ಕಲ್ಲಕುರಿಚಿ ಕಳ್ಳಬಟ್ಟಿ ದುರಂತ: ಸಾವಿನ ಸಂಖ್ಯೆ 47ಕ್ಕೆ ಹೆಚ್ಚಳ
ಅಕ್ರಮ ಸರಾಯಿ ಮಾರಾಟ ತಡೆಗೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು,ತೀವ್ರ ಶೋಧ ಕಾರ್ಯಾಚರಣೆ ನಡೆಸುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಎಂ.ಎಸ್. ಪ್ರಶಾಂತ್ ತಿಳಿಸಿದರು.
ಕಲ್ಲಕುರಿಚಿ ಕಳ್ಳಬಟ್ಟಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 47 ಕ್ಕೆ ಏರಿದ್ದು, ಕನಿಷ್ಠ 30 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಮಿಳುನಾಡು ಸರ್ಕಾರ ಶುಕ್ರವಾರ (ಜೂನ್ 21) ತಿಳಿಸಿದೆ.
29 ಜನರ ಪಾರ್ಥಿವ ಶರೀರವನ್ನು ಅವರ ಸಂಬಂಧಿಕರಿಗೆ ಗುರುವಾರ ಹಸ್ತಾಂತರಿಸಲಾಗಿದೆ. ಶವಗಳನ್ನು ಹೂಳಲಾಗಿದೆ ಅಥವಾ ದಹಿಸಲಾಗಿದೆ ಎಂದು ಕಲ್ಲಕುರಿಚಿ ಜಿಲ್ಲಾಧಿಕಾರಿ ಎಂ.ಎಸ್. ಪ್ರಶಾಂತ್ ತಿಳಿಸಿದ್ದಾರೆ. ʻಕಲ್ಲಕುರಿಚಿ, ಜಿಪ್ಮರ್, ಸೇಲಂ ಮತ್ತು ಮುಂಡಿಯಂಬಕ್ಕಂ ಸರ್ಕಾರಿ ಆಸ್ಪತ್ರೆಗಳಲ್ಲಿ 165 ಜನರನ್ನು ದಾಖಲಿಸಲಾಗಿದೆ. ಅವರಲ್ಲಿ 47 ಮಂದಿ ಸಾವಿಗೀಡಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ 118 ಮಂದಿಯಲ್ಲಿ 30 ಮಂದಿಯ ಸ್ಥಿತಿ ಗಂಭೀರವಾಗಿದೆ,ʼ ಎಂದು ಅವರು ಹೇಳಿದರು.
ʻಸಂತಸದ ಸುದ್ದಿ ಎಂದರೆ ಮೂವರು ಚೇತರಿಸಿಕೊಂಡಿದ್ದಾರೆ,ʼ ಎಂದು ಹೇಳಿದರು.
ಅಕ್ರಮ ಸರಾಯಿ ಮಾರಾಟ ತಡೆಗೆ ವಿಶೇಷ ತಂಡ: ಕಲ್ಲಕುರಿಚಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ʻಜಿಲ್ಲೆಯಲ್ಲಿ ಅಕ್ರಮ ಸರಾಯಿ ಮಾರಾಟ ತಡೆಯಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ತೀವ್ರ ಶೋಧ ನಡೆಸುವಂತೆ ತಿಳಿಸಲಾಗಿದೆ. ಪೀಡಿತರಿಗೆ ಚಿಕಿತ್ಸೆ ನೀಡಲು ಸಾಕಷ್ಟು ಔಷಧಗಳ ದಾಸ್ತಾನು ಇದ್ದು, ಕರುಣಾ ಪುರಂನಲ್ಲಿ ಬಾಧಿತ ವ್ಯಕ್ತಿಗಳ ಸಂಖ್ಯೆಯನ್ನು ಲೆಕ್ಕಿಸುವ ಪ್ರಯತ್ನಗಳು ನಡೆಯುತ್ತಿವೆ.
ʻಅಕ್ರಮ ಮದ್ಯ ಸೇವಿಸಿದವರು ಸ್ವಯಂಪ್ರೇರಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು, ಅಗತ್ಯವಿದ್ದಲ್ಲಿ ಚಿಕಿತ್ಸೆ ಪಡೆಯಬೇಕು. ಜೀವಕ್ಕೆ ಆಗಬಹುದಾದ ಅಪಾಯ ತಪ್ಪಿಸಬೇಕು,ʼ ಎಂದು ಅವರು ಮನವಿ ಮಾಡಿದರು.