Pahalgam Terror Attack |ಸೇನೆಯಿಂದ ಉಗ್ರರ ಅಡಗುತಾಣ ಧ್ವಂಸ; ಐದು ಐಇಡಿ, ಎರಡು ವೈರ್‌ಲೆಸ್ ಸೆಟ್‌ ವಶ

ಜಂಟಿ ಭದ್ರತಾ ಪರಿಶೀಲನಾ ಸಭೆ ನಡೆದ ಒಂದೇ ದಿನದಲ್ಲಿ ಉಗ್ರರ ಅಡಗುತಾಣವನ್ನು ಪತ್ತೆ ಮಾಡಿ, ಧ್ವಂಸಗೊಳಿಸಲಾಗಿದೆ. ಏ. 22 ರಂದು ನಡೆದ ಪಹಲ್ಗಾಮ್‌ ಉಗ್ರರ ದಾಳಿ ನಂತರ ಭಯೋತ್ಪಾದಕರ ಅಡಗುತಾಣ ಪತ್ತೆಯಾಗಿರುವುದು ಕುತೂಹಲ ಕೆರಳಿಸಿದೆ.;

Update: 2025-05-05 10:10 GMT
ಪೂಂಛ್‌ ಜಿಲ್ಲೆಯಲ್ಲಿ ಪತ್ತೆಯಾದ ಐಇಡಿ ಸ್ಫೋಟಕ

ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಸೋಮವಾರ ಭಾರತೀಯ ಸೇನೆ ಹಾಗೂ ಜಮ್ಮುಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಅಡಗುತಾಣ ಧ್ವಂಸಗೊಳಿಸಿದ್ದು, ಐದು ಐಇಡಿ ಹಾಗೂ ಎರಡು ವೈರ್‌ಲೆಸ್ ಸೆಟ್‌ ವಶಪಡಿಸಿಕೊಂಡಿದ್ದಾರೆ.

ಪೂಂಚ್ ಪೊಲೀಸರು ಬಿಡುಗಡೆ ಮಾಡಿರುವ ಉಗ್ರರ ಅಡಗುತಾಣದ ಚಿತ್ರಗಳಲ್ಲಿ ರೇಡಿಯೋ ಸೆಟ್‌ಗಳು ಮತ್ತು ಐದು ಐಇಡಿ ಸ್ಫೋಟಕಗಳಿವೆ.

ಭಾನುವಾರವಷ್ಟೇ ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ವಿ.ಕೆ.ಬರ್ದಿ ಅವರು ಜಂಟಿ ಭದ್ರತಾ ಪರಿಶೀಲನಾ ಸಭೆ ನಡೆಸಿದ್ದರು. ಸಭೆಯಲ್ಲಿ ಪೊಲೀಸ್, ಸೇನೆ, ಗುಪ್ತಚರ ಸಂಸ್ಥೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಸೇರಿದಂತೆ ಬಹು ಭದ್ರತಾ ಪಡೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಉಗ್ರರ ಶೋಧ ಕಾರ್ಯಾಚರಣೆಗೆ ತೀರ್ಮಾನಿಸಲಾಗಿತ್ತು.

ಜಂಟಿ ಭದ್ರತಾ ಪರಿಶೀಲನಾ ಸಭೆ ನಡೆದ ಒಂದೇ ದಿನದಲ್ಲಿ ಉಗ್ರರ ಅಡಗುತಾಣವನ್ನು ಪತ್ತೆ ಮಾಡಿ, ಧ್ವಂಸಗೊಳಿಸಲಾಗಿದೆ. ಏ. 22 ರಂದು ನಡೆದ ಪಹಲ್ಗಾಮ್‌ ಉಗ್ರರ ದಾಳಿ ನಂತರ ಭಯೋತ್ಪಾದಕರ ಅಡಗುತಾಣ ಪತ್ತೆಯಾಗಿರುವುದು ಕುತೂಹಲ ಕೆರಳಿಸಿದೆ.  

ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ?

ಉಗ್ರರ ಅಡಗುತಾಣಗಳಲ್ಲಿ ಅರ್ಧ ಕೆ.ಜಿ.ಯಿಂದ ಐದು ಕೆ.ಜಿ.ಯಷ್ಟು ತೂಕದ ಐಇಡಿಗಳು ದೊರೆತಿವೆ. ಸ್ಫೋಟಕಗಳನ್ನು ನಾಶಪಡಿಸಿದ್ದು, ಭಯೋತ್ಪಾದಕರ ಸಂಭಾವ್ಯ ಯೋಜನೆಗಳನ್ನು ವಿಫಲಗೊಳಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. 

ಎರಡು ಐಇಡಿ ಸ್ಫೋಟಕಗಳು ಉಕ್ಕಿನ ಬಕೆಟ್‌ಗಳಲ್ಲಿ ಹುದುಗಿಸಿಟ್ಟಿದ್ದು, ಇತರ ಮೂರು ಐಇಡಿಗಳನ್ನು ಟಿಫಿನ್ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾಗಿತ್ತು. ಎರಡು ವೈರ್‌ಲೆಸ್ ಸೆಟ್‌ಗಳು, ಐದು ಪ್ಯಾಕೆಟ್ ಯೂರಿಯಾ, ಐದು ಲೀಟರ್ ಗ್ಯಾಸ್ ಸಿಲಿಂಡರ್, ಒಂದು ಜೋಡಿ ಬೈನಾಕ್ಯುಲರ್, ಮೂರು ಉಣ್ಣೆಯ ಟೋಪಿಗಳು, ಮೂರು ಕಂಬಳಿಗಳ ಜತೆಗೆ ಕೆಲ ಪ್ಯಾಂಟ್ ಹಾಗೂ ಪಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Tags:    

Similar News