ದೆಹಲಿ ಸ್ಫೋಟ ಪ್ರಕರಣ: ಕಾಶ್ಮೀರ ಕಣಿವೆಯ ಹಲವಡೆ ಎನ್‌ಐಎ ದಾಳಿ

ಕಾಶ್ಮೀರ ಕಣಿವೆಯ ಶೋಪಿಯಾನ್, ಪುಲ್ವಾಮಾ ಮತ್ತು ಕುಲ್ಗಾಮ್ ಜಿಲ್ಲೆಗಳ ಒಟ್ಟು ಎಂಟು ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ.

Update: 2025-12-01 05:10 GMT
Click the Play button to listen to article

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ಕಾರು ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಸೋಮವಾರ ಜಮ್ಮು ಮತ್ತು ಕಾಶ್ಮೀರದ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದೆ. ಉಗ್ರರ ಜಾಲ ಮತ್ತು ಅವರಿಗೆ ಬೆಂಬಲ ನೀಡುವ ವ್ಯವಸ್ಥೆಯನ್ನು ಬುಡಸಮೇತ ಕಿತ್ತುಹಾಕುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಕಾಶ್ಮೀರ ಕಣಿವೆಯ ಶೋಪಿಯಾನ್, ಪುಲ್ವಾಮಾ ಮತ್ತು ಕುಲ್ಗಾಮ್ ಜಿಲ್ಲೆಗಳ ಒಟ್ಟು ಎಂಟು ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಜಮಾತ್-ಎ-ಇಸ್ಲಾಮಿ (ಜೆಇಐ) ಸದಸ್ಯರು ಮತ್ತು ಅವರ ಸಹಚರರ ಮನೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಪ್ರಮುಖವಾಗಿ ಪುಲ್ವಾಮಾ ಜಿಲ್ಲೆಯ ಕೊಯಿಲ್, ಚಂದ್‌ಗಮ್, ಮಲಂಗ್‌ಪೋರಾ ಮತ್ತು ಸಂಬೂರಾ ಪ್ರದೇಶಗಳಲ್ಲಿ ಅಧಿಕಾರಿಗಳು ಜಾಲಾಡಿದ್ದಾರೆ.

'ವೈಟ್ ಕಾಲರ್' ಉಗ್ರನ ಮೇಲೆ ನಿಗಾ

ಈ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ಶೋಪಿಯಾನ್‌ನಲ್ಲಿರುವ ಮೌಲ್ವಿ ಇರ್ಫಾನ್ ಅಹ್ಮದ್ ಎಂಬಾತನ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಇರ್ಫಾನ್ ಅಹ್ಮದ್ ಫರೀದಾಬಾದ್‌ನ ಅಲ್‌–ಫಲಾಹ್ ವಿಶ್ವವಿದ್ಯಾಲಯದೊಂದಿಗೆ ನಂಟು ಹೊಂದಿದ್ದು, 'ವೈಟ್ ಕಾಲರ್' ಭಯೋತ್ಪಾದನಾ ಜಾಲದ ಪ್ರಮುಖ ರೂವಾರಿ ಎಂದು ಶಂಕಿಸಲಾಗಿದೆ. ಸುಶಿಕ್ಷಿತ ವರ್ಗದವರನ್ನು ಬಳಸಿಕೊಂಡು ಉಗ್ರ ಚಟುವಟಿಕೆ ನಡೆಸುವ ಜಾಲದ ಬಗ್ಗೆ ಎನ್‌ಐಎ ಮಾಹಿತಿ ಕಲೆಹಾಕುತ್ತಿದೆ

ಏನಿದು ಕೆಂಪುಕೋಟೆ ಸ್ಫೋಟ ಪ್ರಕರಣ?

ಕಳೆದ ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್ ಸ್ಫೋಟ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ದುರಂತದಲ್ಲಿ 15 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ತನಿಖಾ ಸಂಸ್ಥೆಗಳು, ಇದುವರೆಗೆ 7 ಶಂಕಿತರನ್ನು ಬಂಧಿಸಿವೆ. ಸದ್ಯ ತನಿಖೆಯನ್ನು ಜಮ್ಮು-ಕಾಶ್ಮೀರ ಮತ್ತು ಉತ್ತರ ಪ್ರದೇಶದಾದ್ಯಂತ ವಿಸ್ತರಿಸಲಾಗಿದೆ. 

Tags:    

Similar News