದೆ.

10 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯತ್ತ ಗಮನ ಹರಿಸುವಂತೆ ಪಕ್ಷದ ಕೇಂದ್ರ ನಾಯಕತ್ವವು ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎನ್ನಲಾಗಿದೆ.

Tags:    

Similar News