ಪಹಲ್ಗಾಮ್ ದಾಳಿ ಬೆನ್ನಲ್ಲೇ ದೇಶದೊಳಗೆ ನುಸುಳಲು ಯತ್ನಿಸಿದ ಇಬ್ಬರು ಉಗ್ರರ ಹತ್ಯೆ
ಪಹಲ್ಗಾಮ್ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಗಡಿಯೊಳಗೆ ಒಳನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.;
ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಯ ಯೋಧರು
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪಹಲ್ಗಾಮ್ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಗಡಿಯೊಳಗೆ ಒಳನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು(ಏಲ್‌ಒಸಿ) ದಾಟಿ ಉರಿ ನಾಲಾ ಸ್ಥಳದಲ್ಲಿ ಒಳನುಸಳಲು ಯತ್ನಿಸಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಭಯೋತ್ಪಾದಕರ ನುಸುಳಿವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್(ಟ್ವಿಟ್ಟರ್)ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ಸೇನೆಯ ಛಿನಾರ್ ಕಾರ್ಪ್ಸ್ ಪಡೆ ಏಪ್ರಿಲ್ 23ರಂದು 2-3 ಭಯೋತ್ಪಾದಕರು ಬಾರಾಮುಲ್ಲಾದ ಉರಿ ನಾಲಾ ಪ್ರದೇಶದಲ್ಲಿ ಗಡಿ ನುಸುಳಲು ಯತ್ನಿಸಿದರು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದು ಕಾರ್ಯಾಚರಣೆ ಮುಂದುವರಿಸಲಾಗಿದೆ.
ಮಂಗಳವಾರವಷ್ಟೇ ಪಹಲ್ಗಾಮ್‌ನಲ್ಲಿ ಭೀಕರ ಗುಂಡಿನ ದಾಲಿಯಲ್ಲಿ ವಿದೇಶಿ ಪ್ರವಾಸಿಗರು ಸೇರಿದಂತೆ 28 ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದರು. ಘಟನೆ ನಡೆದ ತಕ್ಷಣ ಅಧಿಕಾರಿಗಳ ಸಭೆ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಸೌದಿ ಅರೇಭಿಯಾದ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಮರಳಿ ರಾಷ್ಟ್ರೀಯ ಭದ್ರತಾ ಸಲೆಹಗಾರ ಅಜಿತ್ ದೋವಲ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಕರ್ನಾಟಕದ ಇಬ್ಬರು ಮೃತಪಟ್ಟಿದ್ದು ಮಂಗಳವಾರವೇ(ಏಪ್ರಿಲ್ 22 )ರಂದೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಅಧಿಕಾರಗಳು ಪಹಲ್ಗಾಮ್‌ಗೆ ತೆರಳಿ ಕನ್ನಡಿಗರನ್ನು ಸಂಪರ್ಕಿಸಿದ್ದು ಅವರನ್ನು ರಾಜ್ಯಕ್ಕೆ ಕರೆತರಲಿದ್ದಾರೆ.