ಗುರುದಾಸ್‌ಪುರ ಗ್ರೆನೇಡ್ ದಾಳಿ: ಪಾಕ್ ಮೂಲದ ‘ಟೆರರ್ ಮಾಡ್ಯೂಲ್’ ಭೇದಿಸಿದ ದೆಹಲಿ ಪೊಲೀಸರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸ್ಫೋಟಕ ಮಾಹಿತಿ ಕಲೆಹಾಕಲಾಗಿದೆ.
ಪಂಜಾಬ್‌ನ ಗುರುದಾಸ್‌ಪುರ ಪೊಲೀಸ್ ಠಾಣೆಯ ಹೊರಗೆ ಇತ್ತೀಚೆಗೆ ನಡೆದ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ದಳ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಮೂಲದ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸ್ಫೋಟಕ ಮಾಹಿತಿ ಕಲೆಹಾಕಲಾಗಿದೆ.
ಪೊಲೀಸರು ಬಂಧಿಸಿರುವ ಆರೋಪಿಗಳನ್ನು ಮಧ್ಯಪ್ರದೇಶದ ದಟಿಯಾ ನಿವಾಸಿ ವಿಕಾಸ್ ಪ್ರಜಾಪತಿ ಅಲಿಯಾಸ್ ಬೇಟು (19), ಪಂಜಾಬ್‌ನ ಫಿರೋಜ್‌ಪುರ ನಿವಾಸಿ ಹರಗುನ್‌ಪ್ರೀತ್ ಸಿಂಗ್ ಅಲಿಯಾಸ್ ಗುರ್‌ಕರಣ್‌ಪ್ರೀತ್ ಸಿಂಗ್ (19) ಮತ್ತು ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಆಸಿಫ್ ಅಲಿಯಾಸ್ ಅರೀಶ್ (22) ಎಂದು ಗುರುತಿಸಲಾಗಿದೆ. ನವೆಂಬರ್ 25 ರಂದು ಗುರುದಾಸ್‌ಪುರ ನಗರ ಪೊಲೀಸ್ ಠಾಣೆಯ ಹೊರಗೆ ನಡೆದ ಗ್ರೆನೇಡ್ ದಾಳಿಯ ಹಿಂದೆ ಈ ಮೂವರ ಕೈವಾಡವಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿದೆ. ಬಂಧಿತರಿಂದ ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್, 10 ಜೀವಂತ ಗುಂಡುಗಳು ಮತ್ತು ದಾಳಿಗೆ ಬಳಸಿದ ಸಂವಹನ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಾಕಿಸ್ತಾನದಿಂದಲೇ ಸಂಚು
ಈ ಭಯೋತ್ಪಾದಕ ಕೃತ್ಯದ ಹಿಂದಿನ ಪ್ರಮುಖ ರೂವಾರಿ ಗ್ಯಾಂಗ್‌ಸ್ಟರ್ ಹಾಗೂ ಭಯೋತ್ಪಾದಕ ಶಹಜಾದ್ ಭಟ್ಟಿ. ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿರುವ ಈತ, ಅಲ್ಲಿಂದಲೇ ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಈ ದಾಳಿಗೆ ಸಂಚು ರೂಪಿಸಿದ್ದ. ಭಾರತೀಯ ಯುವಕರನ್ನು ಗುರಿಯಾಗಿಸಿಕೊಂಡು, ಅವರಿಗೆ ಹಣದ ಆಸೆ ತೋರಿಸಿ ಮತ್ತು ಗ್ಯಾಂಗ್‌ಸ್ಟರ್ ಸಂಸ್ಕೃತಿಯನ್ನು ವೈಭವೀಕರಿಸಿ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಇದೇ ರೀತಿ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಕ್ಕೆ ಬಂದ ವಿಕಾಸ್ ಪ್ರಜಾಪತಿ ಮತ್ತು ಇತರರನ್ನು ಬಳಸಿಕೊಂಡು ಈ ಕೃತ್ಯ ಎಸಗಲಾಗಿದೆ.
ಮುಂದಿನ ಅಪಾಯ
ಆರೋಪಿ ವಿಕಾಸ್ ಪ್ರಜಾಪತಿ, ಭಟ್ಟಿಯ ನಿರ್ದೇಶನದಂತೆ ಗುರುದಾಸ್‌ಪುರ ಮತ್ತು ಅಮೃತಸರ ಪೊಲೀಸ್ ಠಾಣೆಗಳ ಬಳಿ ಸ್ಥಳ ಪರಿಶೀಲನೆ ನಡೆಸಿದ್ದ. ನಂತರ ಗ್ರೆನೇಡ್ ಇದ್ದ ಪಾರ್ಸೆಲ್ ಅನ್ನು ಸ್ವೀಕರಿಸಿ, ಅದನ್ನು ಹರಗುನ್‌ಪ್ರೀತ್‌ಗೆ ಹಸ್ತಾಂತರಿಸಿದ್ದ. ಹರಗುನ್‌ಪ್ರೀತ್ ತನ್ನ ಸಹಚರನೊಂದಿಗೆ ಬೈಕ್‌ನಲ್ಲಿ ಬಂದು ಠಾಣೆಯ ಮೇಲೆ ಗ್ರೆನೇಡ್ ಎಸೆದಿದ್ದ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಮತ್ತೊಬ್ಬ ಆರೋಪಿ ಆಸಿಫ್ ಕೂಡ ಇದೇ ಮಾದರಿಯಲ್ಲಿ ಪಂಜಾಬ್‌ನ ಮತ್ತೊಂದು ಕಡೆ ದಾಳಿ ನಡೆಸಲು ಸಜ್ಜಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಾಲದ ಇತರ ಸದಸ್ಯರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.