Kolkata rape murder| ‘ಸತ್ಯ ಹೊರಬರಬೇಕು’:ಕಿರಿಯ ವೈದ್ಯರ ಮುಷ್ಕರ ಮುಂದುವರಿಕೆ

ಮೂರು ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಿಂದ ಬಹುತೇಕ ಸರ್ಕಾರಿ ವೈದ್ಯಕೀಯ ಸೌಲಭ್ಯಗಳಲ್ಲಿಆರೋಗ್ಯ ಸೇವೆಗಳು ಕ್ಷೀಣಗೊಂಡಿವೆ.;

Update: 2024-09-04 07:30 GMT
ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ಕಿರಿಯ ವೈದ್ಯರ ಪ್ರತಿಭಟನೆ ಮುಂದುವರಿದಿದೆ.

ಕೋಲ್ಕತ್ತಾದ ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ, ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಗಳ ಜೂನಿಯರ್ ವೈದ್ಯರ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ.

ಮೂರು ವಾರಗಳಿಂದ ನಡೆಯುತ್ತಿರುವ ಮುಷ್ಕರದಿಂದ ಬಹುತೇಕ ಸರ್ಕಾರಿ ವೈದ್ಯಕೀಯ ಸೌಲಭ್ಯಗಳಲ್ಲಿ ವೈದ್ಯ ಸೇವೆಗಳು ಸೊರಗಿವೆ. 

ʻನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ.ಸಹೋದರಿಗೆ ನ್ಯಾಯ ಸಿಗುವವರೆಗೆ ಮತ್ತು ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ. ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಇನ್ನೂ ರಾಜೀನಾಮೆ ನೀಡಿಲ್ಲ,ʼ ಎಂದು ಕಿರಿಯ ವೈದ್ಯರೊಬ್ಬರು ಹೇಳಿದರು. ಗೋಯಲ್‌ ರಾಜೀನಾಮೆ ಧರಣಿ ನಿರತ ವೈದ್ಯರ ಮತ್ತೊಂದು ಬೇಡಿಕೆಯಾಗಿದೆ. 

ತನಿಖೆ ಅಸಮರ್ಪಕ: ಕಲ್ಕತ್ತಾ ಹೈಕೋರ್ಟ್ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಮೊದಲು, ಪೊಲೀಸರು ಅಸಮರ್ಪಕ ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ʻಪ್ರಕರಣದಲ್ಲಿ ಅನೇಕರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ನಾವು ನಂಬುತ್ತೇವೆ ಮತ್ತು ಸತ್ಯ ಹೊರಬರಬೇಕು,ʼ ಎಂದು ಮತ್ತೊಬ್ಬ ಕಿರಿಯ ವೈದ್ಯರು ಹೇಳಿದರು. 

ವೈದ್ಯೆ ಶವ ಪತ್ತೆಯಾದ ಬಳಿಕ ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಯಿತು. ಅವ್ಯವಹಾರದ ಆರೋಪದಲ್ಲಿ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸಿಬಿಐ ಬಂಧಿಸಿದೆ. 

Tags:    

Similar News