ಆಂಧ್ರಪ್ರದೇಶದಲ್ಲಿ 'ಸ್ಕ್ರಬ್ ಟೈಫಸ್' ಆತಂಕ: ಮೊದಲ ಬಲಿ, ಗಡಿ ಪ್ರದೇಶಗಳಲ್ಲಿ ಆತಂಕ
ವಿಜಯನಗರಂ ಜಿಲ್ಲೆಯ ಚೀಪುರುಪಲ್ಲಿ ಮಂಡಲದ ಮಿತ್ತಪಲ್ಲಿ ಗ್ರಾಮದ ರಾಜೇಶ್ವರಿ (36) ಎಂಬುವವರು ನವೆಂಬರ್ 30ರಂದು ಮೃತಪಟ್ಟಿದ್ದಾರೆ. ಇವರು ಕಳೆದ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ನೆರೆಯ ಆಂಧ್ರಪ್ರದೇಶದಲ್ಲಿ 'ಸ್ಕ್ರಬ್ ಟೈಫಸ್' ಎಂಬ ಬ್ಯಾಕ್ಟೀರಿಯಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ವಿಜಯನಗರಂ ಜಿಲ್ಲೆಯಲ್ಲಿ ಈ ಸೋಂಕಿನಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ವರದಿಗಳು ಬಂದಿದ್ದು, ರಾಜ್ಯಾದ್ಯಂತ ಇಲ್ಲಿಯವರೆಗೆ 1,317 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ರೋಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಗುಣಪಡಿಸಬಹುದಾದರೂ, ವಿಳಂಬವಾದರೆ ಮಾರಕವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಈ ರೋಗದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಜತೆ ಗಡಿ ಹಂಚಿಕೊಂಡಿರುವ ಕರ್ನಾಟಕದಲ್ಲೂ ಆತಂಕ ಸೃಷ್ಟಿಯಾಗಿದೆ. ಮುನ್ನೆಚ್ಚರಿಕೆ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.
ವಿಜಯನಗರಂ ಜಿಲ್ಲೆಯ ಚೀಪುರುಪಲ್ಲಿ ಮಂಡಲದ ಮಿತ್ತಪಲ್ಲಿ ಗ್ರಾಮದ ರಾಜೇಶ್ವರಿ (36) ಎಂಬುವವರು ನವೆಂಬರ್ 30ರಂದು ಮೃತಪಟ್ಟಿದ್ದಾರೆ. ಇವರು ಕಳೆದ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಅವರಿಗೆ 'ಸ್ಕ್ರಬ್ ಟೈಫಸ್' ಬ್ಯಾಕ್ಟೀರಿಯಾ ಸೋಂಕು ಇರುವುದು ಕಂಡುಬಂದಿತ್ತು. ಚಿಕಿತ್ಸೆ ಪಡೆದರೂ ಅವರ ಆರೋಗ್ಯ ಹದಗೆಟ್ಟು, ಅಂತಿಮವಾಗಿ ಸಾವನ್ನಪ್ಪಿದ್ದಾರೆ. ಆದಾಗ್ಯೂ, ಈ ಸಾವನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.
ರಾಜ್ಯಾದ್ಯಂತ 1,317 ಪ್ರಕರಣಗಳು ಪತ್ತೆ
ಆಂಧ್ರಪ್ರದೇಶದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಈ ರೋಗ ವ್ಯಾಪಿಸಿದೆ. ಇಲ್ಲಿಯವರೆಗೆ 1,317 ಸ್ಕ್ರಬ್ ಟೈಫಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಜಿಲ್ಲಾವಾರು ಪ್ರಕರಣಗಳ ವಿವರ ಹೀಗಿದೆ.
ಅತಿ ಹೆಚ್ಚು ಪ್ರಕರಣಗಳು ಪತ್ತೆಯಾದ ಜಿಲ್ಲೆಗಳು:
- ಚಿತ್ತೂರು: 379 ಪ್ರಕರಣಗಳು (ಅತಿ ಹೆಚ್ಚು)
- ಕಾಕಿನಾಡ: 141 ಪ್ರಕರಣಗಳು
- ವಿಶಾಖಪಟ್ಟಣಂ: 123 ಪ್ರಕರಣಗಳು
- ವೈಎಸ್‌ಆರ್ ಕಡಪ: 94 ಪ್ರಕರಣಗಳು
- ಎಸ್‌ಪಿಎಸ್‌ಆರ್ ನೆಲ್ಲೂರು: 86 ಪ್ರಕರಣಗಳು
- ಅನಂತಪುರ: 68 ಪ್ರಕರಣಗಳು
- ತಿರುಪತಿ: 64 ಪ್ರಕರಣಗಳು
- ವಿಜಯನಗರಂ: 59 ಪ್ರಕರಣಗಳು
- ಕರ್ನೂಲ್: 42 ಪ್ರಕರಣಗಳು
- ಅನಕಪಲ್ಲಿ: 41 ಪ್ರಕರಣಗಳು
ಇದಲ್ಲದೆ ಶ್ರೀಕಾಕುಳಂ, ಅನ್ನಮಯ್ಯ, ಗುಂಟೂರು, ನಂದ್ಯಾಲ್ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಪ್ರಕರಣಗಳು ವರದಿಯಾಗಿವೆ.
ಏನಿದು ಸ್ಕ್ರಬ್ ಟೈಫಸ್ ರೋಗ?
ಸ್ಕ್ರಬ್ ಟೈಫಸ್ ಎನ್ನುವುದು 'ಓರಿಯೆಂಟಿಯಾ ಸುಟ್ಸುಗಮುಶಿ' (Orientia tsutsugamushi) ಎಂಬ ರಿಕೆಟ್ಸಿಯಾ ಕುಟುಂಬದ ಬ್ಯಾಕ್ಟೀರಿಯಂದಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಈ ರೋಗವು 'ಚಿಗ್ಗರ್ ಮೈಟ್' (Chigger mite) ಎಂಬ ಟ್ರೊಂಬಿಕ್ಯುಲಿಡೇ ಕುಟುಂಬದ ಕಣ್ಣಿಗೆ ಕಾಣದಷ್ಟು ಸಣ್ಣ ಕೀಟ ಕಚ್ಚುವುದರಿಂದ ಮನುಷ್ಯರಿಗೆ ಹರಡುತ್ತದೆ. ಈ ಸೂಕ್ಷ್ಮಜೀವಿಗಳು ಸಾಮಾನ್ಯವಾಗಿ ಪೊದೆಗಳು, ಹುಲ್ಲುಗಾವಲುಗಳು, ಬೆಳೆ ಹೊಲಗಳು, ಅರಣ್ಯ ಮಾರ್ಗಗಳು ಮತ್ತು ಕೃಷಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ರೋಗದ ಲಕ್ಷಣಗಳೇನು?
ಎರಡು ದಿನಗಳಿಗಿಂತ ಹೆಚ್ಚು ಕಾಲ ಜ್ವರ ಇರುತ್ತದೆ. ವಿಪರೀತ ಸುಸ್ತು ಮತ್ತು ಶಕ್ತಿಯ ಕೊರತೆ ಮತ್ತು ಕೀಲು ನೋವು ಮತ್ತು ದೇಹ ಪೂರ್ತಿ ನೋವು ಶುರುವಾಗುತ್ತದೆ. ದೇಹದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತದೆ. ಕೀಟ ಕಚ್ಚಿದ ಜಾಗದಲ್ಲಿ ಸಿಗರೇಟ್ ಸುಟ್ಟಂತಹ ಕಪ್ಪು ಹುಣ್ಣು ಕಾಣಿಸಿಕೊಳ್ಳುತ್ತದೆ. ತೀವ್ರವಾದ ತಲೆನೋವು ಕೆಲವು ಸಂದರ್ಭಗಳಲ್ಲಿ ಉಸಿರಾಟದ ತೊಂದರೆಗಳು ಉಂಟಾಗುತ್ತದೆ.
ಸಮಯಕ್ಕೆ ಚಿಕಿತ್ಸೆ ಪಡೆಯುವುದು ಅತ್ಯಗತ್ಯ
ಆರೋಗ್ಯ ಸಚಿವ ಸತೀಶ್ ಕುಮಾರ್ ಅವರು ಸ್ಕ್ರಬ್ ಟೈಫಸ್ ಅನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿದರೆ ಸರಳ ಪ್ರತಿಜೀವಕಗಳಿಂದ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಘೋಷಿಸಿದ್ದಾರೆ. ಗುಂಟೂರಿನ ವೈದ್ಯ ಡಾ. ವಿಜಯ ಸಾರಥಿ ಅವರು, ವಿಳಂಬ ಮಾಡುವುದು ಮತ್ತು ಜ್ವರ ಕಡಿಮೆಯಾಗದಿದ್ದರೂ ವೈದ್ಯರನ್ನು ಸಂಪರ್ಕಿಸದಿರುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.
ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕೆಗಳು
ವೈದ್ಯರು ಮತ್ತು ಆರೋಗ್ಯ ಇಲಾಖೆ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ ಜ್ವರ ಎರಡು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಹಳ್ಳಿಗಳು, ಅರಣ್ಯ ಪ್ರದೇಶಗಳು ಮತ್ತು ಕೃಷಿ ಭೂಮಿಯಲ್ಲಿ ಕೆಲಸ ಮಾಡುವವರು ದೇಹವನ್ನು ಸಂಪೂರ್ಣವಾಗಿ ಆವರಿಸುವ ಬಟ್ಟೆಗಳನ್ನು ಧರಿಸಬೇಕು. ಬೆಳೆ ಹೊಲಗಳಲ್ಲಿ ಕೆಲಸ ಮಾಡಿದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಚಿಗ್ಗರ್ ಹುಳಗಳು ವಾಸಿಸುವ ಪ್ರದೇಶಗಳಿಗೆ ಹೋಗುವಾಗ ವಿಶೇಷ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ರೋಗದ ಹಿನ್ನೆಲೆ
ಸ್ಕ್ರಬ್ ಟೈಫಸ್ ಅನ್ನು ಮೊದಲು 19ನೇ ಶತಮಾನದ ಕೊನೆಯಲ್ಲಿ ಪೂರ್ವ ಏಷ್ಯಾ, ವಿಶೇಷವಾಗಿ ಜಪಾನ್‌ನಲ್ಲಿ ಗುರುತಿಸಲಾಯಿತು. 1870–1900ರ ನಡುವೆ ಜಪಾನಿನ ಸೈನಿಕರು ಮತ್ತು ಹಳ್ಳಿಯ ಜನರಲ್ಲಿ ಈ ರೋಗ ಕಾಣಿಸಿಕೊಂಡಿತು. 1920ರ ದಶಕದಲ್ಲಿ ಜಪಾನಿನ ವಿಜ್ಞಾನಿಗಳು ಈ ರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾವನ್ನು ಮತ್ತು ಅದರ ಹರಡುವಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದರು.
ಭಾರತದಲ್ಲಿ ಈ ರೋಗವನ್ನು ಮೊದಲು ಹಿಮಾಚಲ ಪ್ರದೇಶ, ತಮಿಳುನಾಡು, ಕೇರಳ ಮತ್ತು ಅಸ್ಸಾಂನ ಪರ್ವತ ಮತ್ತು ಅರಣ್ಯ ಪ್ರದೇಶಗಳಲ್ಲಿ ಪತ್ತೆ ಹಚ್ಚಲಾಗಿತ್ತು. 2000ರ ನಂತರ ಇದು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಹರಡಿತು. ವಿಶೇಷವಾಗಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.
ಗಡಿ ಜಿಲ್ಲೆಗಳು ಎಚ್ಚರ
ಆಂಧ್ರಪ್ರದೇಶದಲ್ಲಿ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವುದರಿಂದ, ಕರ್ನಾಟಕದ ಗಡಿ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೊಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮತ್ತು ಕೋಲಾರ ಜಿಲ್ಲೆಗಳ ಜನರೂ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ವಿಶೇಷವಾಗಿ ಕೃಷಿ ಕೆಲಸ ಮಾಡುವವರು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರು ಮತ್ತು ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುವವರು ಹೆಚ್ಚಿನ ಜಾಗರೂಕತೆ ವಹಿಸಬೇಕಾಗುತ್ತದೆ.